ಟ್ವೆಂಟಿ-20 ಕ್ರಿಕೆಟ್: ಇತಿಹಾಸ ನಿರ್ಮಿಸಿದ ವಿರಾಟ್ ಕೊಹ್ಲಿ

Update: 2021-03-14 17:54 GMT

ಅಹಮದಾಬಾದ್: ಭಾರತದ ನಾಯಕ ವಿರಾಟ್ ಕೊಹ್ಲಿ ಟ್ವೆಂಟಿ-20 ಅಂತರ್ ರಾಷ್ಟ್ರೀಯ  ಕ್ರಿಕೆಟ್ ನಲ್ಲಿ 3,000 ರನ್ ಪೂರೈಸಿದ ಮೊದಲ ಕ್ರಿಕೆಟಿಗ ಎನಿಸಿಕೊಳ್ಳುವುದರೊಂದಿಗೆ ಇತಿಹಾಸ ನಿರ್ಮಿಸಿದರು. ರವಿವಾರ ನಡೆದ ಇಂಗ್ಲೆಂಡ್ ವಿರುದ್ಧದ ಎರಡನೇ ಟ್ವೆಂಟಿ-20 ಪಂದ್ಯದಲ್ಲಿ ಕೊಹ್ಲಿ ಈ ಸಾಧನೆ ಮಾಡಿದರು.

ಮೊಟೆರಾದಲ್ಲಿ ನಡೆದ 2ನೇ ಟಿ-20ಯ 18ನೇ ಓವರ್ ನಲ್ಲಿ ಕೊಹ್ಲಿ ಈ ಮೈಲುಗಲ್ಲು ತಲುಪಿದರು. ಮೊದಲ ಪಂದ್ಯದಲ್ಲಿ ಶೂನ್ಯ ಸಂಪಾದಿಸಿದ್ದ ಕೊಹ್ಲಿ 2ನೇ ಪಂದ್ಯದಲ್ಲಿ ಔಟಾಗದೆ 73 ರನ್ ಗಳಿಸಿದರು.

ಕೊಹ್ಲಿ ಎಲ್ಲ 3 ಮಾದರಿ ಕ್ರಿಕೆಟ್ ಗಳಾದ-ಟೆಸ್ಟ್, ಏಕದಿನ ಹಾಗೂ ಟಿ-20 ಪಂದ್ಯಗಳಲ್ಲಿ 50ಕ್ಕೂ ಅಧಿಕ ಸರಾಸರಿ ಹೊಂದಿದ್ದಾರೆ. ಇಂಗ್ಲೆಂಡ್ ವಿರುದ್ದ ಸರಣಿಗಿಂತ ಮೊದಲು ಕೊಹ್ಲಿಗೆ ಟಿ-20ಯಲ್ಲಿ 3000 ರನ್ ಮೈಲುಗಲ್ಲು ತಲುಪಲು 72 ರನ್ ಅಗತ್ಯವಿತ್ತು.

ವಿರಾಟ್ ಕೊಹ್ಲಿ ಟಿ-20 ಕ್ರಿಕೆಟಿನ 3,000 ರನ್ ಕ್ಲಬ್ ಗೆ ಸೇರಿದರು. ನ್ಯೂಝಿಲ್ಯಾಂಡಿನ ಮಾರ್ಟಿನ್ ಗಪ್ಡಿಲ್ 99 ಟಿ-20 ಪಂದ್ಯಗಳಲ್ಲಿ 2,839 ರನ್ ಹಾಗೂ ರೋಹಿತ್ ಶರ್ಮಾ 109 ಪಂದ್ಯಗಳಲ್ಲಿ 2,773 ರನ್ ಗಳಿಸಿದ್ದಾರೆ.

ವಿರಾಟ್ ಕೊಹ್ಲಿ ವೇಗವಾಗಿ 3,000 ಟಿ-20 ಅಂತರ್ ರಾಷ್ಟ್ರೀಯ ರನ್ ಗಳಿಸಿದ ದಾಖಲೆಯನ್ನು ತನ್ನದಾಗಿಸಿಕೊಂಡಿದ್ದಾರೆ. ಕೊಹ್ಲಿ ತನ್ನ 87ನೇ ಟಿ-20 ಪಂದ್ಯದಲ್ಲಿ 3 ಸಾವಿರಕ್ಕೂ ಅಧಿಕ ರನ್ ಕಲೆ ಹಾಕಿದ್ದಾರೆ.

2008ರ ಆಗಸ್ಟ್ ನಲ್ಲಿ ಭಾರತದ ಪರ ಚೊಚ್ಚಲ ಪಂದ್ಯವನ್ನಾಡಿದ ವಿರಾಟ್ ಕೊಹ್ಲಿ ಅವರು ಅಂತರ್ ರಾಷ್ಟ್ರೀಯ ಕ್ರಿಕೆಟಿನಲ್ಲಿ ಗರಿಷ್ಠ ರನ್ ಸ್ಕೋರರ್ ಪಟ್ಟಿಯಲ್ಲಿ ಸಚಿನ್ ತೆಂಡುಲ್ಕರ್, ಕುಮಾರ ಸಂಗಕ್ಕರ, ರಿಕಿ ಪಾಂಟಿಂಗ್, ಮಹೇಲ ಜಯವರ್ಧನೆ, ಜಾಕಸ್ ಕಾಲೀಸ್ ಹಾಗೂ ರಾಹುಲ್ ದ್ರಾವಿಡ್ ಬಳಿಕ 7ನೇ ಸ್ಥಾನದಲ್ಲಿದ್ದಾರೆ.

ಕೊಹ್ಲಿ ಐಪಿಎಲ್ ನಲ್ಲೂ ಗರಿಷ್ಟ ರನ್ ಸ್ಕೋರರ್ ಆಗಿದ್ದಾರೆ. ಕೊಹ್ಲಿ ಆರ್ ಸಿಬಿ ಪರವಾಗಿ 192 ಪಂದ್ಯಗಳಲ್ಲಿ ಒಟ್ಟು 5,878 ರನ್ ಗಳಿಸಿದ್ದಾರೆ. 2016ರಲ್ಲಿ 16 ಪಂದ್ಯಗಳಲ್ಲಿ 973 ರನ್ ಗಳಿಸಿ ಐಪಿಎಲ್ ನ ಎಲ್ಲ ದಾಖಲೆಯನ್ನು ಪುಡಿಗಟ್ಟಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News