ಆಸ್ಕರ್ಸ್‍ ಅತ್ಯುತ್ತಮ ನಟ ಪ್ರಶಸ್ತಿ: ಅಂತಿಮ ಸುತ್ತಿಗೆ ನಾಮ ನಿರ್ದೇಶನಗೊಂಡ ಪ್ರಥಮ ಮುಸ್ಲಿಂ ಕಲಾವಿದ ರಿಝ್ ಅಹ್ಮದ್

Update: 2021-03-16 10:53 GMT
Photo: Amazon Studios

ಹೊಸದಿಲ್ಲಿ: ಪಾಕಿಸ್ತಾನ ಮೂಲದ ಬ್ರಿಟಿಷ್ ನಟ ರಿಝ್ ಅಹ್ಮದ್ ʼಸೌಂಡ್ ಆಫ್ ಮೆಟಲ್' ಚಲನಚಿತ್ರದಲ್ಲಿನ ತಮ್ಮ  ಅಭಿನಯಕ್ಕಾಗಿ ಅತ್ಯುತ್ತಮ ನಟ ಆಸ್ಕರ್ಸ್ ಪ್ರಶಸ್ತಿಗಾಗಿ ಅಂತಿಮ ಸುತ್ತಿಗೆ ನಾಮನಿರ್ದೇರ್ಶನಗೊಂಡಿದ್ದು ಈ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ. ಅಕಾಡೆಮಿ ಅವಾರ್ಡ್ಸ್ ಇತಿಹಾಸದಲ್ಲಿಯೇ ಅತ್ಯುತ್ತಮ ನಟ ಪ್ರಶಸ್ತಿಗೆ ನಾಮನಿರ್ದೇಶನಗೊಂಡ ಮೊದಲ ಮುಸ್ಲಿಂ ಸಮುದಾಯಕ್ಕೆ ಸೇರಿದ ವ್ಯಕ್ತಿ ಇವರಾಗಿದ್ದಾರೆ.

ಇದಕ್ಕೂ ಮುಂಚೆ ನಟ ಮಹೇರ್ಶಲ ಆಲಿ ಅವರು  ಆಸ್ಕರ್ ಗೆದ್ದ ಪ್ರಥಮ ಮುಸ್ಲಿಂ ನಟನೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು, ಆದರೆ ಅವರು ಪೋಷಕ ನಟ ವಿಭಾಗದಲ್ಲಿ ಮೂನ್‍ಲೈಟ್  ಹಾಗೂ ಗ್ರೀನ್ ಬುಕ್ ಚಿತ್ರಗಳಲ್ಲಿನ ಅಭಿನಯಕ್ಕಾಗಿ ಕ್ರಮವಾಗಿ 2017 ಹಾಗೂ 2019ರಲ್ಲಿ ಪ್ರಶಸ್ತಿ ಗಳಿಸಿದ್ದರು.

ಇದೀಗ ಅತ್ಯುತ್ತಮ ನಟ ವಿಭಾಗದಲ್ಲಿ ಅಂತಿಮ ಸುತ್ತಿಗೆ ಆಯ್ಕೆಯಾಗಿರುವ ಅಹ್ಮದ್ ಅವರು `ಸೌಂಡ್ ಆಫ್ ಮೆಟಲ್' ಚಿತ್ರದಲ್ಲಿ ಡ್ರಮ್ಮರ್ ಆಗಿ  ನಟಿಸಿದ್ದಾರೆ ಹಾಗೂ  ತಮ್ಮ  ಶ್ರವಣ ಶಕ್ತಿಯನ್ನು ಕಳೆದುಕೊಂಡ  ಚೇತರಿಸಿಕೊಳ್ಳುತ್ತಿರುವ ವ್ಯಸನಿಯಾಗಿ ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ʼದಿ ನೈಟ್ ಆಫ್' ಸರಣಿಗಾಗಿ ಅವರು ಅತ್ಯುತ್ತಮ ನಟ ಎಮ್ಮಿ ಪ್ರಶಸ್ತಿಯನ್ನು 2017ರಲ್ಲಿ ಪಡೆದಿದ್ದಾರೆ.

ʼಸೌಂಡ್ ಆಫ್ ಮೆಟಲ್' ಚಿತ್ರದಲ್ಲಿ ಅಹ್ಮದ್ ಅವರ ಅದ್ಭುತ ನಟನೆಯಿಂದಾಗಿ ಈ ವರ್ಷದ ಎಲ್ಲಾ ಪ್ರತಿಷ್ಠಿತ ಪ್ರಶಸ್ತಿಗಳಾದ ಗೋಲ್ಡನ್ ಗ್ಲೋಬ್ಸ್, ಬಾಫ್ಟಾ ಮತ್ತು ಎಸ್‍ಎಜಿ ಪ್ರಶಸ್ತಿಗೂ ಅವರು ಅಂತಿಮ ಸುತ್ತಿಗೆ ನಾಮನಿರ್ದೇಶನಗೊಂಡಿದ್ದರು.

ಆಸ್ಕರ್ಸ್‍ ನಲ್ಲಿ ಅತ್ಯುತ್ತಮ ನಟ ವಿಭಾಗದಲ್ಲಿ ನಾಮ ನಿರ್ದೇಶನಗೊಂಡಿರುವ ಇಬ್ಬರು ಏಷ್ಯನ್ನರಲ್ಲಿ ಅಹ್ಮದ್ ಒಬ್ಬರಾಗಿದ್ದಾರೆ. ಇನ್ನೊಬ್ಬ ಏಷ್ಯನ್ ನಟ ಸ್ಟೀವನ್ ಯೂನ್ ʼಮಿನಾರಿ' ಚಿತ್ರದಲ್ಲಿನ ತಮ್ಮ ಅಭಿನಯಕ್ಕಾಗಿ ಆಸ್ಕರ್ಸ್‍ ಗೆ ನಾಮ ನಿರ್ದೇಶನಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News