ಗುಜರಾತ್ ಹತ್ಯಾಕಾಂಡ: ಎಪ್ರಿಲ್ 13ಕ್ಕೆ ಝಕಿಯಾ ಜಾಫ್ರಿ ಮನವಿ ವಿಚಾರಣೆ
ಹೊಸದಿಲ್ಲಿ, ಮಾ. 16: 2002ರಲ್ಲಿ ಸಂಭವಿಸಿದ ಗುಜರಾತ್ ಹತ್ಯಾಕಾಂಡದಲ್ಲಿ ಆಗಿನ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರಿಗೆ ಎಸ್‌ಐಟಿ ಕ್ಲೀನ್ ಚಿಟ್ ನೀಡಿರುವುದನ್ನು ಪ್ರಶ್ನಿಸಿ ದಿವಂಗತ ಸಂಸದ ಎಹ್ಸಾನ್ ಜಾಫ್ರಿ ಅವರ ಪತ್ನಿ ಝಕಿಯಾ ಜಾಫ್ರಿ ಸಲ್ಲಿಸಿದ ಮನವಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಎಪ್ರಿಲ್ 13ಕ್ಕೆ ನಿಗದಿಪಡಿಸಿದೆ.
ಐವರು ಸದಸ್ಯರ ಸಾಂವಿಧಾನಿಕ ಪೀಠ ವಿಚಾರಣೆ ನಡೆಸುತ್ತಿರುವ ಮರಾಠ ಮೀಸಲಾತಿ ಪ್ರಕರಣದಲ್ಲಿ ಹಲವು ನ್ಯಾಯವಾದಿಗಳು ಕಾರ್ಯ ನಿರತರಾಗಿರುವುದರಿಂದ ತಮ್ಮ ಪ್ರಕರಣವನ್ನು ಎಪ್ರಿಲ್‌ನಲ್ಲಿ ವಿಚಾರಣೆ ನಡೆಸಬೇಕು ಎಂದು ಝಕಿಯಾ ಜಾಫ್ರಿ ಪರವಾಗಿ ನ್ಯಾಯಾಲಯದ ಮುಂದೆ ಹಾಜರಾಗಿದ್ದ ಹಿರಿಯ ನ್ಯಾಯವಾದಿ ಕಪಿಲ್ ಸಿಬಲ್ ಅವರು ಮಾಡಿದ ಮನವಿಯನ್ನು ನ್ಯಾಯಮೂರ್ತಿ ಎ.ಎಂ. ಖಾನ್ವಿಲ್ಕರ್ ನೇತೃತ್ವದ ಪೀಠ ಪರಿಗಣಿಸಿತು.
ಆದರೆ, ಗುಜರಾತ್ ಸರಕಾರದ ಪರವಾಗಿ ಹಾಜರಾಗಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಮನವಿಯ ವಿಚಾರಣೆ ಮುಂದೂಡುವುದಕ್ಕೆ ವಿರೋಧ ವ್ಯಕ್ತಪಡಿಸಿದರು ಹಾಗೂ ಪ್ರಕರಣದ ವಿಚಾರಣೆಯನ್ನು ಮುಂದಿನ ವಾರ ನಡೆಸುವಂತೆ ಕೋರಿದರು.
ಎಸ್‌ಐಟಿ ಪರವಾಗಿ ಹಾಜರಾಗಿದ್ದ ಹಿರಿಯ ನ್ಯಾಯವಾದಿ ಮುಕುಲ್ ರೋಹ್ಟಗಿ ಕೂಡ ಪ್ರಕರಣದ ವಿಚಾರಣೆಯ ಮುಂದೂಡಿಕೆಗೆ ವಿರೋಧ ವ್ಯಕ್ತಪಡಿಸಿದರು.
ಈ ಪ್ರಕರಣದ ವಿಚಾರಣೆಯನ್ನು ಎಪ್ರಿಲ್ 13ರಂದು ನಡೆಸಲಾಗುವುದು. ಇನ್ನೂ ಮುಂದೂಡುಂತೆ ಕೋರುವ ಯಾವುದೇ ಮನವಿಗೆ ಅವಕಾಶ ನೀಡುವುದಿಲ್ಲ ಎಂದು ನ್ಯಾಯಮೂರ್ತಿಗಳಾದ ದಿನೇಶ್ ಮಹೇಶ್ವರಿ ಹಾಗೂ ಕೃಷ್ಣ ಮುರಾರಿ ಅವರನ್ನು ಕೂಡ ಒಳಗೊಂಡ ನ್ಯಾಯಪೀಠ ಹೇಳಿತು.