ಕೋವಿಡ್-19 ಲಾಕ್‌ಡೌನ್ ಮಾನವ ಕಳ್ಳಸಾಗಣೆ, ಕೌಟುಂಬಿಕ ಹಿಂಸೆ ಹೆಚ್ಚಲು ಕಾರಣವಾಗಿತ್ತು: ಸಂಸದೀಯ ಸಮಿತಿ
ಹೊಸದಿಲ್ಲಿ,ಮಾ.16: ಕೊರೋನವೈರಸ್ ಸಾಂಕ್ರಾಮಿಕದ ಹರಡುವಿಕೆಯನ್ನು ತಡೆಯಲು ಜಾರಿಗೊಳಿಸಿದ್ದ ಲಾಕ್‌ಡೌನ್ ಕೌಟುಂಬಿಕ ಹಿಂಸೆ ಮತ್ತು ಮಾನವ ಕಳ್ಳಸಾಗಣೆ ಪ್ರಕರಣಗಳು ಹೆಚ್ಚಲು ಕಾರಣವಾಗಿತ್ತು ಎಂದು ಕಾಂಗ್ರೆಸ್‌ನ ರಾಜ್ಯಸಭಾ ಸಂಸದ ಆನಂದ ಶರ್ಮಾ ನೇತೃತ್ವದ ಗೃಹ ವ್ಯವಹಾರಗಳ ಕುರಿತ ಸಂಸದೀಯ ಸ್ಥಾಯಿ ಸಮಿತಿಯು ಸಂಸತ್ತಿನಲ್ಲಿ ಮಂಡಿಸಲಾದ ತನ್ನ ವರದಿಯಲ್ಲಿ ಬೆಟ್ಟುಮಾಡಿದೆ. ಮಹಿಳೆಯರ ಸಬಲೀಕರಣಕ್ಕಾಗಿ ನಗದು ವರ್ಗಾವಣೆಗಳು ಮತ್ತು ಸಾಲ ಮರುಪಾವತಿಗಳ ಮೇಲೆ ಸ್ತಂಭನವನ್ನು ಮುಂದುವರಿಸುವಂತೆ ಅದು ಶಿಫಾರಸು ಮಾಡಿದೆ.
ಕೋವಿಡ್ ಸಾಂಕ್ರಾಮಿಕದ ಸಂದರ್ಭದಲ್ಲಿ ಕೌಟುಂಬಿಕ ಹಿಂಸಾಚಾರಗಳು ಮತ್ತು ಮಹಿಳೆಯರು ಹಾಗೂ ಮಕ್ಕಳ ಕಳ್ಳಸಾಗಣೆ ಪ್ರಕರಣಗಳು ದಿಢೀರ್ ಏರಿಕೆಯಾಗಿದ್ದವು ಎನ್ನುವುದನ್ನು ಸಮಿತಿಯು ಗಮನಿಸಿದೆ. ಆರ್ಥಿಕ ಚಟುವಟಿಕೆಗಳಲ್ಲಿ ವ್ಯತ್ಯಯ,ಮನೆಯಿಂದ ಕೆಲಸ ನಿರ್ವಹಣೆ ಮತ್ತು ಲಾಕ್‌ಡೌನ್‌ನಿಂದಾಗಿ ಕುಟುಂಬಗಳು ಮನೆಯಲ್ಲಿಯೇ ಹೆಚ್ಚು ಸಮಯವನ್ನು ಕಳೆಯುವಂತಾಗಿದ್ದು ಇದಕ್ಕೆ ಪ್ರಮುಖ ಕಾರಣಗಳಾಗಿದ್ದವು. ಲಾಕ್‌ಡೌನ್ ಸಮಯದಲ್ಲಿ ಮಹಿಳಾ ವಲಸೆ ಕಾರ್ಮಿಕರು ಮತ್ತು ಅವರ ಮಕ್ಕಳನ್ನು ಕಳ್ಳಸಾಗಣೆ ಮಾಡಲಾಗಿತ್ತು ಹಾಗೂ ಅವರು ನಾಪತ್ತೆಯಾಗಿದ್ದರು ಎಂದು ವರದಿಯು ತಿಳಿಸಿದೆ.
ಬಡಮಹಿಳೆಯರನ್ನು ಕೇಂದ್ರೀಕರಿಸಿ ಉದ್ಯೋಗ ಖಾತರಿ ಯೋಜನೆಗಳನ್ನು ದೀರ್ಘಾವಧಿಗೆ ಮುಂದುವರಿಸಬಹುದಾಗಿದೆ ಎಂದಿರುವ ವರದಿಯು,ಮಹಿಳೆಯರು ತಮ್ಮ ಕುಟುಂಬಗಳ ನಿರ್ವಹಣೆಯಲ್ಲಿ ಪಾತ್ರವನ್ನು ಹೊಂದಿರುವುದರಿಂದ ಸ್ವಸಹಾಯ ಗುಂಪುಗಳಿಗೆ ಬಡ್ಡಿದರಗಳ ಮೇಲೆ ಅಥವಾ ಸಾಲ ಮರುಪಾವತಿಗಳ ಮೇಲೆ ಸ್ತಂಭನವು ಕೂಡ ದೊಡ್ಡ ರೀತಿಯಲ್ಲಿ ಅವರಿಗೆ ನೆರವಾಗುತ್ತದೆ. ಕೆಲವು ಅಗತ್ಯ ಕ್ರಮಗಳು ಉದ್ಯೋಗದಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸುತ್ತವೆ ಮತ್ತು ಅವರ ವಿರುದ್ಧದ ಕೌಟುಂಬಿಕ ಹಿಂಸೆಗಳನ್ನು ತಗ್ಗಿಸಲು ನೆರವಾಗುತ್ತವೆ ಎಂದಿದೆ.
ಮಹಿಳೆಯರು ಮತ್ತು ಮಕ್ಕಳ ವಿರುದ್ಧ ಅಪರಾಧಗಳ ಪ್ರಕರಣಗಳನ್ನು ಸಕಾಲದಲ್ಲಿ ದಾಖಲಿಸಿಕೊಳ್ಳಲಾಗುತ್ತಿಲ್ಲ ಎಂದಿರುವ ವರದಿಯು, ಪೊಲೀಸ್ ಠಾಣೆಗಳಲ್ಲಿ ಎಫ್‌ಐಆರ್‌ಗಳು ದಾಖಲಾಗುತ್ತಿವೆಯೇ ಇಲ್ಲವೇ ಎನ್ನುವುದನ್ನು ಪರಿಶೀಲಿಸಲು ರಾಜಸ್ಥಾನ ಪೊಲೀಸರು ನಡೆಸುತ್ತಿರುವ ಮಾರುವೇಷದ ಕಾರ್ಯಾಚರಣೆಗಳನ್ನು ಪ್ರಶಂಸಿಸಿದೆ. ನಿಯಮಿತ ಮಧ್ಯಂತರಗಳಲ್ಲಿ ಇಂತಹ ಕಾರ್ಯಾಚರಣೆಗಳನ್ನು ದೇಶಾದ್ಯಂತ ನಡೆಸಬೇಕು ಎಂದು ಶಿಫಾರಸು ಮಾಡಿರುವ ಸಮಿತಿಯು,ಇದು ತಳಮಟ್ಟದ ಪೊಲೀಸ್ ಅಧಿಕಾರಿಗಳನ್ನು ಜಾಗೃತರನ್ನಾಗಿಸುತ್ತದೆ ಮತ್ತು ಹೆಚ್ಚು ಪ್ರಕರಣಗಳು ದಾಖಲಾಗುವಂತೆ ಮಾಡುತ್ತದೆ. ಈ ಕಾರ್ಯಾಚರಣೆಯಡಿ ಜಾಗೃತ ಘಟಕವು ತನ್ನ ಅಧಿಕಾರಿಗಳನ್ನು ದೂರುದಾರರ ಸೋಗಿನಲ್ಲಿ ಪೊಲೀಸ್ ಠಾಣೆಗಳಿಗೆ ಕಳುಹಿಸುತ್ತದೆ.
ಪೊಲೀಸ್ ಪಡೆಗಳಲ್ಲಿ ಮಹಿಳೆಯರ ಪ್ರಾತಿನಿಧ್ಯವು ತೀರ ಕಡಿಮೆ ಪ್ರಮಾಣದಲ್ಲಿದೆ ಎಂದಿರುವ ಸಮಿತಿಯು,ಪೊಲೀಸ್ ಪಡೆಗಳಲ್ಲಿ ಮಹಿಳೆಯರಿಗೆ ಸಾಕಷ್ಟು ಪ್ರಾತಿನಿಧ್ಯವನ್ನು ನೀಡಲು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಏಕೆ ವಿಳಂಬಿಸುತ್ತಿವೆ ಎನ್ನುವುದು ತನಗೆ ಅರ್ಥವಾಗಿಲ್ಲ ಎಂದಿದೆ.
‘ನಿರ್ಭಯಾ ’ ನಿಧಿಯನ್ನು ಹೆಚ್ಚಿನ ಸಂದರ್ಭಗಳಲ್ಲಿ ಇತರ ಕಾರ್ಯಕ್ರಮಗಳು ಮತ್ತು ಯೋಜನೆಗಳಿಗಾಗಿ ಬಳಸುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಸಮಿತಿಯು ಇದನ್ನು ತಡೆಯುವಂತೆ ಮತ್ತು ನಿರ್ಭಯಾ ನಿಧಿಯ ಮೂಲ ಉದ್ದೇಶಕ್ಕೆ ಅಂಟಿಕೊಂಡಿರುವಂತೆ ಗೃಹ ಸಚಿವಾಲಯಕ್ಕೆ ಬಲವಾಗಿ ಶಿಫಾರಸು ಮಾಡಿದೆ.
ಪ್ರತಿ ರಾಜ್ಯ ರಾಜಧಾನಿಯಲ್ಲಿ ಆದ್ಯತೆಯ ಮೇರೆಗೆ ಕನಿಷ್ಠ ಒಂದು ವಿಧಿವಿಜ್ಞಾನ ಪ್ರಯೋಗಾಲಯದ ಸ್ಥಾಪನೆ,ಎಲ್ಲ ಸಾರ್ವಜನಿಕ ಸಾರಿಗೆಗಳಲ್ಲಿ ಸಿಸಿಟಿವಿ ಕ್ಯಾಮರಾಗಳು,ಜಿಪಿಎಸ್ ಮತ್ತು ಪ್ಯಾನಿಕ್ ಬಟನ್‌ಗಳ ಕಡ್ಡಾಯ ಅಳವಡಿಕೆ ಮತ್ತು ನಿರ್ವಹಣೆ ಇತ್ಯಾದಿಗಳು ಸಮಿತಿಯು ಮಾಡಿರುವ ಇತರ ಶಿಫಾರಸುಗಳಲ್ಲಿ ಸೇರಿವೆ.