ಸಂಸದರ ಪ್ರದೇಶಾಭಿವೃದ್ಧಿ ಯೋಜನೆಯ 2019-20ರ ಸಾಲಿನ ಹಣ ಬಿಡುಗಡೆ: ನಿರ್ಮಲಾ ಸೀತಾರಾಮನ್

Update: 2021-03-16 18:39 GMT

 ಹೊಸದಿಲ್ಲಿ: 2019-20ರ ಸಾಲಿನಲ್ಲಿ ಸಂಸದರ ಪ್ರದೇಶಾಭಿವೃದ್ಧಿ ಯೋಜನೆಯಡಿಯ ಹಣವನ್ನು ಸರಕಾರ ಬಿಡುಗಡೆಗೊಳಿಸಿದೆ. ಆದರೆ ಕೊರೋನ ಸೋಂಕಿನ ಸಮಸ್ಯೆಯಿಂದಾಗಿ 2020-21 ಮತ್ತು 2021-22ರ ಸಾಲಿನಲ್ಲಿ ಈ ಯೋಜನೆಯನ್ನು ಸ್ಥಗಿತಗೊಳಿಸಲು ನಿರ್ಧರಿಸಿರುವುದರಿಂದ ನಿಧಿಯನ್ನು ಬಿಡುಗಡೆಗೊಳಿಸಿಲ್ಲ ಎಂದು ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ರಾಜ್ಯಸಭೆಯಲ್ಲಿ ಹೇಳಿದ್ದಾರೆ.

ಶೂನ್ಯವೇಳೆಯಲ್ಲಿ ಟಿಆರ್‌ಎಸ್ ಸಂಸದ ಬಿ. ಲಿಂಗಯ್ಯ ಯಾದವ್ ಈ ಕುರಿತು ಕೇಳಿದ ಪ್ರಶ್ನೆಗೆ ಅವರು ಉತ್ತರಿಸುತ್ತಿದ್ದರು.

ಇದೇ ವಿಷಯದ ಬಗ್ಗೆ ವಿವಿಧ ಪಕ್ಷಗಳ ಸಂಸದರು ಮಾಹಿತಿ ಕೋರಿದ್ದಾರೆ. ಕೊರೋನ ಸೋಂಕಿನ ಸಮಸ್ಯೆ ಆರಂಭವಾಗುವುದಕ್ಕಿಂತ ಮೊದಲಿನ, ಅಂದರೆ 2019-20ರ ಯೋಜನೆಯ ನಿಧಿಯನ್ನು ಸರಕಾರ ಬಿಡುಗಡೆಗೊಳಿಸಿದ್ದು ಲೋಕಸಭೆ ಮತ್ತು ರಾಜ್ಯಸಭೆ ಸಂಸದರು ತಮ್ಮ ಕ್ಷೇತ್ರದಲ್ಲಿ ಉದ್ದೇಶಿಸಿದ ಅಭಿವೃದ್ಧಿ ಕಾರ್ಯ ಪೂರ್ಣಗೊಳಿಸಬಹುದು. 2019-20ರ ಸಾಲಿನ ಈ ಯೋಜನೆಯ ನಿಧಿಗೆ ವಿತ್ತ ಸಚಿವಾಲಯ ಹಾಗೂ ಅಂಕಿಅಂಶ ಮತ್ತು ಯೋಜನೆ ಅನುಷ್ಠಾನ ಇಲಾಖೆ ಅನುಮೋದನೆ ನೀಡಿದೆ. ಆದರೆ ಎಲ್ಲರಿಗೂ ತಿಳಿದಿರುವಂತೆ ಕೊರೋನದಿಂದಾಗಿ 2020-21 ಮತ್ತು 2021-22ರ ಸಾಲಿನಲ್ಲಿ ಈ ಯೋಜನೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದರು.

   ಸಂಸದರ ಪ್ರದೇಶಾಭಿವೃದ್ಧಿ ಯೋಜನೆಯಡಿ, ಲೋಕಸಭೆಯ ಸಂಸದರು ತನ್ನ ಸಂಸದೀಯ ಕ್ಷೇತ್ರ ವ್ಯಾಪ್ತಿಯಲ್ಲಿ ಪ್ರತೀ ವರ್ಷ 5 ಕೋಟಿ ರೂ. ಮೊತ್ತದ ಅಭಿವೃದ್ಧಿ ಕಾಮಗಾರಿ ನಡೆಸುವ ಅವಕಾಶವಿದ್ದು ತಾನು ಆಯ್ಕೆ ಮಾಡಿದ ಕಾಮಗಾರಿಯ ಬಗ್ಗೆ ಆಯಾ ಜಿಲ್ಲಾಧಿಕಾರಿಗೆ ಶಿಫಾರಸು ಮಾಡಬಹುದು. ರಾಜ್ಯಸಭೆಯ ಸಂಸದರು ತಾವು ರಾಜ್ಯಸಭೆಗೆ ಆಯ್ಕೆಯಾದ ರಾಜ್ಯದ ಒಂದು ಅಥವಾ ಹೆಚ್ಚು ಜಿಲ್ಲೆಗಳಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಆಯ್ಕೆ ಮಾಡಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News