ಅಮೆರಿಕ: ಏಶ್ಯನ್ ಸ್ಪಾಗಳ ಮೇಲೆ ದಾಳಿ; 6 ಏಶ್ಯನ್ನರು ಸೇರಿ 8 ಸಾವು

Update: 2021-03-17 16:49 GMT

ವಾಶಿಂಗ್ಟನ್, ಮಾ. 17: ಅಮೆರಿಕದ ಅಟ್ಲಾಂಟ ಪ್ರದೇಶದಲ್ಲಿರುವ ಡೇ-ಸ್ಪಾ (ಬ್ಯೂಟಿ ಪಾರ್ಲರ್ ಹಾಗೂ ಮಸಾಜ್ ಕೇಂದ್ರ)ಗಳ ಮೇಲೆ ಮಂಗಳವಾರ ವ್ಯಕ್ತಿಯೊಬ್ಬ ನಡೆಸಿದ ಗುಂಡಿನ ಸರಣಿ ದಾಳಿಗಳಲ್ಲಿ ಎಂಟು ಮಂದಿ ಮೃತಪಟ್ಟಿದ್ದಾರೆ. ಈ ಪೈಕಿ ಆರು ಮಂದಿ ಏಶ್ಯ ಮೂಲದ ಮಹಿಳೆಯರು.

ಘಟನೆಗೆ ಸಂಬಂಧಿಸಿ, ಗಂಟೆಗಳ ಬಳಿಕ ಪೊಲೀಸರು ದಕ್ಷಿಣ ಜಾರ್ಜಿಯದಲ್ಲಿ ವ್ಯಕ್ತಿಯೊಬ್ಬನನ್ನು ಬಂಧಿಸಿದ್ದಾರೆ. ಈ ಎಲ್ಲ ದಾಳಿಗಳನ್ನು ಆತನೇ ಮಾಡಿರಬೇಕೆಂದು ಪೊಲೀಸರು ಶಂಕಿಸಿದ್ದಾರೆ.

ಈ ದಾಳಿಗಳ ಉದ್ದೇಶ ಗೊತ್ತಾಗಿಲ್ಲವಾದರೂ, ಘಟನೆಯ ಬಳಿಕ ನ್ಯೂಯಾರ್ಕ್ ಪೊಲೀಸ್ ಇಲಾಖೆಯ ಭಯೋತ್ಪಾದನೆ ನಿಗ್ರಹ ಘಟಕವು ಮುಂಜಾಗರೂಕತಾ ಕ್ರಮವಾಗಿ ಏಶ್ಯನ್ ಸಮುದಾಯಗಳು ವಾಸಿಸುತ್ತಿರುವ ಸ್ಥಳಗಳಲ್ಲಿ ಹೆಚ್ಚುವರಿ ಗಸ್ತು ಪಡೆಗಳನ್ನು ನಿಯೋಜಿಸಿದೆ.

ಜಾರ್ಜಿಯದ ರಕ್ತಪಾತವು ಸ್ಥಳೀಯ ಸಮಯ ಮಂಗಳವಾರ ಸಂಜೆ 5 ಗಂಟೆಗೆ ಆರಂಭವಾಯಿತು. ಅಟ್ಲಾಂಟದಿಂದ ಸುಮಾರು 64 ಕಿಲೋಮೀಟರ್ ದೂರದ ಚೆರೋಕಿ ಕೌಂಟಿಯಲ್ಲಿರುವ ಯಂಗ್ಸ್ ಏಶ್ಯನ್ ಮಸಾಜ್‌ನಲ್ಲಿ ನಡೆದ ಗುಂಡು ಹಾರಾಟದಲ್ಲಿ ನಾಲ್ವರು ಮೃತಪಟ್ಟರು ಹಾಗೂ ಓರ್ವ ವ್ಯಕ್ತಿ ಗಾಯಗೊಂಡರು ಎಂದು ಚೆರೋಕಿ ಕೌಂಟಿಯ ಶರೀಫರ ಇಲಾಖೆ ತಿಳಿಸಿದೆ. ಅಲ್ಲಿ ಮೃತಪಟ್ಟವರು ಇಬ್ಬರು ಏಶ್ಯ ಮೂಲದವರಾದರೆ, ಒಬ್ಬರು ಬಿಳಿಯ ಮಹಿಳೆ ಮತ್ತು ಇನ್ನೊಬ್ಬರು ಬಿಳಿಯ ಪುರುಷ.

ಬಳಿಕ, ಜಾರ್ಜಿಯ ರಾಜ್ಯದ ರಾಜಧಾನಿ ಅಟ್ಲಾಂಟದ ‘ಗೋಲ್ಡ್ ಸ್ಪಾ’ದಲ್ಲಿ ನಡೆದ ದಾಳಿಯಲ್ಲಿ ಮೂವರು ಮಹಿಳೆಯರು ಮೃತಪಟ್ಟರು. ಅವರೆಲ್ಲರೂ ಏಶ್ಯ ಮೂಲದವರು. ಅದರ ಸಮೀಪದಲ್ಲೇ ಇದ್ದ ಇನ್ನೊಂದು ಸ್ಪಾದಲ್ಲಿ ಇನ್ನೋರ್ವ ಏಶ್ಯನ್ ಮಹಿಳೆಯ ಮೃತದೇಹ ಪತ್ತೆಯಾಯಿತು.

ಏಶ್ಯ ಮೂಲದವರ ಮೇಲೆ ಜನಾಂಗೀಯ ವೈಷಮ್ಯದಿಂದ ದಾಳಿ ಮಾಡಲಾಯಿತೇ ಎನ್ನುವುದು ತಕ್ಷಣಕ್ಕೆ ಗೊತ್ತಾಗಿಲ್ಲ ಎಂದು ಪೊಲೀಸರು ಹೇಳಿದ್ದಾರೆ. ಆದರೆ, ಇತ್ತೀಚಿನ ದಿನಗಳಲ್ಲಿ ಅಮೆರಿಕದಲ್ಲಿ ಏಶ್ಯ ಮೂಲದವರ ಮೇಲೆ ಹೆಚ್ಚೆಚ್ಚು ದಾಳಿಗಳು ನಡೆಯುತ್ತಿವೆ.

ಶಂಕಿತ ವಶಕ್ಕೆ

ದಾಳಿ ನಡೆದ ಗಂಟೆಗಳ ಬಳಿಕ, ರಾತ್ರಿ ಸುಮಾರು 8:30ರ ಹೊತ್ತಿಗೆ ಅಟ್ಲಾಂಟದಿಂದ ಸುಮಾರು 240 ಕಿ.ಮೀ. ದೂರದಲ್ಲಿರುವ ಕ್ರಿಸ್ಪ್ ಕೌಂಟಿಯಲ್ಲಿ, ಚೆರೋಕಿ ಕೌಂಟಿಯ ವುಡ್‌ಸ್ಟಾಕ್ ಎಂಬಲ್ಲಿನ ನಿವಾಸಿ 21 ವರ್ಷದ ರಾಬರ್ಟ್ ಆರೋನ್ ಲಾಂಗ್ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದುಕೊಂಡರು.

ಎಲ್ಲ ಮೂರು ಗುಂಡು ಹಾರಾಟ ಘಟನೆಗಳ ಬಂದೂಕುಧಾರಿ ಈ ಶಂಕಿತನೇ ಆಗಿದ್ದಾನೆ ಎಂಬ ಖಚಿತ ಮಾಹಿತಿಯನ್ನು ಪೊಲೀಸರು ಹೊಂದಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ‘ರಾಯ್ಟರ್ಸ್’ ಸುದ್ದಿ ಸಂಸ್ಥೆಗೆ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News