ನೂತನ ಕೃಷಿ ಕಾಯ್ದೆಗಳನ್ನು ತರುವ ಮುನ್ನ ಕೇಂದ್ರವು ರೈತರೊಂದಿಗೆ ಸಮಾಲೋಚಿಸಬೇಕಿತ್ತು:ಬಿಜೆಪಿ ನಾಯಕ
ಬಲಿಯಾ (ಉ.ಪ್ರ),ಮಾ.18: ಕೇಂದ್ರವು ನೂತನ ಕೃಷಿ ಕಾನೂನುಗಳನ್ನು ತರುವ ಮುನ್ನ ರೈತರೊಂದಿಗೆ ಸಮಾಲೋಚಿಸಿ ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಿತ್ತು ಮತ್ತು ಹಾಗೆ ಮಾಡಿದ್ದರೆ ಇಂದು ರೈತರು ಪ್ರತಿಭಟನೆ ನಡೆಸುವ ಪ್ರಮೇಯವೇ ಇರುತ್ತಿರಲಿಲ್ಲ ಎಂದು ಉತ್ತರ ಪ್ರದೇಶ ಬಿಜೆಪಿ ಕಾರ್ಯಕಾರಿ ಸಮಿತಿಯ ಸದಸ್ಯ ರಾಮ ಇಕ್ಬಾಲ್ ಸಿಂಗ್ ಅವರು ಗುರುವಾರ ಇಲ್ಲಿ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ರೈತರ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ)ಯನ್ನು ಖಚಿತಪಡಿಸುವ ಕಾನೂನನ್ನು ತರುವಂತೆಯೂ ಕೇಂದ್ರವನ್ನು ಆಗ್ರಹಿಸಿದರು.
ರೈತರ ಉತ್ಪನ್ನಗಳಿಗೆ ಎಂಎಸ್‌ಪಿ ನಿರಾಕರಣೆಯನ್ನು ಸಂಜ್ಞೇಯ ಅಪರಾಧವನ್ನಾಗಿಸಬೇಕು ಎಂದ ಅವರು,ಎಂಎಸ್‌ಪಿಗಳಲ್ಲಿ ಇತ್ತೀಚಿನ ಏರಿಕೆಯು ಡೀಸೆಲ್ ಮತ್ತು ರಸಗೊಬ್ಬರಗಳ ಬೆಲೆಗಳಲ್ಲಿ ಏರಿಕೆಗೆ ಅನುಗುಣವಾಗಿಲ್ಲ,ಇದರಿಂದಾಗಿ ರೈತರು ನಷ್ಟ ಅನುಭವಿಸುವಂತಾಗುತ್ತದೆ ಎಂದರು.
ಯೋಗಿ ಆದಿತ್ಯನಾಥ ಸರಕಾರದ ಆಡಳಿತದಲ್ಲಿ ಪೊಲೀಸ್ ಠಾಣೆಗಳು ಮತ್ತು ತಾಲೂಕುಗಳಲ್ಲಿ ಪರಿಸ್ಥಿತಿಯು ಕೆಟ್ಟದಾಗಿದೆ ಎಂದ ಸಿಂಗ್,ಇತ್ತೀಚಿಗೆ ಲಕ್ನೋದಲ್ಲಿ ನಡೆದ ರಾಜ್ಯ ಕಾರ್ಯಕಾರಿ ಸಮಿತಿ ಸಭೆಯಲ್ಲಿ ತಾನು ಈ ವಿಷಯವನ್ನು ಪ್ರಸ್ತಾಪಿಸಿದ್ದೇನೆ ಎಂದು ತಿಳಿಸಿದರು.