ರೋಹಿತ್ ಶರ್ಮಾ ಟ್ವೆಂಟಿ-20 ಕ್ರಿಕೆಟಿನಲ್ಲಿ ಈ ಸಾಧನೆ ಮಾಡಿದ ಎರಡನೇ ಭಾರತೀಯ

Update: 2021-03-18 19:39 GMT

ಅಹಮದಾಬಾದ್: ಹಿರಿಯ ಆರಂಭಿಕ ಬ್ಯಾಟ್ಸ್ ಮನ್ ರೋಹಿತ್ ಶರ್ಮಾ ನಾಯಕ ವಿರಾಟ್ ಕೊಹ್ಲಿಯ ಬಳಿಕ ಟ್ವೆಂಟಿ-20 ಕ್ರಿಕೆಟಿನಲ್ಲಿ 9,000 ರನ್ ಪೂರೈಸಿದ ಎರಡನೇ ಭಾರತೀಯನೆಂಬ ಹಿರಿಮೆಗೆ ಪಾತ್ರರಾಗಿದ್ದಾರೆ.

ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಟ್ವೆಂಟಿ-20 ಅಂತರ್ ರಾಷ್ಟ್ರೀಯ ಪಂದ್ಯದಲ್ಲಿ ಸ್ಪಿನ್ನರ್ ಆದಿಲ್ ರಶೀದ್ ಬೌಲಿಂಗ್ ನಲ್ಲಿ ಒಂದು ರನ್ ಗಳಿಸುವ ಮೂಲಕ ರೋಹಿತ್ ಈ ಸಾಧನೆ ಮಾಡಿದರು.

ಗುರುವಾರ ವೇಗದ ಬೌಲರ್ ಜೋಫ್ರಾ ಆರ್ಚರ್ ಗೆ ವಿಕೆಟ್ ಒಪ್ಪಿಸಿದ ರೋಹಿತ್ ಕೇವಲ 12 ರನ್ ಗಳಿಸಿದ್ದರು.

ಸೀಮಿತ ಓವರ್ ಕ್ರಿಕೆಟ್ ನಲ್ಲಿ ಓರ್ವ ಶ್ರೇಷ್ಠ ಬ್ಯಾಟ್ಸ್ ಮನ್ ಆಗಿರುವ ರೋಹಿತ್ ಟಿ-20 ಮಾದರಿಯ ಕ್ರಿಕೆಟ್ ನಲ್ಲಿ ಗರಿಷ್ಟ ರನ್ ಗಳಿಸಿದ 9ನೇ ಬ್ಯಾಟ್ಸ್ ಮನ್ ಆಗಿದ್ದಾರೆ.  ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ರೋಹಿತ್ ಸಾಧನೆ ಗಮನಾರ್ಹ.

110 ಟಿ-20 ಅಂತರ್ ರಾಷ್ಟ್ರೀಯ ಪಂದ್ಯಗಳಲ್ಲಿ ರೋಹಿತ್ 32.41ರ ಸರಾರಿಯಲ್ಲಿ 2,800 ರನ್ ಗಳಿಸಿದ್ದಾರೆ. ಒಟ್ಟಾರೆ 342 ಟಿ-20 ಪಂದ್ಯಗಳಲ್ಲಿ 133.36ರ ಸ್ಟ್ರೈಕ್ ರೇಟ್ ನಲ್ಲಿ 9,001 ರನ್ ಗಳಿಸಿದ್ದಾರೆ. ಚುಟುಕು ಮಾದರಿಯ ಕ್ರಿಕೆಟ್ ನಲ್ಲಿ 6 ಶತಕ ಹಾಗೂ 63 ಅರ್ಧಶತಕಗಳನ್ನು ಗಳಿಸಿದ್ದಾರೆ. ಐಪಿಎಲ್ ವೊಂದರಲ್ಲೇ 5000ಕ್ಕೂ ಅಧಿಕ ರನ್ ಗಳಿಸಿದ್ದಾರೆ.

ಕಳೆದ ಜನವರಿಯಲ್ಲಿ ರೋಹಿತ್ ಅವರು ಏಕದಿನ ಅಂತರ್ ರಾಷ್ಟ್ರೀಯ ಪಂದ್ಯದಲ್ಲಿ ವೇಗವಾಗಿ 9,000 ರನ್ ತಲುಪಿದ ವಿಶ್ವದ ಮೂರನೇ ಆಟಗಾರ ಎನಿಸಿಕೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News