ಇವರೇಕೆ ಹುತಾತ್ಮರಲ್ಲ?

Update: 2021-03-19 04:41 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ರಾಜ್ಯದಲ್ಲಿ ಮಾತ್ರವಲ್ಲ, ದೇಶದಲ್ಲೇ ‘ಮಲಹೊರುವ ಪದ್ಧತಿ’ ಇಲ್ಲ ಎಂದು ಕಾಲ ಕಾಲಕ್ಕೆ ನಮ್ಮ ನಾಯಕರು ಘೋಷಿಸುತ್ತಾ ಬಂದಿದ್ದಾರೆ. ಆದರೂ ಆಗಾಗ ಮಲದ ಗುಂಡಿಗೆ ಬಿದ್ದು ಕಾರ್ಮಿಕರು ದಯನೀಯವಾಗಿ ಸಾವನ್ನಪ್ಪುವ ಪ್ರಕರಣಗಳು ಮಾಧ್ಯಮಗಳಲ್ಲಿ ವರದಿಯಾಗುತ್ತಲೇ ಇವೆ. ಈ ದೇಶದಲ್ಲಿ ಹಲವು ಪದ್ಧತಿಗಳನ್ನು ನಾವು ಉಳಿಸಿಕೊಂಡಿರುವುದೇ ‘ಅದು ಇಲ್ಲ’ ಎನ್ನುವುದನ್ನು ಪದೇ ಪದೇ ಹೇಳುವ ಮೂಲಕ. ಇಲ್ಲಿ ಜಾತೀಯತೆ, ಅಸ್ಪಶ್ಯತೆ ಇಲ್ಲವೇ ಇಲ್ಲ ಎಂದು ನಾಯಕರು ಹೇಳುತ್ತಾರೆ. ಆದರೂ, ಜಾತಿ ದೌರ್ಜನ್ಯಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಾ ಹೋಗುತ್ತಿದೆ. ವರದಕ್ಷಿಣೆಯ ಪದ್ಧತಿ, ಬಾಲಕಾರ್ಮಿಕ ಪದ್ಧತಿ, ವಿಧವಾ ಪದ್ಧತಿ...ಹೀಗೆ ಹಲವು ಪದ್ಧತಿಗಳನ್ನು ನಿವಾರಿಸುವುದಕ್ಕಾಗಿ ಗಂಭೀರ ಕ್ರಮ ತೆಗೆದುಕೊಳ್ಳದೆ, ಅಂತಹದೇನೂ ಇಲ್ಲ ಎನ್ನುವ ಮೂಲಕ ಸರಕಾರ ಇಲ್ಲವಾಗಿಸಲು ನೋಡುತ್ತಿದೆ.

‘ಮಲ ಹೊರುವ ಪದ್ಧತಿ’ ಮಾನವ ಹಕ್ಕಿನ ಸ್ಪಷ್ಟ ಉಲ್ಲಂಘನೆಯಾಗಿದೆ. ಚಂದ್ರನ ಅಂಗಳಕ್ಕೆ ಹಾರುವ ಬಗ್ಗೆ ಪದೇ ಪದೇ ಕೊಚ್ಚಿಕೊಳ್ಳುವ ಭಾರತ, ಐದಾರು ಅಡಿ ಆಳದ ಮಲದ ಗುಂಡಿಗೆ ಇಳಿಸುವ ಯಂತ್ರವೊಂದನ್ನು ಕಂಡು ಹಿಡಿಯಲು ವಿಫಲವಾಗಿರುವುದು ಏನನ್ನು ಹೇಳುತ್ತದೆ? ಉತ್ತರ ಪ್ರದೇಶದಲ್ಲಿ ಮಲದ ಗುಂಡಿಗೆ ಬಿದ್ದು ಮೂವರು ಬಾಲಕರ ಸಹಿತ ಐವರು ದಾರುಣವಾಗಿ ಮೃತಪಟ್ಟಿದ್ದಾರೆ. ಒಂದು ಕಾಲದಲ್ಲಿ ಚಿನ್ನದ ಗಣಿಗಾಗಿ ಗುರುತಿಸಲ್ಪಡುತ್ತಿದ್ದ ಕೋಲಾರ, ಮಲ ಹೊರುವ ಪದ್ಧತಿಗಾಗಿ ಸುದ್ದಿಯಲ್ಲಿದೆ. ಕಳೆದ ಐದು ವರ್ಷಗಳಲ್ಲಿ ಕರ್ನಾಟಕದಲ್ಲಿ 32 ಮಂದಿ ಮಲದ ಗುಂಡಿಯಲ್ಲಿ ಸಿಲುಕಿ ಮೃತಪಟ್ಟಿದ್ದಾರೆ ಎಂದು ಸಮಾಜ ಕಲ್ಯಾಣ ಸಚಿವ ಬಿ. ಶ್ರೀರಾಮುಲು ವಿಧಾನಸಭೆಗೆ ಅಂಕಿಅಂಶಗಳನ್ನು ನೀಡಿದ್ದಾರೆ. ರಾಜ್ಯದಲ್ಲಿ ಸುಮಾರು 5,000 ಮಂದಿ ಮಲಹೊರುವ ಪದ್ಧತಿಯ ವೃತ್ತಿಯನ್ನು ನಿರ್ವಹಿಸುತ್ತಿದ್ದಾರೆ ಎಂದೂ ಅವರು ತಿಳಿಸಿದ್ದಾರೆ.

ಮಲ ಹೊರುವ ಪದ್ಧತಿಯ ಕುರಿತಂತೆ ಸರಕಾರ ನೀಡಿರುವ ಅಂಕಿಅಂಶಗಳಷ್ಟೇ ಸತ್ಯವಲ್ಲ. ಯಾಕೆಂದರೆ, ಮಲದ ಗುಂಡಿಯಲ್ಲಿ ಮೃತಪಟ್ಟ ಘಟನೆಗಳಿಗೆ ಸಂಬಂಧಿಸಿ ಬೆಳಕಿಗೆ ಬಂದವುಗಳಿಂದ ಬಾರದೇ ಇರುವವುಗಳೇ ಅಧಿಕ. ಸಂಬಂಧಪಟ್ಟವರು ಕಾರ್ಮಿಕರ ಕುಟುಂಬಕ್ಕೆ ಸಣ್ಣ ಮಟ್ಟದ ದುಡ್ಡನ್ನು ಕೊಟ್ಟು ಪ್ರಕರಣಗಳನ್ನು ಮುಚ್ಚಿ ಹಾಕುತ್ತಾರೆ. ಭಾರತದಲ್ಲಿ ಮಲಹೊರುವ ಪದ್ಧತಿಯನ್ನು ಸಂಪೂರ್ಣ ನಿವಾರಿಸುವ ಮನಸ್ಥಿತಿಯನ್ನೇ ನಾಯಕರು ಹೊಂದಿಲ್ಲ. ಯಾಕೆಂದರೆ, ಇಲ್ಲಿ ಹೇಗೆ ಅರ್ಚನೆಗಾಗಿಯೇ ಒಂದು ಜಾತಿಯನ್ನು ಸೃಷ್ಟಿಸಲಾಗಿದೆಯೋ, ಹಾಗೆಯೇ ಮಲ ಹೊರುವುದಕ್ಕಾಗಿಯೂ ಒಂದು ಜಾತಿಯನ್ನು ಸೃಷ್ಟಿಸಲಾಗಿದೆ. ಅವರಿಗೆ ಮಲ ಹೊರುವ ಮೂಲಕವೇ ಆಧ್ಯಾತ್ಮಿಕ ಮುಕ್ತಿಯನ್ನು ಘೋಷಿಸಲಾಗಿದೆ. ಅಂತಹದೊಂದು ಮೋಕ್ಷ ಸೌಲಭ್ಯವನ್ನು ಅವರಿಂದ ಕಿತ್ತುಕೊಳ್ಳುವುದು ಕೆಲವು ಹಿತಾಸಕ್ತಿಗಳಿಗೆ ಇಷ್ಟವಿಲ್ಲ.

ಉತ್ತರ ಭಾರತದ ಗ್ರಾಮೀಣ ಪ್ರದೇಶದಲ್ಲಿ ದಲಿತರ ಜೊತೆಗೆ ಬಲವಂತವಾಗಿ ಈ ಕೆಲಸಗಳನ್ನು ಮಾಡಿಸಲಾಗುತ್ತಿರುವ ಕುರಿತ ವರದಿಗಳಿವೆ. ಈ ಕೆಲಸಕ್ಕೆ ಒಪ್ಪದೇ ಇದ್ದಾಗ ಅವರ ಮೇಲೆ ದಾಳಿಗಳು ನಡೆದ ಉದಾಹರಣೆಗಳೂ ಇವೆ. ‘ಮನು ಸಂವಿಧಾನ’ದ ಮೀಸಲಾತಿಯ ಭಾಗವಾಗಿ, ಒಂದು ನಿರ್ದಿಷ್ಟ ಜಾತಿಗೆ ಸೃಷ್ಟಿಯಾಗಿರುವ ಉದ್ಯೋಗ ಇದು. ಆ ಸಮುದಾಯ ಎಲ್ಲಿಯವರೆಗೆ ಶಿಕ್ಷಣ, ಆರ್ಥಿಕ, ಸಾಮಾಜಿಕ ಸ್ಥಾನಮಾನಗಳನ್ನು ಪಡೆಯುವುದಿಲ್ಲವೋ ಅಲ್ಲಿಯವರೆಗೆ ಅವರು ಈ ಉದ್ಯೋಗಕ್ಕೆ ಅಂಟಿಕೊಳ್ಳುವುದು ಅನಿವಾರ್ಯವಾಗಿದೆ. ಮಲದ ಗುಂಡಿ ಶುಚಿಗೊಳಿಸಲು ಅತ್ಯಾಧುನಿಕ ತಂತ್ರಜ್ಞಾನಗಳನ್ನು ಬಳಸುವುದು ಮಾತ್ರವಲ್ಲ, ಆ ವೃತ್ತಿಯನ್ನು ನಿರ್ವಹಿಸಿಕೊಂಡು ಬಂದ ಕುಟುಂಬಗಳನ್ನು ಗುರುತಿಸಿ ಅವರ ಅಭಿವೃದ್ಧಿಗೆ ಯೋಜನೆಗಳನ್ನು ರೂಪಿಸುವುದು ಸರಕಾರದ ಕರ್ತವ್ಯವಾಗಿದೆ. ಮನುಷ್ಯನ ಘನತೆ ಮಲದ ಗುಂಡಿಯಲ್ಲಿ ಬಿದ್ದು ತೇಲುತ್ತಿರುವಾಗ, ನಾವು ಚಂದ್ರನ ಅಂಗಳದಲ್ಲಿ ಕಾಲಿಟ್ಟು ಸಂಭ್ರಮ ಪಟ್ಟರೆ, ಅದು ದೇಶಕ್ಕೆ ಯಾವ ರೀತಿಯಲ್ಲೂ ಗೌರವವನ್ನು ತಂದುಕೊಡಲಾರದು.

ಮಲ ಹೊರುವ ಪದ್ಧತಿಯ ವಿರುದ್ಧ ಚರ್ಚೆಗಳು ನಡೆಯುತ್ತವೆಯಾದರೂ, ಇವುಗಳನ್ನು ಸಂಪೂರ್ಣ ತೊಡೆದು ಹಾಕಲು ಪರಿಣಾಮಕಾರಿ ಯೋಜನೆಗಳನ್ನು ಸರಕಾರ ಈವರೆಗೆ ರೂಪಿಸಿಲ್ಲ. ಆದುದರಿಂದ ಕನಿಷ್ಠ, ಈ ಪ್ರಕರಣದಲ್ಲಿ ಮೃತರಾದ ಕಾರ್ಮಿಕರ ಬದುಕಿಗೆ ಗೌರವವನ್ನಾದರೂ ಕೊಡುವ ಕಾರ್ಯ ಸರಕಾರದಿಂದ ನಡೆಯಬೇಕು. ಮಲ ಹೊರುವವನ ಮಕ್ಕಳು, ತನ್ನ ತಂದೆಯ ವೃತ್ತಿಯ ಕಾರಣದಿಂದಲೇ ಸಮಾಜದಲ್ಲಿ ಅವಮಾನಿತರಾಗಿ ಬೆಳೆಯಬೇಕಾಗುತ್ತದೆ. ಕನಿಷ್ಠ ಆ ಅವಮಾನದಿಂದ ಅವರನ್ನು ರಕ್ಷಿಸುವ ಕೆಲಸವನ್ನು ಸರಕಾರ ಮಾಡಬೇಕು. ಹೇಗೆ ಸೈನಿಕರು ಗಡಿಯಲ್ಲಿ ಶತ್ರುಗಳ ವಿರುದ್ಧ ಮಳೆ, ಚಳಿಯ ನಡುವೆ ಹೋರಾಡುತ್ತಿದ್ದಾರೆಯೋ ಹಾಗೆಯೇ ಪೌರ ಕಾರ್ಮಿಕರು ಈ ದೇಶದ ಒಳಗಿನ ರೋಗ ರುಜಿನಗಳ ವಿರುದ್ಧ ಹೋರಾಡುತ್ತಿದ್ದಾರೆ. ಪೌರ ಕಾರ್ಮಿಕರು ನಿರಂತರ ಒಂದು ವಾರ ಮುಷ್ಕರ ಹೂಡಿದರೆ, ನಗರ ಕೊಳಚೆ ಗುಂಡಿಯಾಗಿ ಮಾರ್ಪಾಡು ಹೊಂದಬಹುದು. ಅಷ್ಟೇ ಅಲ್ಲ, ಸಾಂಕ್ರಾಮಿಕ ರೋಗಗಳು ಒಂದರ ಹಿಂದೆ ಒಂದು ಅಪ್ಪಳಿಸಿ ಜನರ ಬದುಕನ್ನು ಸರ್ವನಾಶ ಮಾಡಬಹುದು. ಆದುದರಿಂದಲೇ, ಮ್ಯಾನ್‌ಹೋಲ್‌ಗಳಿಗೆ, ಮಲದ ಗುಂಡಿಗಳಿಗೆ ಇಳಿದು ಕೆಲಸ ಮಾಡುವ ಕಾರ್ಮಿಕರಿಗೆ ಸೈನಿಕರಿಗೆ ನೀಡುವ ಗೌರವವನ್ನೇ ಸರಕಾರ ನೀಡಬೇಕು. ಮಲದ ಗುಂಡಿ ಅಥವಾ ಮ್ಯಾನ್‌ಹೋಲ್‌ಗಳಿಗೆ ಬಿದ್ದು ಮೃತಪಟ್ಟ ಪೌರ ಕಾರ್ಮಿಕರನ್ನು ‘ಹುತಾತ್ಮರು’ ಎಂದು ಘೋಷಿಸಬೇಕು. ಸೈನಿಕರಿಗೆ ಕೊಡುವ ಗೌರವವನ್ನು ಅವರಿಗೂ ಕೊಟ್ಟು ಅಂತ್ಯ ಸಂಸ್ಕಾರ ಮಾಡಬೇಕು. ಹಾಗೆಯೇ ಮೃತಪಟ್ಟ ಕುಟುಂಬಕ್ಕೆ ಕನಿಷ್ಠ ಒಂದು ಕೋಟಿ ರೂಪಾಯಿ ಪರಿಹಾರವನ್ನು ನೀಡಬೇಕು. ಮಲದ ಗುಂಡಿಯಲ್ಲಿ ಬಿದ್ದ್ದು ಮೃತಪಟ್ಟ ವ್ಯಕ್ತಿಯಿಂದಾಗಿ ಆ ಕುಟುಂಬ ಯಾವ ಕಾರಣಕ್ಕೂ ಅವಮಾನಕ್ಕೀಡಾಗಬಾರದು. ಅಷ್ಟೇ ಅಲ್ಲ, ಮುಂದೆಂದೂ ಆ ಕುಟುಂಬ ಬದುಕಿಗಾಗಿ ಆ ವೃತ್ತಿಯನ್ನು ಅವಲಂಬಿಸಬಾರದು.

ಲಾಕ್‌ಡೌನ್ ದಿನಗಳ ಬಳಿಕ ಕಾರ್ಮಿಕರ ಸ್ಥಿತಿ ದಯನೀಯವಾಗಿದೆ. ‘ಯಾವ ಕೆಲಸವಾದರೂ ಸರಿ’ ಎನ್ನುವಂತಹ ಸ್ಥಿತಿಗೆ ಅವರನ್ನು ದೂಡಿದೆ. ಅವರ ಈ ದಯನೀಯ ಸ್ಥಿತಿಯನ್ನು ದುರುಪಯೋಗ ಪಡಿಸಿಕೊಳ್ಳುವವರ ಸಂಖ್ಯೆಯೂ ಹೆಚ್ಚಿದೆ. ಮಲದ ಗುಂಡಿಗೆ ಇಳಿದು ಶುಚಿಗೊಳಿಸುವ ಕೆಲಸಗಳಿಂದ ದೂರ ಇದ್ದವರು ಇದೀಗ ಆ ಕೆಲಸವನ್ನು ಕದ್ದು ಮುಚ್ಚಿ ಒಪ್ಪಿಕೊಳ್ಳುತ್ತಿದ್ದಾರೆ. ಹಸಿವಿನ ಕಾರಣಕ್ಕಾಗಿ ಅವರು ಅವಮಾನಗಳನ್ನು ಸಹಿಸಿಕೊಳ್ಳಲೇ ಬೇಕಾಗಿದೆ. ಶುಚಿತ್ವ ಆಂದೋಲನಕ್ಕಾಗಿ ಜನರಿಂದ ತೆರಿಗೆ ಸಂಗ್ರಹಿಸಿದ ನಾಯಕರ ಮುಂದೆ, ಶುಚಿತ್ವದಲ್ಲಿ ಮಹತ್ವದ ಪಾತ್ರವನ್ನು ವಹಿಸಿಕೊಂಡು ಬಂದ ಸಂಘಟಿತ ಮತ್ತು ಅಸಂಘಟಿತ ಪೌರ ಕಾರ್ಮಿಕರ ದಯನೀಯ ಬದುಕಿನ ಬಗ್ಗೆ ಗಮನ ಹರಿಸಿ, ತಮ್ಮನ್ನು ತಾವು ‘ಮನುಷ್ಯರು’ ಎಂದು ಸಾಬೀತು ಪಡಿಸಬೇಕಾದ ಸವಾಲಿದೆ. ಆ ಸವಾಲನ್ನು ಅವರು ಗೆಲ್ಲಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News