ಅಂಬಾನಿ ನಿವಾಸದ ಮುಂದೆ ಸ್ಫೋಟಕ: ಖಾಕಿ ವೇಷದಲ್ಲಿ ಭಯೋತ್ಪಾದಕ?

Update: 2021-03-20 04:49 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಅಂಬಾನಿ ನಿವಾಸದ ಮುಂದೆ ಸ್ಫೋಟಕ ತುಂಬಿದ್ದ ವಾಹನ ಪತ್ತೆಯಾದ ಪ್ರಕರಣದ ತನಿಖೆ, ಇದೀಗ ಸ್ಫೋಟಕ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಈ ಪ್ರಕರಣ ಮಾಧ್ಯಮಗಳಲ್ಲಿ ವರದಿಯಾಗುತ್ತಿದ್ದಂತೆಯೇ, ಹತ್ತು ಹಲವು ವದಂತಿಗಳು ಹರಡತೊಡಗಿದವು. ದೇಶದಲ್ಲಿ ನಡೆಯುತ್ತಿರುವ ಬೃಹತ್ ರೈತ ಆಂದೋಲನದ ನೇರ ಗುರಿ ಅಂಬಾನಿ, ಅದಾನಿಗಳಾಗಿದ್ದಾರೆ. ಈ ಕಾರ್ಪೊರೇಟ್ ದೊರೆಗಳಿಗಾಗಿ ಕೃಷಿ ನೀತಿಯನ್ನು ತಿದ್ದಲಾಗಿದೆ ಎನ್ನುವುದು ರೈತರ ಬಹುದೊಡ್ಡ ಆರೋಪ. ರೈತ ಚಳವಳಿ ತಾರಕ ಮಟ್ಟಕ್ಕೆ ತಲುಪುತ್ತಿದ್ದಂತೆಯೇ, ಅಂಬಾನಿ ನಿವಾಸದ ಮುಂದೆ ಸ್ಫೋಟಕ ಕಾಣಿಸಿಕೊಂಡಾಗ, ಸಹಜವಾಗಿಯೇ ತನಿಖೆ ರೈತ ಮುಖಂಡರ ಕಡೆಗೆ ತಿರುಗುತ್ತದೆ. ಈಗಾಗಲೇ ರೈತರ ಚಳವಳಿಯ ಹಿಂದೆ ಉಗ್ರಗಾಮಿಗಳಿದ್ದಾರೆ ಎಂದು ಸರಕಾರವೇ ಆರೋಪಿಸಿದೆ. ಅಂಬಾನಿಯ ಮನೆಯ ಮುಂದಿರುವ ಸ್ಫೋಟಕಗಳು ಸರಕಾರದ ಆರೋಪಕ್ಕೆ ಪೂರಕ ಸಾಕ್ಷಿಗಳನ್ನು ಒದಗಿಸುವಂತೆ ಇತ್ತು. ಇದನ್ನು ಮುಂದಿಟ್ಟು ಒಂದಿಷ್ಟು ರೈತ ಚಳವಳಿಗಾರರನ್ನು ಬಂಧಿಸುವ ಎಲ್ಲ ಸಾಧ್ಯತೆಗಳಿದ್ದವು ಅಥವಾ ಇಂಡಿಯನ್ ಮುಜಾಹಿದೀನ್, ಅಲ್ ಖಾಯಿದಾ ಎಂದು ಮುಸ್ಲಿಮ್ ಸಾಮಾಜಿಕ ಕಾರ್ಯಕರ್ತರ ಎನ್‌ಕೌಂಟರ್ ನಡೆಯುವ ಸಂಭವಗಳೂ ಇದ್ದವು. ಅದಾಗಲೇ ಕೆಲವು ಮಾಧ್ಯಮಗಳು, ಈ ಬಾಂಬ್‌ನ ಹಿಂದೆ ಇಂಡಿಯನ್ ಮುಜಾಹಿದೀನ್ ಕೈವಾಡವಿದೆ ಎಂದು ಬರೆದೂ ಆಗಿತ್ತು. ಆದರೆ ಯಾವುದೋ ಒಂದು ಕ್ಷಣದಲ್ಲಿ ತನಿಖೆ ಬೇರೆಯೇ ತಿರುವನ್ನು ಪಡೆದುಕೊಂಡಿತು.

ಸ್ಫೋಟಕಗಳನ್ನು ಇಟ್ಟ ಕಾರಿನ ಚಾಲಕ ನಿಗೂಢವಾಗಿ ಆತ್ಮಹತ್ಯೆಗೈದಿರುವುದು ಬೆಳಕಿಗೆ ಬರುತ್ತಿದ್ದಂತೆಯೇ ತಕ್ಷಣ, ರಾಜ್ಯ ಸರಕಾರದ ಆಕ್ಷೇಪದ ನಡುವೆಯೇ ಎನ್‌ಐಎ ಈ ತನಿಖೆಯನ್ನು ವಹಿಸಿಕೊಂಡಿತು. ಇದೀಗ ಸ್ಫೋಟಕಗಳ ಹಿಂದೆ ಪೊಲೀಸ್ ಅಧಿಕಾರಿ ಸಚಿನ್ ವಝೆ ಇರುವುದಾಗಿ ಎನ್‌ಐಎ ಆರೋಪಿಸಿದೆ. ಪ್ರತಿಷ್ಠೆ ಹೆಚ್ಚಿಸಿಕೊಳ್ಳಲು ಪೊಲೀಸ್ ಅಧಿಕಾರಿ ಬಾಂಬ್ ಭೀತಿಯನ್ನು ಹುಟ್ಟಿಸಿದ್ದ ಎನ್ನುವುದು ಎನ್‌ಐಎ ಅಭಿಪ್ರಾಯವಾಗಿದೆ. ಅಂಬಾನಿಯ ಮನೆಯ ಮುಂದೆ ಸ್ಫೋಟಕಗಳನ್ನು ಇಡುವ ಮೂಲಕ ಅಧಿಕಾರಿಯ ಪ್ರತಿಷ್ಠೆ ಹೇಗೆ ಹೆಚ್ಚುತ್ತದೆ? ಎನ್‌ಕೌಂಟರ್ ಕುಖ್ಯಾತನಾಗಿದ್ದ ವಝೆ ಇದನ್ನು ಇನ್ನಾರ ತಲೆಗಾದರೂ ಕಟ್ಟುವ ಉದ್ದೇಶವನ್ನು ಹೊಂದಿದ್ದನೇ? ಅದರಿಂದ ಆತನಿಗಾಗುವ ಪ್ರಯೋಜನಗಳೇನು ಎನ್ನುವ ಪ್ರಶ್ನೆಗಳಿಗೆಲ್ಲ ಇನ್ನಷ್ಟೇ ಉತ್ತರ ಸಿಗಬೇಕಾಗಿದೆ.

ಈ ಹಿಂದೆ ನಡೆದ ಹಲವು ಸ್ಫೋಟಗಳನ್ನು ನಾವು ಸ್ಮರಿಸಬೇಕಾಗಿದೆ. ಮಾಲೆಗಾಂವ್, ಅಜ್ಮೀರ್ ಮೊದಲಾದ ಕಡೆ ನಡೆದ ಸ್ಫೋಟಗಳ ಹೊಣೆಯನ್ನು ಯಾವ ತನಿಖೆಯೂ ಇಲ್ಲದೆ ಮಾಧ್ಯಮಗಳು ಅಮಾಯಕ ಮುಸ್ಲಿಮರ ತಲೆಗೆ ಕಟ್ಟಿದವು. ಹಲವು ಅಮಾಯಕ ಮುಸ್ಲಿಮ್ ತರುಣರ ಬಂಧನವೂ ಆಯಿತು. ಆದರೆ ಯಾವಾಗ ಹೇಮಂತ್ ಕರ್ಕರೆ ನೇತೃತ್ವದ ತಂಡ ತನಿಖೆಯ ಆಳಕ್ಕಿಳಿಯಿತೋ ಆಗ ಪ್ರಜ್ಞಾಸಿಂಗ್, ಪುರೋಹಿತ್ ಮೊದಲಾದ ಹೆಸರುಗಳು ಹುತ್ತದಿಂದ ಹೊರಬಂದವು. ಇನ್ನೇನು ತನಿಖೆ ನಿರ್ಣಾಯಕ ಹಂತವನ್ನು ತಲುಪಬೇಕು, ಒಂದು ದೊಡ್ಡ ಸಂಘಟನೆಯ ಮುಖವಾಡದಲ್ಲಿರುವ ಉಗ್ರರ ಹೆಸರುಗಳು ಹೊರಬರಬೇಕು ಎನ್ನುವಷ್ಟರಲ್ಲಿ, ತನಿಖೆ ನಡೆಸಿದ ಪ್ರಮುಖ ಅಧಿಕಾರಿಗಳೆಲ್ಲ ನಿಗೂಢವಾಗಿ ಮುಂಬೈ ದಾಳಿಯಲ್ಲಿ ಮೃತಪಟ್ಟರು. ಮೋದಿ ನೇತೃತ್ವದ ಸರಕಾರ ಅಧಿಕಾರ ಹಿಡಿದ ಬಳಿಕ ಎನ್‌ಐಎ ಈ ಎಲ್ಲಾ ಸ್ಫೋಟ ಪ್ರಕರಣಗಳನ್ನು ದುರ್ಬಲಗೊಳಿಸಿ, ಆರೋಪಿಗಳಿಗೆ ಜಾಮೀನು ನೀಡಲು ಅನುಕೂಲ ಮಾಡಿಕೊಟ್ಟಿತು ಎನ್ನುವುದು ಇತಿಹಾಸ. ಪುಲ್ವಾಮಾ ಸೇರಿದಂತೆ ಹಲವು ಸ್ಫೋಟ ಪ್ರಕರಣಗಳನ್ನು ಎನ್‌ಐಎ ನಿರ್ವಹಿಸಿದ ರೀತಿಯ ಕುರಿತಂತೆ ಹಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಪುಲ್ವಾಮಾ ದಾಳಿಯ ಹಿಂದಿರುವವರನ್ನು ಸ್ಪಷ್ಟವಾಗಿ ಗುರುತಿಸಲು, ಅವರಿಗೆ ಶಿಕ್ಷೆ ನೀಡಲು ಎನ್‌ಐಎ ವಿಫಲವಾಗಿದೆ ಎನ್ನುವ ಆರೋಪಗಳಲ್ಲಿ ಹುರುಳಿದೆ. ಈಗ ‘ಅಂಬಾನಿ ಮನೆಯ ಮುಂದಿರುವ ಸ್ಫೋಟಕ’ ಪ್ರಕರಣದ ತನಿಖೆಯನ್ನು ಅತ್ಯಾಸಕ್ತಿಯಿಂದ ಎನ್‌ಐಎ ಕೈಗೆತ್ತಿಕೊಂಡಿದೆ. ಅತ್ಯಂತ ಕುತೂಹಲಕರವಾದ ಮಾಹಿತಿಗಳನ್ನು ಹೊರ ಹಾಕಿದೆ. ವಝೆಯನ್ನು ಬಂಧಿಸಿದೆ. ಆದರೆ ವಝೆ ಒಬ್ಬನನ್ನೇ ಆರೋಪಿಯನ್ನಾಗಿಸಿ ಎನ್‌ಐಎ ಪ್ರಕರಣವನ್ನು ಮುಗಿಸಿ ಬಿಡುತ್ತದೆಯೇ ಎಂಬ ಪ್ರಶ್ನೆ ಈಗ ಎದ್ದಿದೆ.

 ದೇಶಾದ್ಯಂತ ಅದಾನಿ, ಅಂಬಾನಿಯ ವಿರುದ್ಧ ಚಳವಳಿ ನಡೆಯುತ್ತಿರುವ ಈ ಸಂದರ್ಭದಲ್ಲಿ ‘ಅಂಬಾನಿಯ ಮನೆಯ ಮುಂದೆ ‘ಸ್ಫೋಟಕ’ ಕಂಡು ಬಂದರೆ ಅದರಿಂದ ನೇರ ಲಾಭ ಯಾರಿಗೆ ಎನ್ನುವುದು ಊಹಿಸುವುದು ಕಷ್ಟವೇನೂ ಇಲ್ಲ. ಆದುದರಿಂದ, ವಝೆಯನ್ನು ಬಳಸಿಕೊಂಡು ಯಾವುದಾದರೂ ರಾಜಕೀಯ ಶಕ್ತಿಗಳು ಈ ಕೃತ್ಯವನ್ನು ಎಸಗುವ ಸಾಧ್ಯತೆಗಳನ್ನು ಅಲ್ಲಗಳೆಯಲಾಗದು. ಸ್ವತಃ ಸಂಘಪರಿವಾರವೇ ದಿಲ್ಲಿ ಗಲಭೆಯನ್ನು ಸೃಷ್ಟಿಸಿ, ಬಳಿಕ ಆ ಗಲಭೆಯನ್ನು ಸಿಎಎ ಪ್ರತಿಭಟನಾಕಾರರ ತಲೆಗೆ ಕಟ್ಟಿ, ಅವರನ್ನು ಸಾಲು ಸಾಲಾಗಿ ಬಂಧಿಸುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ಈ ಹಿನ್ನೆಲೆಯಲ್ಲಿ, ಅಂಬಾನಿಯ ಮನೆಯ ಮುಂದಿರುವ ಸ್ಫೋಟಕ ಹತ್ತು ಹಲವು ಶಂಕೆಗಳಿಗೆ ಎಡೆ ಮಾಡಿಕೊಡುತ್ತದೆ. ಒಂದು ವೇಳೆ ವಝೆಯಿಂದ ರಾಜಕೀಯ ಶಕ್ತಿಗಳು ಈ ಕೃತ್ಯವನ್ನು ಎಸಗುವಂತೆ ಮಾಡಿದ್ದಿದ್ದರೆ, ಆ ಶಕ್ತಿಗಳನ್ನು ಮುನ್ನೆಲೆಗೆ ತರುವಷ್ಟು ವಿಶ್ವಾಸಾರ್ಹತೆಯನ್ನು ಎನ್‌ಐಎ ಉಳಿಸಿಕೊಂಡಿಲ್ಲ. ಆದುದರಿಂದಲೇ, ಈ ತನಿಖೆ ತಾರ್ಕಿಕ ಅಂತ್ಯವನ್ನು ತಲುಪುವ ಕುರಿತಂತೆ ಅನುಮಾನಗಳಿವೆ. ಈ ದೇಶದಲ್ಲಿ ನಡೆದ ಬಹುತೇಕ ಸ್ಫೋಟಗಳು ‘ರಾಜಕೀಯ ಪಿತೂರಿ’ಗಳು ಎನ್ನುವುದನ್ನು ಈ ಘಟನೆ ಮತ್ತೊಮ್ಮೆ ಸಾಬೀತು ಪಡಿಸಿದೆ. ಈ ದೇಶದ ಬೃಹತ್ ಉದ್ಯಮಿಯ ನಿವಾಸದ ಮುಂದೆ ಸ್ವತಃ ಸ್ಫೋಟಕಗಳನ್ನು ಇಡಬಲ್ಲ ಪೊಲೀಸ್ ಅಧಿಕಾರಿಯೊಬ್ಬ ಈ ಹಿಂದೆ ನಡೆಸಿದ ‘ಎನ್‌ಕೌಂಟರ್’ಗಳನ್ನು ನಾವು ಎಷ್ಟರಮಟ್ಟಿಗೆ ನಂಬಬಹುದು? ಈ ಸ್ಫೋಟಕ ಪ್ರಕರಣದಲ್ಲಿ ಒಬ್ಬ ಅಮಾಯಕ ಮೃತಪಟ್ಟಿದ್ದಾನೆ. ಅದನ್ನು ಆತ್ಮಹತ್ಯೆಯೆಂದು ಕರೆಯಲಾಗಿತ್ತು. ಆದರೆ ಇದೀಗ ಆತ್ಮಹತ್ಯೆಯಲ್ಲ, ಕೊಲೆಯಾಗಿರಬಹುದು ಎಂದು ಸಂಶಯ ವ್ಯಕ್ತಪಡಿಸಲಾಗುತ್ತಿದೆ.
ವಝೆ ಹಿಂದೆ ನಡೆಸಿದ ಎನ್‌ಕೌಂಟರ್‌ಗಳಲ್ಲಿ ನಿಜ ಎಷ್ಟು, ಸುಳ್ಳೆಷ್ಟು ಎನ್ನುವುದನ್ನು ಮಗದೊಮ್ಮೆ ತನಿಖೆ ನಡೆಸುವ ಅಗತ್ಯವಿಲ್ಲವೇ? ಸಂಸತ್ ದಾಳಿಯ ಪ್ರಮುಖ ಆರೋಪಿ ಅಫ್ಝಲ್ ಗುರು, ಪ್ರಕರಣಕ್ಕೆ ಸಂಬಂಧಿಸಿ ಒಬ್ಬ ಉನ್ನತ ಪೊಲೀಸ್ ಅಧಿಕಾರಿಯ ಹೆಸರನ್ನು ಮಾಧ್ಯಮಗಳಲ್ಲೂ, ನ್ಯಾಯಾಲಯದ ಮುಂದೆಯೂ ಉಲ್ಲೇಖಿಸಿದ್ದ. ಆದರೆ ಸರಕಾರ ನಿರ್ಲಕ್ಷಿಸಿತು. ಮುಂದೆ ಅದೇ ಅಧಿಕಾರಿ, ಉಗ್ರರ ಜೊತೆಗೆ ವ್ಯವಹರಿಸುತ್ತಿರುವ ಸಂದರ್ಭದಲ್ಲಿ ಬಂಧನಕ್ಕೊಳಗಾದ. ನ್ಯಾಯಾಲಯ ಬಳಿಕ ಆತನಿಗೆ ಜಾಮೀನನ್ನು ನೀಡಿತು. ಇಂತಹ ದೇಶದ್ರೋಹಿ ಪೊಲೀಸ್ ಅಧಿಕಾರಿಗಳು ನಮ್ಮ ನಡುವೆ ಯಾವುದೇ ಅಂಜಿಕೆಯಿಲ್ಲದೆ ಆಯಕಟ್ಟಿನ ಜಾಗದಲ್ಲಿ ಕುಳಿತಿರುವಾಗ, ಸ್ಫೋಟ ನಡೆಸಲು ಪ್ರತ್ಯೇಕ ಉಗ್ರಗಾಮಿ ಸಂಘಟನೆಗಳ ಅಗತ್ಯವಿದೆಯೇ? ಒಟ್ಟಿನಲ್ಲಿ, ಅಂಬಾನಿ ನಿವಾಸದಲ್ಲಿ ಪತ್ತೆಯಾಗಿರುವ ಸ್ಫೋಟಕಗಳ ತನಿಖೆ ಒಬ್ಬ ಪೊಲೀಸ್ ಅಧಿಕಾರಿಯನ್ನಷ್ಟೇ ಗುರಿಯಾಗಿಸಿಕೊಂಡು ನಡೆಯಬಾರದು. ಆತನನ್ನು ದಾಳವಾಗಿ ಬಳಸಿಕೊಂಡ ರಾಜಕೀಯ ಶಕ್ತಿ ಯಾವುದು? ಅವರ ಉದ್ದೇಶವೇನಾಗಿತ್ತು? ಎನ್ನುವುದೂ ಬೆಳಕಿಗೆ ಬರಬೇಕಾಗಿದೆ. ಈ ನಿಟ್ಟಿನಲ್ಲಿ ಎನ್‌ಐಎ ತನ್ನ ತನಿಖೆಯನ್ನು ಮುಂದುವರಿಸುತ್ತದೆ ಎಂಬ ನಿರೀಕ್ಷೆಯಲ್ಲಿದೆ ದೇಶ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News