ಸಿಂಘು ಗಡಿಯ ಟೆಂಟ್‌ ನಲ್ಲಿ ಅಗ್ನಿ ಅನಾಹುತ: ಓರ್ವನಿಗೆ ಗಾಯ

Update: 2021-03-20 17:53 GMT

ಹೊಸದಿಲ್ಲಿ: ಕೇಂದ್ರ ಸರಕಾರವು ಜಾರಿಗೆ ತಂದಿರುವ ಮೂರು ವಿವಾದಾತ್ಮಕ ಕೃಷಿ ಕಾಯ್ದೆಗಳನ್ನು ರದ್ದುಪಡಿಸಬೇಕೆಂದು ರೈತರು ಪ್ರತಿಭಟನೆ ನಡೆಸುತ್ತಿರುವ ಸಿಂಘು ಗಡಿಯಲ್ಲಿನ ಟೆಂಟ್‌ ಒಂದರಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಓರ್ವ ಗಾಯಗೊಂಡು ಹಲವಾರು ಸೊತ್ತುಗಳು ನಾಶವಾಗಿದ್ದಾಗಿ hindustantimes.com ವರದಿ ಮಾಡಿದೆ. 

ನಿರ್ಮಾಣ ಹಂತದಲ್ಲಿರುವ ಫ್ಲೈ ಓವರ್‌ ಬಳಿ ಟೆಂಟ್‌ ಹಾಕಿದ್ದು, ಬೆಳಗ್ಗೆ 10 ಗಂಟೆಯ ವೇಳೆಗೆ ಘಟನೆ ನಡೆದಿದೆ ಎಂದು ಪ್ರತಿಭಟನಾಕಾರ ಸುಖ್ವಿಂದರ್‌ ಸಿಂಗ್‌ ಹೇಳಿದ್ದಾರೆ. ಈ ಘಟನೆಯ ಕುರಿತಾದಂತೆ ಪೊಲೀಸ್‌ ಇಲಾಖೆ ಅಥವಾ ಅಗ್ನಿಶಾಮಕ ದಳವಾಗಲಿ ಇದುವರೆಗೆ ಅಧಿಕೃತ ಹೇಳಿಕೆಗಳನ್ನು ಹೊರಡಿಸಿಲ್ಲ.

ಸಿಲಿಂಡರ್‌ ನಲ್ಲಿ ಬೆಂಕಿ ಕಾಣಿಸಿಕೊಂಡ ಬಳಿಕ ಘಟನೆ ನಡೆದಿದ್ದು, ಟೆಂಟ್‌ ಸಂಪೂರ್ಣ ಸುಟ್ಟು ಕರಕಲಾಗಿದೆ ಎಂದು ತಿಳಿದು ಬಂದಿದೆ. ಬೆಂಕಿ ನಂದಿಸಲು ಯತ್ನಿಸಿದ ವ್ಯಕ್ತಿಯೋರ್ವರಿಗೆ ಸುಟ್ಟ ಗಾಯಗಳಾಗಿವೆ ಎಂದು ಸಂಯುಕ್ತ ಕಿಸಾನ್‌ ಮೋರ್ಚಾ ಹೇಳಿಕೆ ನೀಡಿದೆ. ಟೆಂಟ್ ನಲ್ಲಿ ಬೆಂಕಿ ಕಾಣಿಸಿಕೊಂಡ ವೇಳೆ 10 ರಿಂದ 12 ಜನರು ಒಳಗಿದ್ದು, ಅವರು ಪಾರಾಗಿದ್ದಾರೆ. ಇನ್ನು ಟೆಂಟ್‌ ನಲ್ಲಿದ್ದ 5 ಮೊಬೈಲ್‌ ಫೋನ್‌ ಗಳು, 20 ಹಾಸಿಗೆ, 20 ಕುರ್ಚಿಗಳು ಮತ್ತು ಆಹಾರ ಸಾಮಗ್ರಿಗಳು ಸೇರಿದಂತೆ ಹಲವಾರು ವಸ್ತುಗಳು ನಾಶವಾಗಿವೆ ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News