ಕೋವಿಶೀಲ್ಡ್ ಲಸಿಕೆಯ ಎರಡನೇ ಡೋಸ್‌ನ ಅಂತರವನ್ನು 6ರಿಂದ 8 ವಾರಗಳಿಗೆ ಹೆಚ್ಚಿಸಲು ಕೇಂದ್ರದ ಸೂಚನೆ

Update: 2021-03-22 17:35 GMT

ಹೊಸದಿಲ್ಲಿ,ಮಾ.22: ಉತ್ತಮ ಫಲಿತಾಂಶಕ್ಕಾಗಿ ಕೋವಿಶೀಲ್ಡ್ ಲಸಿಕೆಯ ಎರಡು ಡೋಸ್‌ಗಳ ನಡುವಿನ ಅಂತರವನ್ನು 28 ದಿನಗಳಿಂದ 6ರಿಂದ 8 ವಾರಕ್ಕೆ ಹೆಚ್ಚಿಸುವಂತೆ ಕೇಂದ್ರ ಸರಕಾರವು ರಾಜ್ಯ ಸರಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸೋಮವಾರ ನಿರ್ದೇಶವನ್ನು ನೀಡಿದೆ.

ರಾಷ್ಟ್ರವ್ಯಾಪಿ ಲಸಿಕೆ ನೀಡಿಕೆ ಕಾರ್ಯಕ್ರಮದ ಎರಡನೇ ಸುತ್ತಿನ ನಡುವೆ ಸರಕಾರದ ಈ ನಿರ್ದೇಶ ಹೊರಬಿದ್ದಿದೆ. ಈ ಸುತ್ತಿನಲ್ಲಿ 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಮತ್ತು ಇತರ ಅನಾರೋಗ್ಯಗಳನ್ನು ಹೊಂದಿರುವ 45 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಲಾಗುತ್ತಿದೆ.

ಪರಿಷ್ಕೃತ ಅಂತರವು ಆಕ್ಸ್‌ಫರ್ಡ್ ಆಸ್ಟ್ರಾಝೆನೆಕಾ ಅಭಿವೃದ್ಧಿಗೊಳಿಸಿರುವ,ಪುಣೆಯ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ತಯಾರಿಸುತ್ತಿರುವ ಕೋವಿಶೀಲ್ಡ್ ಲಸಿಕೆಗೆ ಅನ್ವಯಿಸುತ್ತದೆಯೇ ಹೊರತು ಹೈದರಾಬಾದ್‌ನ ಭಾರತ್ ಬಯೊಟೆಕ್ ತಯಾರಿಸುತ್ತಿರುವ ಕೋವ್ಯಾಕ್ಸಿನ್‌ಗೆ ಅಲ್ಲ ಎಂದು ಕೇಂದ್ರವು ಪತ್ರದಲ್ಲಿ ಸ್ಪಷ್ಟಪಡಿಸಿದೆ.

ಲಸಿಕೆಗಳ ಎರಡು ಡೋಸ್‌ಗಳ ನಡುವಿನ ಹಾಲಿ ಅಂತರವು 28 ದಿನಗಳು ಅಥವಾ 4ರಿಂದ 6 ವಾರಗಳಷ್ಟಿದೆ.

 ಲಭ್ಯವಾಗುತ್ತಿರುವ ವೈಜ್ಞಾನಿಕ ಸಾಕ್ಷ್ಯಾಧಾರಗಳ ಹಿನ್ನೆಲೆಯಲ್ಲಿ ನಿರ್ದಿಷ್ಟ ಕೋವಿಡ್-19 ಲಸಿಕೆಯ ಎರಡು ಡೋಸ್‌ಗಳ ನಡುವಿನ ಅಂತರವನ್ನು ನಿರೋಧಕತೆ ಕುರಿತು ರಾಷ್ಟ್ರೀಯ ತಾಂತ್ರಿಕ ಸಲಹಾ ಸಮಿತಿ ಮತ್ತು ಲಸಿಕೆ ನೀಡಿಕೆ ಕುರಿತು ರಾಷ್ಟ್ರೀಯ ತಜ್ಞರ ಸಮಿತಿ ಪುನರ್‌ಪರಿಶೀಲಿಸಿದೆ ಎಂದು ಸರಕಾರವು ತಿಳಿಸಿದೆ.

ಕೋವಿಶೀಲ್ಡ್‌ನ ಎರಡನೇ ಡೋಸ್‌ನ್ನು ಆರರಿಂದ ಎಂಟು ವಾರಗಳ ನಡುವೆ ನೀಡಿದರೆ ಹೆಚ್ಚು ಪರಿಣಾಮಕಾರಿಯಾಗಿರುವಂತೆ ಕಂಡು ಬಂದಿದೆ ಎಂದು ಅದು ಹೇಳಿದೆ.

ಜ.16ರಿಂದ ಆರಂಭಗೊಂಡಿರುವ ಲಸಿಕೆ ನೀಡಿಕೆ ಅಭಿಯಾನದಲ್ಲಿ ಕೋವಿಶೀಲ್ಡ್ ಮತ್ತು ಕೋವ್ಯಾಕ್ಸಿನ್ ಬಳಕೆಯಾಗುತ್ತಿವೆ.

ದೇಶಾದ್ಯಂತ ಈವರೆಗೆ 4.50 ಕೋಟಿ ಡೋಸ್‌ಗೂ ಅಧಿಕ ಕೋವಿಡ್-19 ಲಸಿಕೆಗಳನ್ನು ನೀಡಲಾಗಿದೆ.

ಕಳೆದ ಕೆಲವು ವಾರಗಳಲ್ಲಿ ಹೊಸ ಕೊರೋನವೈರಸ್ ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದ್ದು,ಮಾ.18ರಿಂದ ದೈನಂದಿನ ಏರಿಕೆಯ ಪ್ರಮಾಣ 30,000ದ ಮೇಲೆಯೇ ಇದೆ.

ತನ್ಮಧ್ಯೆ ಸೋಮವಾರ ಬೆಳಿಗ್ಗೆ ಅಂತ್ಯಗೊಂಡ 24 ಗಂಟೆಗಳ ಅವಧಿಯಲ್ಲಿ ದೇಶದಲ್ಲಿ 46,951 ಹೊಸ ಕೊರೋನವೈರಸ್ ಪ್ರಕರಣಗಳು ವರದಿಯಾಗಿದ್ದು,ಇದು ಕಳೆದ ನಾಲ್ಕೂವರೆ ತಿಂಗಳುಗಳಲ್ಲಿ ಮತ್ತು ಈ ವರ್ಷದಲ್ಲಿ ಗರಿಷ್ಠ ಪ್ರಮಾಣವಾಗಿದೆ. ಇದರೊಂದಿಗೆ ದೇಶದಲ್ಲಿ ಒಟ್ಟು ಕೊರೋನವೈರಸ್ ಪ್ರಕರಣಗಳ ಸಂಖ್ಯೆ 1,16,46,081ಕ್ಕೆ ಏರಿಕೆಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News