ಪಂಚರಾಜ್ಯ ವಿಧಾನಸಭಾ ಚುನಾವಣೆ: ಮತದಾನಕ್ಕೆ 72 ಗಂಟೆಗಳ ಮುನ್ನ ಬೈಕ್ ರ‍್ಯಾಲಿಗಳಿಗೆ ನಿಷೇಧ

Update: 2021-03-22 17:38 GMT

ಹೊಸದಿಲ್ಲಿ,ಮಾ.22: ಸಮಾಜ ವಿರೋಧಿ ಶಕ್ತಿಗಳು ಮತದಾರರಲ್ಲಿ ಭೀತಿಯನ್ನು ಸೃಷ್ಟಿಸಲು ಬೈಕ್‌ಗಳನ್ನು ಬಳಸುತ್ತಿವೆ ಎಂಬ ವರದಿಗಳ ನಡುವೆಯೇ ಚುನಾವಣಾ ಆಯೋಗವು ವಿಧಾನಸಭಾ ಚುನಾವಣೆಗಳು ನಡೆಯಲಿರುವ ಎಲ್ಲ ಕ್ಷೇತ್ರಗಳಲ್ಲಿ ಮತದಾನ ದಿನಾಂಕದ 72 ಗಂಟೆಗಳ ಮುನ್ನ ಮತ್ತು ಮತದಾನ ದಿನದಂದು ಬೈಕ್ ರ‍್ಯಾಲಿಗಳನ್ನು ನಿಷೇಧಿಸಿ ಸೋಮವಾರ ಪ.ಬಂಗಾಳ,ಕೇರಳ,ತಮಿಳುನಾಡು,ಅಸ್ಸಾಂ ಮತ್ತು ಪುದುಚೇರಿಗಳ ಮುಖ್ಯ ಚುನಾವಣಾಧಿಕಾರಿಗಳಿಗೆ ನಿರ್ದೇಶಗಳನ್ನು ಹೊರಡಿಸಿದೆ.

ಕೆಲವು ಸ್ಥಳಗಳಲ್ಲಿ ಸಮಾಜ ವಿರೋಧಿ ಶಕ್ತಿಗಳು ಮತದಾನ ದಿನಕ್ಕಿಂತ ಮೊದಲು ಮತ್ತು/ಅಥವಾ ಮತದಾನ ದಿನದಂದು ಮತದಾರರಲ್ಲಿ ಭೀತಿಯನ್ನು ಹುಟ್ಟಿಸಲು ಬೈಕ್‌ಗಳನ್ನು ಬಳಸುತ್ತಿವೆ ಎನ್ನುವುದನ್ನು ತನ್ನ ಗಮನಕ್ಕೆ ತರಲಾಗಿತ್ತು ಎಂದು ಆಯೋಗವು ತಿಳಿಸಿದೆ.

ತನ್ನ ನಿರ್ದೇಶಗಳು ಕಟ್ಟುನಿಟ್ಟಾಗಿ ಪಾಲನೆಯಾಗುವಂತೆ ನೋಡಿಕೊಳ್ಳಲು ಅಭ್ಯರ್ಥಿಗಳು,ರಾಜಕೀಯ ಪಕ್ಷಗಳು ಮತ್ತು ಆಯೋಗದ ವೀಕ್ಷಕರು ಸೇರಿದಂತೆ ಸಂಬಂಧಿತ ಎಲ್ಲರಿಗೂ ಮಾಹಿತಿ ನೀಡುವಂತೆಯೂ ಆಯೋಗವು ತನ್ನ ನಿರ್ದೇಶಗಳಲ್ಲಿ ತಿಳಿಸಿದೆ.

ಐದು ವಿಧಾನಸಭೆಗಳಿಗೆ ಚುನಾವಣೆಗಳು ಮಾ.27ರಿಂದ ಆರಂಭಗೊಳ್ಳಲಿದ್ದು,ಮೇ 2ರಂದು ಮತಗಳ ಎಣಿಕೆ ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News