"ಬ್ಯಾಂಕ್ ಗಳನ್ನು ನಿರ್ವಹಿಸಲಾಗದ್ದಕ್ಕೆ ಖಾಸಗೀಕರಣಗೊಳಿಸುತ್ತಿದ್ದೇವೆ" ಎಂದ ವಿತ್ತ ಸಚಿವೆಯ ವಿರುದ್ಧ ವ್ಯಾಪಕ ಆಕ್ರೋಶ

Update: 2021-03-23 06:13 GMT

ನವದೆಹಲಿ: ಬ್ಯಾಂಕುಗಳನ್ನು ಸರಿಯಾಗಿ ನಿರ್ವಹಿಸಲು ಸಾಧ್ಯವಾಗುತ್ತಿಲ್ಲವಾದುದರಿಂದ ಅವುಗಳನ್ನು ಖಾಸಗೀಕರಣಗೊಳಿಸಲಾಗುತ್ತಿದೆ ಎಂಬ ಹೇಳಿಕೆ ನೀಡಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್  ಅವರು ರಾಜೀನಾಮೆ ನೀಡಬೇಕೆಂದು ಟ್ವಿಟ್ಟರಿಗರು ಆಗ್ರಹಿಸುತ್ತಿದ್ದಾರೆ.

ಇತ್ತೀಚೆಗೆ ಇಕನಾಮಿಕ್ ಟೈಮ್ಸ್ ಆಯೋಜಿಸಿದ್ದ ಸಮಾರಂಭವೊಂದರಲ್ಲಿ ಮಾತನಾಡಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ "ಬ್ಯಾಂಕ್ ಖಾಸಗೀಕರಣದ  ಬಗ್ಗೆ ಅಸಮಾಧಾನ ಹೊಂದಿರುವವರ ಜತೆ ಮಾತನಾಡಲು ನಾನು  ಇಚ್ಛಿಸುತ್ತೇನೆ. ಆರ್ಥಿಕ ಚಟುವಟಿಕೆಗಳು ಪುನರುಜ್ಜೀವನಗೊಳ್ಳಬೇಕು.  ನನಗೆ ಅವುಗಳನ್ನು ಸಮರ್ಥವಾಗಿ ನಿಭಾಯಿಸಲು ಸಾಧ್ಯವಾಗುತ್ತಿಲ್ಲವಾದದುದರಿಂಧ ಅವುಗಳು ಉದ್ಯಮದಲ್ಲಿ ಉಳಿಯುವಂತೆ ಮಾಡಲು ನಾವು  ಮಾರಾಟ ಮಾರಾಟ ಮಾಡುತ್ತಿದ್ದೇವೆ" ಎಂದು ಹೇಳಿದ್ದರು.

ಅವರ ಈ ಹೇಳಿಕೆ ಹೊರಬಿದ್ದಿದ್ದೇ ತಡ, ನೆಟ್ಟಿಗರು ವಿತ್ತ ಸಚಿವೆಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ ಹಾಗೂ ಆಕೆ ಬ್ಯಾಂಕುಗಳನ್ನು ನಿರ್ವಹಿಸಲು ಅಸಮರ್ಥರಾಗಿದ್ದಾರೆ ಎಂದು ಆರೋಪಿಸಿದ್ದಾರಲ್ಲದೆ ಆಕೆ ಈ ಕಾರಣದಿಂದ ತಮ್ಮ ಹುದ್ದೆಯಿಂದ ಕೆಳಗಿಳಿಯಬೇಕೆಂದು ಆಗ್ರಹಿಸಿದ್ದಾರೆ. ಹಲವು ಟ್ವಿಟ್ಟರಿಗರು ವಿತ್ತ ಸಚಿವೆ ರಾಜೀನಾಮೆ ನೀಡಬೇಕೆಂದು ಹೇಳಿದ್ದಾರೆ.

"ನಿಮಗೆ ಬ್ಯಾಂಕುಗಳನ್ನು ಸಮರ್ಥವಾಗಿ ನಿಭಾಯಿಸಲು ಸಾಧ್ಯವಿಲ್ಲದೇ ಇದ್ದರೆ ದೇಶದ ಅರ್ಥವ್ಯವಸ್ಥೆಯನ್ನು ಹೇಗೆ ನಿಭಾಯಿಸುತ್ತೀರಿ, ಎಲ್ಲವನ್ನೂ ಗೋಜಲುಗೊಳಿಸುವ ಬದಲು ರಾಜೀನಾಮೆ ನೀಡಿ" ಎಂದು ಒಬ್ಬರು ಬರೆದಿದ್ದರೆ ಇನ್ನೊಬ್ಬರು ಪ್ರತಿಕ್ರಿಯಿಸಿ "ನಿಮಗೆ ಸರಿಯಾಗಿ ನಿಭಾಯಿಸಲು ಸಾಧ್ಯವಿಲ್ಲವೆಂದಾದರೆ ಅದು ನಿಮ್ಮ ಸಾಮರ್ಥ್ಯದ ಕುರಿತು ಪ್ರಶ್ನೆಗಳನ್ನೆತ್ತುತ್ತದೆ. ನಿಮಗೆ ವಿತ್ತ ಸಚಿವೆಯಾಗಿ ಮುಂದುವರಿಯುವ ಹಕ್ಕಿಲ್ಲ, ಭಾರತಕ್ಕೆ ಒಬ್ಬ ಸಮರ್ಥ ವಿತ್ತ ಸಚಿವರು ಬೇಕು" ಎಂದು ಬರೆದಿದ್ದಾರೆ.

"ನಿಮಗೆ ಬ್ಯಾಂಕುಗಳನ್ನು ಸರಿಯಾಗಿ ನಿರ್ವಹಿಸಲು ಸಾಧ್ಯವಿಲ್ಲದೇ ಇದ್ದರೆ ದಯವಿಟ್ಟು ರಾಜೀನಾಮೆ ನೀಡಿ" ಎಂದು ಇನ್ನು ಕೆಲವರು ಪ್ರತಿಕ್ರಿಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News