ವಿಧಾನಸಭೆಯೊಳಗೆ ಆರ್ ಜೆಡಿ ಶಾಸಕರನ್ನು ಥಳಿಸಿ,ಎಳೆದಾಡಿದ ಬಿಹಾರ ಪೊಲೀಸರು

Update: 2021-03-23 17:51 GMT

ಪಾಟ್ನಾ: ರಾಜ್ಯ ವಿಧಾನಸಭೆಯ ಆವರಣದಲ್ಲಿ ಬಿಹಾರ ಪೊಲೀಸರು ರಾಷ್ಟ್ರೀಯ ಜನತಾ ದಳ( ಆರ್ ಜೆಡಿ)ಶಾಸಕರನ್ನು ಥಳಿಸಿ ಎಳೆದೊಯುತ್ತಿದ್ದ ದೃಶ್ಯ ವೈರಲ್ ಆಗಿದ್ದು, ಈ ಘಟನೆಯು  ರಾಜಕೀಯ ಪಕ್ಷಗಳ ನಡುವಿನ ಸಂಘರ್ಷಕ್ಕೆ ಕಾರಣವಾಗಿದೆ.

ವಿರೋಧ ಪಕ್ಷದ ಶಾಸಕರು ಅಸೆಂಬ್ಲಿ ಸ್ಪೀಕರ್ ವಿಜಯ್ ಕುಮಾರ್ ಸಿನ್ಹಾ ಅವರನ್ನು ಅವರ ಕೊಠಡಿಯೊಳಗೆ ಕೂಡಿಹಾಕಲು ಯತ್ನಿಸಿದ ಬಳಿಕ ಘರ್ಷಣೆ ಉಂಟಾಗಿದೆ ಎಂದು ವರದಿಗಳು ತಿಳಿಸಿವೆ.

ಘಟನೆಯಲ್ಲಿ ಆರ್ ಜೆಡಿ ಶಾಸಕ ಸುಧಾಕರ ಸಿಂಗ್ ಹಾಗೂ ಸಿಪಿಎಂ ಶಾಸಕ ಸತ್ಯೇಂದ್ರ ಯಾದವ್ ಸಹಿತ ವಿರೋಧಪಕ್ಷದ ಹಲವು ನಾಯಕರು ಗಾಯಗೊಂಡಿದ್ದಾರೆ. ಪ್ರಜ್ಞಾಹೀನರಾಗಿ ಬಿದ್ದ ಯಾದವ್ ಅವರನ್ನು ಚಿಕಿತ್ಸೆಗಾಗಿ ಆ್ಯಂಬುಲೆನ್ಸ್ ನಲ್ಲಿ ಆಸ್ಪತ್ರೆಗೆ ಸಾಗಿಸಲಾಯಿತು.

ಘಟನೆಯ ದೃಶ್ಯಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಇದರಲ್ಲಿ ಆರ್ ಜೆಡಿ ಶಾಸಕ  ಸುಧಾಕರ್ ಸಿಂಗ್ ಗೆ ಪೊಲೀಸರು ಥಳಿಸುತ್ತಿರುವುದು ಕಂಡುಬಂದಿದೆ.

ಬಿಹಾರ ಮಿಲಿಟರಿ ಪೊಲೀಸ್ (ಬಿಎಂಪಿ)ಸಬಲೀಕರಣಗೊಳಿಸುವುದಕ್ಕೆ ಸಂಬಂಧಿಸಿ ನಿತೀಶ್ ಕುಮಾರ್ ಸರಕಾರ ಹೊಸ ಮಸೂದೆಯನ್ನುಮಂಡಿಸಲು ಮುಂದಾಗಿರುವುದು ವಿರೋಧ ಪಕ್ಷಗಳ ಶಾಸಕರು, ಆಡಳಿತಪಕ್ಷ ಹಾಗೂ ಪೊಲೀಸರ ಘರ್ಷಣೆಗೆ ಕಾರಣವಾಗಿದೆ.

ಪ್ರತಿಪಕ್ಷಗಳು ಪ್ರಸ್ತಾವಿತ ಮಸೂದೆಯನ್ನು ವಿರೋಧಿಸಿ ಘೋಷಣೆಗಳನ್ನು ಕೂಗಿದವು. ಈ ಮಸೂದೆ ಕಠಿಣವಾಗಿದ್ದು, ಯಾರನ್ನಾದರೂ ಬಂಧಿಸಲು ಪೊಲೀಸರಿಗೆ ಸಂಪೂರ್ಣ ಅಧಿಕಾರ ನೀಡುತ್ತದೆ ಎಂದು ವಿಪಕ್ಷಗಳು ಆರೋಪಿಸಿವು.

ಹಲವಾರು ಅಡೆತಡೆಗಳ ನಡುವೆ ಸಂಪುಟ ಸಚಿವ ಬಿಜೇಂದರ್ ಯಾದವ್ ಮಧ್ಯಾಹ್ನ 3 ಗಂಟೆಗೆ ಮಸೂದೆಯನ್ನು ಭಾರೀ ಪ್ರತಿಭಟನೆಯ ನಡುವೆ ಮಂಡಿಸಿದರು. ಮಸೂದೆಯನ್ನು ಮಂಡಿಸಿದ ಕೂಡಲೇ ಸ್ಪೀಕರ್ ವಿಜಯಕುಮಾರ್ ಸದನವನ್ನು ಸಂಜೆ 4:30ಕ್ಕೆ ಮುಂದೂಡಿದರು.

ಪ್ರತಿಪಕ್ಷದ ಶಾಸಕರು ಸ್ಪೀಕರ್ ಕೊಠಡಿಯ ಹೊರಗೆ ಕುಳಿತು ಧರಣಿ ನಡೆಸಿದರು. ಸ್ಪೀಕರ್ ಅವರನ್ನು ಸದನದ ಒಳಗೆ ಪ್ರವೇಶಿಸದಂತೆ ತಡೆಯೊಡ್ಡಿದರು.

ಇದಾದ ನಂತರ ಪಾಟ್ನಾ ಡಿಎಂ ಚಂದ್ರಶೇಖರ ಸಿಂಗ್ ಹಾಗೂ ಎಸ್ ಎಸ್ ಪಿ ಉಪೇಂದ್ರ ಕುಮಾರ್ ಶರ್ಮಾ ವಿಧಾನಸಭೆಗೆ ಧಾವಿಸಿದರು. ಮಾರ್ಷಲ್ ಗಳು ಹಾಗೂ ಪೊಲೀಸ್ ಪಡೆ ಅವರನ್ನು ಹಿಂಬಾಲಿಸಿದವು. ಸ್ಪೀಕರ್ ಕೊಠಡಿಯ ಹೊರಗೆ ಕುಳಿತ್ತಿದ್ದ ಶಾಸಕರನ್ನು ಬಲವಂತವಾಗಿ ಹೊರ ಹಾಕಿದರು.

ಪುರುಷ ಹಾಗೂ ಮಹಿಳಾ ಶಾಸಕರನ್ನು ಎಳೆದೊಯ್ಯುತ್ತಿರುವುದು ಹಾಗೂ ಹಲವರನ್ನು ಥಳಿಸುತ್ತಿರುವ ದೃಶ್ಯಗಳು ಕಂಡುಬಂದಿವೆ. ಆರ್ ಜೆಡಿ ಶಾಸಕ ಸುಧಾಕರ ಸಿಂಗ್ ರನ್ನು ಪೊಲೀಸರು ಥಳಿಸುತ್ತಿರುವುದು. ಆರ್ ಜೆಡಿ ಶಾಸಕಿ ಕಿರಣ್ ದೇವಿಯವರನ್ನು ಮಹಿಳಾ ಪೊಲೀಸರು ಎಳೆದೊಯ್ಯುತ್ತಿರುವುದು ಕ್ಯಾಮರಾದಲ್ಲಿ ಸೆರೆಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News