ಛತ್ತೀಸ್‌ಗಢ: ನಕ್ಸಲ್ ದಾಳಿ; ಐವರು ಯೋಧರು ಸಾವು

Update: 2021-03-23 17:47 GMT
ಸಾಂದರ್ಭಿಕ ಚಿತ್ರ 

ರಾಯಪುರ, ಮಾ. 23: ಛತ್ತೀಸ್‌ಗಢದ ನಾರಾಯಣಪುರ ಜಿಲ್ಲೆಯಲ್ಲಿ ನಕ್ಸಲರು ಮಂಗಳವಾರ ಬಸ್ ಅನ್ನು ಗುರಿಯಾಗಿರಿಸಿ ಐಇಡಿ ಸ್ಫೋಟಿಸಿದ ಪರಿಣಾಮ ಡಿಸ್ಟಿಕ್ ರಿಸರ್ವ್ ಗಾರ್ಡ್ (ಡಿಆರ್‌ಜಿ)ನ ಐವರು ಭದ್ರತಾ ಸಿಬ್ಬಂದಿ ಮೃತಪಟ್ಟಿದ್ದಾರೆ. ಘಟನೆಯಲ್ಲಿ 14ಕ್ಕೂ ಅಧಿಕ ಭದ್ರತಾ ಸಿಬ್ಬಂದಿ ಗಾಯಗೊಂಡಿದ್ದಾರೆ. ಇವರಲ್ಲಿ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ ಎಂದು ಬಸ್ತಾರ್ ಐಜಿ ಪಿ. ಸುಂದರರಾಜ್ ಹೇಳಿದ್ದಾರೆ. ಡಿಆರ್‌ಜಿಯ 27 ಯೋಧರನ್ನು ಕೊಂಡೊಯ್ಯುತ್ತಿದ್ದ ಬಸ್ ಛತ್ತೀಸ್‌ಗಢದ ನಾರಾಯಣಪುರ ಜಿಲ್ಲೆಯ ಕಡೆನಾರ್ ಹಾಗೂ ಕನ್ಹಾರ್‌ಗಾಂವ್ ನಡುವೆ ಸಂಜೆ 4.30ಕ್ಕೆ ಹಾದು ಹೋಗುತ್ತಿದ್ದ ಸಂದರ್ಭ ನಕ್ಸಲರು ಐಇಡಿ ದಾಳಿ ನಡೆಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಡಿಆರ್‌ಜಿ ತಂಡ ನಕ್ಸಲ್ ಶೋಧ ಕಾರ್ಯಾಚರಣೆ ನಡೆಸಿ ಹಿಂದಿರುಗುತ್ತಿದ್ದಾಗ ಸೇತುವೆಯಲ್ಲಿ ಇರಿಸಿದ್ದ 3 ಐಇಡಿ ಸ್ಫೋಟಗೊಂಡಿತು. ಪರಿಣಾಮ ಚಾಲಕ ಹಾಗೂ ಇಬ್ಬರು ಯೋಧರು ಸ್ಥಳದಲ್ಲೇ ಮೃತಪಟ್ಟರು. ಇನ್ನಿಬ್ಬರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದರು ಎಂದು ನಕ್ಸಲ್ ನಿಗ್ರಹ ಕಾರ್ಯಾಚರಣೆಯ ಡಿಜಿ ಅಶೋಕ್ ಜುನೇಜಾ ಹೇಳಿದ್ದಾರೆ. ಐಇಡಿ ಸ್ಫೋಟದ ಹಿನ್ನೆಲೆಯಲ್ಲಿ ಸಂಪೂರ್ಣ ಪ್ರದೇಶವನ್ನು ಸುತ್ತುವರಿಯಲಾಗಿದೆ ಎಂದು ಇಂಡೋ ಟಿಬೇಟಿಯನ್ ಗಡಿ ಪೊಲೀಸ್‌ನ ಅಧಿಕೃತ ಹೇಳಿಕೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News