1,200 ಮೈಕ್ರೋಸಾಫ್ಟ್ ಖಾತೆ ಅಳಿಸಿದ ಭಾರತೀಯನಿಗೆ 2 ವರ್ಷ ಜೈಲು
ವಾಶಿಂಗ್ಟನ್, ಮಾ. 24: ತಾನು ಕೆಲಸ ಮಾಡುತ್ತಿದ್ದ ಮಾಹಿತಿ ತಂತ್ರಜ್ಞಾನ ಸಲಹಾ ಕಂಪೆನಿ ತನ್ನನ್ನು ಹೊರಹಾಕಿದ ಬಳಿಕ, ಅದರ ಗಿರಾಕಿ ಕಂಪೆನಿಯೊಂದರ 1,200ಕ್ಕೂ ಅಧಿಕ ಮೈಕ್ರೋಸಾಫ್ಟ್ ಬಳಕೆದಾರ ಖಾತೆಗಳನ್ನು ಅಳಿಸಿ ಹಾಕಿದ ಆರೋಪದಲ್ಲಿ ಭಾರತೀಯನೊಬ್ಬನಿಗೆ ಕ್ಯಾಲಿಫೋರ್ನಿಯದ ನ್ಯಾಯಾಲಯವೊಂದು 2 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.
ತನ್ನ ವಿರುದ್ಧ ಬಂಧನ ವಾರಂಟ್ ಜಾರಿಯಲ್ಲಿರುವುದು ತಿಳಿಯದೆ ಭಾರತದಿಂದ ಅಮೆರಿಕಕ್ಕೆ ಪ್ರಯಾಣಿಸಿದಾಗ ಜನವರಿ 11ರಂದು ಆರೋಪಿ ದೀಪಾಂಶು ಖೇರ್‌ನನ್ನು ಬಂಧಿಸಲಾಗಿತ್ತು.
ಎರಡು ವರ್ಷಗಳ ಜೈಲಿನ ಬಳಿಕ ದೀಪಾಂಶು ಮೂರು ವರ್ಷಗಳ ನಿಗಾದಲ್ಲಿರುತ್ತಾನೆ. ಅದೂ ಅಲ್ಲದೆ, ಆತ ಸೃಷ್ಟಿಸಿದ ಸಮಸ್ಯೆಯನ್ನು ನಿವಾರಿಸಲು ಕಂಪೆನಿ ಖರ್ಚು ಮಾಡಿದ 5,67,084 ಡಾಲರ್ (ಸುಮಾರು 4.12 ಕೋಟಿ ರೂಪಾಯಿ) ಮೊತ್ತವನ್ನು ಕಂಪೆನಿಗೆ ಪರಿಹಾರವಾಗಿ ನೀಡಬೇಕಾಗಿದೆ.
ಆತ ಮಾಹಿತಿ ತಂತ್ರಜ್ಞಾನ ಸಲಹಾ ಕಂಪೆನಿಯಲ್ಲಿ 2017ರಿಂದ 2018 ಮೇ ತಿಂಗಳವರೆಗೆ ಕೆಲಸ ಮಾಡಿದ್ದನು. ಆತನ ಸೇವೆ ತೃಪ್ತಿಕರವಾಗಿಲ್ಲ ಎಂದು ಹೇಳಿ ಕಂಪೆನಿಯು ಆತನನ್ನು ಕೆಲಸದಿಂದ ತೆಗೆದುಹಾಕಿತ್ತು.
2018 ಜೂನ್‌ನಲ್ಲಿ ಭಾರತಕ್ಕೆ ವಾಪಸಾದ ಆತ, ಅದೇ ವರ್ಷದ ಆಗಸ್ಟ್‌ನಲ್ಲಿ ತನ್ನ ಕಂಪೆನಿಯ ಗಿರಾಕಿ ಕಂಪೆನಿಯ ಸರ್ವರ್‌ಗೆ ಕನ್ನ ಹಾಕಿ ಅದರ 1,500 ಮೈಕ್ರೋಸಾಫ್ಟ್ ಖಾತೆಗಳ ಪೈಕಿ 1,200ಕ್ಕೂ ಅಧಿಕ ಖಾತೆಗಳನ್ನು ಅಳಿಸಿ ಹಾಕಿದ್ದಾನೆ ಎಂದು ಆರೋಪಿಸಲಾಗಿದೆ. ಇದರಿಂದಾಗಿ ಆ ಕಂಪೆನಿಯು ಎರಡು ದಿನಗಳ ಕಾಲ ಸಂಪೂರ್ಣವಾಗಿ ಮುಚ್ಚಿತ್ತು ಎನ್ನಲಾಗಿದೆ.