ವಿರಾಟ್ ಕೊಹ್ಲಿ, ರೋಹಿತ್ ಶರ್ಮಾಗೆ ಭಡ್ತಿ
ದುಬೈ:ಬ್ಯಾಟ್ಸ್‌ಮನ್‌ಗಳ ಐಸಿಸಿ ಟ್ವೆಂಟಿ-20 ಶ್ರೇಯಾಂಕದಲ್ಲಿ ಭಾರತದ ನಾಯಕ ವಿರಾಟ್ ಕೊಹ್ಲಿ ನಾಲ್ಕನೇ ಸ್ಥಾನಕ್ಕೆ ಏರಿದ್ದಾರೆ. ಉಪ ನಾಯಕ ರೋಹಿತ್ ಶರ್ಮಾ ಬುಧವಾರ ಬಿಡುಗಡೆಗೊಂಡ ರ್ಯಾಂಕಿಂಗ್ ಪಟ್ಟಿಯಲ್ಲಿ ಮೂರು ಸ್ಥಾನಗಳನ್ನು ಏರಿ 14ನೇ ಸ್ಥಾನ ತಲುಪಿದ್ದಾರೆ.
ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಓಪನರ್ ಆಗಿದ್ದ ಕೊಹ್ಲಿ ಅಂತಿಮ ಟ್ವೆಂಟಿ -20 ಪಂದ್ಯದಲ್ಲಿ 52 ಎಸೆತಗಳಲ್ಲಿ ಅಜೇಯ 80 ರನ್ ಗಳಿಸಿದ್ದರು. ರೋಹಿತ್ 34 ಎಸೆತಗಳಲ್ಲಿ 64 ರನ್ ಗಳಿಸಿದ್ದರು. ಇದರಿಂದಾಗಿ ಶರ್ಮಾ ಮೂರು ಸ್ಥಾನಗಳಷ್ಟು ಭಡ್ತಿ ಪಡೆದು 14 ನೇ ಸ್ಥಾನಕ್ಕೆ ತಲುಪಿದ್ದಾರೆ.
ಭಾರತದ ಬ್ಯಾಟ್ಸ್‌ಮನ್‌ಗಳ ಪೈಕಿ ಶ್ರೇಯಸ್ ಅಯ್ಯರ್ ಐದು ಸ್ಥಾನಗಳ ಭಡ್ತಿ ಪಡೆದು ವೃತ್ತಿಜೀವನದ ಅತ್ಯುತ್ತಮ 26ನೇ ಸ್ಥಾನಕ್ಕೆ ತಲುಪಿದ್ದಾರೆ. ಸೂರ್ಯಕುಮಾರ್ ಯಾದವ್ ಮತ್ತು ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ರಿಷಭ್ ಪಂತ್ ಅವರು ಪ್ರಗತಿ ಸಾಧಿಸಿದ್ದಾರೆ. ಸೂರ್ಯಕುಮಾರ್ ಯಾದವ್ ಸರಣಿಯ ಎರಡನೇ ಪಂದ್ಯದಲ್ಲಿ ಪಾದಾರ್ಪಣೆ ಮಾಡಿದ್ದರೂ ಬ್ಯಾಟಿಂಗ್ ಅವಕಾಶ ಸಿಗಲಿಲ್ಲ. ಇದರಿಂದಾಗಿ ಯಾವುದೇ ಅಂಕಗಳನ್ನು ಗಳಿಸಲು ಸಾಧ್ಯವಾಗಲಿಲ್ಲ. ಆದರೆ ಅಂತಿಮ ಪಂದ್ಯದಲ್ಲಿ ಯಾದವ್ 57 ರನ್ ಗಳಿಸಿ 66ನೇ ಸ್ಥಾನಕ್ಕೆ ತಳ್ಳಿದ್ದಾರೆ. ಪಂತ್ 11 ಸ್ಥಾನಗಳನ್ನು ಏರಿ 69ನೇ ಸ್ಥಾನಕ್ಕೆ ತಲುಪಿದ್ದಾರೆ. ಅಂತಿಮ ಪಂದ್ಯದಲ್ಲಿ 68 ರನ್ ಗಳಿಸಿದ್ದ ಡೇವಿಡ್ ಮಲನ್ ಶ್ರೇಯಾಂಕದಲ್ಲಿ ಅಗ್ರಸ್ಥಾನದಲ್ಲಿದ್ದರೆ, ಜೋಸ್ ಬಟ್ಲರ್ 18ನೇ ಸ್ಥಾನ ತಲುಪಿದ್ದಾರೆ. ಬೌಲರ್‌ಗಳ ರ್ಯಾಂಕಿಂಗ್‌ನಲ್ಲಿ ಲೆಗ್ ಸ್ಪಿನ್ನರ್ ಆದಿಲ್ ರಶೀದ್ 4ನೇ ಸ್ಥಾನ ಪಡೆದಿದ್ದಾರೆ. ಏಕದಿನ ಶ್ರೇಯಾಂಕದಲ್ಲಿ, ಜಾನಿ ಬೈರ್‌ಸ್ಟೋವ್ ಮಂಗಳವಾರ ಪುಣೆಯಲ್ಲಿ ಭಾರತ ವಿರುದ್ಧದ ಸರಣಿಯ ಆರಂಭಿಕ ಪಂದ್ಯದಲ್ಲಿ 94 ರನ್ ಗಳಿಸಿದ ನಂತರ ವೃತ್ತಿಜೀವನದ ಅತ್ಯುತ್ತಮ ಏಳನೇ ಸ್ಥಾನಕ್ಕೆ ಏರಿದ್ದಾರೆ.
ಭಾರತದ ಓಪನರ್ ಶಿಖರ್ ಧವನ್ 98 ರನ್ ಗಳಿಸಿ 15ನೇ ಸ್ಥಾನಕ್ಕೆ ಏರಿದ್ದಾರೆ.