×
Ad

ಪಾಕಿಸ್ತಾನ ವಿರುದ್ದ ಘೋಷಣೆ ಕೂಗುವಂತೆ ವ್ಯಕ್ತಿಗೆ ನಿರ್ದಯವಾಗಿ ಥಳಿತ, ಆರೋಪಿಯ ಬಂಧನ

Update: 2021-03-25 11:53 IST
Image Credit: NDTV

 

ಹೊಸದಿಲ್ಲಿ: ದಿಲ್ಲಿಯ ಖಜೂರಿ ಖಾಸ್  ವ್ಯಕ್ತಿಯೊಬ್ಬ ಇನ್ನೊಬ್ಬನಿಗೆ 'ಹಿಂದೂಸ್ತಾನ್ ಜಿಂದಾಬಾದ್' ಹಾಗೂ 'ಪಾಕಿಸ್ತಾನ್ ಮುರ್ದಾಬಾದ್' ಎಂದು ಘೋಷಣೆ ಕೂಗುವಂತೆ ಬಲವಂತಪಡಿಸಿ ನಿರ್ದಯವಾಗಿ ಥಳಿಸುತ್ತಿರುವ ಭಯಾನಕ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಘಟನೆಗೆ ಸಂಬಂಧಿಸಿ ಪೊಲೀಸರು ಆರೋಪಿಯನ್ನು ಬಂಧಿಸಿ, ಆತನ ವಿರುದ್ಧ ಎಫ್ ಐ ಆರ್ ದಾಖಲಿಸಿದ್ದಾರೆ.

ವೀಡಿಯೊ ದೃಶ್ಯದಲ್ಲಿ ಅಜಯ್ ಗೋಸ್ವಾಮಿ ಎಂಬಾತ ಇನ್ನೊಬ್ಬ ವ್ಯಕ್ತಿಯನ್ನು ರೋಡಿನಲ್ಲಿ ಕೆಡವಿ, 'ಹಿಂದೂಸ್ತಾನ್ ಜಿಂದಾಬಾದ್','ಪಾಕಿಸ್ತಾನ್ ಮುರ್ದಾಬಾದ್' ಎಂದು ಜೋರಾಗಿ ಕೂಗುವಂತೆ ಬಲವಂತಪಡಿಸುತ್ತಾನೆ. ಹಲ್ಲೆಗೊಳಗಾದ ವ್ಯಕ್ತಿ ಗೋಸ್ವಾಮಿಯ ಕಾಲ ಹಿಡಿದು ತನಗೆ ಥಳಿಸದಂತೆ ವಿನಂತಿಸಿಕೊಳ್ಳುತ್ತಾನೆ. ಆದರೆ, ಆರೋಪಿ ಆತನ ಶರ್ಟ್ ಹಿಡಿದು ನೆಲಕ್ಕೆ ಕೆಡವುತ್ತಾನೆ.

ಖಜೂರಿ ಖಾಸ್ ಘಟನೆಯ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರವಾಗುತ್ತಿದೆ. ಘಟನೆಯ ಕುರಿತು ಮಾಹಿತಿ ಸಂಗ್ರಹಿಸಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗಿದೆ. ಆರೋಪಿಗಳನ್ನು ಬಂಧಿಸಲಾಗಿದ್ದು, ಪ್ರಕರಣದ ತನಿಖೆ ಪ್ರಗತಿಯಲ್ಲಿದೆ ಎಂದು ಉಪ ಪೊಲೀಸ್ ಆಯುಕ್ತ(ಈಶಾನ್ಯ)ಸಂಜಯಕುಮಾರ್ ಸೈನ್ ತಿಳಿಸಿದ್ದಾರೆ.

ಅಜಯ್ ಗೋಸ್ವಾಮಿ ಕಳೆದ ವರ್ಷದ ದಿಲ್ಲಿ ಗಲಭೆಯ ಆರೋಪಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಫೆಬ್ರವರಿಯಲ್ಲಿ ವಿವಾದಾತ್ಮಕ ಪೌರತ್ವ ಕಾಯ್ದೆಯ ಬೆಂಬಲಿಗರು ಹಾಗೂ ವಿರೋಧಿಗಳ ನಡುವೆ ನಡೆದಿದ್ದ ಘರ್ಷಣೆಯಲ್ಲಿ 50ಕ್ಕೂ ಅಧಿಕ ಜನರು ಮೃತಪಟ್ಟಿದ್ದರು. 

ಈಶಾನ್ಯ ದಿಲ್ಲಿಯಲ್ಲಿ ನಡೆದಿರುವ ಘಟನೆಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News