ಸಂಘ ಪರಿವಾರದ ಕಾರ್ಯಕರ್ತರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೆಥೋಲಿಕ್ ಒಕ್ಕೂಟ ಆಗ್ರಹ
ಹೊಸದಿಲ್ಲಿ, ಮಾ. 26: ಉತ್ತರಪ್ರದೇಶದ ಝಾನ್ಸಿಯ ಸಮೀಪ ಚಲಿಸುತ್ತಿರುವ ರೈಲಿನಲ್ಲಿ ಸೇಕ್ರೆಡ್ ಹಾರ್ಟ್‌ನ ಇಬ್ಬರು ಕ್ರೈಸ್ತ ಸನ್ಯಾಸಿನಿಯರು ಹಾಗೂ ಇಬ್ಬರು ವಿದ್ಯಾರ್ಥಿ ಕ್ರೈಸ್ತ ಸನ್ಯಾಸಿನಿಯರಿಗೆ ಕಿರುಕುಳ ನೀಡಿದ ಘಟನೆಯಲ್ಲಿ ಭಾಗಿಯಾದ ಸಂಘಪರಿವಾರದ ಕಾರ್ಯಕರ್ತರು ಹಾಗೂ ಪೊಲೀಸರ ವಿರುದ್ಧ ಅನುಕರಣೀಯ ಕ್ರಮ ಕೈಗೊಳ್ಳುವಂತೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರನ್ನು ಅಖಿಲ ಭಾರತ ಕೆಥೋಲಿಕ್ ಒಕ್ಕೂಟ ಬುಧವಾರ ಆಗ್ರಹಿಸಿದೆ.
ಇಂತಹ ಘಟನೆಗಳು ದೇಶಕ್ಕೆ ಕೆಟ್ಟ ಹೆಸರು ಎಂದು 101 ವರ್ಷ ಹಳೆಯ ಕೆಥೋಲಿಕ್ ಒಕ್ಕೂಟ ಎಚ್ಚರಿಸಿದೆ. ಅಲ್ಲದೆ, ವಿಶ್ವಸಸಂಸ್ಥೆ ಹಾಗೂ ಇತರ ಅಂತರ್ ರಾಷ್ಟ್ರೀಯ ಮಾನವ ಹಕ್ಕುಗಳ ಗುಂಪು ತಮ್ಮ ವರದಿಯಲ್ಲಿ ಉಲ್ಲೇಖಿಸಲು ಕಾರಣವಾಗುತ್ತದೆ ಎಂದು ಅದು ಹೇಳಿದೆ.
ದಿಲ್ಲಿಯ ಸೇಕ್ರೆಡ್ ಹಾರ್ಟ್‌ನ ಇಬ್ಬರು ಕ್ರೈಸ್ತ ಸನ್ಯಾಸಿನಿಯರು ಹಾಗೂ ಇಬ್ಬರು ವಿದ್ಯಾರ್ಥಿ ಕ್ರೈಸ್ತ ಸನ್ಯಾಸಿನಿಯರಿಗೆ ಸಂಘ ಪರಿವಾರದವರು ರೈಲಿನಲ್ಲಿ ಕಿರುಕುಳ ನೀಡಿದ್ದರು. ಅನಂತರ ರೈಲ್ವೆ ಪೊಲೀಸರು ಕ್ರೈಸ್ತ ಸನ್ಯಾಸಿನಿಯರನ್ನು ಝಾನ್ಸಿಯಲ್ಲಿ ಕೆಳಗೆ ಇಳಿಸಿದ್ದರು. ಸಂಘಪರಿವಾರದ ಕಾರ್ಯಕರ್ತರು ‘ಜೈ ಶ್ರೀರಾಮ್’ ಹಾಗೂ ‘ಜೈ ಹನುಮಾನ್’ ಎಂದು ಘೋಷಣೆ ಕೂಗುತ್ತಿರುವ ಈ ಘಟನೆಯ ವೀಡಿಯೊ ವೈರಲ್ ಆಗಿತ್ತು. ಕ್ರೈಸ್ತ ಸನ್ಯಾಸಿನಿಯರು ಮತಾಂತರ ನಡೆಸುತ್ತಿದ್ದಾರೆ ಎಂದು ಅವರು ಆರೋಪಿಸುತ್ತಿರುವುದು, ತಾವು ಕ್ರಿಶ್ಚಿಯನ್ನರು ಎಂದು 19 ವರ್ಷದ ವಿದ್ಯಾರ್ಥಿನಿ ಗುರುತು ಚೀಟಿಯನ್ನು ತೋರಿಸುತ್ತಿರುವುದು, ಆದರೂ ಸಂಘ ಪರಿವಾರದ ಕಾರ್ಯಕರ್ತರು ಹಿಂದಿರುಗದೇ ಇರುವುದು ವೀಡಿಯೊದಲ್ಲಿ ದಾಖಲಾಗಿತ್ತು. ಉತ್ತರಪ್ರದೇಶ ಪೊಲೀಸರು ಸಂಘ ಪರಿವಾರದ ಕಾರ್ಯಕರ್ತರು ಕಿರುಕುಳ ನೀಡುವುದನ್ನು ತಡೆಯುವ ಬದಲು ಕೈಸ್ತ ಸನ್ಯಾಸಿನಿಯರನ್ನು ರೈಲಿನಿಂದ ಬಲವಂತವಾಗಿ ಕೆಳಗೆ ಇಳಿಸಿದ್ದಾರೆ ಹಾಗೂ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ ಎಂದು ಕೆಥೋಲಿಕ್ ಒಕ್ಕೂಟ ಆರೋಪಿಸಿದೆ.
ಇಬ್ಬರು ಮಹಿಳೆಯರು ಕೇರಳದವರಾಗಿರುವುದರಿಂದ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಈ ಘಟನೆ ಕುರಿತು ಕೇಂದ್ರ ಸರಕಾರಕ್ಕೆ ಪತ್ರ ಬರೆದಿದ್ದರು. ಕೇರಳದಲ್ಲಿ ಚುನಾವಣಾ ಪ್ರಚಾರದಲ್ಲಿ ತೊಡಗಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, ‘‘ಕ್ರಿಮಿನಲ್‌ಗಳನ್ನು ಕಾನೂನಿನ ಮುಂದೆ ತರಲಾಗುವುದು’’ ಎಂದು ಹೇಳಿದ್ದರು.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಬರೆದ ಪತ್ರದಲ್ಲಿ ಎಐಸಿಯು ರಾಷ್ಟ್ರಾಧ್ಯಕ್ಷ ಲ್ಯಾನ್ಸಿ ಡಿ ಕುನ್ಹಾ, ‘‘ತಮ್ಮನ್ನು ರಕ್ಷಿಸಿಕೊಳ್ಳಲು ಸಾಧ್ಯವಾಗದ ನಿಸ್ಸಹಾಯಕ ಜನರ ಮೇಲೆ ನಕಲಿ ರಕ್ಷಕ ಗುಂಪುಗಳು ಭೀತಿ ಹುಟ್ಟಿಸದಂತೆ ದೇಶದ ಅಲ್ಪಸಂಖ್ಯಾತರಿಗೆ ಭಾರತದ ಪ್ರಧಾನಿ ಹಾಗೂ ನೀವು ಭರವಸೆ ನೀಡಬೇಕು’’ ಎಂದು ಹೇಳಿದ್ದಾರೆ. ಇಂತಹ ಅಪರಾಧಗಳಲ್ಲಿ ತೊಡಗುವುದನನ್ನು ಕಂಡರೆ ಹಾಗೂ ಸ್ವಘೋಷಿತ ನಕಲಿ ರಕ್ಷಕರು ಕಾನೂನನ್ನು ಕೈಗೆತ್ತಿಕೊಳ್ಳುವ ಸಂದರ್ಭ ಮೂಕ ಪ್ರೇಕ್ಷಕರಾಗುವ ಪೊಲೀಸರ ವಿರುದ್ಧ ಕಠಿಣ ಶಿಸ್ತು ಕ್ರಮಗಳನ್ನು ತೆಗೆದುಕೊಳ್ಳುವುದಾಗಿ ಕೇಂದ್ರ ಸರಕಾರದ ಎಚ್ಚರಿಕೆ ನೀಡಬಹುದು ಎಂದು ಕೂಡ ನಾವು ನಿರೀಕ್ಷಿಸುತ್ತೇವೆ ಎಂದು ಎಐಸಿಯು ಹೇಳಿದೆ.