ವಿಮರ್ಶೆ-ವಿಜಯಶಂಕರ ಮಾದರಿ

Update: 2021-03-26 19:30 GMT

ನವೋದಯ, ನವ್ಯ, ದಲಿತ, ಬಂಡಾಯ ಮೊದಲಾಗಿ ಕನ್ನಡ ಸಾಹಿತ್ಯದ ಪ್ರಮುಖ ಮಾರ್ಗ ಕೃತಿಗಳನ್ನು ಅಧ್ಯಯನದ ನಿಕಶಕ್ಕೊಡ್ಡಿ ವಿಮರ್ಶಿಸುವ ವಿಜಯಶಂಕರರ ವಿಮರ್ಶಾ ಮಾರ್ಗ ತನ್ನದೇ ಆದ ಅಸ್ಮಿತೆಯನ್ನು ಛಾಪಿಸುವ ರೀತಿಯದು. ಅವರ ಅಸ್ಮಿತೆ ಇರುವುದೇ ಕೃತಿ ಮತ್ತು ಕರ್ತೃವಿನ ವ್ಯಕ್ತಿತ್ವ ವಿಮರ್ಶೆಯಲ್ಲಿ. ಒಂದು ಕೃತಿಯ ಅಂತಃಸತ್ತ್ವ, ಶೈಲಿ, ಭಾಷಾ ಸಿದ್ಧಿ ವಗೈರೆ ವಗೈರೆಗಳನ್ನು ಶೋಧಿಸುತ್ತಲೇ ಕರ್ತೃವಿನ ಪ್ರತಿಭಾ ಸಂಪನ್ನತೆ, ಸಾಧನೆ ಸಿದ್ಧಿಗಳನ್ನು ಅಳೆಯುವುದು ಅವರ ಸಾಹಿತ್ಯ ವಿಮರ್ಶೆಯ ಒಂದು ಪರಿಯಾದರೆ, ಲೇಖಕರ ವ್ಯಕ್ತಿತ್ವವನ್ನು ಕಟ್ಟಿಕೊಡುತ್ತಲೇ ಅವರ ಕೃತಿಗಳನ್ನು ಶೋಧಿಸಿ ಮೌಲ್ಯಮಾಪನ ಮಾಡುವುದು ಇನ್ನೊಂದು ಪರಿ. ಈ ಮಾತಿಗೆ ನಿದರ್ಶನವಾಗಿ ಅವರ ಒಳದನಿ, ನಿಜಗುಣ, ಪ್ರಮೇಯ ವಸುಧಾ ವಲಯ ಸಂಕಲನಗಳಲ್ಲಿನ ಕೃತಿನಿಷ್ಠ ವಿಮರ್ಶೆಗಳನ್ನೂ ಒಡನಾಟ, ಅಕ್ಷರಚಿತ್ರಗಳು, ಆಪ್ತನೋಟ ಸಂಕಲನಗಳಲ್ಲಿನ ವ್ಯಕ್ತಿಚಿತ್ರ ಲೇಖನಗಳನ್ನು ನೋಡಬಹುದು.


‘‘ತೃಪ್ತಾತ್ಮ’’

‘‘ತೃಪ್ತೋಸ್ಮಿ’’
 ಈ ಎರಡು ಪ್ರಯೋಗಗಳು ನಮ್ಮ ಆಚರಣೆಗಳಲ್ಲಿ ಕೇಳಿ ಬರುತ್ತವೆ. ತೃಪ್ತಿಯಾಯಿತೇ ಎಂದು ಕರ್ತೃ ಕೇಳುತ್ತಾನೆ. ತೃಪ್ತಿಯಾಯಿತು ಎನ್ನುತ್ತದೆ ಸೇವಿತಾತ್ಮ. ಅಲ್ಲಿಗೆ ಲೆಕ್ಕ ಚುಕ್ತವಾಯಿತು. ಇಬ್ಬರಿಗೂ ಮನಸ್ಸು ನಿರುಂಬಳ. ಆದರೆ ನಮ್ಮ ಸಾಂಸ್ಕೃತಿಕ ಕ್ಷೇತ್ರದಲ್ಲಿ ಅದು ಅಷ್ಟು ಸುಲಭ ಅಲ್ಲ. ನಮ್ಮ ಸಾಹಿತ್ಯ ವಿಮರ್ಶೆಯನ್ನೇ ತೆಗೆದುಕೊಳ್ಳಿ, ಕುವೆಂಪು, ಬೇಂದ್ರೆ, ಮಾಸ್ತಿ, ಕಾರಂತ, ಅಡಿಗ ಇವರನ್ನೇ ಕೇಳಿ, ‘‘ನಿಮ್ಮ ಕೃತಿಗಳ ಬಗ್ಗೆ ಬಂದಿರುವ ವಿಮರ್ಶೆ ನಿಮಗೆ ತೃಪ್ತಿ ತಂದಿದೆಯೇ’’ ಎಂದು. ಸುತರಾಂ ಇಲ್ಲ ಎನ್ನುವ ಉತ್ತರ ಬರುವುದು ಖಾತ್ರಿ. ಈ ಅತೃಪ್ತಿ ನಮ್ಮ ಸಾಂಸ್ಕೃತಿಕ ಕ್ಷೇತ್ರದ ಆರೋಗ್ಯವಂತಿಕೆಯ ಲಕ್ಷಣ. ಎಂದೇ ನಮ್ಮ ಸಾಂಸ್ಕೃತಿಕ ಪರಂಪರೆ ಲೆಕ್ಕ ಚುಕ್ತವಾಯಿತೆಂದು ಸುಖನಿದ್ರೆಗಿಳಿಯದೇ ಅತೃಪ್ತಿಯಿಂದ ಚಡಪಡಿಸುತ್ತಲೇ ಇರುತ್ತದೆ. ಈ ಮಾತು ಸಾಹಿತ್ಯ ವಿಮರ್ಶೆಗೂ ಸಲ್ಲುತ್ತದೆ.

ನವೋದಯದಿಂದ ಎಲ್ಲ ಕಾಲಘಟ್ಟಗಳಲ್ಲೂ ಆಯಾ ಕಾಲದ ಸಾಹಿತ್ಯದ ವಿಮರ್ಶೆ ಗಣನೀಯ ಪ್ರಮಾಣದಲ್ಲಿ ಪ್ರೌಢಿಮೆಯಿಂದ ಪ್ರಕಟಗೊಂಡಿದೆ.ಆದಾಗ್ಯೂ ಅತೃಪ್ತಿಯ ದನಿಗಳು ಕೇಳಿ ಬಂದಿರುವುದುಂಟು. ಸದ್ಯ ಕನ್ನಡದಲ್ಲಿ ವಿಮರ್ಶೆ ಸಾಕಷ್ಟು ಬರುತ್ತಿಲ್ಲ ಎನ್ನುವ ಮಾತಿದೆ. ಆದರೆ ಈ ಮಾತು ಅಷ್ಟಾಗಿ ಸಮ್ಮತವಲ್ಲ. ಏಕೆಂದರೆ ನಮ್ಮ ವಿಮರ್ಶಕರಾದ ಸಿ. ಎನ್. ರಾಮಚಂದ್ರನ್, ನರಹಳ್ಳಿ ಬಾಲಸುಬ್ರಹ್ಮಣ್ಯ, ಎಂ. ಎಸ್. ಆಶಾದೇವಿ, ರಾಜೇಂದ್ರ ಚೆನ್ನಿ, ಎಚ್. ದಂಡಪ್ಪ ಮೊದಲಾದವರು ಹೊಸ/ಹಳೆ ಸಾಹಿತ್ಯ ಕೃತಿಗಳ ವಿಮರ್ಶೆಯಲ್ಲಿ ತೊಡಗಿರುವುದನ್ನು ನಾವು ಕಾಣುತ್ತೇವೆ. ಇವರ ಸಾಲಿನಲ್ಲಿ ನಿಲ್ಲುವ ಮತ್ತೊಂದು ಪ್ರಮುಖ ಹೆಸರು ಎಸ್. ಆರ್. ವಿಜಯಶಂಕರ.

2020ರ ಮಾಸ್ತಿ ಪ್ರಶಸ್ತಿಗೆ ಭಾಜನರಾಗಿರುವ ವಿಜಯಶಂಕರ ವಿದ್ಯಾರ್ಥಿ ದಿನಗಳಿಂದಲೇ ಸಾಹಿತ್ಯ ವಿಮರ್ಶೆಯಲ್ಲಿ ಒಲವು ಬೆಳೆಸಿಕೊಂಡವರು. ಅವರ ಮೊದಲ ವಿಮರ್ಶಾ ಕೃತಿ ‘ಮನೋಗತ’ ಪ್ರಕಟವಾದದ್ದು 1985ರಲ್ಲಿ. ಈ ಸಂಕಲನದಲ್ಲಿನ ಅನಂತ ಮೂರ್ತಿಯವರ ‘ಮೌನಿ’, ತಿರುಮಲೇಶರ ಕಾವ್ಯ, ‘ಪರ್ವ’ದ ನಿರೂಪಣಾ ತಂತ್ರ ಈ ಬರಹಗಳಿಂದ ಕನ್ನಡ ಸಾರಸ್ವತ ಲೋಕದ ಗಮನಕ್ಕೆ ಬಂದ ವಿಜಯಶಂಕರ ನಂತರ ಕೆಲಸಬೊಗಸೆಗಳ ಮಧ್ಯೆಯೂ ವ್ರತನಿಷ್ಠೆಯಿಂದ ಕನ್ನಡ ಸಾಹಿತ್ಯ ವಿಮರ್ಶೆಯಲ್ಲಿ ತೊಡಗಿಕೊಂಡವರು. ಇಂಗ್ಲಿಷ್ ಎಂ.ಎ. ನಂತರ ಸ್ವಲ್ಪಕಾಲ ಕಾಲೇಜೊಂದರಲ್ಲಿ ಸಾಹಿತ್ಯದ ಪ್ರಾಧ್ಯಾಕರಾಗಿದ್ದ ವಿಜಯಶಂಕರ ವೃತ್ತಿಯಿಂದ ಕಾರ್ಪೊರೇಟ್ ವಲಯದ ಆಡಳಿತದತ್ತ ಮುಖಮಾಡಿದರೂ ಪ್ರವೃತ್ತಿಯಿಂದ ಸಾಹಿತ್ಯ ವಿಮರ್ಶೆಗೆ ಬದ್ಧರಾದವರು. ಕಳೆದ ಮೂರೂವರೆ ದಶಕಗಳಿಂದ ಸಾಹಿತ್ಯ ಕೃಷಿ ನಡೆಸಿರುವ ವಿಜಯಶಂಕರ, ಈ ಅವಧಿಯಲ್ಲಿ ಹದಿಮೂರು ಸ್ವತಂತ್ರ ಕೃತಿಗಳನ್ನೂ ನಾಲ್ಕು ಸಂಪಾದಿತ ಕೃತಿಗಳನ್ನೂ ನೀಡಿದ್ದಾರೆ. ‘ಮನೋಗತ’ ನಂತರ ಪ್ರಕಟವಾದ ‘ಒಳದನಿ’(2004), ‘ನಿಜಗುಣ’(2012), ‘ಅಪ್ರಮೇಯ’, ‘ವಸುಧಾವಲಯ’ ಮತ್ತು ‘ಮಾಸ್ತಿ ವೆಂಕಟೇಶ ಅಯ್ಯಂಗಾರ್’-ಇವು ವಿಮರ್ಶಾ ಕೃತಿಗಳು. ‘ಒಡನಾಟ’, ‘ಅಕ್ಷರ ಚಿತ್ರಗಳು’ ವ್ಯಕ್ತಿ ಚಿತ್ರಗಳು. ‘ನಿಧಾನ ಶೃತಿ’(2012) ಮತ್ತು ‘ನುಡಿಸಸಿ’ ಅಂಕಣಬರಹಗಳ ಸಂಕಲನಗಳಾದರೆ ‘ಕೆ.ವಿ.ತಿರುಮಲೇಶ್’ ಮತ್ತು ‘ಕೀರ್ತೀನಾಥ ಕುರ್ತಕೋಟಿ’(2019) ಕೇಂದ್ರ ಸಾಹಿತ್ಯ ಅಕಾಡಮಿಗಾಗಿ ರಚಿಸಿದ ಮಾನೋಗ್ರಾಫ್ ಪ್ರಕಾರದ ಕೃತಿಗಳು. ‘ಹೂ ಬೆರಳು’ ಸಾಂಸ್ಕೃತಿಕ ಬರಹಗಳ ಸಂಕಲನ. ಈ ವರ್ಗೀಕರಣ ಕೇವಲ ತಾಂತ್ರಿಕ ಕಾರಣಗಳಿಗಾಗಿಯಷ್ಟೆ. ವಿಜಯಶಂಕರರ ಬರಹ ಕೃತಿಗಳನ್ನು ಕುರಿತದ್ದಿರಲಿ, ವ್ಯಕ್ತಿಚಿತ್ರವಿರಲಿ, ಅಂಕಣವಿರಲಿ ಅಥವಾ ಸಾಂಸ್ಕೃತಿಕ ಚಿಂತನೆ ಇರಲಿ ಅದು ಆಖೈರಾಗಿ ವಿಮರ್ಶೆಯೇ ಸರಿ.

ನವೋದಯ, ನವ್ಯ, ದಲಿತ, ಬಂಡಾಯ ಮೊದಲಾಗಿ ಕನ್ನಡ ಸಾಹಿತ್ಯದ ಪ್ರಮುಖ ಮಾರ್ಗ ಕೃತಿಗಳನ್ನು ಅಧ್ಯಯನದ ನಿಕಶಕ್ಕೊಡ್ಡಿ ವಿಮರ್ಶಿಸುವ ವಿಜಯಶಂಕರರ ವಿಮರ್ಶಾ ಮಾರ್ಗ ತನ್ನದೇ ಆದ ಅಸ್ಮಿತೆಯನ್ನು ಛಾಪಿಸುವ ರೀತಿಯದು. ಅವರ ಅಸ್ಮಿತೆ ಇರುವುದೇ ಕೃತಿ ಮತ್ತು ಕರ್ತೃವಿನ ವ್ಯಕ್ತಿತ್ವ ವಿಮರ್ಶೆಯಲ್ಲಿ. ಒಂದು ಕೃತಿಯ ಅಂತಃಸತ್ತ್ವ, ಶೈಲಿ, ಭಾಷಾ ಸಿದ್ಧಿ ವಗೈರೆ ವಗೈರೆಗಳನ್ನು ಶೋಧಿಸುತ್ತಲೇ ಕರ್ತೃವಿನ ಪ್ರತಿಭಾ ಸಂಪನ್ನತೆ, ಸಾಧನೆ ಸಿದ್ಧಿಗಳನ್ನು ಅಳೆಯುವುದು ಅವರ ಸಾಹಿತ್ಯ ವಿಮರ್ಶೆಯ ಒಂದು ಪರಿಯಾದರೆ, ಲೇಖಕರ ವ್ಯಕ್ತಿತ್ವವನ್ನು ಕಟ್ಟಿಕೊಡುತ್ತಲೇ ಅವರ ಕೃತಿಗಳನ್ನು ಶೋಧಿಸಿ ಮೌಲ್ಯಮಾಪನ ಮಾಡುವುದು ಇನ್ನೊಂದು ಪರಿ. ಈ ಮಾತಿಗೆ ನಿದರ್ಶನವಾಗಿ ಅವರ ಒಳದನಿ, ನಿಜಗುಣ, ಪ್ರಮೇಯ ವಸುಧಾ ವಲಯ ಸಂಕಲನಗಳಲ್ಲಿನ ಕೃತಿನಿಷ್ಠ ವಿಮರ್ಶೆಗಳನ್ನೂ ಒಡನಾಟ, ಅಕ್ಷರಚಿತ್ರಗಳು, ಆಪ್ತನೋಟ ಸಂಕಲನಗಳಲ್ಲಿನ ವ್ಯಕ್ತಿಚಿತ್ರ ಲೇಖನಗಳನ್ನು ನೋಡಬಹುದು. ಮಾನೋಗ್ರಾಫ್ ಎಂಬುದು ಸಾಹಿತ್ಯ ಸಾಧನೆ ಮತ್ತು ವ್ಯಕ್ತಿವೈಶಿಷ್ಟ್ಯಗಳ ಸಂಯೋಗದ ಒಂದು ರಸ ಪಾಕ. ತಿರುಮಲೇಶ್ ಮತ್ತು ಕುರ್ತಕೋಟಿಯವರನ್ನು ಕುರಿತ ಮಾನೋಗ್ರಾಫ್‌ಗಳಲ್ಲಿ ನಾವು ಅವರ ಕೃತಿಗಳ ವಿಮರ್ಶೆಯ ಜೊತೆಗೆ ಅವರ ವ್ಯಕ್ತಿವಿಶೇಷ, ಪ್ರತಿಭೆಯ ಹಾಸಬೀಸು, ಪಾಂಡಿತ್ಯದ ಕಸುವು, ಸಾಹಿತ್ಯಕ ವರ್ಚಸ್ಸು ಇತ್ಯಾದಿಗಳ ವಿವರಣೆ, ವ್ಯಾಖ್ಯಾನಗಳನ್ನು ಕಾಣುತ್ತೇವೆ. ಮಾಸ್ತಿ ವೆಂಕಟೇಶ ಅಯ್ಯಂಗಾರ್ ಬದುಕು-ಬರಹ ಕೃತಿಯೂ ಇದೇ ರೀತಿಯದಾದರೂ ಮಾಸ್ತಿಯವರ ತಾತ್ವಿಕತೆಯನ್ನು ಅವರ ಧಾರ್ಮಿಕ ಹಿನ್ನೆಲೆಯಿಂದ ಮೌಲ್ಯಮಾಪನ ಮಾಡುವ ಪ್ರೌಢ ಪ್ರಯತ್ನವನ್ನು ಗಮನಿಸಬಹುದಾಗಿದೆ. ದ. ರಾ. ಬೇಂದ್ರೆ, ಗೋಪಾಲಕೃಷ್ಣ ಅಡಿಗ, ಶಿವರಾಮ ಕಾರಂತ, ಅನಂತಮೂರ್ತಿ ಅವರನ್ನು ಜೀರ್ಣಿಸಿಕೊಂಡ ಪ್ರತಿಭೆ ಮತ್ತು ಪಾಂಡಿತ್ಯ ವಿಜಯಶಂಕರ ಅವರದು. ಕೃತಿ ವಿಮರ್ಶೆ ಇರಲಿ, ವ್ಯಕ್ತಿ ಚಿತ್ರವಿರಲಿ ಅವರು ಹೆಚ್ಚು ಬರದಿರುವುದು ಕನ್ನಡದ ಈ ಮಹತ್ವದ ಲೇಖಕರ ಬಗ್ಗೆ.ಹಾಗೆಂದು ಅವು ವ್ಯಾಮೋಹಿ ಬರಹಗಳಲ್ಲ, ವಸ್ತುನಿಷ್ಠ ಮೌಲ್ಯಮಾಪನಗಳೇ.ವಿಜಯಶಂಕರ ತಮ್ಮ ವಿಮರ್ಶೆಯ ಜಠರಾಗ್ನಿಯನ್ನು ತಣಿಸುವ ದ್ರವ್ಯವನ್ನು ಈ ಲೇಖಕರಲ್ಲಿ ಹೆಚ್ಚಾಗಿ ಕಂಡುಕೊಂಡಂತಿದೆ.

‘ನಿಜಗುಣ’ ಸಂಕಲನದಲ್ಲಿರುವ ‘‘ಕಾರಂತ ಲೋಕದೃಷ್ಟಿ: ನಾಗರಿಕತೆಯ ಕಥನ’’ ಕಾರಂತರ ಕಾದಂಬರಿ ಸಾಹಿತ್ಯವನ್ನು ಕನ್ನಡದ, ಭಾರತದ ಹಾಗೂ ಜಗತ್ತಿನ ವಿಚಾರವಿಮರ್ಶೆಗಳ ಬೆಳಕಿನಲ್ಲಿ ತಲಸ್ಪರ್ಶಿಯಾಗಿ ಚರ್ಚಿಸಿ, ಕಾರಂತರನ್ನು ನಾಗರಿಕತೆಯ ಕಥನಕಾರರು ಎಂದು ನಿರ್ಣಯಿಸಿರುವದರಲ್ಲಿ ವಿಜಯಶಂಕರರ ವಿಮರ್ಶೆಯ ಅಸ್ಮಿತೆಯ ಸ್ಪಷ್ಟ ಛಾಪನ್ನು ಕಾಣಬಹುದು. ‘ಒಡನಾಟ’ ಸಂಕಲನದ ಮೊದಲ ಲೇಖನ, ‘ಡಾ. ದ. ರಾ. ಬೇಂದ್ರೆ-ವೈಯ್ಯೆರ ಮತ್ತು ವೈರಾಗ್ಯದ ನಡುವಣ ಸಂವೇದನೆ’ ಹಾಗೂ ಕೊನೆಯದು- ‘ಡಾ.ಕೋಟ ಶಿವರಾಮ ಕಾರಂತ-ನಿತ್ಯಕಾಣುವ ಕಾರಂತರು’, ಈ ಎರಡು ಲೇಖನಗಳು ವಿಜಯಶಂಕರರ ವ್ಯಕ್ತಿಚಿತ್ರ ಮಾದರಿಯ ವಿಮರ್ಶೆಗೆ ಉತ್ತಮ ಉದಾಹರಣೆಗಳಾಗಿ ನಿಲ್ಲುತ್ತವೆ. ಇವೆರಡರ ಮಧ್ಯೆ, ಈ ಮಾತಿಗೆ ಸಾಕ್ಷಿಯಾಗಿ ನಿಲ್ಲುವ ಹಲವಾರು ಮಹನೀಯರ ವ್ಯಕ್ತಿಚಿತ್ರಗಳಿವೆ. ಬೇಂದ್ರೆಯವರ ಸಂವೇದನೆಯನ್ನು ಗುರುತಿಸುವ ಪ್ರಯತ್ನವಾದ ಮೊದಲ ಲೇಖನದಲ್ಲಿ ಅವರ ಕಾವ್ಯದ ಸಮ್ಯಕ್ ದರ್ಶನವಿದೆ. ಬೇಂದ್ರೆ ಶ್ರೀ ರಾಮಾಯಣದರ್ಶನದಂಥ ಮಹಾಕಾವ್ಯ ಬರೆಯಲಿಲ್ಲವೇಕೆ ಎಂದು ಪ್ರಶ್ನಿಸುತ್ತಲೇ ಬೇಂದ್ರೆಯವರ ವ್ಯಕ್ತಿತ್ವದ ಮುಖ್ಯಗುಣವಾದ ಚಂಚಲತೆಯನ್ನು ಅವರ ಬಾಯಲ್ಲೇ ಹೇಳಿಸುತ್ತಾರೆ: ‘‘ನನ್ನ ಮನಸ್ಸಿನ ಓಟ ಬೇರೆ ರೀತಿಯದು.ಅದು ನಿಂತಲ್ಲಿ ನಿಲ್ಲುವುದಲ್ಲ.(ಪಾತರಗಿತ್ತಿ ಪಕ್ಕಾ!)ಹಠಾತ್ತನೆ ಸಿಡಿಯುತ್ತದೆಯೇ ವಿನಾ ಸತತವಾಗಿ ಹರಿಯುವುದು ನನ್ನ ಮನೋಧರ್ಮವಲ್ಲ. ವೇದದ ಋಕ್ಕುಗಳಿಲ್ಲವೇ? ಅದರ ಕಾವ್ಯ ಏನು ಕಡಿಮೆಯೇ?’’ ಈ ಮಾತುಗಳನ್ನು ಉಲ್ಲೇಖಿಸುವ ಮೂಲಕ ಬೇಂದ್ರೆಯವರ ಕಾವ್ಯದ ಕ್ರಿಯಾಕರ್ಮವನ್ನೂ ಮರ್ಮವನ್ನೂ ಶೋಧಿಸುತ್ತಾರೆ.

ಹದಿನಾರು ಪುಟಗಳ ಕಾರಂತರ ವ್ಯಕ್ತಿ ಚಿತ್ರದಲ್ಲಿ ಕಾರಂತರ ಕಾದಂಬರಿಗಳು. ಯಕ್ಷಗಾನಗಳು, ಅವರ ಬಗ್ಗೆ ಬಂದಿರುವ ವಿಮರ್ಶೆಗಳು, ಕೆಲವರ ಸಮೀಪ ನೋಟಗಳು-ಹೀಗೆ ಹಲವಾರು ಕನ್ನಡಿಗಳ ಮೂಲಕ ಕಾರಂತರ ಅಂತಃಸತ್ತ್ವದ ದರ್ಶನ ಮಾಡಿಸುತ್ತಾರೆ. ಕಾರಂತರದು ಸಾಂಸ್ಕೃತಿಕ ವ್ಯಕ್ತಿತ್ವ ಎಂದು ನಿರ್ಣಯಿಸುತ್ತಾರೆ. ಕಾವ್ಯಕ್ಕೆ ಮಾಂತ್ರಿಕ ಶಕ್ತಿ ಇದೆ ಎನ್ನುವುದು ಸಹೃದಯರ ಅನುಭವಕ್ಕೆ ಬಂದ ಮಾತು. ಕಾವ್ಯಕ್ಕೆ ಚಿಕಿತ್ಸಕ ಗುಣವೂ ಇದೆ ಎಂಬುದನ್ನು ತಿಳಿಯಲು ನಾವು ಬೇಂದ್ರೆಯವರ ‘ನಾದಲೀಲೆ’ ಕುರಿತ ವಿಜಯಶಂಕರರ ಲೇಖನ ಓದಬೇಕು.‘ನಾದಲೀಲೆ’ ಕವನ ಸಂದರ್ಭದಲ್ಲಿ ಬೇಂದ್ರೆ ಹೀಗೆ ಬರೆದಿದ್ದಾರೆ:
‘‘ಜೀವನದ ತಾಲ-ಲಯಾನುಸಾರಿತ್ವದಲ್ಲಿ ಒಂದು ನಾದತನ್ಮಯತೆ ಇದೆ, ಮರಣದ ಭಯ ಬೇತಾಲಕ್ಕೆ ಎಳೆಯುವುದು. ಜೀವನದ ತನ್ಮಯತೆ ಬೆಳಕು, ಹೂವು, ಹರಿಣ, ಹಸುಗಳ ಜೀವನದಲ್ಲೂ ದಿನವೂ ಕಂಗೊಳಿಸುವುದು’’.

ಬೇಂದ್ರೆಯವರ ‘ನಾದಲೀಲೆ’ಯ ಅರಿವಿನ ಸ್ವರೂಪ ಯಾವ ಬಗೆಯದು ಎನ್ನುವ ಪ್ರಶ್ನೆ ಎತ್ತುತ್ತಾರೆ ವಿಜಯಶಂಕರ. ಈ ಕವಿತೆಯೊಳಗಣ ಬೇಟೆಗಾರ ಮರಣದ ಪ್ರತೀಕವಾಗಿ ಅವರ ಪ್ರಜ್ಞೆಯೊಳಗೆ ಇಳಿಯುತ್ತಾನೆ.ತೀವ್ರ ಅನಾರೋಗ್ಯದ ಸ್ಥಿತಿಯಲ್ಲಿ ‘ನಾದಲೀಲೆ’ ‘ಲೈಫ್ ಸೇವರ್’ ಆಗಿ ಒದಗಿ ಬಂದುದನ್ನು ಆಸ್ಪತ್ರೆಯ ಹಾಸಿಗೆಯಿಂದಲೇ ಅನುಭವಿಸಿದವರು ವಿಜಯಶಂಕರ. ಕಾಯಿಲೆಯಿಂದ ಗುಣಮುಖರಾಗಿ ಚೇತರಿಸಿಕೊಳ್ಳುತ್ತಿದ್ದಾಗಲೇ ನನಗೆ ‘ಸಾವ ಸಮ್ಮುಖದಲ್ಲಿ ಜೀವನಾದ’ ಲೇಖನದ ಪ್ರತಿಯನ್ನು ಕಳುಹಿಸಿಕೊಟ್ಟಿದ್ದರು. ಗೋಪಾಲಕೃಷ್ಣ ಅಡಿಗರ ಕಾವ್ಯ ಮತ್ತು ವ್ಯಕ್ತಿತ್ವದ ಅವಿನಾಭಾವ ಸಂಬಂಧವನ್ನು ಕಟ್ಟೆಚ್ಚರದಿಂದ ಅಧ್ಯಯನ ಮಾಡಿರುವ ವಿಜಯಶಂಕರ ಅಡಿಗರ ಮುಖ್ಯ ಕಾಳಜಿಯಾದ ಪ್ರಕೃತಿ ಮತ್ತು ಮನುಷ್ಯ ಸಂಬಂಧ ಹಾಗೂ ಸತ್ಯದ ಸಾಕ್ಷಾತ್ಕಾರದಲ್ಲಿ ವ್ಯಕ್ತಿಯ ಸಾಕ್ಷಿಪ್ರಜ್ಞೆಯ ಮಹತ್ವವನ್ನು, ಅಡಿಗರ ವ್ಯಕ್ತಿತ್ವ ಮತ್ತು ಕಾವ್ಯದೊಳಗಿನಿಂದಲೇ ನಮಗೆ ಮನವರಿಕೆ ಮಾಡಿಕೊಡುತ್ತಾರೆ. ‘‘ಸತ್ಯದ ಸಾಕ್ಷಾತ್ಕಾರದಲ್ಲಿ ಸಾಕ್ಷಿ ಪ್ರಜ್ಞೆಯ ಶಕ್ತಿ ಏನೆಂಬುದನ್ನು ಯಾರಿಗೂ ತಲೆಬಾಗದ ನಿರಂತರ ಹೋರಾಟದ ತಮ್ಮ ಬದುಕು, ಚಿಂತನೆ, ಸೃಜನಶೀಲತೆ ಮೂಲಕ ಸಾದರಪಡಿಸಿದರು’’ ಎನ್ನುವ ಮಾತುಗಳು ಅಡಿಗರ ಬದುಕು ಮತ್ತು ಕಾವ್ಯಗಳನ್ನೊಳಗೊಂಡ ಅವರ ಅವಿಭಾಜ್ಯ ವ್ಯಕ್ತಿತ್ವದ ಸಾಕಾರವೇ ಆಗಿದೆ. ಕೀರ್ತಿನಾಥ ಕುರ್ತಕೋಟಿ-ಪುಸ್ತಕದಲ್ಲಿ ವಿಜಯಶಂಕರರು ಕುರ್ತಕೋಟಿಯವರ ಮುಖ್ಯ ಕಾಳಜಿಯಾದ ‘ಯುಗಧರ್ಮ ಹಾಗೂ ಸಾಹಿತ್ಯದರ್ಶನ’ದ ಪರಿಕಲ್ಪನೆಯನ್ನು ಕೇಂದ್ರವಾಗಿಟ್ಟುಕೊಂಡೇ ಕುರ್ತಕೋಟಿಯವರ ವಿಮರ್ಶನ ಮಾರ್ಗ ಮತ್ತು ಅದರ ಪ್ರಭಾವ ಪರಿಣಾಮಗಳನ್ನು ಸೋದಾಹರಣವಾಗಿ ಸಮೀಕ್ಷಿಸಿದ್ದಾರೆ. ‘ಮಾಸ್ತಿ ವೆಂಕಟೇಶ ಅಯ್ಯಂಗಾರ್-ಬದುಕು ಬರಹ’ ಮಾಸ್ತಿಯವರ ವ್ಯಕ್ತಿತ್ವದ ವೈಶಿಷ್ಟ್ಯ ಮತ್ತು ಬರವಣಿಗೆ ಎರಡನ್ನೂ ಸಮೀಕರಿಸಿ ಮಾಸ್ತಿಯವರ ಸಮ್ಯಕ್ ದರ್ಶನ ಮಾಡಿಸುವ ಒಂದು ಸ್ತುತ್ಯಾರ್ಹ ಪ್ರಯತ್ನ. ನಲವತ್ತೊಂದು ಪುಟಗಳ ‘ಬದುಕು-ಬರಹ’ ಮೊದಲ ಅಧ್ಯಾಯವಂತೂ ಮಾಸ್ತಿಯವರ ಸಾಹಿತ್ಯಕ್ಕೆ ಉತ್ತಮ ಪ್ರವೇಶಿಕೆಯಂತಿದೆ.

‘‘ತಾರ್ಕಿಕ ಸತ್ಯ ಹಾಗೂ ಅತಾರ್ಕಿಕ ನಂಬುಗೆ ಎರಡೂ ಜೀವನಾನುಭವದಲ್ಲಿ ಪಳಗಿ ಸಾಧಿಸುವ ಮನೋಧರ್ಮದಲ್ಲಿ ಮಾಸ್ತಿಯವರ ವ್ಯಕ್ತಿತ್ವ ಅಡಗಿದೆ’’ ಎನ್ನುವ ವಿಜಯಶಂಕರ ಮಾಸ್ತಿಯವರ ತಾತ್ವಿಕತೆಯನ್ನು ಹೀಗೆ ವಿವರಿಸುತ್ತಾರೆ:

‘‘....ಮಾಸ್ತಿಯವರ ತಾತ್ವಿಕತೆಯಲ್ಲಿ ಪರತತ್ವ, ಜೀವತತ್ವ ಹಾಗೂ ಜಡತತ್ವ ಎಂಬ ಮೂರು ಅಂಶಗಳು ಇವೆ. ಇವುಗಳಲ್ಲಿ ಪರತತ್ವ ಹಾಗೂ ಜಡತತ್ವ ನಮ್ಮ ಅನುಭವಕ್ಕೆ ಬಂದರೂ ಪೂರ್ಣ ತಿಳಿವಿಗೆ ಮೀರಿದ್ದು. ರೂಪಕಗಳಲ್ಲಿ ಪುನರಭಿನಯಿಸಲ್ಪಡುವ ತಾತ್ವಿಕತೆ ಈ ಜೀವ ತತ್ವದ ಲೋಕ ವ್ಯಾಪಾರಕ್ಕೆ ಸೇರಿದ್ದಾಗಿರುತ್ತದೆ. ಆದರೆ ಈ ಜೀವತತ್ವವನ್ನು ಮಾಸ್ತಿಯವರು ಅವಲೋಕಿಸುವುದು ತಮ್ಮ ಕಾಲದ ಹೊಸ ವಿಚಾರಗಳ ಮೂಲಕ. ಅಲ್ಲಿ ಉಂಟಾಗುವ ಬದಲಾವಣೆಯೇ ಮಾಸ್ತಿಯವರ ತಾತ್ವಿಕ ಕೊಡುಗೆ. ಅದು ಕೇವಲ ಕುರುಡು ನಂಬುಗೆ ಅಲ್ಲ ಎಂಬುದನ್ನು ನಾವು ಈಗ ಮಾಸ್ತಿ ಮರು ಓದಿನಲ್ಲಿ ಮನಗಾಣಬೇಕಾಗಿದೆ’’.

ಈ ಮಾನದಂಡದಲ್ಲಿಯೇ ಮುಂದಿನ ಅಧ್ಯಾಯಗಳಲ್ಲಿ ವಿಜಯಶಂಕರ ಮಾಸ್ತಿಯವರ ಕಥೆ, ಕಾವ್ಯ, ಕಾದಂಬರಿ, ನಾಟಕಗಳನ್ನು ವಿಮರ್ಶಿಸಿ, ‘‘ಮಾಸ್ತಿಯವರು ವಿಶಿಷ್ಟಾದ್ವೈತದ ಪ್ರಪತ್ತಿ ಭಾವದ ಶ್ರದ್ಧಾವಂತರು. ಅವರು ತಮ್ಮ ಕಥನ ಪ್ರತಿಭೆಯ ರೂಪಕ ಚಿಂತನೆಯಿಂದ ಶ್ರದ್ಧೆಯ ಹಿಂದಿನ ತಮ್ಮ ತಾತ್ವಿಕತೆಯನ್ನು ಕಾಣಿಸಿದವರು. ಅವರು ಕಾರಂತ, ಕುವೆಂಪು ಅವರಂತೆ ತಮ್ಮ ರೂಪಕ ಪ್ರತಿಭೆಯಿಂದ ತತ್ವಜ್ಞಾನದ ಸಿದ್ಧ ಉತ್ತರಗಳನ್ನು ಮೀರಿ ನೂತನ ತಾತ್ವಿಕ ಆವಿಷ್ಕಾರಕ್ಕೆ ಪ್ರಯತ್ನಿಸಿದವರಲ್ಲ. ಬದಲಾಗಿ ವೇದ, ಉಪನಿಷತ್ತು, ಗೀತೆಗಳ ಮೂಲಕ ಬಂದ ಸಿದ್ಧ ತಾತ್ವಿಕತೆಯನ್ನು ರೂಪಕ ಪ್ರತಿಭೆಯಿಂದ ಹೊಸದಾಗಿ ಸೃಷ್ಟಿಸಿಕೊಟ್ಟರು. ಬದುಕಿನ ಶ್ರದ್ಧೆಯಲ್ಲಿ ಕಥನ ಪ್ರತಿಭೆಯಿಂದ ಹೊಸದಾಗಿ ಅನ್ವಯಿಸಿ ಕಾಣಿಸಿಕೊಟ್ಟವರು’’ ಎನ್ನುವ ಮೌಲ್ಯ ನಿರ್ಣಯಕ್ಕೆ ಬರುತ್ತಾರೆ. ಇತ್ತೀಚಿನ ದಿನಗಳಲ್ಲಿ ಬಂದಿರುವ ವಿನಯ-ಸಂಯಮಗಳಿಂದ ಕೂಡಿದ ಮಾಸ್ತಿ ಸಾಹಿತ್ಯದ ಮೌಲ್ಯಮಾಪನವಿದು. ಮಾಸ್ತಿಯವರು ‘ತೃಪ್ತೋಸ್ಮಿ ಎನ್ನಬಹುದೇ? ವಿಜಯಶಂಕರ, ನಮ್ಮ ಮಹತ್ವದ ಲೇಖಕರಾದ ದೇವನೂರ ಮಹಾದೇವ, ಡಿ.ಆರ್.ನಾಗರಾಜ, ಪುಣೇಕರ, ಬಿ.ಜಿ.ಎಲ್.ಸ್ವಾಮಿ ಮೊದಲಾದವರು ಹಾಗೂ ಮುತ್ಸದ್ದಿಗಳಾದ ಅಂಬೇಡ್ಕರ್, ವಿಶ್ವೇಶ್ವರಯ್ಯ, ನಿಟ್ಟೂರು ಶ್ರೀನಿವಾಸ ರಾವ್ ಮೊದಲಾದವರ ಬಗ್ಗೆಯೂ ಬರೆದಿದ್ದಾರೆ.ಅವರಿಗೆ ಹಲವಾರು ಪ್ರಶಸ್ತಿಗಳು ಈಗಾಗಲೇ ಸಂದಿವೆ. ಮೇಲಾಗಿ ಈಗ ಮಾಸ್ತಿ ಪ್ರಶಸ್ತಿಯ ಪೆಂಪು. ಹೇಳೋಣ ವಿಜಯಶಂಕರರಿಗೆ-
ಸ್ವಸ್ತಿ ಸ್ವಸ್ತಿ ಸ್ವಸ್ತಿ 

Writer - ಜಿ. ಎನ್. ರಂಗನಾಥ ರಾವ್

contributor

Editor - ಜಿ. ಎನ್. ರಂಗನಾಥ ರಾವ್

contributor

Similar News