ಭಾರತದಲ್ಲಿ ಮಾರಣಾಂತಿಕ ಬಿಸಿಗಾಳಿಯ ಸಾಧ್ಯತೆ: ಅಮೆರಿಕದ ವಿಜ್ಞಾನಿಗಳ ಅಧ್ಯಯನ ವರದಿ
ಹೊಸದಿಲ್ಲಿ, ಮಾ.27: ಮುಂಬರುವ ದಶಕಗಳಲ್ಲಿ ಜಾಗತಿಕ ತಾಪಮಾನ ಏರಿಕೆಯು 1.5ಡಿಗ್ರಿ ಸೆಲ್ಶಿಯಸ್‌ಗೆ ಸೀಮಿತವಾದರೂ, ಭಾರತ ಸಹಿತ ದಕ್ಷಿಣ ಏಶ್ಯಾದ ದೇಶಗಳಲ್ಲಿ ಮಾರಣಾಂತಿಕ ಬಿಸಿಗಾಳಿ ಸಾಮಾನ್ಯ ವಿಷಯವಾಗುವ ಸಾಧ್ಯತೆಯಿದೆ ಎಂದು ಅಧ್ಯಯನ ವರದಿಯೊಂದು ತಿಳಿಸಿದೆ.
ತೀವ್ರ ಬಿಸಿಗಾಳಿಯ ಸ್ಥಿತಿಯು ಭಾರತದ ಪ್ರಮುಖ ಬೆಳೆ ಉತ್ಪಾದಿಸುವ ಭಾಗಗಳಲ್ಲಿ (ಉತ್ತರಪ್ರದೇಶ, ಪಶ್ಚಿಮ ಬಂಗಾಳ, ಕೋಲ್ಕತಾ, ಮುಂಬೈ, ಹೈದರಾಬಾದ್ ಇತ್ಯಾದಿ) ಕಾರ್ಮಿಕರಿಗೆ ಅಸುರಕ್ಷಿತ ಪರಿಸ್ಥಿತಿಯನ್ನು ನಿರ್ಮಿಸಲಿದೆ ಎಂದು ಅಮೆರಿಕದ ಓಕ್‌ರಿಜ್ ನ್ಯಾಷನಲ್ ಲ್ಯಾಬೊರೇಟರಿಯ ವಿಜ್ಞಾನಿಗಳೂ ಸೇರಿರುವ ತಜ್ಞರ ತಂಡದ ವರದಿ ಹೇಳಿದೆ. ‘ಜಿಯೊಗ್ರಾಫಿಕಲ್ ರಿಸರ್ಚ್ ಲೆಟರ್ಸ್’ ನಿಯತಕಾಲಿಕೆಯಲ್ಲಿ ಅಧ್ಯಯನದ ವರದಿ ಪ್ರಕಟವಾಗಿದೆ. ಮುಂದಿನ ದಿನಗಳು ದಕ್ಷಿಣ ಏಶ್ಯಾದ ಪಾಲಿಗೆ ಕೆಟ್ಟದಾಗುವ ಸಾಧ್ಯತೆಯಿದೆ.
ಆದರೆ ಉಷ್ಣತೆಯನ್ನು ಸಾಧ್ಯವಾದಷ್ಟು ಕನಿಷ್ಟ ಮಟ್ಟಕ್ಕೆ ಸೀಮಿತಗೊಳಿಸುವ ಮೂಲಕ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸದಂತೆ ತಡೆಯಬಹುದು. ದಕ್ಷಿಣ ಏಶ್ಯಾದಲ್ಲಿ ಈ ಬದಲಾವಣೆ ಮುಂದಿನ ದಿನದಿಂದ ಅಲ್ಲ, ಈಗಿಂದಲೇ ಆರಂಭವಾಗಬೇಕಿದೆ. ಇಲ್ಲಿ ಬೇರೆ ಯಾವುದೇ ಆಯ್ಕೆಯಿಲ್ಲ’ ಎಂದು ಓಕ್‌ರಿಜ್ ನ್ಯಾಷನಲ್ ಲ್ಯಾಬೊರೇಟರಿಯ ಅಧ್ಯಯನ ಸಹವರ್ತಿ ಅಶ್ಪಖ್ ಹೇಳಿದ್ದಾರೆ. ಒಂದು ವೇಳೆ ಜಾಗತಿಕ ತಾಪಮಾನ 1.5 ಡಿಗ್ರಿ ಸೆಲ್ಶಿಯಸ್‌ಗೆ ಸೀಮಿತವಾದರೂ ಬಿಸಿಗಾಳಿಯಿಂದಾಗಿ ದಕ್ಷಿಣ ಏಶ್ಯಾದ ಮೇಲೆ ಗಂಭೀರ ಪರಿಣಾಮ ಉಂಟಾಗಬಹುದು. ಈ ಹಿನ್ನೆಲೆಯಲ್ಲಿ ಹಸಿರುಮನೆ ಅನಿಲ ಹೊರಸೂಸುವಿಕೆಯ ಈಗಿನ ಪಥವನ್ನು ಅಮೂಲಾಗ್ರವಾಗಿ ಬದಲಾಯಿಸುವ ಅವಶ್ಯಕತೆಯಿದೆ ಎಂದವರು ಹೇಳಿದ್ದಾರೆ.
1.5 ಡಿಗ್ರಿ ಸೆಲ್ಶಿಯಸ್ ಮತ್ತು 2 ಡಿಗ್ರಿ ಸೆಲ್ಶಿಯಸ್‌ನ ಜಾಗತಿಕ ತಾಪಮಾನ ಮಟ್ಟದಲ್ಲಿ ಅಪಾಯಕಾರಿ ಮಟ್ಟದ ಶಾಖದ ಒತ್ತಡವನ್ನು ಅನುಭವಿಸುವ ಜನರ ಸಂಖ್ಯೆಯನ್ನು ಅಂದಾಜು ಮಾಡಲು ಹವಾಮಾನ ಅನುರೂಪತೆ ಮತ್ತು ಭವಿಷ್ಯದ ಜನಸಂಖ್ಯಾ ಬೆಳವಣಿಗೆಯ ಮುನ್ನೋಟವನ್ನು ಬಳಸಲಾಗಿದೆ.
ಜನರು ಅನುಭವಿಸಬಹುದಾದ ಆದ್ರಬಲ್ಬ್ ತಾಪಮಾನವನ್ನು ಅಂದಾಜು ಮಾಡಲಾಗಿದ್ದು ಇದು ಆದ್ರತೆ ಮತ್ತು ತಾಪಮಾನ ಎರಡನ್ನೂ ಗಣನೆಗೆ ತೆಗೆದುಕೊಳ್ಳುವುದರಿಂದ ಶಾಖ ಸೂಚ್ಯಂಕಕ್ಕೆ ಸಮವಾಗಿರುತ್ತದೆ. ಈ ಪರಿಶೀಲನೆಯ ಆಧಾರದಲ್ಲಿ, 32 ಡಿಗ್ರಿ ಸೆಲ್ಶಿಯಸ್‌ನ ಆದ್ರಬಲ್ಬ್ ತಾಪಮಾನವು ಕಾರ್ಮಿಕರನ್ನು ಅಸುರಕ್ಷಿತವಾಗಿಸುತ್ತದೆ ಮತ್ತು 35 ಡಿಗ್ರಿ ಸೆಲ್ಶಿಯಸ್ ತಾಪಮಾನದ ದಾಟಿದರೆ ಆ ತಾಪವನ್ನು ಮನುಷ್ಯನ ದೇಹ ತಾಳಿಕೊಳ್ಳುವ ಸಾಮರ್ಥ್ಯವಿರುವುದಿಲ್ಲ ಎಂದು ವರದಿ ತಿಳಿಸಿದೆ.
ಇದರ ಪ್ರಕಾರ, 2 ಡಿಗ್ರಿ ಉಷ್ಣತೆಯು ಕಾರ್ಮಿಕರಿಗೆ ಅಸುರಕ್ಷಿತ ತಾಪಮಾನದ ಮಟ್ಟವನ್ನು ಎರಡು ಪಟ್ಟು ಹೆಚ್ಚಿಸುತ್ತದೆ. ಕೈಗಾರಿಕಾ ಕ್ರಾಂತಿಯ ಬಳಿಕ ಗ್ರಹದ ತಾಪಮಾನದಲ್ಲಿ 1 ಡಿಗ್ರಿ ಸೆಲ್ಶಿಯಸ್ ಹೆಚ್ಚಿದೆ. 2040ರ ವೇಳೆಗೆ ಇದು 1.5 ಡಿಗ್ರಿಗೆ ಹೆಚ್ಚಬಹುದು. ಈಗಿನ ಉಷ್ಣತೆಗಿಂತ ಕೇವಲ ಅರ್ಧ ಡಿಗ್ರಿ ಸೆಲ್ಶಿಯಸ್ ಉಷ್ಣತೆ ಹೆಚ್ಚಿದರೂ ಈ ವಿಷಯಗಳಲ್ಲಿ ವ್ಯಾಪಕ ಹೆಚ್ಚಳಕ್ಕೆ ಕಾರಣವಾಗಬಹುದು ಎಂದು ಅಧ್ಯಯನ ವರದಿಯಲಿ ಉಲ್ಲೇಖಿಸಲಾಗಿದೆ.
ಆದ್ರ ಬಲ್ಬ್ ತಾಪಮಾನ
ನೀರು ನೆನೆಸಿದ ಬಟ್ಟೆಯನ್ನು (ಇದರ ಮೇಲೆ ಗಾಳಿ ಹಾದುಹೋಗುವಂತಿರುತ್ತದೆ) ಹೊದಿಸಿದ ಥರ್ಮಾಮೀಟರ್ ದಾಖಲಿಸಿದ ತಾಪಮಾನವನ್ನು ಆದ್ರ ಬಲ್ಬ್ ತಾಪಮಾನ ಎನ್ನಲಾಗುತ್ತದೆ. 100% ಸಾಪೇಕ್ಷ ಆದ್ರತೆಯಲ್ಲಿ ಆದ್ರಬಲ್ಬ್ ತಾಪಮಾನವು ಗಾಳಿಯ ಉಷ್ಣಾಂಶಕ್ಕೆ ಸಮವಾಗಿರುತ್ತದೆ. ಬಾಷ್ಪೀಕರಣ(ಆವಿಯಾಗುವಿಕೆ)ಯಿಂದಾಗಿ ಕಡಿಮೆ ಆದ್ರತೆಯಲ್ಲಿ ಆದ್ರಬಲ್ಬ್ ತಾಪಮಾನವು ಶುಷ್ಕಬಲ್ಬ್ ತಾಪಮಾನಕ್ಕಿಂತ ಕಡಿಮೆಯಾಗಿರುತ್ತದೆ.