ಸೌದಿಯಲ್ಲಿ ಮತ್ತೆ ಕೋವಿಡ್-19 ಉಲ್ಬಣ: ಒಂದೇ ದಿನದಲ್ಲಿ 500 ಮಂದಿ ಸೋಂಕು ದೃಢ

Update: 2021-03-28 16:44 GMT

    ರಿಯಾದ್, ಮಾ.28: ಸೌದಿ ಆರೇಬಿಯದಲ್ಲಿ ಕಳೆದ ವರ್ಷದ ಆಕ್ಟೋಬರ್ ತಿಂಗಳಿನಿಂದೀಚೆಗೆ ಇದೇ ಮೊದಲ ಬಾರಿಗೆ ದೈನಂದಿನ ಕೊರೋನ ವೈರಸ್ ಸೋಂಕಿನ ಪ್ರಕರಣಗಳ ಸಂಖ್ಯೆ 500ನ್ನು ದಾಟಿದೆ. ಜನರ ಜಮಾವಣೆಯಲ್ಲಿ ಹೆಚ್ಚಳ ಹಾಗೂ ಸುರಕ್ಷಿತ ಅಂತರದಂತಹ ಪ್ರತಿಬಂಧಾತ್ಮಕ ಕ್ರಮಗಳನ್ನು ಪಾಲಿಸುವಲ್ಲಿ ನಿರ್ಲಕ್ಷ್ಯ ವಹಿಸಿರುವುದು ಸೋಂಕಿನ ಪ್ರಕರಣಗಳ ಸಂಖ್ಯೆಯಲ್ಲಿ ಭಾರೀ ಏರಿಕೆಯಾಗಲು ಕಾರಣವೆಂದು ಸೌದಿ ಆರೋಗ್ಯ ಸಚಿವಾಲಯ ಹೇಳಿದೆ.

   ಸೌದಿ ಅರೇಬಿಯದಲ್ಲಿ ಶುಕ್ರವಾರ 510 ಹಾಗೂ ಶನಿವಾರ 512 ಹೊಸ ಕೊರೋನ ಸೋಂಕಿನ ಪ್ರಕರಣಗಳು ವರದಿಯಾಗಿದ್ದು , ಈವರೆಗೆ ಸೋಂಕಿತರ ಒಟ್ಟು ಸಂಖ್ಯೆ 3,87, 794ಕ್ಕೇರಿದೆ ಹಾಗೂ 6,643 ಮಂದಿ ಸಾವನ್ನಪ್ಪಿದ್ದಾರೆ.

   ಸೌದಿ ಆರೇಬಿಯಲ್ಲಿ ಕಳೆದ ವರ್ಷದ ಜೂನ್‌ನಲ್ಲಿ ಕೋವಿಡ್19 ಹಾವಳಿ ಉತ್ತುಂಗಾವಸ್ಥೆಗೆ ತಲುಪಿದ್ದು, ದೈನಂದಿನ ಸೋಂಕಿನ ಪ್ರಕರಣಗಳ ಸಂಖ್ಯೆ 4 ಸಾವಿರವನ್ನು ದಾಟಿತ್ತು. ಆದರೆ ಈ ವರ್ಷದ ಜನವರಿ ವೇಳೆ ದಿನದ ಸೋಂಕಿನ ಪ್ರಕರಣಗಳ ಸಂಖ್ಯೆ ಸರಾಸರಿ 100ಕ್ಕೆ ಇಳಿಕೆಯಾಗಿ, ಕನಿಷ್ಠ ಮಟ್ಟವನ್ನು ಕಂಡಿತ್ತು. ಆದರೆ ಇದೀಗ ಕೋವಿಡ್-19 ಸಾಂಕ್ರಾಮಿಕದ ಹಾವಳಿ ಮತ್ತೆ ಉಲ್ಬಣಿಸಿದೆ.

 ಕಳೆದ ವಾರ ಅಧಿಕಾರಿಗಳು ಕೋವಿಡ್-19 ಲಸಿಕೆ ನೀಡಿಕೆಯನ್ನು 16 ವರ್ಷ ಹಾಗೂ ಅದಕ್ಕಿಂತ ಮೇಲ್ಪಟ್ಟ ವಯಸ್ಸಿನ ಎಲ್ಲಾ ನಾಗರಿಕರಿಗೂ ವಿಸ್ತರಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News