×
Ad

ಸೂಯೆಝ್ ಕಾಲುವೆಯಲ್ಲಿ ಹೂತುಹೋದ ಹಡಗು: ಸಿರಿಯಕ್ಕೆ ಸಂಕಷ್ಟ, ತೈಲದ ಪಡಿತರ ವಿತರಣೆ

Update: 2021-03-28 22:22 IST

 ಬೈರೂತ್,ಮಾ.28: ಬೃಹತ್ ಸರಕು ಸಾಗಣೆ (ಕಾರ್ಗೊ)ಯ ಹಡಗೊಂದು, ಹೂತುಹೋದ ಪರಿಣಾಮ ಈಜಿಪ್ಟ್‌ನ ಸೂಯೆಝ್ ಕಾಲುವೆಯಲ್ಲಿ ಹಡಗು, ನೌಕೆಗಳ ಸಂಚಾರ ಸ್ಥಗಿತಗೊಂಡಿರುವ ಹಿನ್ನೆಲೆಯಲ್ಲಿ ಸಿರಿಯವು ಇಂಧನ ವಿತರಣೆಯಲ್ಲಿ ಪಡಿತರ ವ್ಯವಸ್ಥೆಯನ್ನು ಆರಂಭಿಸಿದೆ.

ಶುಕ್ರವಾರ ಸರಕು ಸಾಗಣೆಯ ಹಡಗು ಎವರ್ ಗಿವನ್ ಸೂಯೆಝ್ ಕಾಲುವೆಯ ಬಳಿ ಮರಳಲ್ಲಿ ಹೂತುಹೋದ ಪರಿಣಾಮ ಈವರೆಗೆ 350ಕ್ಕೂ ಅಧಿಕ ಹಡಗುಗಳ ಸಂಚಾರ ಸ್ಥಗಿತಗೊಂಡಿತ್ತು.

 ಮರಳಲ್ಲಿ ಸಿಲುಕಿಕೊಂಡಿರುವ ಹಡಗನ್ನು ರಕ್ಷಿಸಲು, ಆಮೂಲಕ ನಿರ್ಣಾಯಕವಾದ ಪೂರ್ವ-ಪಶ್ಚಿಮ ಜಲಮಾರ್ಗವನ್ನು ಮತ್ತೆ ತೆರೆಯಲು ಸಂಬಂಧಪಟ್ಟ ಇಲಾಖೆಗಳು ತಮ್ಮ ಶ್ರಮವನ್ನು ಮುಂದುವರಿಸಿವೆ.

ಪಾಶ್ಚಾತ್ಯ ರಾಷ್ಟ್ರಗಳು ವಿಧಿಸಿರುವ ನಿರ್ಬಂಧಗಳಿಂದಾಗಿ ಸಿರಿಯವು ಎವರ್‌ಗಿವನ್ ಹಡಗು ಸೂಯೆಝ್ ಕಾಲುವೆಯಲ್ಲಿ ಸಿಲುಕುವ ಮುನ್ನವೇ, ಇಂಧನ ಕೊರತೆಯನ್ನು ಎದುರಿಸುತ್ತಿತ್ತು. ಇದೀಗ ಆ ದೇಶಕ್ಕೆ ಇಂಧನ ಪೂರೈಕೆ ಬಹುತೇಕ ನಿಲುಗಡೆಯಾಗಿರುವುದು ಪರಿಸ್ಥಿತಿಯನ್ನು ಬಿಗಡಾಯಿಸಿದೆ.

 ಅಂತರ್ಯುದ್ಧ ಪೀಡಿತವಾದ ಸಿರಿಯವು ಹದಗೆಡುತ್ತಿರುವ ಆರ್ಥಿಕ ಪರಿಸ್ಥಿತಿ, ಮೂಲಭೂತ ಸಾಮಾಗ್ರಿಗಳು ಹಾಗೂ ಔಷಧಿಗಳ ಕೊರತೆಯಿಂದಾಗಿ ತತ್ತರಿಸಿದೆ. ಸಬ್ಸಿಡಿ ದರದಲ್ಲಿ ಆಹಾರ ಹಾಗೂ ಇಂಧನವನ್ನು ಪಡೆಯಲು ಸಿರಿಯನ್ನರು ಅಂಗಡಿಗಳ ಮುಂದೆ ಸಾಲುಗಟ್ಟಿ ನಿಂತಿರುವ ದೃಶ್ಯಗಳು ದೇಶದೆಲ್ಲೆಡೆ ಸಾಮಾನ್ಯವಾಗಿ ಕಂಡುಬರುತ್ತಿದೆ.

ಸೂಯೆಝ್ ಕಾಲುವೆ ಮುಚ್ಚಲ್ಪಟ್ಟಿರುವ ಹೊರತಾಗಿಯೂ ಸಿರಿಯದಲ್ಲಿ ಮೂಲಭೂತ ಸೇವೆಗಳು ಅಭಾದಿತವಾಗಿ ನಡೆಯುವುದಕ್ಕೆ ಅವಕಾಶ ಮಾಡಿಕೊಡಲು ತೈಲದ ಪಡಿತರ ವ್ಯವಸ್ಥೆಯನ್ನು ಆರಂಭಿಸಿರುವುದಾಗಿ ತೈಲ ಸಚಿವಾಲಯ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News