×
Ad

ಇಂಡೋನೇಶ್ಯ ಚರ್ಚ್ ಬಳಿ ಆತ್ಮಹತ್ಯಾ ದಾಳಿ: ಕನಿಷ್ಠ 14 ಮಂದಿಗೆ ಗಾಯ

Update: 2021-03-28 22:43 IST

  ಜಕಾರ್ತ,ಮಾ.28: ಇಂಡೋನೇಶ್ಯದ ಮಕಾಸ್ಸರ್ ನಗರದಲ್ಲಿ ರವಿವಾರ ಕ್ಯಾಥೊಲಿಕ್ ಚರ್ಚ್ ಒಂದರ ಮೇಲೆ ಇಬ್ಬರು ಶಂಕಿತ ಆತ್ಮಹತ್ಯಾ ಬಾಂಬರ್‌ಗಳು ನಡೆಸಿದ ದಾಳಿಯಲ್ಲಿ ಕನಿಷ್ಠ 14 ಮಂದಿ ಗಾಯಗೊಂಡಿದ್ದಾರೆ. ಘಟನೆಯಲ್ಲಿ ಆತ್ಮಾಹುತಿ ಬಾಂಬರ್‌ಗಳಿಬ್ಬರೂ ಸಾವನ್ನಪ್ಪಿದ್ದಾರೆ.

  ಸುಲಾವೆಸಿ ದ್ವೀಪದಲ್ಲಿರುವ ಮಕಾಸ್ಸರ್ ನಗರದ ಚರ್ಚ್‌ನಲ್ಲಿ ಈಸ್ಟರ್ ಪವಿತ್ರವಾರದ ಮೊದಲ ದಿನವಾದ ರವಿವಾರ ಸಾಮೂಹಿಕ ಪ್ರಾರ್ಥನೆಯ ಮುಕ್ತಾಯದ ವೇಳೆಗೆ ದಾಳಿಕೋರರು ಹೊರಗಡೆ ತಮ್ಮನ್ನು ತಾವೇ ಸ್ಫೋಟಿಸಿಕೊಂಡರು.

  ಚರ್ಚ್ ಮೇಲೆ ನಡೆದ ಭಯೋತ್ಪಾದಕ ದಾಳಿಯನ್ನು ಇಂಡೋನೇಶ್ಯ ಅಧ್ಯಕ್ಷ ಜೊಕೊ ವಿಡೊಡೊ ಬಲವಾಗಿ ಖಂಡಿಸಿದ್ದಾರೆ. ‘‘ ಭಯೋತ್ಪಾದನೆಯ ಈ ಕೃತ್ಯವನ್ನು ನಾನು ಬಲವಾಗಿ ಖಂಡಿಸುತ್ತೇನೆ ಹಾಗೂ ಈ ದಾಳಿಯ ಸೂತ್ರಧಾರಿಗಳ ಜಾಲದ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಮತ್ತು ಅವರ ಬೇರುಗಳನ್ನು ಕತ್ತರಿಸುವಂತೆ ನಾನು ಪೊಲೀಸ್ ವರಿಷ್ಠರಿಗೆ ಆದೇಶಿಸಿದ್ದೇನೆ’’ ಎಂದವರು ಆನ್‌ಲೈನ್ ಪ್ರಸಾರವಾದ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.

 ಈ ದಾಳಿಯ ಹಿಂದೆ ಯಾವ ಭಯೋತ್ಪಾದಕ ಸಂಘಟನೆಯ ಕೈವಾಡವಿದೆ ಹಾಗೂ ಇತ್ತೀಚೆಗೆ ಕೆಲವು ಶಂಕಿತರ ಬಂಧನಕ್ಕೂ, ಈ ಘಟನೆಗೂ ಸಂಬಂಧವಿದೆಯೇ ಎಂಬುದನ್ನು ತಿಳಿಯಲು ಪೊಲೀಸ್ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆಂದು ಪೊಲೀಸ್ ವಕ್ತಾರ ಆರ್ಗೊ ಯುವೊನೊ ತಿಳಿಸಿದ್ದಾರೆ.

      ಜನವರಿಯಲ್ಲಿ ಭಯೋತ್ಪಾದನಾ ನಿಗ್ರಹ ದಳವು ಮಕಾಸ್ಸರ್‌ನಲ್ಲಿ ಉಗ್ರರ ಅಡಗುದಾಣವೊಂದರ ಮೇಲೆ ದಾಳಿ ನಡೆಸಿ, ಇಬ್ಬರನ್ನು ಹತ್ಯೆಗೈದಿದ್ದರು.  2019ರಲ್ಲಿ ಫಿಲಿಪ್ಪೈನ್‌ನ ಚರ್ಚ್‌ನಲ್ಲಿ 20 ಮಂದಿಯ ಸಾವನ್ನಪ್ಪಿದ ಅವಳಿ ಬಾಂಬ್ ಸ್ಫೋಟದ ಹಿಂದೆ ಈ ಇಬ್ಬರು ಉಗ್ರರ ಕೈವಾಡವಿದೆಯೆಂದು ಶಂಕಿಸಲಾಗಿತ್ತು.

ಶಾಂತಿ ಹಾಗೂ ಸಹನೆಯನ್ನು ಕಾಪಾಡಿಕೊಳ್ಳುವಂತೆ ಅಧ್ಯಕ್ಷ ಜೊಕೋವಿ, ಇಂಡೋನೇಶ್ಯನ್ ಜನತೆಗೆ ಕರೆ ನೀಡಿದ್ದಾರೆ ಹಾಗೂ ಪ್ರತಿಯೊಬ್ಬರು ನಿರ್ಭೀತಿಯಿಂದ ಆರಾಧಿಸಬಹುದಾಗಿದೆ ಎಂದರು.

  ಶಂಕಿತ ಬಾಂಬರ್ ಮೋಟಾರ್ ಬೈಕ್‌ನಲ್ಲಿ ಚರ್ಚ್‌ನ ಮೈದಾನವನ್ನು ಪ್ರವೇಶಿಸಲು ಯತ್ನಿಸಿದಾಗ ಭದ್ರತಾ ಸಿಬ್ಬಂದಿ ಆತನನ್ನು ತಡೆದ. ಆಗ ಆತ ತನ್ನನ್ನು ತಾನೇ ಸ್ಫೋಟಿಸಿಕೊಂಡನೆಂದು ಮೂಲಗಳು ತಿಳಿಸಿವೆ.

   ಸ್ಫೋಟದಿಂದಾಗಿ ಬೆಂಕಿಯ ಜ್ವಾಲೆ ಮತ್ತು ಹೊಗೆ ಎದ್ದಿರುವುದನ್ನು ಹಾಗೂ ರಸ್ತೆ ಮಧ್ಯದಲ್ಲಿ ಅವಶೇಷಗಳು ಚೆಲ್ಲಾಪಿಲ್ಲಿಯಾಗಿ ಚದುರಿ ಬಿದ್ದಿರುವುದನ್ನು ಸಿಸಿ ಕ್ಯಾಮರಾದ ವೀಡಿಯೊದಲ್ಲಿ ದಾಖಲಾಗಿದೆ.

  ದಾಳಿಯ ರೂವಾರಿಗಳು, ಫಿಲಿಪ್ಪೀನ್ಸ್‌ನ ಜೊಲೋ ನಗರದ ಚರ್ಚ್‌ನಲ್ಲಿ ನಡೆದ ಸ್ಫೋಟಕ್ಕೆ ಕಾರಣರಾದ ಉಗ್ರಗಾಮಿ ಗುಂಪಿಗೆ ಸೇರಿದವರಾಗಿರುವ ಸಾಧ್ಯತೆಯಿದೆಯೆಂದು ರಾಷ್ಟ್ರೀಯ ಭಯೋತ್ಪಾದನಾ ನಿಗ್ರಹದಳದ ಮಾಜಿ ವರಿಷ್ಠ ಅನಿಸ್ಯಾದ್ ಎಂಬಾಯ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News