ತನ್ನ ದೇಶಭಕ್ತಿಯನ್ನು ಪ್ರಶ್ನಿಸಿದ್ದಕ್ಕೆ ಸಭೆಯ ಮಧ್ಯೆಯೇ ಶರ್ಟ್ ತೆಗೆದು ಗಾಯದ ಕಲೆಗಳನ್ನು ಪ್ರದರ್ಶಿಸಿದ ಸೈನಿಕ
ಓಹಿಯೋ: ಈ ಹಿಂದೆ ಜನರು ತಮ್ಮ ದೇಶಭಕ್ತಿಯನ್ನು ಪ್ರಶ್ನಿಸುತ್ತಿದ್ದರು ಎಂದು ಸಭೆಯೊಂದರ ಮಧ್ಯೆಯೇ ಅಮೆರಿಕಾ ಸೇನೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಸೈನಿಕರೋರ್ವರು ತಮ್ಮ ಅಂಗಿ ಬಿಚ್ಚಿ ಯುದ್ಧದ ಸಂದರ್ಭದಲ್ಲಿ ಆದ ಗಾಯಗಳನ್ನು ಪ್ರದರ್ಶಿಸುವ ಮೂಲಕ ಟೀಕಾಕಾರರಿಗೆ ಉತ್ತರ ನೀಡಿದ್ದಾರೆ. ಏಶ್ಯನ್ ಅಮೆರಿಕನ್ ವ್ಯಕ್ತಿ ಅಮೆರಿಕಾದ ಸೇನೆಯಲ್ಲಿ ಸೈನಿಕನಾಗಿ ಸೇವೆ ಸಲ್ಲಿಸಿದ್ದು, ಹಲವಾರು ಬಾರಿ ಜನರು ಅವರು ʼನೈಜ ಅಮೆರಿಕನ್ ನಂತೆ ಕಾಣಿಸುತ್ತಿಲ್ಲʼ ಎಂದು ಮೂದಲಿಸುತ್ತಿದ್ದರು ಎನ್ನಲಾಗಿದೆ.
ಓಹಿಯೋದ ಟೌನ್ ಹಾಲ್ ನಲ್ಲಿ ಸಭೆ ನಡೆಯುತ್ತಿದ್ದ ವೇಳೆ ವೆಸ್ಟ್ ಚೆಸ್ಟರ್ ಟೌನ್‌ಶಿಪ್ ಬೋರ್ಡ್ ಆಫ್ ಟ್ರಸ್ಟೀಸ್ ಗೆ "ನನ್ನ ದೇಶಭಕ್ತಿ ಹೇಗಿದೆ ಎಂಬುವುದನ್ನು ಪ್ರದರ್ಶಿಸುತ್ತೇನೆ" ಎಂದು ಅವರು ತಮ್ಮ ದೇಹದಲ್ಲಿನ ಗಾಯಗಳನ್ನು ತೋರಿಸಿದರು. ಅಟ್ಲಾಂಟಾ ಸ್ಪಾದಲ್ಲಿ ಗುಂಡಿನ ದಾಳಿ ನಡೆದ ಬಳಿಕ ಏಶ್ಯನ್ ಅಮೆರಿಕನ್ನರ ವಿರುದ್ಧ ದ್ವೇಷದ ವಾತಾವರಣ ಉಂಟಾಗಿತ್ತು ಎಂದು ವರದಿ ತಿಳಿಸಿದೆ. ಸದ್ಯ ಈ ವೀಡಿಯೋ ಸಾಮಾಜಿಕ ತಾಣದಾದ್ಯಂತ ವೈರಲ್ ಆಗಿದೆ.