ಕೃಷಿ ಕ್ಷೇತ್ರದ ಆಧುನೀಕರಣ ಇಂದಿನ ಅಗತ್ಯ: ಪ್ರಧಾನಿ ಮೋದಿ

Update: 2021-03-28 18:08 GMT

ಹೊಸದಿಲ್ಲಿ, ಮಾ.28: ಈಗಾಗಲೇ ಬಹಳಷ್ಟು ಸಮಯ ವ್ಯರ್ಥವಾಗಿರುವುದರಿಂದ ಕೃಷಿ ಕ್ಷೇತ್ರದಲ್ಲಿ ಆಧುನೀಕರಣ ತುರ್ತಾಗಿ ಆಗಬೇಕಿದೆ ಎಂದು ಪ್ರಧಾನಿ ಮೋದಿ ರವಿವಾರ ಹೇಳಿದ್ದಾರೆ.

‘ಮನ್ ಕಿ ಬಾತ್’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ‘ಬದುಕಿನ ಪ್ರತಿಯೊಂದು ಅಂಶದಲ್ಲೂ ಹೊಸತನ, ಆದುನೀಕರಣದ ಅಗತ್ಯವಿದೆ. ಕೃಷಿ ಕ್ಷೇತ್ರದಲ್ಲೂ ಆಧುನೀಕರಣದ ಅಳವಡಿಕೆ ಅನಿವಾರ್ಯವಾಗಿದೆ . ಈಗಾಗಲೇ ಬಹಳಷ್ಟು ಸಮಯ ವ್ಯರ್ಥವಾಗಿದೆ. ಕೃಷಿ ಕ್ಷೇತ್ರದಲ್ಲಿ ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸಲು, ರೈತರ ಆದಾಯವನ್ನು ಹೆಚ್ಚಿಸಲು ಸಾಂಪ್ರದಾಯಿಕ ಕೃಷಿ ಪದ್ಧತಿಯ ಜೊತೆಗೆ ಹೊಸ ಆವಿಷ್ಕಾರ, ನೂತನ ಪರ್ಯಾಯ ಕ್ರಮಗಳನ್ನು ಅನುಸರಿಸಬೇಕಿದೆ. ಕ್ಷೀರಕ್ರಾಂತಿ ಮತ್ತು ಜೇನುಕೃಷಿ ಕೃಷಿಯ ಜೊತೆಗೇ ಕೈಗೊಳ್ಳಬಹುದಾದ ಪ್ರಕ್ರಿಯೆಯಾಗಿದೆ’ ಎಂದರು.

ದೇಶದಲ್ಲಿ ಮತ್ತೆ ಕೊರೋನ ಸೋಂಕಿನ ಪ್ರಕರಣ ಹೆಚ್ಚುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ ಅವರು, ಲಸಿಕೆ ಬಂತೆಂದು ನಿರಾಳವಾಗುವಂತಿಲ್ಲ. ಲಸಿಕೆಯ ಜೊತೆಗೆ ಸೂಕ್ತ ಪ್ರತಿಬಂಧಕ ಕ್ರಮಗಳೂ ಅತ್ಯಗತ್ಯವಾಗಿದೆ ಎಂದರು.

ಕಳೆದ ವರ್ಷದ ಮಾರ್ಚ್ 22ರಂದು ದೇಶದಲ್ಲಿ ಜನತಾ ಕರ್ಫ್ಯೂ ವಿಧಿಸಲಾಗಿತ್ತು. ಆ ಸಂದರ್ಭ ಎಲ್ಲರ ಮುಂದಿದ್ದ ಪ್ರಶ್ನೆಯೆಂದರೆ ಕೊರೋನ ಸೋಂಕಿಗೆ ಲಸಿಕೆ ಯಾವಾಗ ಕಂಡುಹಿಡಿಯಬಹುದು? ಎಂಬುದಾಗಿತ್ತು. ಒಂದು ವರ್ಷದ ಬಳಿಕ ಇದೀಗ ವಿಶ್ವದಲ್ಲೇ ಬೃಹತ್ ಲಸಿಕಾ ಅಭಿಯಾನ ಭಾರತದಲ್ಲಿ ಜಾರಿಯಲ್ಲಿರುವುದು ಹೆಮ್ಮೆಯ ವಿಷಯವಾಗಿದೆ ಎಂದು ಮೋದಿ ಹೇಳಿದರು.

ಕ್ರೀಡಾ ಕ್ಷೇತ್ರದಲ್ಲಿ ಮಹಿಳೆಯರು ಅತ್ಯುತ್ತಮ ಸಾಧನೆ ಮಾಡುತ್ತಿರುವುದನ್ನು ಉಲ್ಲೇಖಿಸಿದ ಪ್ರಧಾನಿ,ಕ್ರಿಕೆಟರ್ ಮಿಥಾಲಿ ರಾಜ್ ಮತ್ತು ಬ್ಯಾಡ್ಮಿಂಟನ್ ಆಟಗಾರ್ತಿ ಪಿವಿ ಸಿಂಧುರವರ ಇತ್ತೀಚಿನ ಸಾಧನೆ ಶ್ಲಾಘನಾರ್ಹ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News