ಲೋಹಿಯಾವಾದ; ಅಂದು ಇಂದು

Update: 2021-03-28 19:30 GMT

ಈ ದೇಶದಲ್ಲಿ ಮನುವಾದಿ ಫ್ಯಾಶಿಸ್ಟ್‌ಶಕ್ತಿಗಳು ಹೊಂಚು ಹಾಕಿ ಕಾಯುತ್ತಿವೆ ಎಂದು ಗೊತ್ತಿದ್ದರೂ ಅವರನ್ನು ಅಧಿಕಾರದಿಂದ ದೂರವಿಡುವ ಪ್ರಯತ್ನವನ್ನು ಕಮ್ಯುನಿಸ್ಟರು ಸರಿಯಾಗಿ ಮಾಡಲಿಲ್ಲ. ಹಿರಿಯ ಕಮ್ಯುನಿಸ್ಟ್ ನಾಯಕ ಜ್ಯೋತಿ ಬಸು ಅವರು ಪ್ರಧಾನ ಮಂತ್ರಿಯಾಗುವ ಅವಕಾಶ ಮನೆ ಬಾಗಿಲಿಗೆ ಬಂದಾಗ ಕಮ್ಯುನಿಸ್ಟರು ನಡೆದುಕೊಂಡ ರೀತಿಯ ಬಗ್ಗೆ ಬಸು ಅವರಿಗೂ ಅಸಮಾಧಾನವಿತ್ತು. ಆಗ ಬಸು ಪ್ರಧಾನಿಯಾಗಿದ್ದರೆ ಕಮ್ಯುನಿಸ್ಟರು ತಮ್ಮ ಕಾರ್ಯಕ್ರಮಗಳನ್ನು ಜಾರಿಗೆ ತರುವ ಅವಕಾಶ ಸಿಗುತ್ತದೆಂದಲ್ಲ, ಫ್ಯಾಶಿಸ್ಟ್ ಶಕ್ತಿಗಳು ಇಷ್ಟೊಂದು ಪ್ರಬಲವಾಗಲು ಸಾಧ್ಯವಾಗುತ್ತಿರಲಿಲ್ಲ.


ಕಳೆದ ವಾರ ಲೋಹಿಯಾ ಜನ್ಮದಿನದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಬಿಜಾಪುರಕ್ಕೆ ಹೋಗಿದ್ದೆ (ಸರಕಾರ ಬಿಜಾಪುರದ ಹೆಸರನ್ನು ಈಗ ವಿಜಯಪುರ ಎಂದು ಬದಲಿಸಿದೆ.ಆದರೆ ನನಗೆ ಅಂದಿಗೂ ಇಂದಿಗೂ ಆಪ್ತವಾದ ಹೆಸರು ಬಿಜಾಪುರ. ಇಲ್ಲೂ ಆ ಹಳೆಯ ಬಿಜಾಪುರ ಎಂದೇ ಬಳಸುತ್ತಿದ್ದೇನೆ). ಬಳ್ಳಾರಿಯ ಲೋಹಿಯಾ ಪ್ರಕಾಶನದ ನಮ್ಮೆಲ್ಲರ ಅಣ್ಣ( ಪ್ರಗತಿಪರರ) ಸಿ.ಚೆನ್ನಬಸವಣ್ಣ ಅವರು ಎರಡು ವಾರಗಳ ಹಿಂದೆ ಫೋನ್ ಮಾಡಿ ಬಿಜಾಪುರದಲ್ಲಿ ಲೋಹಿಯಾ ಜನ್ಮದಿನ ಕಾರ್ಯಕ್ರಮವಿದೆ, ಅಲ್ಲಿ ಬಂದು ಲೋಹಿಯಾ ಬಗ್ಗೆ ಮಾತನಾಡಬೇಕೆಂದು ಆತ್ಮೀಯ ಆದೇಶ ನೀಡಿದ್ದರು. ತವರು ಜಿಲ್ಲೆ ಬಿಜಾಪುರಕ್ಕೆ ಹೋಗುವ, ಆ ನೆಲದಲ್ಲಿ ನಡೆದಾಡುವ, ಆದಿಲಶಾಹಿ ಕಾಲದ ಆ ಕಟ್ಟಡಗಳನ್ನು ಮತ್ತೆ ನೋಡುವ ಅವಕಾಶವನ್ನು ನಾನು ಎಂದೂ ಕಳೆದುಕೊಳ್ಳುವುದಿಲ್ಲ. ಅಂತಲೇ ಮಾರ್ಚ್ 23ಕ್ಕೆ ಬಿಜಾಪುರದ ಲೋಹಿಯಾ ಜನ್ಮದಿನದ ಕಾರ್ಯಕ್ರಮದಲ್ಲಿ ಪಾಲ್ಗೊಂಡೆ.

 ಬಿಜಾಪುರದ ಲೋಹಿಯಾ ಜನ್ಮದಿನದ ಕಾರ್ಯಕ್ರಮ ಮಾತ್ರವಲ್ಲ ಆ ದಿನ ಲೋಹಿಯಾ ಪ್ರಕಾಶನದ ಎರಡು ಹೊಸ ಪುಸ್ತಕಗಳ ಬಿಡುಗಡೆ ಕಾರ್ಯಕ್ರಮವಿತ್ತು. ಹನೂರು ಕೃಷ್ಣಮೂರ್ತಿ ಅವರ ಹರನೆಂಬುದೇ ಸತ್ಯ ಮತ್ತು ಸವಿತಾ ನಾಗಭೂಷಣ ಅವರ ಕಡೇ ಮಾತು( ರೈತಗೀತ) ಪುಸ್ತಕಗಳನ್ನು ಬಿಡುಗಡೆ ಮಾಡಲಾಯಿತು. ಇತ್ತೀಚೆಗೆ ವಯಸ್ಸು ಮತ್ತು ಆರೋಗ್ಯದ ಕಾರಣದಿಂದ ಪ್ರಕಾಶನದ ಕಾರ್ಯವನ್ನು ನಿಧಾನ ಮಾಡಿರುವ ಚೆನ್ನಬಸವಣ್ಣ ತಮ್ಮ ತಂದೆ-ತಾಯಿಯವರ ದತ್ತಿ ನಿಧಿಯಿಂದ ವರ್ಷಕ್ಕೆ ಎರಡು ಉಪಯುಕ್ತ ಪುಸ್ತಕಗಳನ್ನು ಹೊರ ತಂದು ಅತ್ಯಂತ ಕಡಿಮೆ ಬೆಲೆಗೆ ಓದುಗರಿಗೆ ನೀಡುತ್ತಾರೆ.

ಬಿಜಾಪುರದ ಕಾರ್ಯಕ್ರಮದಲ್ಲಿ ಪಾಲ್ಗೊಂಡಾಗ ಎಪ್ಪತ್ತು ಮತ್ತು ಎಂಭತ್ತರ ದಶಕದ ಆ ದಿನಗಳು ನೆನಪಿಗೆ ಬಂದವು. ಆಗ ಕಟ್ಟಾ ಮಾರ್ಕ್ಸ್‌ವಾದಿಗಳಾದ ನಮಗೂ ಮತ್ತು ಲೋಹಿಯಾವಾದಿಗಳ ನಡುವೆ ಎಣ್ಣೆ,ಸೀಗೆಕಾಯಿ ಸಂಬಂಧ. ಅನಂತಮೂರ್ತಿ, ಲಂಕೇಶ್, ತೇಜಸ್ವಿ, ನಂಜುಂಡಸ್ವಾಮಿ, ಚಂಪಾ ಇಂತಹ ಲೋಹಿಯಾವಾದಿಗಳ ಒಡನಾಟ ನಮಗಿದ್ದರೂ ಅನೇಕ ಬಾರಿ ಮುಖಾಮುಖಿ ವಾಗ್ವಾದಗಳೂ ನಡೆಯುತ್ತಿದ್ದವು.ಆದರೂ ಉಳಿದ ರಾಜ್ಯಗಳಿಗೆ ಹೋಲಿಸಿದರೆ ನಮ್ಮ ರಾಜ್ಯದಲ್ಲಿ ಪರಿಸ್ಥಿತಿ ಅಷ್ಟೊಂದು ಬಿಗಡಾಯಿಸಿರಲಿಲ್ಲ. ಬಿಜಾಪುರದಲ್ಲಿ ಬಾಲ್ಯ ಮತ್ತು ಯೌವನದ ಮೊದಲ ದಿನಗಳನ್ನು ಕಳೆದ ನಾನು ರಂಜಾನ್ ದರ್ಗಾ ಮುಂತಾದವರಿಗೆ ಜಾತಿ, ಮತಗಳಾಚೆ ಯೋಚಿಸಲು ಕಲಿಸಿದ್ದು ಬಿಜಾಪುರದ ಪಿ.ಎಸ್.ಪಾಟೀಲ (ವಕೀಲರು), ನರಸಿಂಗರಾವ ಕುಲಕರ್ಣಿ, ಪ್ರೊ.ಪಿ.ವಿ.ವಜ್ರಮಟ್ಟಿ ಮತ್ತು ಎ.ಎಸ್.ಹಿಪ್ಪರಗಿ. ಈ ಪೈಕಿ ನಾನು ಹಿಪ್ಪರಗಿ ಅವರ ನೇರ ಶಿಷ್ಯನಲ್ಲ. ದರ್ಗಾ ಮತ್ತು ಸಿದ್ದನಗೌಡ ಪಾಟೀಲ ಮೊದಲಾದವರು ಪ್ರೊಫೆಸರ್ ಹಿಪ್ಪರಗಿ ಅವರ ಗರಡಿಯಲ್ಲಿ ತಯಾರಾದವರು. ಅಂತಹ ಹಿಪ್ಪರಗಿ ಅವರ ಶಿಷ್ಯರೆಲ್ಲ ಸೇರಿ ತಮ್ಮ ಗುರುಗಳ ನೆನಪಿಗಾಗಿ ಹಿಪ್ಪರಗಿ ಪ್ರತಿಷ್ಠಾನ ಮಾಡಿಕೊಂಡಿದ್ದಾರೆ. ಆ ಪ್ರತಿಷ್ಠಾನದ ದತ್ತಿ ಉಪನ್ಯಾಸ ಮಾಡಿದ ನಾನು ಲೋಹಿಯಾ ಬಗ್ಗೆ ಮಾತಾಡಿದೆ.ನಂತರ ಹೊಸ ತಲೆಮಾರಿನ ಭರವಸೆಯ ಲೇಖಕರಾದ ವಿಕ್ರಮ ವಿಸಾಜಿ ಅವರು ಬಿಡುಗಡೆಯಾದ ಪುಸ್ತಕಗಳ ಬಗ್ಗೆ ಮಾತಾಡಿದರು.

ಇಪ್ಪತ್ತು ವರ್ಷಗಳ ಹಿಂದೆ ಲೋಹಿಯಾ ಬಗ್ಗೆ ಮಾತಾಡಲು ಹೇಳಿದ್ದರೆ, ನನ್ನ ಮಾತುಗಳು ಬೇರೆಯೇ ಆಗಿರುತ್ತಿದ್ದವು. ಆದರೆ ಈಗ ಸೋವಿಯತ್ ರಶ್ಯ ಸೇರಿದಂತೆ ಜಗತ್ತಿನ ಬಹುತೇಕ ಸಮಾಜವಾದಿ ದೇಶಗಳು (ಕ್ಯೂಬಾ ಉತ್ತರ ಕೊರಿಯಾ, ವಿಯೆಟ್ನಾಮ್ ಹೊರತುಪಡಿಸಿ) ಕುಸಿದು ಬಿದ್ದಾಗ, ಎಲ್ಲೆಡೆ ನವ ಉದಾರೀಕರಣದ ಹೆಸರಿನಲ್ಲಿ ಕಾರ್ಪೊರೇಟ್ ಬಂಡವಾಳಶಾಹಿಯ ನಗ್ನ ನೃತ್ಯ ನಡೆದಾಗ, ಭಾರತದಲ್ಲಿ ನವ ಪ್ಯಾಶಿಸ್ಟ್ ಶಕ್ತಿಗಳು ಹೂಂಕರಿಸುತ್ತಿರುವಾಗ ಅಂದಿನ ಲೋಹಿಯಾರನ್ನು ಈ ಕಾಲಘಟ್ಟಕ್ಕೆ ತಂದು ಮಾತಾಡಲು ಪ್ರಯತ್ನಿಸಿದೆ.

ಲೋಹಿಯಾ ಬದುಕಿದ್ದಾಗಿನ ಜಾಗತಿಕ ಪರಿಸ್ಥಿತಿ ಭಿನ್ನವಾಗಿತ್ತು. ಸೋವಿಯತ್ ರಶ್ಯ ಸೇರಿದಂತೆ ಪೂರ್ವ ಯುರೋಪಿನ ಸುಮಾರು ಹದಿನಾರು ದೇಶಗಳಲ್ಲಿ ಕಮ್ಯುನಿಸ್ಟ್ ಸರಕಾರಗಳಿದ್ದವು. ಕಾರ್ಲ್ ಮಾರ್ಕ್ಸ್‌ನ ಮೂಲ ಸಿದ್ಧಾಂತದ ಮಾನವೀಯತೆ, ವಿಕೇಂದ್ರೀಕರಣ ಹಾಗೂ ಸಮಾನತೆಯ ಆಶಯಗಳನ್ನು ಒಪ್ಪಿಕೊಳ್ಳುತ್ತಿದ್ದ ಲೋಹಿಯಾ ಅವರಿಗೆ ಸೋವಿಯತ್ ರಶ್ಯದಲ್ಲಿ ಅಸ್ತಿತ್ವಕ್ಕೆ ಬಂದಿದ್ದ ಕಮ್ಯುನಿಸ್ಟ್ ಆಡಳಿತದ ಬಗ್ಗೆ ವಿನಾಕಾರಣ ಭಿನ್ನಾಭಿಪ್ರಾಯಗಳಿದ್ದವು. ಬಂಡವಾಳಶಾಹಿ ಹಾಗೂ ಕಮ್ಯುನಿಸಂಗೆ ಪರ್ಯಾಯವಾಗಿ ತಮ್ಮದೇ ಸಮಾಜವಾದಿ ಸಿದ್ಧಾಂತವನ್ನು ಪ್ರತಿಪಾದಿಸಿದರು.ಆಂತರಿಕವಾಗಿ ಕಾಂಗ್ರೆಸ್ ವಿರೋಧಿ ರಂಗದ ಬಗ್ಗೆ ಆಸಕ್ತಿ ವಹಿಸಿದ್ದ ಲೋಹಿಯಾ ಅದರಲ್ಲೂ ನೆಹರೂ ಆಡಳಿತವನ್ನು ಹಿಗ್ಗಾಮುಗ್ಗಾ ಟೀಕಿಸುತ್ತಿದ್ದರು. ಲೋಹಿಯಾರ ಕಾಂಗ್ರೆಸ್ ವಿರೋಧಿ ರಾಜಕೀಯ ಅವರನ್ನು ಆಗಿನ್ನೂ ಪ್ರಬಲವಾಗಿಲ್ಲದ ಜನಸಂಘದ ( ಈಗಿನ ಬಿಜೆಪಿ) ಬಾಗಿಲ ಬಳಿ ಹೋಗಿ ನಿಲ್ಲಿಸಿತು. ಆ ಕಾಲಘಟ್ಟದಲ್ಲಿ ಅವರಿಗೆ ಏನು ಒತ್ತಡ ಇತ್ತೋ ಗೊತ್ತಿಲ್ಲ. ಆದರೆ ಕಾಂಗ್ರೆಸ್ ವಿರೋಧಿ ರಾಜಕೀಯ ಅಂತಿಮವಾಗಿ ಕೋಮುವಾದಿ ಶಕ್ತಿಗಳ ಪ್ರಾಬಲ್ಯಕ್ಕೆ ನಾಂದಿ ಹಾಡಿತು. ಜೆ.ಪಿ. ಚಳವಳಿಯಲ್ಲಿ ತನ್ನ ಶಕ್ತಿಯನ್ನು ಇನ್ನಷ್ಟು ಹೆಚ್ಚಿಸಿಕೊಂಡ ಆರೆಸ್ಸೆಸ್ ಈಗ ಕೇಂದ್ರ ಸರಕಾರವನ್ನೇ ನಿಯಂತ್ರಿಸುತ್ತಿದೆ. ಇದೆಲ್ಲ ಹಳೆಯ ಕತೆ. ಇದನ್ನು ಹೊರತುಪಡಿಸಿ ಲೋಹಿಯಾ ಕೋಮು ಸೌಹಾರ್ದದ, ಮಹಿಳಾ ಸ್ವಾತಂತ್ರದ ಅಗ್ರ ಪ್ರತಿಪಾದಕರಾಗಿದ್ದರು. ದಲಿತ ಹಿಂದುಳಿದ ಸಮುದಾಯಗಳ ಕೈಗೆ ರಾಜಕೀಯ ಅಧಿಕಾರ ದೊರಕಬೇಕೆಂದು ವಿಶೇಷವಾಗಿ ಶ್ರಮಿಸಿದರು. ಮುಲಾಯಂ ಸಿಂಗ್ ಯಾದವ್, ಲಾಲೂ ಪ್ರಸಾದ್ ಯಾದವ್‌ರಂತಹವರು ಬಹುದೊಡ್ಡ ನಾಯಕರಾಗಿ ಬೆಳೆದದ್ದು ಲೋಹಿಯಾವಾದದ ಪ್ರಭಾವದಿಂದ.
ಅಂದಿನ ಲೋಹಿಯಾರನ್ನು ಇಂದಿನ ಕಾಲಘಟ್ಟದಲ್ಲಿ ಇಟ್ಟು ನಾವು ನೋಡಬೇಕಾಗಿದೆ. ಮಾರ್ಕ್ಸ್, ಹೆಗಲ್, ಎಂಗೆಲ್ಸ್, ಮಾವೋ, ಗಾಂಧಿ, ಅಂಬೇಡ್ಕರ್, ಲೋಹಿಯಾ ಯಾರೇ ಆಗಿರಲಿ ಅವರ ಸಾಹಿತ್ಯದ ಮರು ಓದು ಇಂದಿನ ಅಗತ್ಯವಾಗಿದೆ. ಈ ಕಾಲಘಟ್ಟದಲ್ಲಿ ನಿಂತು ಈ ಸನ್ನಿವೇಶಕ್ಕೆ ಪೂರಕವಾಗಿ ನಾವು ಇಂತಹ ಚಿಂತಕರನ್ನು ಅನ್ವೇಷಣೆ ಮಾಡಿದರೆ ಹೊಸ ದಾರಿ ಗೋಚರಿಸುತ್ತದೆ.

ಲೋಹಿಯಾ, ಜೆಪಿ ಇವರೆಲ್ಲ ಸಮಾಜವಾದಿಗಳು, ಅವರ ಸಮಾಜವಾದ ಕಮ್ಯುನಿಸ್ಟರು ಪ್ರತಿಪಾದಿಸುವ ಸಮಾಜವಾದಕ್ಕೆ ಭಿನ್ನವಾಗಿರಬಹುದು. ಆದರೆ ಮಾನವ ಸಮಾನತೆ, ಜಾತಿರಹಿತ ಮತ್ತು ವರ್ಗರಹಿತ ಸಮಾಜ ಸ್ಥಾಪನೆ, ಸ್ತ್ರೀ ಪುರುಷ ಸಮಾನತೆ, ಶ್ರೇಣೀಕೃತ ಜಾತಿಪದ್ಧತಿಯ ನಿರ್ಮೂಲನೆ, ಇವುಗಳೆಲ್ಲ ಎಲ್ಲ ಕಾಲಕ್ಕೂ ಸಮಾನತೆಯಲ್ಲಿ ನಂಬಿಕೆ ಇರುವ ಎಲ್ಲರೂ ಒಪ್ಪಿಕೊಳ್ಳುವ ಮೌಲ್ಯಗಳು. ಕಮ್ಯುನಿಸ್ಟರು ಕೂಡ ಈ ಮೌಲ್ಯಗಳಿಗಾಗಿ ಪ್ರಾಣದ ಹಂಗುತೊರೆದು ಹೋರಾಡುತ್ತ ಬಂದಿದ್ದಾರೆ. ಈಗ ಕಾಲದ ಬಿರುಗಾಳಿಗೆ ಸಿಕ್ಕು ಸಮಾನತೆಯ ದೀಪವೇ ಆರಿ ಹೋಗುವ ಅಪಾಯ ಎದುರಾಗಿದೆ. ಈಗ ಆ ದೀಪ ಆರಿ ಹೋಗದಂತೆ ಕಾಪಾಡಲು ಮಾರ್ಕ್ಸ್‌ವಾದಿಗಳು, ಗಾಂಧಿವಾದಿಗಳು, ಅಂಬೇಡ್ಕರ್‌ವಾದಿಗಳು, ಲೋಹಿಯಾ ವಾದಿಗಳು, ಬುದ್ಧ, ಬಸವಣ್ಣನವರ ಅನುಯಾಯಿಗಳು ಒಂದು ಗೂಡಬೇಕಾದ ಕಾಲವಿದು. ಈ ಅತ್ಯಂತ ಬಿಕ್ಕಟ್ಟಿನ ಸನ್ನಿವೇಶದಲ್ಲಿ ಸಮಾನತೆಯನ್ನು ಒಪ್ಪುವವರು ಪರಸ್ಪರ ಸಿದ್ಧಾಂತದ ಹೆಸರಿನಲ್ಲಿ ಕೋಳಿ ಕಾಳಗ ನಡೆಸಿದರೆ ಅದರ ಲಾಭವನ್ನು ದೇಶವನ್ನು ಮನುವಾದದ ಕತ್ತಲ ಯುಗಕ್ಕೆ ಕೊಂಡೊಯ್ಯಲು ಮಸಲತ್ತು ನಡೆಸುತ್ತಿರುವವರು ಪಡೆಯುತ್ತಾರೆ.

ಫ್ಯಾಶಿಸಂ ವಿಷ ಸರ್ಪ ಮತ್ತೆ ತಲೆಯೆತ್ತಿದ ಕಾಲಘಟ್ಟದಲ್ಲಿ ನಿಂತು ಲೋಹಿಯಾವಾದವನ್ನು ಪೂರ್ವಗ್ರಹ ಮುಕ್ತರಾಗಿ ನಾವು ಪುನರಾವಲೋಕನ ಮಾಡಬೇಕಾಗಿದೆ. ಇಂತಹ ವಿಷಯಗಳು ನೆಲದ ಮೇಲೆ ಕಾಲೂರಿ ನಿಂತು ಯೋಚಿಸುವ ಶಿವಸುಂದರ್ ಅವರಂತಹ ಚಿಂತಕರಿಗೆ ಸುಲಭಕ್ಕೆ ಅರ್ಥವಾಗುತ್ತವೆ. ಆದರೆ ಐವತ್ತು ವರ್ಷಗಳ ಹಿಂದೆ ಹೋಗಿ ಲೋಹಿಯಾರನ್ನು ನೋಡಿದರೆ ಅದೇ ಕಮ್ಯುನಿಸ್ಟ್ ವಿರೋಧಿ ಲೋಹಿಯಾ ಗೋಚರಿಸುತ್ತಾರೆ. ಫ್ಯಾಶಿಸಂ ವಿರುದ್ಧ ಎಲ್ಲ ಜನಪರ, ಪ್ರಗತಿಪರ ಶಕ್ತಿ ಗಳು ಒಂದಾಗಬೇಕಾದ ಸನ್ನಿವೇಶದಲ್ಲಿ ನಮ್ಮ ರಾಜಕೀಯ ಸಿದ್ಧಾಂತಗಳ ಮರು ಓದು ಅಗತ್ಯವಾಗಿದೆ.

ಸೋವಿಯತ್ ರಶ್ಯದ ಸಮಾಜವಾದಿ ವ್ಯವಸ್ಥೆ ಪತನಗೊಂಡಾಗ ಲೋಹಿಯಾ ಬದುಕಿರಲಿಲ್ಲ. ಬದುಕಿದ್ದರೆ ಅವರ ಪ್ರತಿಕ್ರಿಯೆ ಏನಿರುತ್ತಿತ್ತು ಎಂದು ಕುತೂಹಲದಿಂದ ಯೋಚಿಸುತ್ತಿದ್ದಾಗ ಕರ್ನಾಟಕದ ಕಟ್ಟಾ ಲೋಹಿಯಾವಾದಿ ಪ್ರೊ.ಎಂ.ಡಿ.ನಂಜುಂಡಸ್ವಾಮಿ ಅವರು ತೊಂಭತ್ತರ ದಶಕದಲ್ಲಿ ನನಗೆ ಸಿಕ್ಕಿದ್ದರು. ಆಗ ಅವರು ಶಾಸಕರಾಗಿದ್ದರು. ವಿಧಾನ ಸಭೆಯ ಕಲಾಪಗಳ ವರದಿಗೆ ನಾನು ಹೋದಾಗ ಮೊಗಸಾಲೆಯಲ್ಲಿ ಸಿಕ್ಕ ಅವರು ಸೋವಿಯತ್ ಸಮಾಜವಾದಿ ವ್ಯವಸ್ಥೆ ಕುಸಿದು ಬಿದ್ದ ಬಗ್ಗೆ ಬೇಸರ ವ್ಯಕ್ತಪಡಿಸಿದರು. ಭೇಟಿಯಾದಾಗೆಲ್ಲ ನೀವು ಕಮ್ಯುನಿಸ್ಟರು ಎಂದು ಲೇವಡಿ ಮಾಡುತ್ತಿದ್ದ ನಂಜುಂಡಸ್ವಾಮಿ ರಶ್ಯದ ಸೋಷಲಿಸ್ಟ್ ವ್ಯವಸ್ಥೆ ಕುಸಿಯಬಾರದಿತ್ತು ಎಂದು ಹೇಳಿದ್ದರು. ಆ ದಿನ ಸದನದಲ್ಲಿ ಮಾತಾಡುವಾಗ ಯಾರೋ ಬಿಜೆಪಿ ಸದಸ್ಯನೊಬ್ಬ ಕಮ್ಯುನಿಸ್ಟ್ ವ್ಯವಸ್ಥೆ ರಶ್ಯದಲ್ಲೇ ಕುಸಿದಿದೆ ಎಂದು ಛೇಡಿಸಿದಾಗ ಎದ್ದು ನಿಂತ ನಂಜುಂಡಸ್ವಾಮಿ ಸಮಾಜವಾದದ ಒಂದು ಪ್ರಯೋಗ ವಿಫಲವಾಗಿದೆ ಅಷ್ಟೆ. ಮತ್ತೆ ಪ್ರಯೋಗ ಮಾಡುತ್ತಲೇ ಇರುತ್ತೇವೆ ಎಂದು ಹೇಳಿದರು. ನಂಜುಂಡಸ್ವಾಮಿ ಅವರ ಮಾತು ಸದನದ ಕಲಾಪದಲ್ಲಿ ದಾಖಲಾಗಿದೆ. ಇದು ಲೋಹಿಯಾ ವಾದಿಗಳಲ್ಲಾದ ಬದಲಾವಣೆ.

ಲೋಹಿಯಾ ನಿರ್ಗಮನದ ನಂತರ 1977ರಲ್ಲಿ ಕೇಂದ್ರದಲ್ಲಿ ಪ್ರಥಮ ಕಾಂಗ್ರೆಸ್ಸೇತರ ಸರಕಾರ ಅಸ್ತಿತ್ವಕ್ಕೆ ಬಂದಾಗ ಸೋಷಲಿಸ್ಟ್ ಪಕ್ಷ, ಜನತಾ ಪಕ್ಷದಲ್ಲಿ ವಿಲೀನವಾಗಿ ಅಸ್ತಿತ್ವ ಕಳೆದುಕೊಂಡಿತು.ಆದರೆ ಆರೆಸ್ಸೆಸ್ ತನ್ನ ಅಸ್ತಿತ್ವ ಉಳಿಸಿಕೊಂಡು ತನ್ನ ಅಜೆಂಡಾ ಜಾರಿಗೆ ತರತೊಡಗಿತು.ಇದನ್ನು ಪ್ರತಿಭಟಿಸಿ ಲೋಹಿಯಾ ವಾದಿ ಸೋಷಲಿಸ್ಟ್ ನಾಯಕ ಮಧುಲಿಮೆಯೆ, ಮುಂತಾದವರು ಸಂಘಪರಿವಾರದ ವಿರುದ್ಧ ಧ್ವನಿಯೆತ್ತಿ ಸರಕಾರದಿಂದ ಹೊರಗೆ ಬಂದದ್ದು ಎಲ್ಲರಿಗೂ ಗೊತ್ತಿರುವ ಸಂಗತಿ. ಈಗ ರೈತ ಹೋರಾಟದಲ್ಲಿ ಯೋಗೇಂದ್ರ ಯಾದವ್‌ರಂತಹ ಲೋಹಿಯಾವಾದಿಗಳು ಕಮ್ಯುನಿಸ್ಟರ ಜೊತೆ ಸೇರಿ ಕೆಲಸ ಮಾಡುತ್ತಿದ್ದಾರೆ. ಅವರಿಗೂ ಫ್ಯಾಶಿಸಂನ ಅಪಾಯದ ಅರಿವಾಗಿದೆ.

 ಲೋಹಿಯಾವಾದಿಗಳಾಗಲಿ, ಮಾರ್ಕ್ಸ್‌ವಾದಿಗಳಾಗಲಿ ಹಿಂದೆ ನಡೆದುಹೋದ ತಪ್ಪುಗಳ ಗೋರಿಯನ್ನು ಅಗೆದು ಈಗ ಕಿತ್ತಾಡುವುದರಲ್ಲಿ ಅರ್ಥವಿಲ್ಲ. ಅನೇಕ ತಪ್ಪುಗಳು ಕಮ್ಯುನಿಸ್ಟರಿಂದಲೂ ನಡೆದುಹೋಗಿವೆ. ಈ ದೇಶದಲ್ಲಿ ಮನುವಾದಿ ಫ್ಯಾಶಿಸ್ಟ್‌ಶಕ್ತಿಗಳು ಹೊಂಚು ಹಾಕಿ ಕಾಯುತ್ತಿವೆ ಎಂದು ಗೊತ್ತಿದ್ದರೂ ಅವರನ್ನು ಅಧಿಕಾರದಿಂದ ದೂರವಿಡುವ ಪ್ರಯತ್ನವನ್ನು ಕಮ್ಯುನಿಸ್ಟರು ಸರಿಯಾಗಿ ಮಾಡಲಿಲ್ಲ. ಹಿರಿಯ ಕಮ್ಯುನಿಸ್ಟ್ ನಾಯಕ ಜ್ಯೋತಿ ಬಸು ಅವರು ಪ್ರಧಾನ ಮಂತ್ರಿಯಾಗುವ ಅವಕಾಶ ಮನೆ ಬಾಗಿಲಿಗೆ ಬಂದಾಗ ಕಮ್ಯುನಿಸ್ಟರು ನಡೆದುಕೊಂಡ ರೀತಿಯ ಬಗ್ಗೆ ಬಸು ಅವರಿಗೂ ಅಸಮಾಧಾನವಿತ್ತು. ಆಗ ಬಸು ಪ್ರಧಾನಿಯಾಗಿದ್ದರೆ ಕಮ್ಯುನಿಸ್ಟರು ತಮ್ಮ ಕಾರ್ಯಕ್ರಮಗಳನ್ನು ಜಾರಿಗೆ ತರುವ ಅವಕಾಶ ಸಿಗುತ್ತದೆಂದಲ್ಲ, ಫ್ಯಾಶಿಸ್ಟ್ ಶಕ್ತಿಗಳು ಇಷ್ಟೊಂದು ಪ್ರಬಲವಾಗಲು ಸಾಧ್ಯವಾಗುತ್ತಿರಲಿಲ್ಲ. ಎರಡನೆಯದಾಗಿ ಅಣು ಒಪ್ಪಂದದ ನೆಪದಲ್ಲಿ ಯುಪಿಎ(1) ಸರಕಾರಕ್ಕೆ ಬೆಂಬಲ ವಾಪಸು ಪಡೆದದ್ದು ಕಮ್ಯುನಿಸ್ಟರ ಎರಡನೇ ತಪ್ಪು. ಆಗ ಸಿಪಿಎಂ ಪ್ರಧಾನ ಕಾರ್ಯದರ್ಶಿಯಾಗಿದ್ದವರು ಪ್ರಕಾಶ್ ಕಾರಟ.

ಹೀಗೆ ಎಡಪಂಥೀಯ ಪ್ರಗತಿಪರ ಸಂಘಟನೆಗಳಿಂದಲೂ ಲೋಪಗಳಾಗಿವೆ. ಅವುಗಳ ಬಗ್ಗೆ ಆತ್ಮಾವಲೋಕನ ಮಾಡಿಕೊಂಡು ಭಾರತವನ್ನು ಫ್ಯಾಶಿಸ್ಟ್ ಗಂಡಾಂತರದಿಂದ ಪಾರು ಮಾಡುವುದು ಏಕೈಕ ಕಾರ್ಯಸೂಚಿಯಾಗಬೇಕಾಗಿದೆ.

 ಕೊನೆಯದಾಗಿ ಇನ್ನೊಂದು ವಿಷಯ ಸೋವಿಯತ್ ರಶ್ಯ ಅಸ್ತಿತ್ವದಲ್ಲಿದ್ದಾಗ ಎಲ್ಲ ಲೋಹಿಯಾವಾದಿಗಳಂತೆ ಕಟುವಾಗಿ ಟೀಕಿಸುತ್ತಿದ್ದ ಪ್ರೊ.ನಂಜುಂಡಸ್ವಾಮಿ ಅವರು ತೊಂಭತ್ತರ ದಶಕದಲ್ಲಿ ಕಮ್ಯುನಿಸ್ಟ್ ಕ್ಯೂಬಾದ ಮೇಲೆ ಅಮೆರಿಕ ಆರ್ಥಿಕ ದಿಗ್ಬಂಧನ ಹೇರಿದಾಗ ಕ್ಯೂಬಾ ನೆರವಿಗೆ ಕರ್ನಾಟಕದಿಂದ ಆಹಾರ ಧಾನ್ಯ ಸಂಗ್ರಹಿಸಿ ಕಳಿಸಿಕೊಡುವ ಏರ್ಪಾಟು ಮಾಡಿದ್ದನ್ನು ಮರೆಯಬಾರದು. ಯಾವುದೇ ಸಿದ್ಧಾಂತ, ರಾಜಕೀಯ ಧೋರಣೆಗಳು ಸನ್ನಿವೇಶ, ಸಂದರ್ಭಗಳು ಬದಲಾದಾಗ ಹೊಸ ಬದಲಾವಣೆಗೆ ತೆರೆದುಕೊಳ್ಳಬೇಕು. ಮರು ನವೀಕರಣಗೊಳ್ಳಬೇಕು. ಅಂತಲೇ ಮಾರ್ಕ್ಸ್‌ವಾದ ಒಂದು ವಿಜ್ಞಾನ ಎಂದು ಜ್ಯೋತಿ ಬಸು ಹೇಳುತ್ತಿದ್ದರು. ವಿಜ್ಞಾನ ವಿಕಾಸಗೊಳ್ಳುತ್ತ ಹೋಗುತ್ತದೆ ಎಂಬುದು ಎಲ್ಲರಿಗೂ ತಿಳಿದ ಸಂಗತಿ.

Writer - ಸನತ್ ಕುಮಾರ್ ಬೆಳಗಲಿ

contributor

Editor - ಸನತ್ ಕುಮಾರ್ ಬೆಳಗಲಿ

contributor

Similar News