ಕೃಷಿ ಸಹಾಯಕ ಪ್ರಾಧ್ಯಾಪಕರ ನೇಮಕಾತಿಯಲ್ಲಿ ದಲಿತ ಅಭ್ಯರ್ಥಿಗಳಿಗೆ ವಂಚನೆ

Update: 2021-03-29 18:43 GMT

ಕರ್ನಾಟಕ ರಾಜ್ಯ ಸರಕಾರವು 1995ರಲ್ಲಿ ಆದೇಶಿಸಿರುವ 100 ರಿಕ್ತ ಸ್ಥಾನಗಳ ರೋಸ್ಟರ್‌ನಂತೆ, ಕರ್ನಾಟಕ ರಾಜ್ಯ ಸರಕಾರದಿಂದ ಅನುದಾನ ಪಡೆಯುವ ವಿಶ್ವವಿದ್ಯಾನಿಲಯಗಳು ಸಹಾಯಕ ಪ್ರಾಧ್ಯಾಪಕ ಹುದ್ದೆಗಳಿಗೆ ನೇರ ನೇಮಕಾತಿಯಲ್ಲಿ ನೇರ ಮತ್ತು ಸಮತಲ ಮೀಸಲಾತಿಯನ್ನು (Verticle Reservation  Horizontal Reservation) ಪಾಲಿಸುತ್ತಿವೆ. ವಿಶ್ವವಿದ್ಯಾನಿಲಯಗಳು ನೇಮಕಾತಿಯ ಸಂದರ್ಭದಲ್ಲಿ ವಿಷಯ ಅಥವಾ ವಿಭಾಗವನ್ನು ಒಂದು ಘಟಕ ಎಂದು ಪರಿಗಣಿಸಿ ಒಂದೊಂದು ವಿಭಾಗಕ್ಕೂ ಮೀಸಲಾತಿಯನ್ನು ಪಾಲಿಸಿ ಒಂದೊಂದು ಪ್ರತ್ಯೇಕ ರೋಸ್ಟರ್‌ನ್ನು ಮಾಡುವುದಲ್ಲದೆ ಸದರಿ ನೇಮಕಾತಿಗಳಲ್ಲಿ ರೋಸ್ಟರ್ 100 ರಿಕ್ತ ಸ್ಥಾನಗಳನ್ನು ಪೂರ್ಣಗೊಳ್ಳುವವರೆಗೆ ನೇಮಕಾತಿಯನ್ನು ಮಾಡುತ್ತವೆ, ಆನಂತರ ರೋಸ್ಟರ್ ಪುನರಾವರ್ತನೆಯಾಗುತ್ತದೆ. ಹೀಗೆ ಕರ್ನಾಟಕ ರಾಜ್ಯದ ಕೃಷಿ, ತೋಟಗಾರಿಕೆ ಮತ್ತು ಪಶು ವೈದ್ಯಕೀಯ ಸಂಬಂಧಿತ ವಿಶ್ವವಿದ್ಯಾನಿಲಯಗಳು ಸಹ 1995ರ ಪರಿಷ್ಕೃತ ಸರಕಾರಿ ರೋಸ್ಟರ್‌ನಂತೆ ಕಾಲಕಾಲಕ್ಕೆ ಪರಿಷ್ಕೃತ ಸಮತಲ ಮೀಸಲಾತಿಯನ್ನು ಒಳಗೊಂಡು ವಿವಿಧ ಸಹಾಯಕ ಪ್ರಾಧ್ಯಾಪಕ ಹುದ್ದೆಗಳಿಗೆ ನೇರ ನೇಮಕಾತಿಯನ್ನು ಮಾಡುತ್ತಿವೆ.

ಯಾವುದೇ ಹೊಸ ವಿಶ್ವವಿದ್ಯಾನಿಲಯವು ಮೊದಲನೇ ನೇಮಕಾತಿಗೆ ಹೊಸದಾಗಿ ರೋಸ್ಟರ್ ಮಾಡಿದಾಗ, ಸರಕಾರದ ರೋಸ್ಟರ್ ಪ್ರಕಾರ ಪ್ರಾರಂಭದ ಮೊದಲ ಬಿಂದು ಪರಿಶಿಷ್ಟ ಅಭ್ಯರ್ಥಿಗೆ, ಎರಡನೇ ಬಿಂದು ಸಾಮಾನ್ಯ ಅಭ್ಯರ್ಥಿಗೆ ಮತ್ತು 3ನೇ ಬಿಂದು ಪರಿಶಿಷ್ಟ ಪಂಗಡದ ಅಭ್ಯರ್ಥಿಗೆ ಮೀಸಲಿರುತ್ತದೆ ಮತ್ತು ಇತರ ಸಮುದಾಯಗಳ ಮೀಸಲಾತಿ ಮುಂದಿನ ಬಿಂದುಗಳಲ್ಲಿ ಬರುತ್ತದೆ. ಹೊಸ ವಿಶ್ವವಿದ್ಯಾನಿಲಯಗಳಲ್ಲಿ ಪ್ರಥಮ ಬಾರಿ ವಿಭಾಗವಾರು ರೋಸ್ಟರ್ ಮಾಡಿದಾಗ, ವಿಭಾಗಕ್ಕೆ ಕೇವಲ 2ರಿಂದ 4 ಹುದ್ದೆಗಳನ್ನು ಮಾತ್ರ ತುಂಬುವ ಸಂದರ್ಭದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ಮೊದಲ ನೇಮಕಾತಿಯಲ್ಲಿ ಹೆಚ್ಚಿನ ಸ್ಥಾನಗಳು ದೊರೆಯುತ್ತಿರುವ ಹಾಗೆ ಮೇಲ್ನೋಟಕ್ಕೆ ಕಂಡುಬರುತ್ತದೆ. ಆದರೆ ನಂತರದ ನೇಮಕಾತಿಯಲ್ಲಿ ಇತರ ಮೀಸಲು ವರ್ಗಗಳಿಗೂ ಸ್ಥಾನಗಳು ದೊರೆಯುತ್ತವೆ ಎಂಬುದು ವಾಸ್ತವ ಸಂಗತಿ. ಉದಾಹರಣೆಗೆ 2008ರಲ್ಲಿ ಧಾರವಾಡ ಕೃಷಿ ವಿಶ್ವವಿದ್ಯಾನಿಲಯದಿಂದ ಬೇರ್ಪಟ್ಟ ರಾಯಚೂರು ಕೃಷಿ ವಿಶ್ವವಿದ್ಯಾನಿಲಯವು 2009ರಲ್ಲಿ ಮೊದಲ ಸಲ ಸಹಾಯಕ ಪ್ರಾಧ್ಯಾಪಕರ ನೇಮಕಕ್ಕೆ ಪ್ರಕಟನೆ ನೀಡಿ ಮಾಡಿದ ನೇಮಕಾತಿ ಮತ್ತು ನಂತರದ ನೇಮಕಾತಿಗಳು.

ಆದರೆ, 2012ರಲ್ಲಿ ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದಿಂದ ಬೇರ್ಪಟ್ಟು ಪ್ರತ್ಯೇಕ ಹೊಸ ವಿಶ್ವವಿದ್ಯಾನಿಲಯವಾಗಿ ರೂಪುಗೊಂಡ ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾನಿಲಯವು 2015ರಲ್ಲಿ ರಾಜ್ಯ ಸರಕಾರದ 1995ರ ಆದೇಶದ ನಿಯಮಗಳನ್ನು ಅನುಸರಿಸಿ 85 ಸಹಾಯಕ ಪ್ರಾಧ್ಯಾಪಕರ ಹುದ್ದೆಗಳ ನೇಮಕಾತಿಗೆ ವಿಷಯ/ವಿಭಾಗವಾರು ರೋಸ್ಟರ್ ಮಾಡಿ ಪ್ರಕಟನೆ ಮಾಡಿತ್ತು. ಹೊಸ ವಿಶ್ವವಿದ್ಯಾನಿಲಯವಾದ್ದರಿಂದ 1ನೇ ಬಿಂದುವಿನಿಂದ ವಿಷಯ/ವಿಭಾಗವಾರು ರೋಸ್ಟರ್ ಮಾಡಿದಾಗ ಒಟ್ಟು 85 ಸ್ಥಾನಗಳಲ್ಲಿ 41 ಸ್ಥಾನಗಳು ಪ.ಜಾ./ಪ.ಪಂ. ಅಭ್ಯರ್ಥಿಗಳಿಗೆ ಲಭಿಸಿತ್ತು. ಆದರೆ, 3 ವರ್ಷಗಳ ಕಾಲಹರಣದ ನಂತರ ವಿಶ್ವವಿದ್ಯಾನಿಲಯದ ಕೆಲವು ಅಸಹಿಷ್ಣುತಾ ಪಟ್ಟಭದ್ರಹಿತಾಸಕ್ತಿಗಳು ಈ ಪ್ರಕಟಣೆಯು ಹಳೆಯದಾಗಿದ್ದು, ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದವರಿಗೆ ಅಧಿಕ ಮೀಸಲಾತಿ ಪಾಲು ಹೋಗುತ್ತಿದೆ ಮತ್ತು ತಾವೇ ತಜ್ಞರಿಂದ ರೂಪಿಸಿದ ರೋಸ್ಟರ್ ತಪ್ಪುಎಂಬಂತೆ ನೆಪ ಒಡ್ಡಿ ಪ್ರಕಟನೆ ಹಿಂಪಡೆದರು.

2019ರಲ್ಲಿ ಅದೇ ವಿಶ್ವವಿದ್ಯಾನಿಲಯವು ನಿಯಮಗಳನ್ನು ಗಾಳಿಗೆ ತೂರಿ, ಹೊಸದಾಗಿ 109 ಸಹಾಯಕ ಪ್ರಾಧ್ಯಾಪಕರ ನೇಮಕಾತಿಗೆ ಪ್ರಕಟನೆ ಮಾಡಿತು. ಆದರೆ ಈ ಸಲ ವಿಭಾಗ/ವಿಷಯವನ್ನು ಒಂದು ಘಟಕವಾಗಿ ರೋಸ್ಟರ್ ಮಾಡುವ ಬದಲು ಇಡೀ ವಿಶ್ವವಿದ್ಯಾನಿಲಯವನ್ನೇ ಒಂದು ಘಟಕ ಎಂದು ಪರಿಗಣಿಸಿ, ನ್ಯಾಯ ಮತ್ತು ತರ್ಕರಹಿತವಾಗಿ ವಿಭಾಗಗಳನ್ನು ಅಲ್ಫಾಬೆಟಿಕಲ್ ಆಗಿ ಜೋಡಿಸಿ, ತಪ್ಪುರೋಸ್ಟರ್ ಮಾಡಿತ್ತು. ಇದರ ಪರಿಣಾಮ 109ಸ್ಥಾನಗಳಲ್ಲಿ ಪ.ಜಾ./ಪ.ಪಂ. ಅಭ್ಯರ್ಥಿಗಳಿಗೆ ಸಿಕ್ಕ ಪಾಲು ಕೇವಲ 21 ಸ್ಥಾನ. ಅಂದರೆ ಪ.ಜಾ./ಪ.ಪಂ. ಸಮುದಾಯಕ್ಕೆ ಕಾನೂನು ಬದ್ಧವಾಗಿ ಸಿಗಬೇಕಿದ್ದ 41 ಹುದ್ದೆಗಳನ್ನು 21ಕ್ಕೆ ವ್ಯವಸ್ಥಿತವಾಗಿ ಇಳಿಸಲಾಯಿತು. ಇದಲ್ಲದೆ ಸರಕಾರದ ಆದೇಶಗಳನ್ನು ಗಾಳಿಗೆ ತೂರಿ ಸಮತಲ ಮೀಸಲಾತಿಯನ್ನು ನೀಡುವಾಗ ಅನೇಕ ರೋಸ್ಟರ್ ಬಿಂದುಗಳಲ್ಲಿ ದೋಷಗಳನ್ನು ಮಾಡಿದ್ದಲ್ಲದೆ, ಮೊದಲ ಪ್ರಕಟನೆಯಲ್ಲಿ ವಿಭಾಗವಾರು ಇದ್ದ ಹುದ್ದೆಗಳ ಸಂಖ್ಯೆ ಮನಸೋಇಚ್ಛೆ ಏರುಪೇರು ಮಾಡಿರುವುದು ಪ್ರಕಟನೆಯಲ್ಲಿ ಸ್ಪಷ್ಟವಾಗಿದೆ.

ಇಂತಹ ಷಡ್ಯಂತ್ರ ವ್ಯವಸ್ಥೆಯ ವಿರುದ್ಧ, ಅನೇಕ ಸಂದರ್ಭಗಳಲ್ಲಿ, ದೇಶದಲ್ಲಿನ ವಿವಿಧ ಕೇಸ್‌ಗಳಲ್ಲಿ, ನ್ಯಾಯಾಲಯಗಳ ತೀರ್ಪುಗಳನ್ನು ಗಮನಿಸುವುದಾದರೆ, ನ್ಯಾಯಾಲಯಗಳು ವಿಷಯವಾರು ಅಥವಾ ವಿಭಾಗವಾರು ರೋಸ್ಟರ್ ಮಾಡುವುದೇ ಸಂವಿಧಾನಾತ್ಮಕ ಎಂದು ತೀರ್ಪನ್ನು ಸಹ ನೀಡಿವೆ. ಉದಾಹರಣೆಗೆ ಆರ್.ಕೆ.ಸಭರವಾಲ ಮತ್ತು ಇತರ V/s  ಸ್ಟೇಟ್ ಆಫ್ ಪಂಜಾಬ್ ಮತ್ತು ಇತರ (10.02.1995.), ಡಾ.ರಾಜ್ ಕುಮಾರ್ ಮತ್ತು ಇತರರು (V/s ) ಗುಲ್ಬರ್ಗಾ ವಿಶ್ವವಿದ್ಯಾನಿಲಯ ಮತ್ತು ಇತರರು (20.06.1990.).

ವಿವೇಕಾನಂದ ತಿವಾರಿ ಮತ್ತು ಇತರರು ಯೂನಿಯನ್ ಆಫ್ ಇಂಡಿಯಾ ಮತ್ತು ಇತರರು V/s  (07.04.2017) ಈ ಕೇಸಿನಲ್ಲಿ ಅಲಹಾಬಾದ್ ಹೈಕೋರ್ಟ್, ಯುಜಿಸಿಯ 2006ರ ನೇರ ನೇಮಕಾತಿಯ ನಿಯವಗಳನ್ನು (ವಿಶ್ವವಿದ್ಯಾನಿಲಯ ಒಂದು ಘಟಕ ಎಂಬ ನೀತಿ) ರದ್ದು ಪಡಿಸಿ ವಿಭಾಗ/ವಿಷಯವಾರು ರೋಸ್ಟರ್ ಮಾಡುವುದು ಸಂವಿಧಾನಾತ್ಮಕ ನ್ಯಾಯ ಎಂದು ಸೂಚಿಸಿತು. ನಂತರ, ಯುಜಿಸಿಯು ಸಹ ಮಾರ್ಚ್ 5, 2018ರಂದು ಆದೇಶ ಹೊರಡಿಸಿ ವಿಭಾಗ/ವಿಷಯವಾರು ರೋಸ್ಟರ್ ಮಾಡಲು ಆದೇಶಿಸಿದೆ. ದಿ. 21.01.2019 ರಂದು ವಿಭಾಗವಾರು ರೋಸ್ಟರ್‌ನ್ನು ಪ್ರಶ್ನಿಸಿದ ಮಾನವ ಸಂಪನ್ಮೂಲ ಸಚಿವಾಲಯ ಮಾನ್ಯ ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲೇರಿತು, ಆಗ ನ್ಯಾಯಾಲಯವು ವಿಶ್ವವಿದ್ಯಾನಿಲಯ ಒಂದು ಘಟಕವನ್ನಾಗಿ ಮಾಡಿದಾಗ ಕೆಲವು ವಿಭಾಗಗಳಲ್ಲಿ ಸಾಮಾನ್ಯ ಅಭ್ಯರ್ಥಿಗಳು ಕೆಲವು ವಿಭಾಗಗಳಲ್ಲಿ ಮೀಸಲಾತಿ ಅಭ್ಯರ್ಥಿಗಳು ತುಂಬುತ್ತಾರೆ ಮತ್ತು ಸಂವಿಧಾನದ 14, 16 ರ ವಿಧಿಯ ಅತಿಕ್ರಮಣ ಆಗುತ್ತದೆ ಎಂದು ಅಭಿಪ್ರಾಯ ಪಟ್ಟಿತು. ಮುಂದುವರಿದು ಒಂದು ವಿಭಾಗದವರು ಮತ್ತೊಂದು ವಿಭಾಗದವರೊಂದಿಗೆ ಅಥವಾ ಒಂದು ವಿಷಯದವರು ಮತ್ತೊಂದು ವಿಷಯದವರೊಂದಿಗೆ ಸ್ಪರ್ಧಾಳು ಅಲ್ಲ ಹಾಗೂ ವರ್ಗಾವಣೆ ಮಾಡಲು ಸಹ ಸಾಧ್ಯವಿಲ್ಲ ಆದುದರಿಂದ ವಿಶ್ವವಿದ್ಯಾನಿಲಯಗಳು ನೇರ ನೇಮಕಾತಿಯಲ್ಲಿ ವಿಭಾಗ/ವಿಷಯವಾರು ರೋಸ್ಟರ್‌ನ್ನು ಪಾಲಿಸಲು ತಿಳಿಸಿತಲ್ಲದೆ, ಅಲಹಾಬಾದ್ ಉಚ್ಚ ನ್ಯಾಯಾಲಯ ನೀಡಿದ ತೀರ್ಪನ್ನು ಸಹ ಎತ್ತಿ ಹಿಡಿಯಿತು.

ಶಿವಮೊಗ್ಗ ಕೃಷಿ ವಿಶ್ವವಿದ್ಯಾನಿಲಯವು ಸಾರ್ವಜನಿಕವಾಗಿ ರಾಜ್ಯ ಸರಕಾರದ ಆದೇಶ, ಯುಜಿಸಿ ಆದೇಶ, ಉಚ್ಚ ನ್ಯಾಯಾಲಯ ಮತ್ತು ಸರ್ವೋಚ್ಚ ನ್ಯಾಯಾಲಯದ ತೀರ್ಪನ್ನು ಕಡೆಗಣಿಸಿ 21 ದಲಿತ ಆಕಾಂಕ್ಷಿಗಳ ಭವಿಷ್ಯಕ್ಕೆ ಕೊಡಲಿ ಪೆಟ್ಟನ್ನು ನೀಡಿರುವುದು ದೇಶದಲ್ಲಿ ದಲಿತರಿಗೆ ನ್ಯಾಯ ಎಲ್ಲಿದೆ ಎಂಬ ಪ್ರಶ್ನೆ ಮೂಡಿಸಿದೆ. ಪ್ರಸ್ತುತ ನೇಮಕಾತಿ ಪ್ರಕ್ರಿಯೆಯು ನಡೆಯುತ್ತಿದ್ದು, ರಾಜ್ಯ ಸರಕಾರವು ಶೋಷಿತ ಸಮುದಾಯಕ್ಕೆ ನ್ಯಾಯ ಕೊಡಿಸಿ ಸಂವಿಧಾನಾತ್ಮಕ ಮೌಲ್ಯಗಳನ್ನು ಕಾಪಾಡಬೇಕಿದೆ.

Writer - ರಮೇಶ್ ಕೋಲಾರ

contributor

Editor - ರಮೇಶ್ ಕೋಲಾರ

contributor

Similar News