ಮರಗಳನ್ನು ರಕ್ಷಿಸಲು ತನ್ನ ಪುರಾತನ ಅಂತ್ಯಸಂಸ್ಕಾರ ಸಂಪ್ರದಾಯವನ್ನು ಕೈಬಿಟ್ಟ 'ಆದಿವಾಸಿ ಗೊಂಡ ಸಮುದಾಯ'

Update: 2021-03-30 07:20 GMT
photo: Chandan Khanna/AFP (scroll.in)

ಭಾರತದ ಅತ್ಯಂತ ದೊಡ್ಡ ಬುಡಕಟ್ಟು ಜನಾಂಗಗಳಲ್ಲಿ ಒಂದಾಗಿರುವ ಗೊಂಡ ಸಮುದಾಯದ ಜನರು ಪುರಾತನ ಕಾಲದಿಂದಲೂ ಮೃತರ ಶವವನ್ನು ಅಗ್ನಿಗೆ ಸಮರ್ಪಿಸುವ ಮೂಲಕ ಅಂತ್ಯಸಂಸ್ಕಾರವನ್ನು ನೆರವೇರಿಸುತ್ತಾರೆ. ತಾವು ವಾಸವಿರುವ ಅರಣ್ಯಗಳಲ್ಲಿ ಹೇರಳವಾಗಿ ಲಭ್ಯವಿರುವ ಕಟ್ಟಿಗೆಯನ್ನೇ ಚಿತೆಗೆ ಬಳಸುತ್ತಾರೆ. ಪರಿಸರವನ್ನೇ ದೈವಸ್ವರೂಪಿಯಾಗಿ ಪರಿಗಣಿಸುವ ಗೊಂಡರು ಈಗ ಅದರ ರಕ್ಷಣೆಗಾಗಿ ತಾವು ಪ್ರಾಚೀನ ಕಾಲದಿಂದಲೂ ಅನುಸರಿಸಿಕೊಂಡು ಬಂದಿರುವ ಸಾಂಪ್ರದಾಯಿಕ ಅಂತ್ಯಸಂಸ್ಕಾರ ವಿಧಿಯನ್ನು ಕೈಬಿಡಲು ಮುಂದಾಗಿದ್ದಾರೆ. ಛತ್ತೀಸ್ಗಡದ ಗೊಂಡ ಸಮುದಾಯದ ಜನರು ಮರಗಳನ್ನು ಉಳಿಸಲು ತಮ್ಮವರು ಮೃತಪಟ್ಟರೆ ಅವರ ಶವಗಳನ್ನು ಅಗ್ನಿಗೆ ಅರ್ಪಿಸುವ ಬದಲು ದಫನ ಮಾಡಲು ನಿರ್ಧರಿಸಿದ್ದಾರೆ.

‘ನಾವು ನಿಸರ್ಗದೊಂದಿಗೆ ಅಖಂಡ ಸಂಬಂಧವನ್ನು ಹೊಂದಿದ್ದೇವೆ ಮತ್ತು ಅರಣ್ಯದ ಪ್ರತಿಯೊಂದೂ ಅಂಶವು ನಮ್ಮ ಪಾಲಿಗೆ ದೈವಸ್ವರೂಪಿಯಾಗಿದೆ. ಹೀಗಾಗಿ ಎಲ್ಲ ವಿಧಗಳಲ್ಲಿಯೂ ಅರಣ್ಯವನ್ನು ರಕ್ಷಿಸಲು ಮತ್ತು ಮಾನವ ಜನಾಂಗಕ್ಕೆ ಮರಗಳನ್ನು ಉಳಿಸಲು ನಿರ್ಧರಿಸಿದ್ದೇವೆ. ಇನ್ನು ಮುಂದೆ ಶವಸಂಸ್ಕಾರಕ್ಕಾಗಿ ಚಿತೆಯನ್ನು ನಾವು ಬಳಸುವುದಿಲ್ಲ. ಶವಗಳನ್ನು ಅಗ್ನಿಗೆ ಅರ್ಪಿಸುವ ಬದಲು ದಫನ ಮಾಡಿದರೆ ಮರಗಳನ್ನು ಕಡಿಯುವ ಮತ್ತು ಅವುಗಳನ್ನು ಚಿತೆ ನಿರ್ಮಾಣಕ್ಕೆ ಬಳಸುವ ಪದ್ಧತಿಯನ್ನು ನಿಲ್ಲಿಸಬಹುದು. 

ಹೀಗಾಗಿ ಶವ ದಫನವನ್ನು ನಮ್ಮ ಸಂವಿಧಾನದಲ್ಲಿ ಸೇರಿಸಲು ಸಮುದಾಯವು ಇತ್ತೀಚಿನ ಮಹಾ ಸಮ್ಮೇಳನದಲ್ಲಿ ನಿರ್ಣಯವನ್ನು ಕೈಗೊಂಡಿದೆ ’ಎಂದು ಛತ್ತೀಸ್ಗಡದ ಕಬೀರಧಾಮ ಜಿಲ್ಲೆಯ ಜಿಲ್ಲಾ ಗೊಂಡ ಸೇವಾ ಸಮಿತಿಯ ಪ್ರಧಾನ ಕಾರ್ಯದರ್ಶಿ ರಾಮ ಮೇರವಿ ತಿಳಿಸಿದರು. ಮಾ.6 ಮತ್ತು 7ರಂದು ಜಿಲ್ಲೆಯಲ್ಲಿ ನಡೆದ ಗೊಂಡ ಮಹಾ ಸಮ್ಮೇಳನದಲ್ಲಿ ವಿವಿಧೆಡೆಗಳಿಂದ 2,000ಕ್ಕೂ ಅಧಿಕ ಪ್ರತಿನಿಧಿಗಳು ಭಾಗವಹಿಸಿದ್ದರು.

ಗೊಂಡರು ತಮ್ಮ ಬದುಕಿಗಾಗಿ ಅರಣ್ಯವನ್ನೇ ಅವಲಂಬಿಸಿದ್ದಾರೆ. ಅರಣ್ಯ ಮತ್ತು ಮರಗಳು ಅವರಿಗೆ ಆಶ್ರಯ,ಔಷಧಿಗಳು,ನೀರು,ಆಹಾರ ಮತ್ತು ಇಂಧನವನ್ನು ಒದಗಿಸುತ್ತವೆ ಎಂದು ವಾರಣಾಸಿಯ ಬನಾರಸ ಹಿಂದು ವಿವಿಯ ಸಹಾಯಕ ಪ್ರೊ.ಶ್ರಾವಣಿ ಸನ್ಯಾಲ್ ಮತ್ತು ಛತ್ತೀಸ್ಗಡದ ಭೈರಮಗಡದ ಸರಕಾರಿ ನವೀನ ಕಾಲೇಜಿನ ಸಹಾಯಕ ಪ್ರೊ.ರಮ್ಯಾಶ್ ಅವರು ಕೈಗೊಂಡಿದ್ದ ‘ಗೊಂಡ ಬುಡಕಟ್ಟಿನ ಜೀವನೋಪಾಯಗಳು:ಮಂಗಲ್ನಾರ್ ಗ್ರಾಮದ ಅಧ್ಯಯನ ’ ವರದಿಯು ಬೆಟ್ಟುಮಾಡಿದೆ.
 
ರಾಮಾಯಣದಲ್ಲಿಯೂ ಗೊಂಡರನ್ನು ಉಲ್ಲೇಖಿಸಲಾಗಿದ್ದು,ಕ್ರಿ.ಶ.1300 ಮತ್ತು 1600ರ ನಡುವೆ ಗೊಂಡರ ನಾಲ್ಕು ರಾಜ್ಯಗಳು ಅಸ್ತಿತ್ವದಲ್ಲಿದ್ದವು. ಭಾರತದಲ್ಲಿ 1.2 ಕೋ.ಗೂ.ಅಧಿಕ ಗೊಂಡರಿದ್ದು,ಮಧ್ಯಪ್ರದೇಶ,ಮಹಾರಾಷ್ಟ್ರ,ಛತ್ತೀಸ್ಗಡ,ಒಡಿಶಾ,ತೆಲಂಗಾಣ ಮತ್ತು ಜಾರ್ಖಂಡ್ಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.

ನಮ್ಮ ಪ್ರೀತಿಪಾತ್ರರು ಮೃತರಾದಾಗ ಅವರ ಶವಗಳನ್ನು ಸುಡುವ ಬದಲು ದಫನ ಮಾಡುವ ನಿರ್ಧಾರವನ್ನು ಗೊಂಡರು ಸ್ವಾಗತಿಸಿದ್ದಾರೆ ಎಂದು ಸುದ್ದಿಗಾರರೊಂದಿಗೆ ಮಾತನಾಡಿದ ಗೊಂಡ ಆದಿವಾಸಿ ಚೈತರಾಮ ರಾಜ್ ಧುರ್ವೆ ಹೇಳಿದರು. ಧುರ್ವೆಯ ಬುಚಿಪಾಡಾ ಗ್ರಾಮಕ್ಕೆ ಹೊಂದಿಕೊಂಡಿರುವ ಛುಯ್ಯೆ,ಬನಮ್ಹೈದಾ ಮತ್ತು ಚಿಂಗ್ಲಡೈ ಅರಣ್ಯಗಳು ಸಮೃದ್ಧ ಜೀವವೈವಿಧ್ಯತೆಯನ್ನು ಹೊಂದಿದ್ದು, ಚಿರತೆ,ಕಾಡುಹಂದಿ ಮತ್ತು ಕರಡಿಗಳ ಆವಾಸಸ್ಥಾನಗಳಾಗಿವೆ.

ಶತಮಾನಗಳ ಹಿಂದೆ ‘ಮಿಠ್ಠಿ ಸಂಸ್ಕಾರ ’ಅಥವಾ ಶವಗಳನ್ನು ಹೂಳುವುದು ಗೊಂಡರಲ್ಲಿನ ಸಾಮಾನ್ಯ ಪದ್ಧತಿಯಾಗಿತ್ತು. ಇದರಿಂದ ಮೃತರ ಶವವು ಪಂಚಭೂತಗಳಲ್ಲಿ ಲೀನವಾಗುತ್ತದೆ ಎಂಬ ನಂಬಿಕೆ ಸಮುದಾಯದಲ್ಲಿದೆ. ಆದರೆ ಶವಗಳನ್ನು ಸುಡುವ ಪದ್ಧತಿಯನ್ನು ಗೊಂಡರು ಎಂದಿನಿಂದ ಆರಂಭಿಸಿದ್ದರು ಎನ್ನುವುದು ಗೊತ್ತಾಗಿಲ್ಲ. ಮಧ್ಯಯುಗದಲ್ಲಿ ಗೊಂಡ ಅರಸೊತ್ತಿಗೆಗಳು ಹಿಂದು ಸಮುದಾಯಗಳೊಂದಿಗೆ ಬದುಕುತ್ತ ಹಲವಾರು ಧಾರ್ಮಿಕ ಮತ್ತು ಸಾಂಸ್ಕೃತಿಕ ಪ್ರಭಾವಕ್ಕೊಳಗಾಗಿದ್ದಾಗ ಚಿತೆಯಲ್ಲಿ ದಹಿಸುವ ಹಿಂದು ಪದ್ಧತಿಯನ್ನು ಸಮುದಾಯವು ಅಪ್ಪಿಕೊಂಡಿರಬಹುದು ಎಂದು ಕೆಲವು ಗೊಂಡರು ನಂಬಿದ್ದಾರೆ.

ಕಳೆದೊಂದು ಶತಮಾನದಿಂದ ಬದುಕು ಬದಲಾಗುತ್ತಲೇ ಬಂದಿದೆ,ಆದರೆ ಹಿಂದುಗಳ ಸಾಂಪ್ರದಾಯಿಕ ಅಗ್ನಿಸಂಸ್ಕಾರ ಪದ್ಧತಿ ಈಗಲೂ ಸಾಮಾನ್ಯವಾಗಿದೆ. ಅಂತ್ಯಸಂಸ್ಕಾರಗಳಿಗಾಗಿ ವಾರ್ಷಿಕ ಆರು ಕೋಟಿ ಮರಗಳನ್ನು ಕಡಿಯಲಾಗುತ್ತಿದ್ದು,80 ಲ.ಟನ್ಗಳಷ್ಟು ಕಾರ್ಬನ್ ಡೈಯಾಕ್ಸೈಡ್ ಉತ್ಪಾದನೆಯಾಗುತ್ತದೆ. ಅಂತ್ಯಸಂಸ್ಕಾರದ ಬಳಿಕ ಐದು ಲಕ್ಷ ಟನ್ ಚಿತಾಭಸ್ಮವನ್ನು ನದಿಗಳಲ್ಲಿ ವಿಸರ್ಜಿಸಲಾಗುತ್ತದೆ.
   
ಇತ್ತೀಚಿನ ವರ್ಷಗಳಲ್ಲಿ ಅಂತ್ಯಸಂಸ್ಕಾರಕ್ಕೆ ಪರ್ಯಾಯ ಮಾರ್ಗವಾಗಿ ವಿದ್ಯುತ್ ವ್ಯವಸ್ಥೆಗಳನ್ನು ಹಲವಾರು ಸರಕಾರಗಳು ಮತ್ತು ಪರಿಸರವಾದಿ ಗುಂಪುಗಳು ಪ್ರೋತ್ಸಾಹಿಸತ್ತಲೇ ಬಂದಿವೆ.

ಕೃಪೆ: scroll.in

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News