×
Ad

ಅಗ್ಗದ ಪ್ರಚಾರದ ತಂತ್ರ: ಮಹಾರಾಷ್ಟ್ರ ಸಚಿವರ ವಿರುದ್ಧ ಅರ್ಜಿ ಸಲ್ಲಿಸಿದ ವಕೀಲೆಗೆ ಬಾಂಬೆ ಹೈಕೋರ್ಟ್ ತರಾಟೆ

Update: 2021-03-30 22:24 IST

 ಮುಂಬೈ,ಮಾ30: ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶಮುಖ್ ಹಾಗೂ ಮಾಜಿ ಮುಂಬೈ ಪೊಲೀಸ್ ವರಿಷ್ಠ ಪರಮ್ ಬೀರ್ ಸಿಂಗ್ ವಿರುದ್ಧ ಸಿಬಿಐ ತನಿಖೆಗೆ ಆಗ್ರಹಿಸಿ ನ್ಯಾಯವಾದಿಯೊಬ್ಬರು ಸಲ್ಲಿಸಿದ ಅರ್ಜಿಯ ಬಗ್ಗೆ ಬಾಂಬೆ ಹೈಕೋರ್ಟ್ ಮಂಗಳವಾರ ಖಾರವಾಗಿ ಪ್ರತಿಕ್ರಿಯಿಸಿದೆ. ಅಗ್ಗದ ಪ್ರಚಾರವನ್ನು ಗಿಟ್ಟಿಸಿಕೊಳ್ಳುವ ಉದ್ದೇಶದಿಂದ ಇಂತಹ ಅರ್ಜಿಗಳನ್ನು ಸಲ್ಲಿಸಲಾಗುತ್ತಿದೆ ಎಂದು ಅದು ಅಸಮಾಧಾನ ವ್ಯಕ್ತಪಡಿಸಿದೆ.

 ಅನಿಲ್ ದೇಶಮುಖ್ ವಿರುದ್ಧದ ಭ್ರಷ್ಟಾಚಾರ ಆರೋಪಗಳ ಕುರಿತು ತನಿಖೆ ನಡೆಸುವಂತೆ ಸಿಬಿಐ ಅಥವಾ ಇತರ ಯಾವುದೇ ಸ್ವತಂತ್ರ ಸಂಸ್ಥೆಗೆ ನಿರ್ದೇಶನ ನೀಡಬೇಕೆಂದು ಕೋರಿ ನ್ಯಾಯವಾದಿ ಜಯಶ್ರೀ ಪಾಟೀಲ್ ಸಲ್ಲಿಸಿದ ಅರ್ಜಿಯ ವಿಚಾರಣೆಯ ವೇಳೆ ನ್ಯಾಯಮೂರ್ತಿಗಳಾದ ಎಸ್.ಎಸ್.ಶಿಂಧೆ ಹಾಗೂ ಮನೀಶ್ ಪಿಟಾಲೆ ಅವರಿದ ನ್ಯಾಯಪೀಠ ಹೀಗೆ ಅಸಮಾಧಾನ ವ್ಯಕ್ತಪಡಿಸಿದೆ.

  ಮುಂಬೈಯಲ್ಲಿರುವ ಮುಕೇಶ್ ಅಂಬಾನಿಯವರ ನಿವಾಸದ ಸಮೀಪ ಸ್ಫೋಟಕಗಳು ತುಂಬಿದ್ದ ಎಸ್‌ಯುವಿ ವಾಹನ ಪತ್ತೆ, ವಾಹನದ ಮಾಲಕ ಮನ್‌ಸುಖ್ ಹಿರಾನಿಯ ಮೃತ್ಯು ಹಾಗೂ ಮುಂಬೈ ಪೊಲೀಸ್ ಅಧಿಕಾರಿ ವಝೆ ಬಂಧನ ಸೇರಿದಂತೆ ಇಡೀ ಪ್ರಕರಣದಲ್ಲಿ ಅನಿಲ್ ದೇಶಮುಖ್ ಹಾಗೂ ಪರಮ್ ಬೀರ್ ಸಿಂಗ್ ಕರ್ತವ್ಯಲೋಪ ಎಸಗಿದ್ದಾರೆಂದು ಜಯಶ್ರೀ ಪಾಟೀಲ್ ಕಳೆದ ವಾರ ಸಲ್ಲಿಸಿದ ಅರ್ಜಿಯಲ್ಲಿ ವಾದಿಸಿದ್ದರು

 ಈ ಪ್ರಕರಣದ ಕುರಿತಾಗಿ ಸ್ಥಳೀಯ ಪೊಲೀಸ್ ದೂರು ಸಲ್ಲಿರುವುದಾಗಿ ಜಯಶ್ರೀ ಗುರುವಾರ ಬಾಂಬೆ ಹೈಕೋರ್ಟ್‌ಗೆ ತಿಳಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಾಲಯವು, ಅಗ್ಗದ ಪ್ರಚಾರವನ್ನು ಪಡೆಯುವ ಉದ್ದೇಶದಿಂದ ಇಂತಹ ಅರ್ಜಿಗಳನ್ನು ಸಲ್ಲಿಸಲಾಗಿದೆಯೆಂಬುದು ನಮ್ಮ ಮೇಲ್ನೋಟದ ಅಭಿಪ್ರಾಯವಾಗಿದೆ ಎಂದು ನ್ಯಾಯಪೀಠ ತಿಳಿಸಿತು. ತನ್ನ ಈ ಅಭಿಪ್ರಾಯದ ಬಗ್ಗೆ ಜಯಶ್ರೀ ಪಾಟೀಲ್ ಅವರ ನಿಲುವು ಏನೆಂಬುದನ್ನು ತಾನು ತಿಳಿಯಬಯಸುವುದಾಗಿ ನ್ಯಾಯಪೀಠವು ತಿಳಿಸಿದೆ. ಸರಕಾರದ ಪರ ವಾದ ಮಂಡಿಸಿದ ಅಡ್ವೋಕೇಟ್ ಜನರಲ್ ಅಶುತೋಷ್ ಅವರು ತನ್ನ ಮೇಲಿನ ಆರೋಪಕ್ಕೆ ಸಂಬಂಧಿಸಿ ಪರಮ್‌ಬೀರ್ ಸಿಂಗ್ ಕೂಡಾ ಹೈಕೋರ್ಟ್ ಮೆಟ್ಟಲೇರಿದ್ದು, ಅದರ ಆಲಿಕೆ ಬುಧವಾರ ನಡೆಯಲಿದೆ ಎಂದು ತಿಳಿಸಿದರು.

 ನ್ಯಾಯವಾದಿ ಜಯಶ್ರೀ ಅವರ ಸಲ್ಲಿಸಿರುವ ಅರ್ಜಿಯ ಕರಡನ್ನು ಅತ್ಯಂತ ಕೆಟ್ಟದಾಗಿ ರಚಿಸಲಾಗಿದೆಯೆಂದು ಕುಂಭಕೋನಿ ಆಕ್ಷೇಪ ವ್ಯಕ್ತಪಡಿಸಿದ್ದರು.

 ಜಯಶ್ರೀ ಪಾಟೀಲ್ ಅವರು ತನ್ನ ಅರ್ಜಿಯಲ್ಲಿ ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶಮುಖ್ ಹಾಗೂ ಪರಮ್‌ಬೀರ್‌ಸಿಂಗ್ ಅವರ ನಡುವಿನ ಸಂಭಾಷಣೆಗಳನ್ನು ಮಾತ್ರವೇ ಮರುಸಲ್ಲಿಕೆ ಮಾಡಿದ್ದಾರೆಂದು ನ್ಯಾಯಪೀಠವು ಜಯಶ್ರೀ ಪಾಟೀಲ್ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News