ಉನ್ನತ ನ್ಯಾಯಾಂಗ ಹುದ್ದೆಗೆ ಭಾರತ ಮೂಲದ ಮಹಿಳೆಯನ್ನು ಆಯ್ಕೆ ಮಾಡಿದ ಜೋ ಬೈಡನ್

Update: 2021-03-31 03:47 GMT

ವಾಷಿಂಗ್ಟನ್: ಭಾರತ ಮೂಲದ ರೂಪಾ ರಂಗ ಪುಟ್ಟಗುಂಟ ಅವರನ್ನು ಫೆಡರಲ್ ಜಡ್ಜ್ ಆಗಿ ನೇಮಕ ಮಾಡುವ ಇಂಗಿತವನ್ನು ಅಮೆರಿಕದ ಅಧ್ಯಕ್ಷ ಜೋ ಬೈಡನ್ ಪ್ರಕಟಿಸಿದ್ದಾರೆ.

ಉನ್ನತ ನ್ಯಾಯಾಂಗ ಹುದ್ದೆಗಳಿಗೆ ಒಟ್ಟು 10 ಮಂದಿಯನ್ನು ಅಧ್ಯಕ್ಷರು ಆಯ್ಕೆ ಮಾಡಿದ್ದು, ಇವರಲ್ಲಿ ಆಫ್ರಿಕಾ ಮೂಲದ ಅಮೆರಿಕನ್ ಪ್ರಜೆ ಹಾಗೂ ಮುಸ್ಲಿಂ ಅಮೆರಿಕನ್ ಪ್ರಜೆ ಸೇರಿದ್ದಾರೆ.

ಫೆಡರಲ್ ಸರ್ಕ್ಯೂಟ್ ಮತ್ತು ಜಿಲ್ಲಾ ನ್ಯಾಯಾಲಯಗಳ ನ್ಯಾಯಾಧೀಶ ಹುದ್ದೆಗಳಿಗೆ 10 ಮಂದಿಯನ್ನು ಹಾಗೂ ಕೊಲಂಬಿಯಾ ಜಿಲ್ಲೆಯ ಉನ್ನತ ಕೋರ್ಟ್‌ಗೆ ಒಬ್ಬರನ್ನು ಅಧ್ಯಕ್ಷರು ನಾಮನಿರ್ದೇಶನ ಮಾಡಿದ್ದಾರೆ.

ಅಮೆರಿಕದ ಫೆಡರಲ್ ಬೆಂಚ್ ಅಮೆರಿಕ ಜನತೆಯ ಸಂಪೂರ್ಣ ವೈವಿಧ್ಯತೆಯನ್ನು ಬಿಂಬಿಸಬೇಕು ಎಂಬ ಅಧ್ಯಕ್ಷ ಬದ್ಧತೆಗೆ ಅನುಗುಣವಾಗಿ ಸೂಕ್ತ ಹಾಗೂ ಅರ್ಹರನ್ನು ವೃತ್ತಿ ಅನುಭವದ ಆಧಾರದಲ್ಲಿ ಆಯ್ಕೆ ಮಾಡಲಾಗಿದೆ ಎಂದು ಶ್ವೇತಭವನದ ಪ್ರಕಟಣೆ ಹೇಳಿದೆ.

ಸೆನೆಟ್ ಒಪ್ಪಿಗೆ ನೀಡಿದಲ್ಲಿ, ನ್ಯಾಯಮೂರ್ತಿ ಪುಟ್ಟಗುಂಟ ಅವರು, ಅಮೆರಿಕದ ಜಿಲ್ಲಾ ನ್ಯಾಯಾಧೀಶರಾಗಿ ಆಯ್ಕೆಯಾದ ಮೊಟ್ಟಮೊದಲ ಏಷ್ಯನ್ ಅಮೆರಿಕನ್ ಆ್ಯಂಡ್ ಫೆಸಿಫಿಕ್ ಐಲೆಂಡ್ (ಎಎಪಿಐ)ನ ಮಹಿಳೆ ಎನಿಸಿಕೊಳ್ಳಲಿದ್ದಾರೆ. ಇವರು ವಾಷಿಂಗ್ಟನ್ ಡಿಜಿ ಜಿಲ್ಲೆಯ ನ್ಯಾಯಾಧೀಶರಾಗಲಿದ್ದಾರೆ.

ಪ್ರಸ್ತುತ ಅವರು ಡಿ.ಸಿ. ರೆಂಟರ್ ಹೌಸಿಂಗ್ ಕಮಿಷನ್‌ನ ಆಡಳಿತಾತ್ಮಕ ನ್ಯಾಯಾಧೀಶರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ಕಮಿಷನ್‌ಗೆ 2019ರಲ್ಲಿ ಸೇರುವ ಮುನ್ನ 2013-19ರ ಅವಧಿಯಲ್ಲಿ ವಕೀಲರಾಗಿದ್ದ ಅವರು ಬಡ ಅಪರಾಧಿಗಳ ವಿಚಾರಣೆ ಹಾಗೂ ಮೇಲ್ಮನವಿ ವೇಳೆ ವಾದ ಮಂಡಿಸುತ್ತಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News