ಸಿಡಿಗಳ ನಡುವೆ ಸಿಡಿದ ಈಶ್ವರಪ್ಪ

Update: 2021-04-02 04:41 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಸಿಡಿ ರಾಜಕೀಯ ಸರಕಾರದೊಳಗಿರುವ ಭಿನ್ನಮತಗಳ ಸ್ಫೋಟಕ್ಕೆ ನೆಪವಾಗುತ್ತಿದೆ. ರಮೇಶ್ ಜಾರಕಿ ಹೊಳಿಯ ಕೊರಳಿಗೆ ಸಿಡಿಯ ಉರುಳು ಬಿಗಿಯಾಗುತ್ತಿದ್ದಂತೆಯೇ, ಸರಕಾರದೊಳಗೂ ಭಿನ್ನಮತದ ಧ್ವನಿ ಜೋರಾಗತೊಡಗಿದೆ. ಬಿಎಸ್‌ವೈ ನೇತೃತ್ವದ ಸರಕಾರ ಮೇ 2ರ ಒಳಗೆ ಇಲ್ಲವಾಗುತ್ತದೆ ಎಂದು ಬಸನಗೌಡ ಪಾಟೀಲ್ ಯತ್ನಾಳ್ ಅವರು ಹೇಳಿಕೆ ನೀಡಿರುವ ಬೆನ್ನಿಗೇ, ಸಚಿವ ಈಶ್ವರಪ್ಪ ಯಡಿಯೂರಪ್ಪ ಅವರ ವಿರುದ್ಧ ರಾಜ್ಯಪಾಲ ಮತ್ತು ವರಿಷ್ಠರಿಗೆ ದೂರು ನೀಡಿದ್ದಾರೆ. ‘ಮುಖ್ಯಮಂತ್ರಿ ಯಡಿಯೂರಪ್ಪ ಅವರು ನನ್ನ ಇಲಾಖೆಯ ವಿಚಾರಗಳಲ್ಲಿ ಕಾನೂನು ಮೀರಿ ಅನಗತ್ಯ ಹಸ್ತಕ್ಷೇಪ ಮಾಡುತ್ತಿದ್ದಾರೆ’ ಎನ್ನುವುದು ಅವರ ದೂರಿನ ಪ್ರಧಾನ ಅಂಶ. ‘ನನ್ನ ಇಲಾಖೆಯ ವಿಚಾರಗಳನ್ನು ನನ್ನ ಗಮನಕ್ಕೆ ತರದೆ ತೀರ್ಮಾನ ತೆಗೆದುಕೊಳ್ಳುತ್ತಿದ್ದಾರೆ. ಆರ್ಥಿಕ ಇಲಾಖೆ ಮುಖ್ಯಮಂತ್ರಿ ಅವರ ಕೈಯಲ್ಲಿದೆ. ಇಲಾಖೆಯ ಮಹತ್ವದ ಯೋಜನೆಗಳಿಗೆ ಒಪ್ಪಿಗೆ ನೀಡುತ್ತಿಲ್ಲ. ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ 1,200 ಕೋಟಿ ರೂ. ಮಂಜೂರಾಗಿದೆ. ಆದರೆ ಬಿಡುಗಡೆಗೆ ಅವರು ಅಡ್ಡಿಯಾಗಿದ್ದಾರೆ’ ಎಂದು ಆರೋಪಿಸಿದ್ದಾರೆ. ಹಾಗೆಯೇ ಸಾರ್ವಜನಿಕ ಹಣವನ್ನು ಮುಖ್ಯಮಂತ್ರಿ ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ ಎಂದೂ ದೂರಿದ್ದಾರೆ. ಬರೇ ಪಕ್ಷದ ವರಿಷ್ಠರಿಗೆ ಅವರು ದೂರನ್ನಿತ್ತಿದ್ದರೆ, ಪಕ್ಷದೊಳಗಿನ ವಿಚಾರವೆಂದು ಸುಮ್ಮನಿರಬಹುದಿತ್ತು. ಆದರೆ ಈಶ್ವರಪ್ಪ ಅವರು ರಾಜ್ಯಪಾಲರಿಗೆ ದೂರನ್ನಿತ್ತಿರುವುದರಿಂದ, ಆರೋಪಗಳಿಗೆ ಮಹತ್ವ ಬಂದಿದೆ. ಸ್ವತಃ ಮುಖ್ಯಮಂತ್ರಿಯೇ ಅಭಿವೃದ್ಧಿ ಕಾರ್ಯಗಳಿಗೆ ತೊಡಕಾಗಿದ್ದಾರೆ ಎನ್ನುವುದು ರಾಜ್ಯದ ಪಾಲಿಗೆ ಗಂಭೀರ ಆರೋಪವಾಗಿದೆ. ಈ ಆರೋಪಗಳಿಗೆ ಮುಖ್ಯಮಂತ್ರಿ ಸ್ಪಷ್ಟೀಕರಣ ನೀಡುವುದು ಅತ್ಯಗತ್ಯವಾಗಿದೆ.

ಇತ್ತೀಚೆಗಷ್ಟೇ, ಸಚಿವ ಮಾಧುಸ್ವಾಮಿ ಅವರು ಕೇಂದ್ರ ಸರಕಾರದ ಸರ್ವಾಧಿಕಾರಿ ನೀತಿಗಳ ವಿರುದ್ಧ ವಿಚಾರ ಸಂಕಿರಣವೊಂದರಲ್ಲಿ ಧ್ವನಿಯೆತ್ತಿದ್ದರು. ಸೂಕ್ತ ಅನುದಾನಗಳು ಬಿಡುಗಡೆಯಾಗದೇ ಇರುವುದರಿಂದ ರಾಜ್ಯದ ಅಭಿವೃದ್ಧಿಗೆ ತಡೆಯಾಗಿದೆ ಎಂದೂ ಆರೋಪಿಸಿದ್ದರು. ಅವರ ಆತಂಕ, ಕಳವಳ ರಾಷ್ಟ್ರಮಟ್ಟದಲ್ಲಿ ಚರ್ಚೆಯಾಗಿತ್ತು. ಆ ಆರೋಪಗಳಲ್ಲಿ ಹುರುಳಿತ್ತು. ಹಲವು ರಾಜ್ಯಗಳು ಈಗಾಗಲೇ ಕೇಂದ್ರ ಸರಕಾರದ ಸರ್ವಾಧಿಕಾರದ ವಿರುದ್ಧ ಧ್ವನಿಯೆತ್ತಿವೆ. ರಾಜ್ಯದಲ್ಲಿ ಬಿಜೆಪಿ ಸರಕಾರ ಅಸ್ತಿತ್ವದಲ್ಲಿರುವುದರಿಂದ, ಕೇಂದ್ರದ ವಿರುದ್ಧ ಧ್ವನಿಯೆತ್ತಲಾರದ ಸ್ಥಿತಿಯಿದೆ. ಮಾಧುಸ್ವಾಮಿಯವರು ತಮ್ಮ ಹೇಳಿಕೆಯನ್ನು ಎರಡು ದಿನಗಳ ಬಳಿಕ ಹಿಂದೆಗೆದುಕೊಂಡರು. ವಿಚಾರಸಂಕಿರಣವೊಂದರಲ್ಲಿ ನೀಡಿದ ವೈಯಕ್ತಿಕ ಅಭಿಪ್ರಾಯ ಅದಾಗಿತ್ತು, ಮೋದಿ ಸರಕಾರದ ವಿರುದ್ಧ ಯಾವ ತಕರಾರು ಇಲ್ಲ ಎಂದು ಹೇಳಿಕೆಗೆ ಸೆಗಣಿ ಸಾರಿಸಿದರು. ಆದರೆ ಈಶ್ವರಪ್ಪ ಅವರ ಆರೋಪ ತುಸು ಭಿನ್ನವಾದುದು. ತನ್ನ ಇಲಾಖೆಯ ಅಭಿವೃದ್ಧಿ ಕಾರ್ಯಗಳಿಗೆ ಮುಖ್ಯಮಂತ್ರಿ ಯಡಿಯೂರಪ್ಪನವರು ತೊಡಕಾಗಿದ್ದಾರೆ ಎನ್ನುವುದು ಅವರ ಸಮಸ್ಯೆ. ಕೇಂದ್ರದ ಕುರಿತಂತೆ ಅವರಿಗೆ ಯಾವುದೇ ಅಸಮಾಧಾನಗಳಿಲ್ಲ. ಯಡಿಯೂರಪ್ಪ ಮತ್ತು ಈಶ್ವರಪ್ಪ ಅವರ ನಡುವಿನ ರಾಜಕೀಯ ಹಗ್ಗ ಜಗ್ಗಾಟ ಇಂದು ನಿನ್ನೆಯದಲ್ಲ. ಸಮಯ, ಸಂದರ್ಭ ಸಿಕ್ಕಿದಾಗಲೆಲ್ಲ ಈಶ್ವರಪ್ಪ ಅವರು ಯಡಿಯೂರಪ್ಪರ ಮೇಲೆ ದಾಳಿ ನಡೆಸುತ್ತಾ ಬಂದಿದ್ದಾರೆ. ಇದೀಗ ಸಿಡಿ ಹಗರಣದಿಂದಾಗಿ ಸರಕಾರ ಸಂಕಷ್ಟದಲ್ಲಿರುವಾಗಲೇ, ಈಶ್ವರಪ್ಪ ಬಗಲಲ್ಲಿದ್ದ ದೊಣ್ಣೆ ಎತ್ತಿ ಬೀಸಿದ್ದಾರೆ.

ಒಂದನ್ನು ಗಮನಿಸಬೇಕಾಗಿದೆ. ಯತ್ನಾಳ್ ಅಥವಾ ಈಶ್ವರಪ್ಪನವರಿಗೆ ಬಿಜೆಪಿ ಸರಕಾರವನ್ನು ಬೀಳಿಸುವ ಉದ್ದೇಶವಿಲ್ಲ. ಬದಲಿಗೆ ಯಡಿಯೂರಪ್ಪರನ್ನು ಮುಖ್ಯಮಂತ್ರಿ ಸ್ಥಾನದಿಂದ ಇಳಿಸುವ ಉದ್ದೇಶ ಎದ್ದು ಕಾಣುತ್ತಿದೆ. ಒಂದು ಕಾಲದಲ್ಲಿ ಯತ್ನಾಳ್ ಯಡಿಯೂರಪ್ಪ ಅವರಿಗೆ ಸಮೀಪವಿದ್ದರು. ಕೇಂದ್ರ ಸರಕಾರ ನೆರೆ ಪರಿಹಾರವನ್ನು ನೀಡಲು ಸತಾಯಿಸಿದಾಗ ಯಡಿಯೂರಪ್ಪ ಪರವಾಗಿ ಧ್ವನಿಯೆತ್ತಿದವರು ಯತ್ನಾಳ್. ಅದೇ ಯತ್ನಾಳ್ ಅವರು ಇಂದು, ‘ಬಿಜೆಪಿ ಸರಕಾರ ಐದು ವರ್ಷ ಮುಂದುವರಿಯುತ್ತದೆ. ಆದರೆ ಯಡಿಯೂರಪ್ಪ ಸರಕಾರ ಮೇ 2ಕ್ಕೆ ಕೊನೆಯಾಗುತ್ತದೆ’ ಎಂದು ಭವಿಷ್ಯ ಹೇಳಿದ್ದಾರೆ. ಅಂದರೆ, ಯಡಿಯೂರಪ್ಪ ಅವರನ್ನು ಕೆಳಗಿಳಿಸುವ ಆರೆಸ್ಸೆಸ್‌ನ ಸಂಚಿನ ಮುಂದುವರಿದ ಭಾಗ ಇದಾಗಿದೆ. ರಮೇಶ್ ಜಾರಕಿಹೊಳಿ ಸೇರಿದಂತೆ, ವಿವಿಧ ಪಕ್ಷಗಳ ಅನರ್ಹ ಶಾಸಕರೆಲ್ಲರೂ ಯಡಿಯೂರಪ್ಪ ಅವರನ್ನು ನಂಬಿ ಬಂದವರು. ಸರಕಾರ ರಚನೆಯ ಹಿಂದೆ ಈ ಅನರ್ಹ ಶಾಸಕರ ಪಾತ್ರ ದೊಡ್ಡದಿದೆ. ಯಡಿಯೂರಪ್ಪ ಅವರೇ ಮುಖ್ಯಮಂತ್ರಿಯಾಗುವುದರ ಹಿಂದೆಯೂ ಈ ಶಾಸಕರ ಕೊಡುಗೆಯಿದೆ. ಅನರ್ಹ ಶಾಸರನ್ನು ಬಳಸಿ ಎಸೆಯುವ ಯತ್ನ ಬಿಜೆಪಿಯೊಳಗೆ ನಡೆದಾಗ ಅದನ್ನು ವಿರೋಧಿಸಿ ಕಟ್ಟ ಕಡೆಯವರೆಗೂ ಅವರ ಜೊತೆಗೆ ಯಡಿಯೂರಪ್ಪ ನಿಂತರು. ಇದೀಗ ಸಿಡಿ ಪ್ರಕರಣ ಯಡಿಯೂರಪ್ಪರ ಸರಕಾರವನ್ನು ಅಲುಗಾಡಿಸುತ್ತಿರುವಾಗ, ವಿರೋಧಿ ಗುಂಪುಗಳು ಮತ್ತೆ ಒಂದಾಗಿದ್ದಾರೆ. ಜಾರಕಿಹೊಳಿ ಸಿಡಿಯ ಹಿಂದೆ ಡಿಕೆಶಿ, ಕುಮಾರಸ್ವಾಮಿ ಗುಂಪುಗಳ ಪಾತ್ರ ಎಷ್ಟಿವೆಯೋ, ಯಡಿಯೂರಪ್ಪ ವಿರೋಧಿ ಗುಂಪುಗಳ ಪಾತ್ರವೂ ಅಷ್ಟೇ ಇದೆ ಎಂದು ಭಾವಿಸಬೇಕಾಗುತ್ತದೆ.

ಇದರ ಬೆನ್ನಿಗೇ, ಆರೋಪಿ ಜಾರಕಿಹೊಳಿಯ ಪರವಾಗಿ ಸರಕಾರ ಸಿಟ್ ತನಿಖೆಗೆ ಒತ್ತಡ ಹೇರುತ್ತಿದೆ ಎಂದು ಸಂತ್ರಸ್ತೆಯ ವಕೀಲರು ಆರೋಪ ಮಾಡಿದ್ದಾರೆ. ಸಿಟ್ ತನಿಖಾಧಿಕಾರಿಗಳು ಆರೋಪಿಯನ್ನು ರಕ್ಷಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದೂ ಸಾಮಾಜಿಕ ಮಾಧ್ಯಮಗಳಲ್ಲಿ ದೂರಿದ್ದಾರೆ. ಸ್ವತಃ ಸಂತ್ರಸ್ತೆಯೇ ಬಂದು ಹೇಳಿಕೆ ನೀಡಿದ ಬಳಿಕವೂ ಜಾರಕಿಹೊಳಿ ಬಂಧನವಾಗಿಲ್ಲ. ಬದಲಿಗೆ, ಸಂತ್ರಸ್ತೆಯ ಪೋಷಕರನ್ನು ಮುಂದಿಟ್ಟು ಜಾರಕಿಹೊಳಿಯನ್ನು ರಕ್ಷಿಸುವ ಪ್ರಯತ್ನ ನಡೆಯುತ್ತಿದೆ. ತನ್ನ ಮೇಲೆ ಅತ್ಯಾಚಾರ ನಡೆದಿದೆಯೋ ಇಲ್ಲವೋ ಎನ್ನುವುದನ್ನು ಹೇಳಬೇಕಾಗಿರುವುದು ಸಂತ್ರಸ್ತೆಯೇ ಹೊರತು, ಈ ಘಟನೆಯಲ್ಲಿ ಯಾವ ರೀತಿಯಲ್ಲೂ ಭಾಗಿಯಾಗದ ಆಕೆಯ ಪೋಷಕರಲ್ಲ. ಸಂತ್ರಸ್ತೆ ನಾಪತ್ತೆಯಾಗಿದ್ದರೆ ಪೋಷಕರ ಮಾತುಗಳಿಗೆ ಬೆಲೆಯಿತ್ತೇನೋ. ಆದರೆ ತನ್ನದೇ ವಕೀಲರ ಜೊತೆಗೆ ನ್ಯಾಯಾಲಯದ ಮುಂದೆ, ಸಿಟ್ ಮುಂದೆ ಸಂತ್ರಸ್ತೆ ಹೇಳಿಕೆ ನೀಡಿರುವಾಗ, ಜಾರಕಿಹೊಳಿ ತನ್ನನ್ನು ತಾನು ಏನೆಂದು ಸಮರ್ಥಿಸಿಕೊಳ್ಳುತ್ತಾರೆ? ಸಂತ್ರಸ್ತ ಯುವತಿ ಸಿಟ್ ಮುಂದೆ ಹಾಜರಾಗಿ ಹೇಳಿಕೆ ನೀಡಿರುವುದರಿಂದ, ತನಿಖೆಗೆ ಪೂರಕವಾಗಿ ಜಾರಕಿ ಹೊಳಿ ಅವರನ್ನು ತಂಡ ವಶಕ್ಕೆ ತೆಗೆದುಕೊಳ್ಳಬೇಕಾಗಿತ್ತು. ಆದರೆ ಈವರೆಗೆ ಅಂತಹ ಯಾವುದೇ ಕಾರ್ಯಾಚರಣೆ ನಡೆದಿಲ್ಲ.

ಯಡಿಯೂರಪ್ಪ ಅತ್ಯಂತ ಅಸಹಾಯಕ ಸ್ಥಿತಿಯಲ್ಲಿದ್ದಾರೆ. ಒಂದೆಡೆ ಪಕ್ಷದೊಳಗಿಂದಲೇ ಜಾರಕಿ ಹೊಳಿಯ ವಿರುದ್ಧ ಕ್ರಮ ತೆಗೆದುಕೊಳ್ಳಲು ಒತ್ತಡಗಳು ಬರುತ್ತಿವೆ. ಅವರ ವಿರುದ್ಧ ಕ್ರಮ ತೆಗೆದುಕೊಂಡರೆ, ಅದು ಸರಕಾರದ ಮೇಲೆ ಒಂದಲ್ಲ ಒಂದು ರೀತಿಯಲ್ಲಿ ಪರಿಣಾಮ ಬೀರುತ್ತದೆ. ಒಂದು ವೇಳೆ ಜಾರಕಿಹೊಳಿಯ ಬಂಧನವಾಗದಿದ್ದರೆ ಆಗಲೂ ಅವರು ಟೀಕೆ, ವಿರೋಧಗಳನ್ನು ಎದುರಿಸಬೇಕಾಗುತ್ತದೆ. ಜೊತೆಗೆ, ಇನ್ನಷ್ಟು ಸಿಡಿಗಳಿವೆ ಎನ್ನುವ ಬೆದರಿಕೆಯೂ ನೆತ್ತಿಯ ಮೇಲೆ ಕತ್ತಿಯಂತೆ ತೂಗುತ್ತಿದೆ. ವಿರೋಧ ಪಕ್ಷಗಳೂ ಸರಕಾರದ ವಿರುದ್ಧ ಮುಗಿ ಬಿದ್ದಿವೆ. ಇಂತಹ ಸಂದರ್ಭದಲ್ಲಿ ಈಶ್ವರಪ್ಪ ಅವರು ಮುಖ್ಯಮಂತ್ರಿಯ ವಿರುದ್ಧ ರಾಜ್ಯಪಾಲರಿಗೆ ದೂರು ನೀಡಿರುವುದು, ಸರಕಾರ ಉರುಳಿಸುವ ಸಂಚಿನ ಒಂದು ಮಹತ್ವದ ಹಂತವಾಗಿದೆ. ಈ ನಿಟ್ಟಿನಲ್ಲಿ ಯತ್ನಾಳ್ ಅವರ ಮೇ 2ರ ಗಡುವು ರಾಜ್ಯದ ರಾಜಕೀಯದ ಗತಿಯನ್ನು ಬದಲಿಸುತ್ತದೆಯೇ ಎನ್ನುವುದನ್ನು ಕಾದು ನೋಡಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News