ಕಾಶ್ಮೀರ: ನಾಪತ್ತೆಯಾದ ಸೈನಿಕನಿಗಾಗಿ 8 ತಿಂಗಳಿಂದ ನೆಲ ಅಗೆಯುತ್ತಿರುವ ತಂದೆ

Update: 2021-04-01 16:23 GMT
ಫೋಟೊ ಕೃಪೆ: NDTV

ಶ್ರೀನಗರ, ಎ.1: ಉಗ್ರರಿಂದ ಅಪಹರಿಸಲ್ಪಟ್ಟ ಬಳಿಕ ನಾಪತ್ತೆಯಾಗಿರುವ ಯುವ ಸೈನಿಕನ ಮೃತದೇಹಕ್ಕಾಗಿ ಆತನ ತಂದೆ ಕಳೆದ 8 ತಿಂಗಳಿಂದ ನೆಲ ಅಗೆದು ಹುಡುಕುತ್ತಿರುವ ವಿದ್ಯಮಾನ ಜಮ್ಮು ಕಾಶ್ಮೀರದಲ್ಲಿ ವರದಿಯಾಗಿದೆ.

ಶಾಕಿರ್ ಮನ್ಸೂರ್ ಎಂಬ ಯುವಕ ಟೆರಿಟೋರಿಯಲ್ ಆರ್ಮಿ(ಹೋಂಗಾರ್ಡ್ ರೀತಿಯ ಎರಡನೇ ಹಂತದ ಭದ್ರತಾಪಡೆ)ಯಲ್ಲಿ ಸೈನಿಕನಾಗಿ ಕಾರ್ಯನಿರ್ವಹಿಸುತ್ತಿದ್ದ. ಕಳೆದ ಆಗಸ್ಟ್ 2ರಂದು ಈತನನ್ನು ಉಗ್ರರು ಅಪಹರಿಸಿದ್ದರು. ಶಾಕಿರ್ ಪ್ರಯಾಣಿಸುತ್ತಿದ್ದ ವಾಹನ ಬೆಂಕಿಹಚ್ಚಲ್ಪಟ್ಟ ಸ್ಥಿತಿಯಲ್ಲಿ ಮರುದಿನ ಕುಲ್ಗಾಂವ್‌ನಲ್ಲಿ ಪತ್ತೆಯಾಗಿತ್ತು ಮತ್ತು ಶಾಕಿರ್‌ನ ರಕ್ತಸಿಕ್ತ ಬಟ್ಟೆ ಲಧೂರಾ ಎಂಬಲ್ಲಿ ದೊರಕಿತ್ತು. ‘ಮನೆಯಿಂದ ತೆರಳಿ ಕೆಲ ಗಂಟೆಯ ಬಳಿಕ ಸ್ನೇಹಿತರೊಂದಿಗೆ ತೆರಳುತ್ತಿರುವುದಾಗಿ ಮತ್ತು ಇದನ್ನು ಸೇನೆಗೆ ತಿಳಿಸಬಾರದೆಂದು ಶಾಕಿರ್ ಫೋನ್ ಮಾಡಿದ್ದ. ಆದರೆ ಆತನನ್ನು ಅಪಹರಿಸಿದ್ದವರು ಆ ರೀತಿ ಆತನಿಂದ ಹೇಳಿಸಿದ್ದರು’ ಎಂದು ಶಾಕಿರ್‌ನ ತಂದೆ ಮನ್ಸೂರ್ ಅಹ್ಮದ್ ಹೇಳಿದ್ದಾರೆ.

ಈ ಮಧ್ಯೆ, ತನ್ನ ಕನಸಿನಲ್ಲಿ ಬಂದ ಶಾಕಿರ್ ‘ರಕ್ತಸಿಕ್ತ ಬಟ್ಟೆ ದೊರೆತ ಸ್ಥಳದಲ್ಲೇ ತನ್ನ ಮೃತದೇಹವನ್ನು ಸಮಾಧಿ ಮಾಡಲಾಗಿದೆ’ ಎಂದು ತಿಳಿಸಿರುವುದಾಗಿ ಅಹ್ಮದ್ ಸೋದರ ಸೊಸೆ ಹೇಳಿದ್ದಾರೆ. ತಕ್ಷಣ ನೆರೆಹೊರೆಯವರಲ್ಲಿ ಈ ವಿಷಯ ತಿಳಿಸಿದ ಅಹ್ಮದ್, ಸುಮಾರು 30 ಜನರೊಂದಿಗೆ ಲಧೂರಾಕ್ಕೆ ತೆರಳಿ ಅಲ್ಲಿ ಶಾಕಿರ್‌ನ ಬಟ್ಟೆ ದೊರೆತ ಸ್ಥಳದಲ್ಲಿ ನೆಲ ಅಗೆಯಲು ಆರಂಭಿಸಿದ್ದಾರೆ. ‘ಹೀಗೆ ಎಂಟು ತಿಂಗಳಿನಿಂದ ಅಗೆಯುತ್ತಿದ್ದೇನೆ. ಆದರೆ ಮಗನ ಮೃತದೇಹ ಪತ್ತೆಯಾಗಿಲ್ಲ. ಮಗನ ಅಂತ್ಯಸಂಸ್ಕಾರ ಸೂಕ್ತ ರೀತಿಯಲ್ಲಿ ಮಾಡದೆ ತನಗೆ ನಿದ್ದೆ ಬರುವುದಿಲ್ಲ. ಇದೀಗ ಇಡೀ ಗ್ರಾಮದವರೇ ನನ್ನ ಬೆಂಬಲಕ್ಕೆ ನಿಂತಿದ್ದು ಅವರೂ ಅಗೆಯುವ ಕೆಲಸಕ್ಕೆ ಕೈಜೋಡಿಸಿದ್ದಾರೆ’ ಎಂದು ಅಹ್ಮದ್ ಹೇಳಿದ್ದಾರೆ.

ಶಾಕಿರ್‌ನನ್ನು ಅಪಹರಿಸಿದ್ದು ಯಾರೆಂದು ತನಗೆ ತಿಳಿದಿದೆ. ಇದರಲ್ಲಿ ಓರ್ವ ಪೊಲೀಸರ ವಿರುದ್ಧ ಬಂಡೆದ್ದು ಬಿಜ್‌ಬೆಹಾರ ಪೊಲೀಸ್ ಶಿಬಿರದಿಂದ 4 ಎಕೆ ರೈಫಲ್ಸ್ ಸಹಿತ ಓಡಿಹೋದವ. ಈತ ತನ್ನದೇ ಆದ ಸಂಘಟನೆ ಸ್ಥಾಪಿಸಿ ಭಯೋತ್ಪಾದನಾ ಕೃತ್ಯದಲ್ಲಿ ತೊಡಗಿದ್ದಾನೆ ಎಂದು ಅಹ್ಮದ್ ಹೇಳಿದ್ದಾರೆ. ಶಾಕಿರ್ ನಾಪತ್ತೆಯಾದ ಬಳಿಕ ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರವಾದ ಆಡಿಯೊ ತುಣುಕಿನಲ್ಲಿ ಉಗ್ರರ ಸಂಘಟನೆಯೊಂದು ಅಪಹರಣದ ಹೊಣೆ ಹೊತ್ತುಕೊಂಡಿತ್ತು. ಸ್ಥಳೀಯ ಉಗ್ರರ ಮೃತದೇಹಗಳನ್ನು ಕುಟುಂಬದವರಿಗೆ ಹಸ್ತಾಂತರಿಸಬಾರದು ಎಂಬ ಸರಕಾರದ ನಿಯಮಕ್ಕೆ ಪ್ರತೀಕಾರವಾಗಿ ಶಾಕಿರ್‌ನ ಮೃತದೇಹವನ್ನು ಕುಟುಂಬದವರಿಗೆ ಹಸ್ತಾಂತರಿಸುವುದಿಲ್ಲ ಎಂದು ಉಗ್ರರ ಹೇಳಿಕೆಯಲ್ಲಿ ತಿಳಿಸಲಾಗಿತ್ತು.

ಪೊಲೀಸರ ದಾಖಲೆಯಲ್ಲಿ ಶಾಕಿರ್ ನಾಪತ್ತೆಯಾಗಿರುವುದಾಗಿ ಉಲ್ಲೇಖಿಸಲಾಗಿದೆ. ಸಾವನ್ನಪ್ಪಿರುವ ಬಗ್ಗೆ ಉಲ್ಲೇಖಿಸಿಲ್ಲ. ಶಾಕಿರ್‌ನನ್ನು ಹತ್ಯೆ ಮಾಡಿದ ಬಳಿಕ ಎಲ್ಲಿ ಸಮಾಧಿ ಮಾಡಲಾಗಿದೆ ಎಂಬ ಬಗ್ಗೆ ಯಾವ ಮಾಹಿತಿಯೂ ದೊರೆತಿಲ್ಲ. ಸ್ಥಳೀಯ ಪೊಲೀಸರು ಹುಡುಕಾಟ ಮುಂದುವರಿಸಿದ್ದಾರೆ ಎಂದು ಜಮ್ಮು ಕಾಶ್ಮೀರ ಪೊಲೀಸ್ ಮಹಾನಿರ್ದೇಶಕ ದಿಲ್‌ಬಾಗ್ ಸಿಂಗ್ ಹೇಳಿದ್ದಾರೆ. ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಅಹ್ಮದ್ ‘ಶಾಕಿರ್ ದೇಶಕ್ಕಾಗಿ ಪ್ರಾಣ ಅರ್ಪಿಸಿದ ಯೋಧ. ಆತನನ್ನು ಹುತಾತ್ಮ ಯೋಧ ಎಂದು ಘೋಷಿಸಬೇಕು ಎಂದು ಆಗ್ರಹಿಸಿದ್ದಾರೆ. ಆತನ ಪ್ರಾಣ ರಕ್ಷಿಸಲು ವಿಫಲವಾದ ಅವರು (ಭದ್ರತಾ ಪಡೆ) ಮಗನ ಮೃತದೇಹ ಪತ್ತೆಹಚ್ಚಲೂ ವಿಫಲವಾಗಿದ್ದಾರೆ. ಆತನನ್ನು ಹುತಾತ್ಮ ಯೋಧ ಎಂದು ಘೋಷಿಸಬೇಕೆಂಬುದು ಸರಕಾರಕ್ಕೆ ಮನವಿ ಮಾಡಿಕೊಳ್ಳುವುದಾಗಿ ಅಹ್ಮದ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News