ಚೆನ್ನೈ: ಕೊರೋನ ಸೋಂಕಿಗೆ ಬಲಿಯಾದ ವೈದ್ಯರ ಮೃತದೇಹದ ಮರು ಅಂತ್ಯಕ್ರಿಯೆಗೆ ಹೈಕೋರ್ಟ್ ಆದೇಶ

Update: 2021-04-01 16:41 GMT

ಚೆನ್ನೈ, ಎ.1: ಕಳೆದ ವರ್ಷ ಕೊರೋನ ಸೋಂಕಿನಿಂದ ಮೃತಪಟ್ಟ ಬಳಿಕ ನಗರದ ಸ್ಮಶಾನದಲ್ಲಿ ಸಮಾಧಿ ಮಾಡಲಾಗಿರುವ ವೈದ್ಯರೊಬ್ಬರ ಮೃತದೇಹವನ್ನು ಹೊರತೆಗೆದು ವಿಧಿವತ್ತಾಗಿ ಅಂತ್ಯಸಂಸ್ಕಾರ ನಡೆಸಲು ಅವಕಾಶ ನೀಡಬೇಕೆಂದು ಮದ್ರಾಸ್ ಹೈಕೋರ್ಟ್ ಗುರುವಾರ ಅಧಿಕಾರಿಗಳಿಗೆ ಸೂಚಿಸಿದೆ.

ಚೆನ್ನೈಯ ಖ್ಯಾತ ವೈದ್ಯ ಸೈಮನ್ ಹರ್ಕ್ಯುಲಸ್ ಕೊರೋನ ಸೋಂಕಿನಿಂದ ಕಳೆದ ವರ್ಷದ ಎಪ್ರಿಲ್ 19ರಂದು ಮೃತರಾಗಿದ್ದರು. ಕಿಲ್‌ಪಾಕ್ ಪ್ರದೇಶದ ದಫನಭೂಮಿಯಲ್ಲಿ ಮೃತದೇಹವನ್ನು ಸಮಾಧಿ ಮಾಡಲು ನಗರಪಾಲಿಕೆ ಅಧಿಕಾರಿಗಳು ಅನುಮತಿ ನೀಡಿದ್ದರು. ಆದರೆ ಕೊರೋನ ಸೋಂಕು ಹರಡುತ್ತದೆ ಎಂಬ ಆತಂಕ ಸೂಚಿಸಿದ ಸ್ಥಳೀಯರು ಅಲ್ಲಿ ಮೃತದೇಹ ಸಮಾಧಿಗೆ ವಿರೋಧ ಸೂಚಿಸಿದ್ದರಿಂದ ಮೃತದೇಹವಿದ್ದ ಆ್ಯಂಬುಲೆನ್ಸ್ ಅಣ್ಣಾನಗರ ದಫನಭೂಮಿಗೆ ತೆರಳಿತ್ತು. ಆದರೆ ಅಲ್ಲಿ ಸ್ಥಳೀಯರು ರಸ್ತೆ ತಡೆ ನಡೆಸಿ ತೀವ್ರ ಪ್ರತಿಭಟನೆ ಮಾಡಿದರಲ್ಲದೆ ಆ್ಯಂಬುಲೆನ್ಸ್ ಮೇಲೆ ಕಲ್ಲು ಮತ್ತು ದೊಣ್ಣೆಯಿಂದ ಆಕ್ರಮಣ ನಡೆಸಿದರು.

ಘಟನೆಯಲ್ಲಿ ತೀವ್ರ ಗಾಯಗೊಂಡ ಆ್ಯಂಬುಲೆನ್ಸ್ ಚಾಲಕ, ನಗರಪಾಲಿಕೆ ಸಿಬ್ಬಂದಿ ಮತ್ತು ಅಧಿಕಾರಿ ಆ್ಯಂಬುಲೆನ್ಸ್ ಸಹಿತ ಮೃತದೇಹವನ್ನು ಅಲ್ಲೇ ಬಿಟ್ಟು ಸುರಕ್ಷಿತ ಸ್ಥಳಕ್ಕೆ ಓಡಿಹೋಗಿದ್ದರು. ಬಳಿಕ ರಾತ್ರಿ ವೇಳೆ ಪಿಪಿಇ ಕಿಟ್ ಧರಿಸಿ ಪೊಲೀಸರ ಬೆಂಗಾವಲಿನಲ್ಲಿ ಸ್ಥಳಕ್ಕೆ ಬಂದ ಸೈಮನ್‌ರ ಸಹೋದ್ಯೋಗಿಗಳು ತಾವೇ ಗುಂಡಿ ತೆಗೆದು ಸೈಮನ್ ಮೃತದೇಹವನ್ನು ಸಮಾಧಿ ಮಾಡಿದ್ದರು. ಹಲ್ಲೆ ಘಟನೆಗೆ ಸಂಬಂಧಿಸಿ ಪೊಲೀಸರು 22 ಮಂದಿಯನ್ನು ಬಂಧಿಸಿದ್ದರು. ಇದೀಗ, ಮೃತದೇಹವನ್ನು ಹೊರತೆಗೆದು ವಿಧಿವತ್ತಾಗಿ ಅಂತ್ಯಸಂಸ್ಕಾರಕ್ಕೆ ಅವಕಾಶ ನೀಡಬೇಕೆಂದು ಕೋರಿ ಮೃತ ವೈದ್ಯರ ಪತ್ನಿ ಆನಂದಿ ಸೈಮನ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಗುರುವಾರ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್‌ನ ನ್ಯಾಯಪೀಠ, ಕೊರೋನ ಸೋಂಕಿನ ವಿರುದ್ಧದ ಮಾರ್ಗಸೂಚಿಯನ್ನು ಪಾಲಿಸಿ, ಮೃತದೇಹವನ್ನು ಹೊರತೆಗೆದು ವೈದ್ಯರ ಕುಟುಂಬದವರು ಸೂಕ್ತ ರೀತಿಯಲ್ಲಿ ಅಂತ್ಯಸಂಸ್ಕಾರ ನಡೆಸುವುದಕ್ಕೆ ಅವಕಾಶ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದೆ.

ಹೂತಿರುವ ಮೃತದೇಹ ಹೊರತೆಗೆಯುವ ಪ್ರಕ್ರಿಯೆ ಚೆನ್ನೈ ಮಹಾನಗರಪಾಲಿಕೆ ಸೂಚಿಸುವ ಆರೋಗ್ಯ ಅಧಿಕಾರಿಯ ಉಸ್ತುವಾರಿಯಲ್ಲಿ ನಡೆಯಬೇಕು. ಕಿಲ್‌ಪಾಕ್ ಮತ್ತು ವೆಳಂಗಾಡು ದಫನ ಭೂಮಿಯಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಬೇಕು ಎಂದು ನ್ಯಾಯಪೀಠ ಸೂಚಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News