ಪಶ್ಚಿಮಬಂಗಾಳ ವಿಧಾನ ಸಭೆ ಚುನಾವಣೆ: ಕೇಶಪುರದಲ್ಲಿ ಪತ್ರಕರ್ತರ ವಾಹನದ ಮೇಲೆ ದಾಳಿ

Update: 2021-04-01 17:01 GMT

ಕೋಲ್ಕತಾ, ಎ. 1: ಪತ್ರಕರ್ತರ ವಾಹನದ ಮೇಲೆ ಅಪರಿಚಿತ ದುಷ್ಕರ್ಮಿಗಳ ಗುಂಪೊಂದು ಇಟ್ಟಿಗೆ ಹಾಗೂ ಬಿದಿರಿನ ದೊಣ್ಣೆಗಳಿಂದ ದಾಳಿ ನಡೆಸಿದ ಘಟನೆ ಪಶ್ಚಿಮಬಂಗಾಳದ ಪಶ್ಚಿಮ ಮಿಡ್ನಾಪುರ ಜಿಲ್ಲೆಯ ಕೇಶಪುರದಲ್ಲಿ ಗುರುವಾರ ನಡೆದಿದೆ.

ಸ್ಥಳೀಯ ಟಿ.ವಿ. ವಾಹಿನಿ ಪ್ರಸಾರ ಮಾಡಿದ ಘಟನೆಯ ದೃಶ್ಯಾವಳಿಯಲ್ಲಿ ದುಷ್ಕರ್ಮಿಗಳು ವಾಹನವನ್ನು ಇಟ್ಟಿಗೆಯಿಂದ ದಾಳಿ ನಡೆಸುತ್ತಿರುವುದು ಹಾಗೂ ಕಿಟಕಿಯ ಗಾಜುಗಳನ್ನು ಒಡೆಯುತ್ತಿರುವುದು ಕಂಡು ಬಂದಿದೆ. ದೊಣ್ಣೆಗಳನ್ನು ಹಿಡಿದುಕೊಂಡ ವ್ಯಕ್ತಿಗಳು ವಾಹನವನ್ನು ಅಟ್ಟಿಸಿಕೊಂಡ ಹೋಗುತ್ತಿರುವುದು ಹಾಗೂ ಇಟ್ಟಿಗೆಯಿಂದ ದಾಳಿ ನಡೆಸುತ್ತಿರುವುದು ಕೂಡ ದಾಖಲಾಗಿದೆ.

ಇನ್ನೊಂದು ವೀಡಿಯೊದಲ್ಲಿ ಮಹಿಳೆಯೋರ್ವರು ತಮ್ಮ ವಾಹನ ಮುಂದುವರಿಯಲು ಅವಕಾಶ ನೀಡುವಂತೆ ಬೇಡಿಕೊಳ್ಳುತ್ತಿರುವುದು ಕಂಡು ಬಂದಿದೆ. ಎರಡನೇ ಹಂತದ ಚುನಾವಣೆ ನಡೆಯಲಿರುವ ಪಶ್ಚಿಮಬಂಗಾಳದ 30 ಕ್ಷೇತ್ರಗಳಲ್ಲಿ ಒಂದಾದ ಕೇಶಪುರಕ್ಕೆ ವರದಿ ಮಾಡಲು ತೆರಳುತ್ತಿದ್ದ ತಮ್ಮ ಪತ್ರಕರ್ತರ ಮೇಲೆ ದಾಳಿ ನಡೆದಿದೆ ಎಂದು ಎರಡು ಮಾಧ್ಯಮ ಸಂಸ್ಥೆಗಳು ಪ್ರತಿಪಾದಿಸಿವೆ.

ಈ ದಾಳಿಯಲ್ಲಿ ಮಹಿಳಾ ಪತ್ರಕರ್ತರೊಬ್ಬರು ಗಾಯಗೊಂಡಿದ್ದಾರೆ ಎಂದು ಒಂದು ಮಾದ್ಯಮ ಸಂಸ್ಥೆ ಹೇಳಿದೆ. ಘಟನೆಗೆ ಸಂಬಂಧಿಸಿ ಮೂವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಿಜೆಪಿ ನಾಯಕ ಪ್ರೀತೇಶ್ ರಂಜನ್ ಕೌರ್ ಅವರ ಬೆಂಗಾಲು ವಾಹನದ ಮೇಲೂ ಕೇಶ್ಪುರದಲ್ಲಿ ಕಲ್ಲು ತೂರಾಟ ನಡೆಸಲಾಗಿದೆ. ಈ ಬಗ್ಗೆ ಚುನಾವಣಾ ಆಯೋಗ ಜಿಲ್ಲಾಡಳಿತದಿಂದ ವರದಿ ನೀಡುವಂತೆ ಸೂಚಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News