ಉ.ಪ್ರ:ಬಾಲಕನ ಲೈಂಗಿಕ ಕಿರುಕುಳದಿಂದ ಬೇಸತ್ತು ಮೈಗೆ ಬೆಂಕಿ ಹಚ್ಚಿಕೊಂಡಿದ್ದ ಬಾಲಕಿಯ ಸಾವು
ಹಮೀರಪುರ,ಎ.3: ಬಾಲಕನೋರ್ವನ ಲೈಂಗಿಕ ಕಿರುಕುಳದಿಂದ ಬೇಸತ್ತು ಮಂಗಳವಾರ ಮೈಗೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ ಸುಮೇರಪುರ ಪೊಲೀಸ್ ಠಾಣಾ ವ್ಯಾಪ್ತಿಯ 15ರ ಹರೆಯದ ಬಾಲಕಿಯು ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ಕಾನ್ಪುರದ ಆಸ್ಪತ್ರೆಯೊಂದರಲ್ಲಿ ಕೊನೆಯುಸಿರೆಳೆದಿದ್ದಾಳೆ.
ಒಂಭತ್ತನೇ ತರಗತಿಯ ವಿದ್ಯಾರ್ಥಿನಿಯಾಗಿದ್ದ ಬಾಲಕಿಯ ಕುಟುಂಬದ ದೂರಿನ ಮೇರೆಗೆ 16ರ ಹರೆಯದ ಆರೋಪಿ ಬಾಲಕನ ವಿರುದ್ಧ ಪ್ರಕರಣವನ್ನು ದಾಖಲಿಸಿಕೊಂಡಿರುವ ಪೊಲೀಸರು ಗುರುವಾರ ಆತನನ್ನು ಬಂಧಿಸಿ ಬಾಲ ನ್ಯಾಯಾಲಯದಲ್ಲಿ ಹಾಜರುಪಡಿಸಿದ್ದು,ರಿಮ್ಯಾಂಡ್ ಹೋಮ್‌ಗೆ ಕಳುಹಿಸಲಾಗಿದೆ.
ಬಾಲಕಿಯ ಸಾವಿನ ಬಳಿಕ ಆರೋಪಿಯ ವಿರುದ್ಧ ಕೊಲೆ ಆರೋಪವನ್ನೂ ಹೊರಿಸಲಾಗಿದೆ ಎಂದು ಹಮೀರಪುರ ಎಸ್‌ಪಿ ನರೇಂದ್ರಕುಮಾರ ಸಿಂಗ್ ಅವರು ತಿಳಿಸಿದರು.
ಆರೋಪಿಯು ಹಿಂದೆಯೂ ಹಲವಾರು ಸಲ ತಮ್ಮ ಪುತ್ರಿಯನ್ನು ಚುಡಾಯಿಸಿದ್ದ ಮತ್ತು ಕಿರುಕುಳವನ್ನು ನೀಡಿದ್ದ. ಸೋಮವಾರವೂ ಹಾಗೆಯೇ ಮಾಡಿದ್ದ. ಪೊಲೀಸರು ಕೇವಲ ಎಚ್ಚರಿಕೆಯನ್ನು ನೀಡಿ ಆರೋಪಿಯನ್ನು ಬಿಟ್ಟಿದ್ದರು ಎಂದು ಬಾಲಕಿಯ ಹೆತ್ತವರು ಆರೋಪಿಸಿದ್ದಾರೆ.