ವಿಂಡೀಸ್-ಶ್ರೀಲಂಕಾ ಎರಡನೇ ಟೆಸ್ಟ್ ಡ್ರಾ

Update: 2021-04-04 05:20 GMT

ನಾರ್ತ್ ಸೌಂಡ್: ವೆಸ್ಟ್‌ಇಂಡೀಸ್ ಮತ್ತು ಶ್ರೀಲಂಕಾ ತಂಡಗಳ ನಡುವಿನ ಎರಡನೇ ಟೆಸ್ಟ್ ಪಂದ್ಯ ಡ್ರಾದಲ್ಲಿ ಕೊನೆಗೊಂಡಿದ್ದು, ಎರಡು ಟೆಸ್ಟ್ ಗಳ ಸರಣಿಯಲ್ಲಿ 0-0 ಸಮಬಲ ಸಾಧಿಸಿದೆ.

ಪಂದ್ಯದ ಕೊನೆಯ ದಿನವಾಗಿರುವ ಶುಕ್ರವಾರ ಗೆಲುವಿಗೆ 377 ರನ್‌ಗಳ ಸವಾಲನ್ನು ಪಡೆದ ಲಂಕಾ ತಂಡ 79 ಓವರ್‌ಗಳಲ್ಲಿ 2 ವಿಕೆಟ್ ನಷ್ಟದಲ್ಲಿ 193 ರನ್ ಗಳಿಸಿತು. ಈ ಹಂತದಲ್ಲಿ ಉಭಯ ತಂಡದ ನಾಯಕರು ಪಂದ್ಯವನ್ನು ಡ್ರಾಗೊಳಿಸಲು ಒಪ್ಪಿಕೊಂಡರು.

ವೆಸ್ಟ್‌ಇಂಡೀಸ್‌ನ ಗೆಲುವಿಗೆ ಉತ್ತಮ ಅವಕಾಶ ಇತ್ತು. ಆದರೆ ಅಂತಿಮ ದಿನ ವಿಂಡೀಸ್ ಗೆಲುವಿನ ಅವಕಾಶವನ್ನು ಕಡಿಮೆ ಮೊತ್ತಕ್ಕೆ ಆಲೌಟ್ ಮಾಡುವಲ್ಲಿ ವಿಫಲಗೊಂಡಿತು.

ಅಂತಿಮ ದಿನ ಮಳೆಯಿಂದಾಗಿ ಪಂದ್ಯ ತಡವಾಗಿ ಆರಂಭಗೊಂಡಿತು ಇದು ಉಭಯ ತಂಡಗಳ ಗೆಲುವಿನ ಅವಕಾಶವನ್ನು ಕಿತ್ತುಕೊಂಡಿತು.

ಲಂಕಾದ ನಾಯಕ ದಿಮುತ್ ಕರುಣರತ್ನೆ ಫಾರ್ಮ್‌ಗೆ ಮರಳಿ 75 ರನ್‌ಗಳನ್ನು ಸಿಡಿಸಿದರು. ಒಶಾಡಾ ಫೆರ್ನಾಂಡೊ ಔಟಾಗದೆ 66 ರನ್ ಗಳಿಸಿದರು. ವಿಂಡೀಸ್‌ನ ಬೌಲರ್‌ಗಳನ್ನು ಲಂಕಾದ ಬ್ಯಾಟ್ಸ್‌ಮನ್‌ಗಳು ಬೆವರಿಳಿಸಿ ತಂಡದ ಸೋಲನ್ನು ತಪ್ಪಿಸಿದರು.

ಲಂಕಾ ನಾಲ್ಕನೇ ದಿನದಾಟದಂತ್ಯಕ್ಕೆ ಎರಡನೇ ಇನಿಂಗ್ಸ್‌ನಲ್ಲಿ ವಿಕೆಟ್ ನಷ್ಟವಿಲ್ಲದೆ 29 ರನ್ ಗಳಿಸಿತ್ತು. ಕರುಣರತ್ನೆ ಮತ್ತು ಲಹಿರು ತಿರಿಮನ್ನೆ ಅಂತಿಮ ದಿನ ಬ್ಯಾಟಿಂಗ್ ಮುಂದುವರಿಸಿ ಮೊದಲ ವಿಕೆಟ್‌ಗೆ 101 ರನ್‌ಗಳ ಜೊತೆಯಾಟ ನೀಡಿದರು. ತಿರಿಮನ್ನೆ 39 ರನ್ ಗಳಿಸಿ ಅಲ್ಝಾರಿ ಜೊಸೆಫ್ ಎಸೆತದಲ್ಲಿ ಕಾರ್ನ್‌ವೆಲ್‌ಗೆ ಕ್ಯಾಚ್ ನೀಡಿದರು. ಬಳಿಕ ನಾಯಕ ಕರುಣರತ್ನೆ ಅವರು ಪಾರ್ಟ್‌ಟೈಮ್ ಬೌಲರ್ ಕೈಲ್ ಮೇಯರ್ಸ್‌ಗೆ ವಿಕೆಟ್ ಒಪ್ಪಿಸಿದರು. ಇವರು ಭೋಜನಾ ವಿರಾಮದ ಮೊದಲು ನಿರ್ಗಮಿಸಿದರು.

ಫೆರ್ನಾಂಡೊ ಮತ್ತು ದಿನೇಶ್ ಚಾಂಡಿಮಲ್(ಔಟಾಗದೆ 10 ರನ್) ವಿಂಡೀಸ್‌ನ ಗೆಲುವಿನ ಅವಕಾಶವನ್ನು ಕಿತ್ತುಕೊಂಡರು. ವಿಂಡೀಸ್ ಮೊದಲ ಇನಿಂಗ್ಸ್ ನಲ್ಲಿ 354 ರನ್‌ಗಳ ಕಠಿಣ ಸವಾಲನ್ನು ಪಡೆದಿತ್ತು. ಇದಕ್ಕೆ ಉತ್ತರವಾಗಿ ಲಂಕಾ ಮೊದಲ ಇನಿಂಗ್ಸ್‌ನಲ್ಲಿ 258 ರನ್ ಗಳಿಸಿತ್ತು. ಟೆಸ್ಟ್‌ನ 4ನೇ ದಿನ ಎರಡನೇ ಇನಿಂಗ್ಸ್‌ನಲ್ಲಿ ವಿಂಡೀಸ್ 4 ವಿಕೆಟ್ ನಷ್ಟದಲ್ಲಿ 280 ರನ ಗಳಿಸಿ ಡಿಕ್ಲೇರ್ ಮಾಡಿಕೊಂಡಿತ್ತು. ಮೊದಲ ಪಂದ್ಯ ಇದೇ ಕ್ರೀಡಾಂಗಣದಲ್ಲಿ ನಡೆದಿತ್ತು. ಆದರೆ ಟೆಸ್ಟ್ ಡ್ರಾದಲ್ಲಿ ಕೊನೆಗೊಂಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News