ಜೋರ್ಡಾನ್ ನಲ್ಲಿ ಬಂಡಾಯದ ಸಂಚು ವಿಫಲ?

Update: 2021-04-04 18:34 GMT
Photo Credit: AFP
 

ಅಮ್ಮಾನ್,ಎ.4: ಜೋರ್ಡಾನ್ ನಲ್ಲಿ ಕ್ಷಿಪ್ರ ಕ್ರಾಂತಿಯ ಸಂಚು ನಡೆದಿದೆಯೆಂಬ ವರದಿಗಳ ನಡುವೆಯೇ ತನ್ನನ್ನು ಗೃಹ ಬಂಧನದಲ್ಲಿರಿಸಲಾಗಿದೆಯೆಂದು ದೊರೆ ಎರಡನೇ ಅಬ್ದುಲ್ಲಾ ಅವರ ಮಲಸಹೋದರ ಮಾಜಿ ಯುವರಾಜ ಹಂಝಾ ಹೇಳಿದ್ದಾರೆ. ಇದರ ಬೆನ್ನಲ್ಲೇ ದೇಶದ ಭದ್ರತೆ ಹಾಗೂ ಸ್ಥಿರತೆ ಅಪಾಯದ ರೇಖೆಯಲ್ಲಿದೆ ಎಂದು ಜೋರ್ಡಾನ್ ನ ಅಧಿಕೃತ ಸುದ್ದಿಮಾಧ್ಯಮ ಸಂಸ್ಥೆ ಪೇತ್ರಾ ವರದಿ ಮಾಡಿದೆ.

ಕ್ಷಿಪ್ರ ಕ್ರಾಂತಿಯ ಸಂಚಿನ ಕುರಿತ ವದಂತಿಗಳು ಹರಡುತ್ತಿದ್ದಂತೆಯೇ ಅಮೆರಿಕ ಹಾಗೂ ಗಲ್ಫ್‌ ನ ಮಿತ್ರ ರಾಷ್ಟ್ರಗಳು, ಜೋರ್ಡಾನ್ ಹಾಲಿ ಸರಕಾರಕ್ಕೆ ತಮ್ಮ ಬೆಂಬಲವನ್ನು ದೃಢಪಡಿಸಿವೆ.
 
ಜೋರ್ಡಾನ್ ನ ಮಾಜಿ ಯುವರಾಜ 41 ವರ್ಷ ವಯಸ್ಸಿನ ಹಂಝಾ ಬಿನ್ ಹುಸೈನ್ ಅವರ ವಿಡಿಯೋ ಸಂದೇಶವೊಂದು ಬಿಬಿಸಿ ಸುದ್ಧಿಸಂಸ್ಥೆಗೆ ಶನಿವಾರ ಲಭಿಸಿದ್ದು, ಅದರಲ್ಲಿ ಅವರು, ತನ್ನನ್ನು ಗೃಹಬಂಧನದಲ್ಲಿರಿಸಲಾಗಿದೆಯೆಂದು ತಿಳಿಸಿದ್ದಾರೆ. ಹಂಝಾ ಅವರ ಯುವರಾಜ ಸ್ಥಾನಮಾನವನ್ನು 2004ರಲ್ಲಿ ರದ್ದುಪಡಿಸಲಾಗಿತ್ತು.
 
ವಿಡಿಯೋ ಸಂದೇಶದಲ್ಲಿ ಹಂಝಾ ಅವರು ಜೋರ್ಡಾನ್ ನ ಹಾಲಿ ಆಡಳಿತಾರೂಢ ವ್ಯವಸ್ಥೆಯ ಬಗ್ಗೆ ವಾಗ್ದಾಳಿ ನಡೆಸಿದ್ದು, ತನ್ನ ಹಲವಾರು ಸ್ನೇಹಿತರನ್ನು ಬಂಧಿಸಲಾಗಿದೆ, ತನ್ನ ಭದ್ರತಾ ವ್ಯವಸ್ಥೆಯನ್ನು ರದ್ದುಪಡಿಸಲಾಗಿದೆ ಹಾಗೂ ಅಂತರ್ಜಾಲ ಮತ್ತು ದೂರವಾಣಿ ಸಂಪರ್ಕಗಳನ್ನು ಕಡಿದುಹಾಕಲಾಗಿದೆ ಎಂದವರು ಹೇಳಿದ್ದಾರೆ.

ಜೋರ್ಡಾನ್ ನ ಪ್ರಭುತ್ವದ ವಿರುದ್ಧ ಬಂಡಾಯವೇಳಲು ಯಾವುದೇ ಪಾತಕಿ ಸಂಘಟನೆಯ ಜೊತೆ ಕೈಜೋಡಿಸಿದ್ದೇನೆಂಬ ಆರೋಪವನ್ನು ಹಂಝಾ ಅವರು ಬಿಬಿಸಿಯ ಲಭ್ಯವಾದ ವಿಡಿಯೋ ಸಂದೇಶದಲ್ಲಿ ನಿರಾಕರಿಸಿದ್ದಾರೆ. 

ಜೋರ್ಡಾನ್ ದೇಶವೀಗ ಭ್ರಷ್ಟಾಚಾರ, ಸ್ವಜನಪಕ್ಷಪಾತ ಹಾಗೂ ದುರಾಡಳಿತದಿಂದ ಬಾಧಿತವಾಗಿದ್ದು, ಆಡಳಿತದಲ್ಲಿರುವವರನ್ನು ಟೀಕಿಸಲು ಯಾರಿಗೂ ಅವಕಾಶ ನೀಡಲಾಗುತ್ತಿಲ್ಲವೆಂದು ಅವರು ಆಪಾದಿಸಿದ್ದಾರೆ.
 
‘ಭದ್ರತಾ ಕಾರಣಗಳಿಗಾಗಿ’ ಕೆಲವು ಶಂಕಿತರನ್ನು ಬಂಧಿಸಲಾಗಿದೆಯೆಂದು ಪೇತ್ರಾ ಹೇಳಿದೆ. 2007-2008ರಲ್ಲಿ ರಾಜನ್ಯಾಯಾಲಯದ ವರಿಷ್ಠರಾದ ಬಾಸೀಮ್ ಅವಾದಲ್ಲಾ ಅವರ ರಾಜಕುಟುಂಬದ ಮಾಜಿ ನಿಕಟವರ್ತಿಗಳು ಕೂಡಾ ಬಂಧಿತರಲ್ಲಿ ಸೇರಿದ್ದಾರೆಂದು ಶರೀಫ್ ಹಸ್ಸನ್ ಬಿನ್ ಝೈದ್ ತಿಳಿಸಿದ್ದಾರೆ. ಹಂಝಾ  ಗೃಹಬಂಧನದ ಬಳಿಕ ಅವರ ತಾಯಿ ರಾಣಿ ನೂರ್ ರವಿವಾರ ಟ್ವೀಟ್ ಮಾಡಿದ್ದು, ಈ ದುಷ್ಟ ನಿಂದನೆಗೆ ತುತ್ತಾಗಿರುವ ಅಮಾಯಕ ಸಂತ್ರಸ್ತರಿಗೆ ಸತ್ಯ ಹಾಗೂ ನ್ಯಾಯ ದೊರೆಯಲಿ ಎಂದು ನಾನು ಪ್ರಾರ್ಥಿಸುತ್ತೇನೆ. ದೇವರು ಅವರನ್ನು ಆಶೀರ್ವದಿಸಲಿ ಹಾಗೂ ಸುರಕ್ಷಿತವಾಗಿಡಲಿ ಎಂದು ಹಾರೈಸಿದ್ದಾರೆ.

ಜೋರ್ಡಾನ್ ಪ್ರಭುತ್ವವನ್ನು ಟೀಕಿಸಿದ್ದ ಹಂಝಾ

 ಹಂಝಾ ಅವರು ಜೋರ್ಡಾನ್ ನ ದಿವಂಗತ ದೊರೆ ಹುಸೇನ್ ಹಾಗೂ ಅಮೆರಿಕದಲ್ಲಿ ಜನಿಸಿದ್ದ ರಾಣಿ ನೂರ್ ಅವರ ಹಿರಿಯ ಪುತ್ರ. ಅವರು ತನ್ನ ಮಲಸಹೋದರ , ದೊರೆ ಅಬ್ದುಲ್ಲಾ ಜೊತೆಗೆ ಈವರೆಗೆ ಅಧಿಕೃತವಾಗಿ ಉತ್ತಮ ಬಾಂಧವ್ಯಗಳನ್ನು ಹೊಂದಿದ್ದರು. ಹಂಝಾ ಅವರು ಜೋರ್ಡಾನ್ ನ ಬುಡಕಟ್ಟು ನಾಯಕರಿಗೆ ಅತ್ಯಂತ ನಿಕಟರಾಗಿದ್ದರು.
 ಹುಸೇನ್ ಅವರ ಅಂತಿಮ ಇಚ್ಚೆಯಂತೆ ದೊರೆ ಅಬ್ದುಲ್ಲಾ ಅವರು 1999ರಲ್ಲಿ ಹಂಝಾ ಅವರನ್ನು ಯುವರಾಜನಾಗಿ ನೇಮಿಸಿದ್ದರು. 2004ರಲ್ಲಿ ಅವರಿಂದ ಯುವರಾಜ ಪಟ್ಟವನ್ನು ಕಿತ್ತುಕೊಂಡು, ಅದನ್ನು ತನ್ನ ಹಿರಿಯ ಸಹೋದರ ಹುಸೇನ್ ಗೆ ನೀಡಿದ್ದರು.

ಹಂಝಾ ಅವರು ಇತ್ತೀಚಿನ ದಿನಗಳಲ್ಲಿ ಪ್ರಭುತ್ವದ ವಿರುದ್ಧ ಟೀಕೆಯನ್ನು ತೀವ್ರಗೊಳಿಸಿದ್ದು, ಸರಕಾರದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿರುವುದಾಗಿ ತನ್ನ ಗೆಳೆಯರ ವೃಂದದ ಬಳಿ ಹೇಳಿದ್ದೆರಂದು ಹೆಸರು ಬಹಿರಂಗಪಡಿಸದ ರಾಜಕೀಯ ವಿಶ್ಲೇಷಕರೊಬ್ಬರು ತಿಳಿಸಿದ್ದಾರೆ.

ಬಂಧನ ವರದಿ ನಿರಾಕರಿಸಿದ ಜೋರ್ಡಾನ್ ಸೇನೆ
  
ಹಂಝಾ ಅವರನ್ನು ಬಂಧಿಸಲಾಗಿದೆಯೆಂಬ ಆರೋಪವನ್ನು ಜೋರ್ಡಾನ್ ಸೇನೆ ಶನಿವಾರ ನಿರಾಕರಿಸಿದೆ. ರಾಜಕುಮಾರ ಹಂಝಾ ಅವರ ಬಂಧನವಾಗಿದೆಯೆಂಬ ವರದಿಗಳು ನಿಜವಲ್ಲವೆಂದು ಜೋರ್ಡಾನ್ ಸೇನಾಪಡೆಗಳ ಜಂಟಿ ವರಿಷ್ಠ ಮೇಜರ್ ಜನರಲ್ ಯೂಸುಫ್ ಹುನೈತಿ ತಿಳಿಸಿದ್ದಾರೆ.
   ಆದರೆ ವಾಷಿಂಗ್ಟನ್ ಪೋಸ್ಟ್ ತನ್ನ ವರದಿಯಲ್ಲಿ ದೊರೆಯ ಪದಚ್ಯುತಿ ಸಂಚಿನ ಆರೋಪದ ಬಗ್ಗೆ ತನಿಖೆಯ ಭಾಗವಾಗಿ ಮಾಜಿ ಯುವರಾಜನನ್ನು ಗೃಹಬಂಧನದಲ್ಲಿರಿಸಲಾಗಿದೆ ಎಂದು ಹೇಳಿದೆ.
 ಈ ಸಂಚಿನಲ್ಲಿ ಜೋರ್ಡಾನ್ ರಾಜಕೀಯ ಕುಟುಂಬದ ಕನಿಷ್ಠ ಓರ್ವ, ಬುಡಕಟ್ಟು ನಾಯಕರು ಹಾಗೂ ದೇಶದ ಭದ್ರತಾ ವ್ಯವಸ್ಥೆಯ ಕೆಲವು ಸದಸ್ಯರು ಒಳಗೊಂಡಿದ್ದಾರೆಂದು ವಾಶಿಂಗ್ಟನ್ ಪೋಸ್ಟ್ ವರದಿಯಲ್ಲಿ ತಿಳಿಸಿದೆ.

ದೊರೆ ಅಬ್ದುಲ್ಲಾಗೆ ಅಮೆರಿಕ ಬೆಂಬಲ

ತನ್ನ ನಿಕಟ ಪ್ರಾದೇಶಿಕ ಮಿತ್ರನಾಗಿರುವ ಜೋರ್ಡಾನ್ ನಲ್ಲಿನ ಬೆಳವಣಿಗೆಗಳನ್ನು ತಾನು ನಿಕಟವಾಗಿ ಗಮನಿಸುತ್ತಿರುವುದಾಗಿ ಅಮೆರಿಕ ಹೇಳಿದೆ. ‘‘ದೊರೆ ಅಬ್ದುಲ್ಲಾ ಅವರು ಅಮೆರಿಕದ ಮುಖ್ಯ ಪಾಲುದಾರನಾಗಿದ್ದಾರೆ. ಅವರಿಗೆ ನಮ್ಮ ಪೂರ್ಣ ಬೆಂಬಲವಿದೆ’ ಎಂದು ಅಮೆರಿಕದ ವಿದೇಶಾಂಗ ಇಲಾಖೆಯ ವಕ್ತಾರ ನೆಡ್ ಪ್ರೈಸ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News