ದೇಶ ಅಸ್ಥಿರಗೊಳಿಸಲು ವಿದೇಶಿ ಗುಂಪುಗಳೊಂದಿಗೆ ಕೈಜೋಡಿಸಿರುವ ರಾಜಕುಮಾರ ಹಂಝಾ

Update: 2021-04-05 17:04 GMT
ಫೋಟೊ ಕೃಪೆ: //twitter.com/AymanHsafadi

ಅಮ್ಮಾನ್ (ಜೋರ್ಡಾನ್), ಎ. 5: ದೇಶವನ್ನು ಅಸ್ಥಿರಗೊಳಿಸುವ ಸಂಚು ರೂಪಿಸುವಲ್ಲಿ ಜೋರ್ಡಾನ್ ದೊರೆ ಅಬ್ದುಲ್ಲಾರ ಮಲಸಹೋದರ ಹಂಝಾ ವಿದೇಶಿ ಗುಂಪುಗಳೊಂದಿಗೆ ಕೈಜೋಡಿಸಿದ್ದಾರೆ ಹಾಗೂ ಕೆಲ ಸಮಯದಿಂದ ಅವರು ತನಿಖೆಗೆ ಒಳಪಟ್ಟಿದ್ದಾರೆ ಎಂದು ಜೋರ್ಡಾನ್ ಉಪ ಪ್ರಧಾನಿ ಐಮಾನ್ ಸಫಾದಿ ರವಿವಾರ ಹೇಳಿದ್ದಾರೆ.

‘‘ಜೋರ್ಡಾನನ್ನು ಅಸ್ಥಿರಗೊಳಿಸಲು ಸರಿಯಾದ ಸಮಯಕ್ಕೆ ಸಂಬಂಧಿಸಿ ರಾಜಕುಮಾರ ಹಂಝಾ ವಿದೇಶಿ ಗುಂಪುಗಳೊಂದಿಗೆ ಸಂವಹನ ನಡೆಸಿರುವುದು ತನಿಖೆಯಲ್ಲಿ ಪತ್ತೆಯಾಗಿದೆ’’ ಎಂದು ಟೆಲಿವಿಶನ್‌ನಲ್ಲಿ ಪ್ರಸಾರಗೊಂಡ ಸುದ್ದಿ ಸಮ್ಮೇಳನವೊಂದರಲ್ಲಿ ಐಮಾನ್ ಸಫಾದಿ ಹೇಳಿದರು.

ರಾಜಕುಮಾರ ಹಂಝಾ ಮತ್ತು ಪತ್ನಿಯನ್ನು ಜೋರ್ಡಾನ್‌ನಿಂದ ಹೊರಗೆ ಕರೆದುಕೊಂಡು ಹೋಗಲು ವಿಮಾನವೊಂದನ್ನು ಕಳುಹಿಸುವ ವಿಚಾರದಲ್ಲಿ ವಿದೇಶಿ ಗುಪ್ತಚರ ಸಂಸ್ಥೆಯೊಂದು ಹಂಝಾರ ಪತ್ನಿಯನ್ನು ಸಂಪರ್ಕಿಸಿತ್ತು ಎಂದು ಅವರು ನುಡಿದರು.

‘‘ಈ ಚಟುವಟಿಕೆಗಳು ಮತ್ತು ಚಲನವಲನಗಳು ಅಂತಿಮವಾಗಿ ದೇಶದ ಭದ್ರತೆ ಮತ್ತು ಸ್ಥಿರತೆಯ ಮೇಲೆ ನೇರ ಪರಿಣಾಮ ಬೀರಿದವು ಎನ್ನುವುದನ್ನು ಆರಂಭಿಕ ವಿಚಾರಣೆಗಳು ತೋರಿಸಿದವು. ಆದರೆ, ಈ ವಿಷಯಗಳನ್ನು ಕುಟುಂಬದ ಒಳಗೇ ಇತ್ಯರ್ಥಪಡಿಸುವುದಕ್ಕಾಗಿ ರಾಜಕುಮಾರ ಹಂಝಾರೊಂದಿಗೆ ನೇರವಾಗಿ ಮಾತನಾಡುವುದೇ ಒಳ್ಳೆಯದು ಎಂಬುದಾಗಿ ದೊರೆ ನಿರ್ಧರಿಸಿದರು’’ ಎಂದು ಉಪ ಪ್ರಧಾನಿ ನುಡಿದರು.

ಸಂಚಿಗೆ ಸಂಬಂಧಿಸಿ 14ರಿಂದ 16 ಮಂದಿಯನ್ನು ಬಂಧಿಸಲಾಗಿದೆ ಎಂದು ಸಫಾದಿ ತಿಳಿಸಿದರು.

ವಿವಾದವನ್ನು ರಾಜ ಕುಟುಂಬದೊಳಗೇ ಇತ್ಯರ್ಥಪಡಿಸಲು ಪ್ರಯತ್ನಿಸಲಾಗುತ್ತಿದೆ. ಆದರೆ ರಾಜಕುಮಾರ ಹಂಝಾ ಸಹಕಾರ ನೀಡುತ್ತಿಲ್ಲ ಎಂದು ಅವರು ಹೇಳಿದರು.

ಆದೇಶಗಳನ್ನು ಪಾಲಿಸುವುದಿಲ್ಲ: ತಿರುಗಿಬಿದ್ದ ಜೋರ್ಡಾನ್ ರಾಜಕುಮಾರ

 ನನ್ನ ಚಲನವಲನಗಳನ್ನು ನಿರ್ಬಂಧಿಸುವ ಆದೇಶಗಳನ್ನು ಪಾಲಿಸುವುದಿಲ್ಲ ಎಂದು ತನ್ನ ಮಲಸಹೋದರ, ದೊರೆ ದ್ವಿತೀಯ ಅಬ್ದುಲ್ಲಾ ವಿರುದ್ಧ ಕ್ಷಿಪ್ರಕ್ರಾಂತಿಯ ಸಂಚು ರೂಪಿಸಿದ ಆರೋಪವನ್ನು ಎದುರಿಸುತ್ತಿರುವ ಜೋರ್ಡಾನ್ ರಾಜಕುಮಾರ ಹಂಝಾ ಹೇಳಿದ್ದಾರೆ.

ದೇಶದ ಭದ್ರತೆಯನ್ನು ಅಸ್ಥಿರಗೊಳಿಸುವ ದೇಶದ್ರೋಹಿ ಪಿತೂರಿಯಲ್ಲಿ ಹಂಝಾ ಶಾಮೀಲಾಗಿದ್ದಾರೆ ಎಂದು ಸರಕಾರ ಆರೋಪಿಸಿದೆ ಹಾಗೂ ಅವರನ್ನು ಗೃಹಬಂಧನದಲ್ಲಿರಿಸಿದೆ. ಅದೂ ಅಲ್ಲದೆ, ಇತರ 16 ಮಂದಿಯನ್ನೂ ಪ್ರಕರಣಕ್ಕೆ ಸಂಬಂಧಿಸಿ ಬಂಧಿಸಿದೆ.

ಅಮ್ಮಾನ್‌ನಲ್ಲಿರುವ ನನ್ನ ಅರಮನೆಯೊಳಗೇ ಇರುವಂತೆ ನನಗೆ ಆದೇಶ ನೀಡಲಾಗಿದೆ ಎಂದು 41 ವರ್ಷದ ಹಂಝಾ ಹೇಳಿದ್ದಾರೆ. ಆದರೆ, ನನ್ನ ಚಲನವಲನದ ಸ್ವಾತಂತ್ರ್ಯವನ್ನು ನಿರ್ಬಂಧಿಸುವ ಆದೇಶವನ್ನು ಧಿಕ್ಕರಿಸುವುದಾಗಿ ಅವರು ತಿಳಿಸಿದ್ದಾರೆ.

 ‘‘ಈಗ ಓಡಾಡಲು ಹಾಗೂ ಆ ಮೂಲಕ ಪರಿಸ್ಥಿತಿಯನ್ನು ಬಿಗಡಾಯಿಸಲು ನಾನು ಬಯಸುವುದಿಲ್ಲ. ಆದರೆ, ನೀನು ಹೊರಗೆ ಹೋಗಬಾರದು, ಟ್ವೀಟ್ ಮಾಡಬಾರದು, ಜನರೊಂದಿಗೆ ವ್ಯವಹರಿಸಬಾರದು, ನಿಮ್ಮ ಕುಟುಂಬ ಸದಸ್ಯರನ್ನು ಮಾತ್ರ ಭೇಟಿಯಾಗಬಹುದು ಎಂದು ಅವರು ಹೇಳಿದರೆ, ಆಗ ನಾನು ಅವರ ಆದೇಶಗಳನ್ನು ಪಾಲಿಸುವುದಿಲ್ಲ’’ ಎಂಬುದಾಗಿ ಧ್ವನಿಮುದ್ರಿಕೆಯೊಂದರಲ್ಲಿ ಅವರು ಹೇಳಿದ್ದಾರೆ. ಈ ಧ್ವನಿಮುದ್ರಿಕೆಯನ್ನು ಅವರು ಟ್ವೀಟ್ ಮಾಡಿದ್ದಾರೆ.

ಮಾಜಿ ಯುವರಾಜರಾಗಿದ್ದ ಹಂಝಾರ ಪದವಿಯನ್ನು ದೊರೆ ಅಬ್ದುಲ್ಲಾ 2004ರಲ್ಲಿ ರದ್ದುಗೊಳಿಸಿದ್ದರು.

ರಾಜಪ್ರಭುತ್ವವು ಭ್ರಷ್ಟಾಚಾರ ಮತ್ತು ಸ್ವಜನ ಪಕ್ಷಪಾತ ಮಾಡುತ್ತಿದೆ ಹಾಗೂ ಸರ್ವಾಧಿಕಾರದ ಆಡಳಿತ ನಡೆಸುತ್ತಿದೆ ಎಂಬುದಾಗಿ ಹಂಝಾ ಆರೋಪಿಸಿದ್ದರು.

ಕ್ಷಿಪ್ರಕ್ರಾಂತಿಯ ಸಂಚಿನಲ್ಲಿ ನಾನು ಶಾಮೀಲಾಗಿಲ್ಲ ಎಂಬುದಾಗಿ ಶನಿವಾರ ಬಿಬಿಸಿಗೆ ಕಳುಹಿಸಿದ ವೀಡಿಯೊವೊಂದರಲ್ಲಿ ಅವರು ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News