ಪದಕ ಗೆಲ್ಲುವ ಭರವಸೆ ಮೂಡಿಸಿದ ಮೀರಾಬಾಯಿ ಚಾನು

Update: 2021-04-07 04:53 GMT

ಹೊಸದಿಲ್ಲಿ: ಮುಂಬರುವ ಒಲಿಂಪಿಕ್ಸ್‌ನಲ್ಲಿ ಭಾರತದ ಸ್ಟಾರ್ ವೇಟ್‌ಲಿಫ್ಟರ್ ಮೀರಾಬಾಯಿ ಚಾನು ಪದಕ ಗೆಲ್ಲುವ ಸಾಧ್ಯತೆ ಕಂಡು ಬಂದಿದೆ.

ಉತ್ತರ ಕೊರಿಯಾ ಟೋಕಿಯೊ ಕ್ರೀಡಾಕೂಟದಲ್ಲಿ ಭಾಗವಹಿಸುವುದಿಲ್ಲ ಎಂದು ಘೋಷಿಸಿದ ನಂತರ ಮೀರಾಬಾಯಿ ಚಾನು ಅವರಿಗೆ ಪದಕ ಗೆಲ್ಲುವ ಹಾದಿ ಸುಗಮವಾಗಿದೆ.

 ಜುಲೈ 23 ರಿಂದ ಆಗಸ್ಟ್ 8 ರವರೆಗೆ ನಡೆಯಲಿರುವ ಟೋಕಿಯೊ ಒಲಿಂಪಿಕ್‌ಗೆ ಉತ್ತರ ಕೊರಿಯಾ ತನ್ನ ಕ್ರೀಡಾಪಟು ಗಳನ್ನು ಕಳುಹಿಸದಿರುವ ನಿರ್ಧಾರ ಕೈಗೊಂಡಿದ್ದು, ಕೋವಿಡ್ -19ಕಾರಣದಿಂದ ಉಂಟಾದ ವಿಶ್ವ ಸಾರ್ವಜನಿಕ ಆರೋಗ್ಯ ಬಿಕ್ಕಟ್ಟಿನಿಂದ ತನ್ನ ಕ್ರೀಡಾಪಟುಗಳನ್ನು ರಕ್ಷಿಸಲು ಮುಂದಾಗಿದೆ.

  ಮಾಜಿ ವಿಶ್ವ ಚಾಂಪಿಯನ್ ಚಾನು ಪ್ರಸ್ತುತ ಮಹಿಳೆಯರ 49 ಕೆ.ಜಿ. ಟೋಕಿಯೊ ಕ್ರೀಡಾಕೂಟದ ಅರ್ಹತಾ ಶ್ರೇಯಾಂಕದಲ್ಲಿ ನಾಲ್ಕನೇ ಸ್ಥಾನವನ್ನು ಪಡೆದಿದ್ದಾರೆ. ಅವರ ಎದುರಾಳಿ ಉತ್ತರ ಕೊರಿಯಾದ ರಿ ಸಾಂಗ್ ಗಮ್ 2019ರ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ 204 ಕೆ.ಜಿ. ಭಾರ ಎತ್ತಿದರು. 201 ಕೆ.ಜಿ. ಭಾರತ ಎತ್ತಿ ಚಾನು ಮೂರನೇ ಸ್ಥಾನದೊಂದಿಗೆ ಕಂಚು ಗಳಿಸಿದ್ದರು. ‘‘ಉತ್ತರ ಕೊರಿಯಾ ಒಲಿಂಪಿಕ್ಸ್‌ನಿಂದ ಹಿಂದೆ ಸರಿಯುವ ಸುದ್ದಿ ಕೇಳಿ ನಮಗೆ ಸಂತೋಷವಾಗಿದೆ. ಆದರೆ ಪ್ರಾಮಾಣಿಕವಾಗಿ ನಮ್ಮ ಗಮನ ಚೀನಾದೊಂದಿಗೆ ಸ್ಪರ್ಧಿಸುವುದರತ್ತ ಇತ್ತು ’’ಎಂದು ರಾಷ್ಟ್ರೀಯ ತರಬೇತುದಾರ ವಿಜಯ್ ಶರ್ಮಾ ತಿಳಿಸಿದ್ದಾರೆ.

 ಇತ್ತೀಚಿನ ಅರ್ಹತಾ ಶ್ರೇಯಾಂಕದ ಮೊದಲ ಐದು ಸ್ಥಾನಗಳಲ್ಲಿ ಮೂರು ಸ್ಥಾನಗಳನ್ನು ಚೀನಾದ ವೇಟ್‌ಲಿಫ್ಟರ್‌ಗಳು ಪಡೆದಿದ್ದಾರೆ.ವಿಶ್ವ ಚಾಂಪಿಯನ್ ಮತ್ತು ವಿಶ್ವ ದಾಖಲೆ ಹೊಂದಿರುವ ಜಿಯಾಂಗ್ ಹುಯಿಹುವಾ ಮತ್ತು ಜಾಂಗ್ ರೋಂಗ್ ಕ್ರಮವಾಗಿ ಎರಡನೇ ಮತ್ತು ಐದನೇ ಸ್ಥಾನವನ್ನು ಪಡೆದಿದ್ದಾರೆ. ಚೀನಾದ ಮೂವರು ಲಿಫ್ಟರ್‌ಗಳಲ್ಲಿ ಒಬ್ಬರು ಮಾತ್ರ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸುವ ಅರ್ಹತೆ ಪಡೆಯುತ್ತಾರೆ. ಏಕೆಂದರೆ ಒಂದು ರಾಷ್ಟ್ರವು ವೇಟ್ ಲಿಫ್ಟಿಗ್‌ಗೆ ಒಬ್ಬ ಕ್ರೀಡಾಪಟುವನ್ನು ಮಾತ್ರ ಕಳುಹಿಸಲು ಅವಕಾಶ ಇದೆ. 26ರ ಹರೆಯ ಚಾನು ಮುಂದಿನ ಎಪ್ರಿಲ್ 16ರಿಂದ 25 ರವರೆಗೆ ಉಝ್ಬೆಕಿಸ್ತಾನ್‌ನ ತಾಷ್ಕೆಂಟ್‌ನಲ್ಲಿ ನಡೆಯಲಿರುವ ಏಶ್ಯನ್ ವೇಟ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News