ಮಸೀದಿಗೆ ದಾಳಿ ಪ್ರಕರಣದಲ್ಲಿ ನಿರ್ಲಕ್ಷ್ಯ, ಆತುರದ ತನಿಖೆ: ಪೊಲೀಸರನ್ನು ತರಾಟೆಗೆತ್ತಿಕೊಂಡ ನ್ಯಾಯಾಧೀಶ

Update: 2021-04-07 17:45 GMT

ಹೊಸದಿಲ್ಲಿ, ಎ.7: ಕಳೆದ ವರ್ಷದ ಫೆಬ್ರವರಿಯಲ್ಲಿ ಈಶಾನ್ಯ ದಿಲ್ಲಿಯಲ್ಲಿ ನಡೆದ ಹಿಂಸಾಚಾರ ಸಂದರ್ಭ ಮಸೀದಿಯೊಂದಕ್ಕೆ ಬೆಂಕಿ ಹಚ್ಚಿದ ಪ್ರಕರಣದ ವಿಚಾರಣೆ ನಡೆಸುತ್ತಿರುವ ದಿಲ್ಲಿಯ ನ್ಯಾಯಾಲಯ, ಈ ಪ್ರಕರಣದ ತನಿಖೆಯನ್ನು ಪೊಲೀಸರು ಆತುರವಾಗಿ ಮತ್ತು ನಿರ್ಲಕ್ಷ್ಯವಾಗಿ ನಡೆಸಿದ್ದಾರೆ ಎಂದು ಹೇಳಿದೆ.

ಮದೀನಾ ಮಸೀದಿಗೆ ಬೆಂಕಿಹಚ್ಚಿದ ಕುರಿತು ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ ಎನ್ನಲಾದ ಎಫ್‌ಐರ್‌ನ ಮೂಲ ದೈನಿಕ ದಿನಚರಿ(ಡಿಡಿ) ಮತ್ತು ತನಿಖೆಯ ಯಥಾಸ್ಥಿತಿ ವರದಿಯನ್ನು ಸಲ್ಲಿಸುವಂತೆ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ವಿನೋದ್ ಯಾದವ್ ಪೊಲೀಸರಿಗೆ ಸೂಚಿಸಿದರು. ಬುಧವಾರ ವಿಚಾರಣೆಯ ಅಂತಿಮ ದಿನವಾಗಿದೆ.

ಅಧಿಕಾರಿ ಪ್ರಕರಣದ ತನಿಖೆಯನ್ನೇ ನಡೆಸಿಲ್ಲ ಎಂಬುದನ್ನು ಗಮನಿಸಲಾಗಿದೆ. ಇದು ತನಿಖೆಯಲ್ಲಿ ಪೊಲೀಸರ ನಿರ್ಲಕ್ಷ್ಯತನವನ್ನು ತೋರಿಸುತ್ತದೆ ಎಂದು ನ್ಯಾಯಾಧೀಶರು ತರಾಟೆಗೆತ್ತಿಕೊಂಡರು. ಇದುವರೆಗಿನ ತನಿಖೆಯ ವಿವರ ಒದಗಿಸುವಂತೆ ನ್ಯಾಯಾಧೀಶರು ತನಿಖಾಧಿಕಾರಿ ಸುಮನ್‌ಗೆ ಸೂಚಿಸಿದಾಗ ‘ತನಿಖೆಯ ಸಂದರ್ಭ ತನಗೆ ಕೊರೋನ ಸೋಂಕು ದೃಢಪಟ್ಟಿತ್ತು’ ಎಂದು ಸುಮನ್ ಉತ್ತರಿಸಿದರು.

‘ಸೋಂಕು ತಗುಲದಿದ್ದ ಅವಧಿಯಲ್ಲಿ ನೀವೇನು ಮಾಡಿದ್ದೀರಿ? ದೈನಿಕ ದಿನಚರಿ ದಾಖಲಿಸಿದ್ದೀರಾ, ಯಾರನ್ನೆಲ್ಲಾ ವಿಚಾರಣೆ ನಡೆಸಿದ್ದೀರಿ? ನಿಮ್ಮ ನಾಲಗೆ ಈಗ ಮಾತಾಡುತ್ತಿಲ್ಲವೇ? ಎಂದು ನ್ಯಾಯಾಧೀಶರು ಪ್ರಶ್ನಿಸಿದಾಗ ತನಿಖಾಧಿಕಾರಿ‘ನಾನು ಏನನ್ನೂ ಮಾಡಿಲ್ಲ’ ಎಂದುತ್ತರಿಸಿದರು.

ಹಾಗಿದ್ದರೆ ‘ ದೊಂಬಿಯ ಪ್ರಕರಣದಲ್ಲಿ ಆರೋಪಿಯ ಹೆಸರು ಉಲ್ಲೇಖಿಸಿದ್ದರೂ, ತನಿಖೆಯ ಅಗತ್ಯವಿಲ್ಲವೆಂದು ನಮ್ಮ ಅಧಿಕಾರಿಗಳು ಯೋಚಿಸಿದ್ದಾರೆ ಎಂದು ನಾನು ಪೊಲೀಸ್ ಆಯುಕ್ತರಿಗೆ ಪತ್ರ ಬರೆಯಲೇ?’ ಎಂದು ನ್ಯಾಯಾಧೀಶರು ಹೇಳಿದರು. ಇದಕ್ಕೆ ತನಿಖಾಧಿಕಾರಿ ಸುಮನ್ ‘ಕ್ಷಮಿಸಿ ಸಾರ್’ ಎಂದರು.

ನೀವು ಬಂಧಿಸಿದ ಫಿರ್ಯಾದುದಾರರು (ಹಾಶಿಮ್ ಆಲಿ) ಜೈಲಿನಲ್ಲಿ ಎಷ್ಟು ದಿನ ಇದ್ದರು? ಇದಕ್ಕೆ ಯಾರು ಉತ್ತರಿಸುತ್ತಾರೆ? ಎಂದು ನ್ಯಾಯಾಧೀಶರು ಪ್ರಶ್ನಿಸಿದರು. ಕಳೆದ ವರ್ಷದ ಫೆಬ್ರವರಿ 25ರಂದು ಈಶಾನ್ಯ ದಿಲ್ಲಿಯ ಶಿವವಿಹಾರದಲ್ಲಿರುವ ಮಸೀದಿಗೆ ನುಗ್ಗಿದ್ದ ತಂಡವೊಂದು ಮಸೀದಿಯೊಳಗಿದ್ದ ಎರಡು ಎಲ್‌ಪಿಜಿ ಸಿಲಿಂಡರ್‌ಗಳಿಗೆ ಬೆಂಕಿಹಚ್ಚಿದ್ದರಿಂದ ಸ್ಫೋಟ ಸಂಭವಿಸಿತ್ತು. ಬಳಿಕ ಮಸೀದಿಯ ಮೇಲೆ ಕೇಸರಿ ಧ್ವಜವನ್ನು ಹಾರಿಸಲಾಗಿತ್ತು. ಈ ಬಗ್ಗೆ ಹಾಶಿಮ್ ಆಲಿ ಎಂಬವರು ದೂರು ನೀಡಿದ್ದರು.

ಈ ಮಧ್ಯೆ, ದಿಲ್ಲಿಯಲ್ಲಿ ಸ್ಥಳೀಯರೊಬ್ಬರ ಮನೆಗೆ ಬೆಂಕಿಬಿದ್ದ ಪ್ರಕರಣಕ್ಕೆ ಸಂಬಂಧಿಸಿ ಫಿರ್ಯಾದುದಾರ ಹಾಶಿಮ್ ಆಲಿಯನ್ನು ಪೊಲೀಸರು ಬಂಧಿಸಿದ್ದರು. ಸ್ಥಳೀಯರ ದೂರು ಮತ್ತು ಹಾಶಿಮ್ ಆಲಿಯ ದೂರನ್ನು ಸೇರಿಸಿದ್ದ ಪೊಲೀಸರು ಇದು ಆರೋಪಪಟ್ಟಿಯ ಭಾಗವಾಗಿದೆ ಎಂದು ಪ್ರತಿಪಾದಿಸಿದ್ದರು.

ಹಾಶಿಮ್ ಆಲಿಯ ದೂರನ್ನು ಪ್ರತ್ಯೇಕ ಎಫ್‌ಐಆರ್‌ನಲ್ಲಿ ದಾಖಲಿಸಿರುವುದಾಗಿ ಪೊಲೀಸರು ಒಂದು ವರ್ಷದ ಬಳಿಕ ನ್ಯಾಯಾಲಯಕ್ಕೆ ಮಾಹಿತಿ ನೀಡಿದ್ದರು. ಪೊಲೀಸರ ಕ್ರಮಕ್ಕೆ ನ್ಯಾಯಾಲಯ ತೀವ್ರ ಆಕ್ಷೇಪ ಸೂಚಿಸಿತ್ತು. ಈ ಮಧ್ಯೆ, ಮಸೀದಿಗೆ ಬೆಂಕಿ ಹಚ್ಚಿದ ಪ್ರಕರಣದಲ್ಲಿ ಪ್ರತ್ಯೇಕ ಎಫ್‌ಐಆರ್ ದಾಖಲಿಸುವಂತೆ ಪೊಲೀಸರಿಗೆ ಸೂಚಿಸಬೇಕೆಂದು ಹಾಶಿಮ್ ಆಲಿಯ ವಕೀಲರು ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News