ಕೊರೋನ ಹೆಚ್ಚಳ: ದೇಶದಲ್ಲಿ ಲಾಕ್‌ ಡೌನ್‌ ಜಾರಿ ಮಾಡುವುದಿಲ್ಲ ಎಂದ ಪ್ರಧಾನಿ ಮೋದಿ

Update: 2021-04-08 18:11 GMT

ಹೊಸದಿಲ್ಲಿ,ಎ.8: ಕೊರೋನವೈರಸ್ ಸಾಂಕ್ರಾಮಿಕದ ಎರಡನೇ ಅಲೆಯನ್ನು ಎದುರಿಸಲು ಮೈಕ್ರೋ ಕಂಟೈನ್ಮೆಂಟ್ ಝೋನ್‌ಗಳ ರಚನೆ ಮತ್ತು ವ್ಯಾಪಕ ತಪಾಸಣೆ ಪ್ರಕ್ರಿಯೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಒತ್ತು ನೀಡಿದರು. ಈ ವಿಷಯವನ್ನು ರಾಜ್ಯ ಸರಕಾರಗಳು ಲಘುವಾಗಿ ಪರಿಗಣಿಸಕೂಡದು ಎಂದು ಕಿವಿಮಾತನ್ನೂ ಹೇಳಿದರು.

ಗುರುವಾರ ಬೆಳಿಗ್ಗೆ ಎಂಟು ಗಂಟೆಗೆ ಅಂತ್ಯಗೊಂಡ 24 ಗಂಟೆಗಳ ಅವಧಿಯಲ್ಲಿ ದೇಶದಲ್ಲಿ 1.26 ಲಕ್ಷ ಹೊಸ ಕೋವಿಡ್-19 ಪ್ರಕರಣಗಳು ವರದಿಯಾಗಿದ್ದು,ಇದು ಈವರೆಗಿನ ಗರಿಷ್ಠ ದೈನಂದಿನ ಏರಿಕೆಯಾಗಿದೆ.

 ದೇಶದಲ್ಲಿ ಕೊರೋನವೈರಸ್ ಸ್ಥಿತಿ ಮತ್ತು ಲಸಿಕೆ ವಿತರಣೆ ಕುರಿತು ಗುರುವಾರ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಸಭೆ ನಡೆಸಿದ ಮೋದಿ,ಸೋಂಕು ಹೆಚ್ಚಾಗಿರುವ ಪ್ರದೇಶಗಳನ್ನು ಮೈಕ್ರೋ ಕಂಟೈನ್ಮೆಂಟ್ ಝೋನ್‌ಗಳೆಂದು ಘೋಷಿಸಬೇಕು ಮತ್ತು ಅವುಗಳ ಬಗ್ಗೆ ಗರಿಷ್ಠ ಗಮನವನ್ನು ಹರಿಸಬೇಕು ಎಂದರು.

ವಿಶ್ವವೂ ರಾತ್ರಿ ಕರ್ಫ್ಯೂವನ್ನು ಒಪ್ಪಿಕೊಂಡಿದೆ. ತಾವು ಕೊರೋನ ಯುಗದಲ್ಲಿ ಬದುಕುತ್ತಿದ್ದೇವೆ ಎನ್ನುವುದನ್ನು ಈ ಕರ್ಫ್ಯೂ ಜನರಿಗೆ ನೆನಪಿಸಲಿದೆ. ರಾತ್ರಿ ಕರ್ಫ್ಯೂವನ್ನು ‘ಕೊರೋನ ಕರ್ಫ್ಯೂ ’ವನ್ನಾಗಿ ಜಾರಿಗೆ ತರೋಣ. ಇದು ಕೆಲಸಕಾರ್ಯಗಳನ್ನು ಹೆಚ್ಚಾಗಿ ಬಾಧಿಸುವುದೂ ಇಲ್ಲ ಎಂದು ಅವರು ಹೇಳಿದರು.

ರಾಜ್ಯಗಳಲ್ಲಿ ಕನಿಷ್ಠ ಶೇ.70ರಷ್ಟು ಜನಸಂಖ್ಯೆಗೆ ಆರ್‌ಟಿ-ಪಿಸಿಆರ್ ಪರೀಕ್ಷೆಯ ಗುರಿಯನ್ನು ನಿಗದಿಗೊಳಿಸಿದ ಮೋದಿ,ವೈರಸ್‌ನ್ನು ಪತ್ತೆ ಹಚ್ಚಲು ಮತ್ತು ಅದರ ವಿರುದ್ಧ ಹೋರಾಡಲು ಇದೊಂದೇ ಮಾರ್ಗವಾಗಿದೆ. ಪೂರ್ವಭಾವಿಯಾಗಿ ಪರೀಕ್ಷೆಗಳನ್ನು ನಡೆಸುವುದು ಅತ್ಯಂತ ಮುಖ್ಯವಾಗಿದೆ. ಈಗ ಹೆಚ್ಚಿನ ಪ್ರಕರಣಗಳು ಲಕ್ಷಣರಹಿತವಾಗಿವೆ. ಶೀತ,ಜ್ವರದಂತಹ ಸಮಸ್ಯೆಗಳು ಕಾಡಿದಾಗ ಜನರು ಅದನ್ನು ಲಘುವಾಗಿ ಪರಿಗಣಿಸುತ್ತಿದ್ದಾರೆ ಮತ್ತು ಇಡೀ ಕುಟುಂಬಕ್ಕೆ ಸೋಂಕು ಹರಡುತ್ತಿದ್ದಾರೆ. ಪರೀಕ್ಷೆ ಮತ್ತು ಸೋಂಕು ಪತ್ತೆ ಈಗ ಅತ್ಯಂತ ಮುಖ್ಯವಾಗಿದೆ. ಪಾಸಿಟಿವಿಟಿ ದರವನ್ನು ಶೇ.5ಕ್ಕಿಂತ ಕೆಳಕ್ಕೆ ತರುವುದು ಅತ್ಯಗತ್ಯವಾಗಿದೆ ಎಂದರು.

ಲಸಿಕೆ ಉತ್ಸವ

ಎ.11ರಿಂದ ಎ.14ರವರೆಗೆ ನಾಲ್ಕು ದಿನಗಳ ಕಾಲ ದೇಶಾದ್ಯಂತ ಕೋವಿಡ್-19 ಲಸಿಕೆ ಉತ್ಸವವನ್ನು ನಡೆಸಲಾಗುವುದು ಎಂದ ಮೋದಿ,ಈ ಅವಧಿಯಲ್ಲಿ ಅತಿ ಹೆಚ್ಚಿನ ಸಂಖ್ಯೆಯ ಫಲಾನುಭವಿಗಳಿಗೆ ಲಸಿಕೆಯನ್ನು ನೀಡಲಾಗುವುದು. 45 ವರ್ಷಕ್ಕೆ ಮೇಲ್ಪಟ್ಟ ಎಲ್ಲರೂ ಸ್ವಯಂಪ್ರೇರಿತರಾಗಿ ಲಸಿಕೆಯನ್ನು ಹಾಕಿಸಿಕೊಳ್ಳಬೇಕು ಎಂದು ಕೋರಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News