ಸಚಿನ್‌ವಾಝೆ ವಿಚಾರಣೆಗೆ ನ್ಯಾಯಾಲಯ ಸಮ್ಮತಿ

Update: 2021-04-08 16:12 GMT

ಮುಂಬೈ, ಎ.8: ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್ ದೇಶ್‌ಮುಖ್ ವಿರುದ್ಧದ ಭ್ರಷ್ಟಾಚಾರಆರೋಪಕ್ಕೆ ಸಂಬಂಧಿಸಿ ಮಾಜಿ ಪೊಲೀಸ್ ಅಧಿಕಾರಿ ಸಚಿನ್ ವಾಝೆಯನ್ನು ವಿಚಾರಣೆ ನಡೆಸಲು ಸಿಬಿಐಗೆ ವಿಶೇಷ ನ್ಯಾಯಾಲಯ ಅನುಮತಿ ನೀಡಿದೆ ಎಂದು ವರದಿಯಾಗಿದೆ.

‘ಈ ಹಿಂದೆ ಅಮಾನತುಗೊಂಡಿದ್ದ ತನ್ನನ್ನು ಕಳೆದ ವರ್ಷದ ಜೂನ್ 6ರಂದು ಪೊಲೀಸ್ ಇಲಾಖೆಯಲ್ಲಿ ಮತ್ತೆ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು. ಆದರೆ ಇದಕ್ಕೆ ಹಲವರ ವಿರೋಧವಿತ್ತು. ನಂತರ ತನ್ನನ್ನು ಮತ್ತೆ ಅಮಾನತುಗೊಳಿಸುವಂತೆ ಎನ್‌ಸಿಪಿ ಅಧ್ಯಕ್ಷ ಶರದ್ ಪವಾರ್ ಆದೇಶಿಸಿದ್ದರು. ಆ ಸಂದರ್ಭ ಗೃಹ ಸಚಿವರಾಗಿದ್ದ ಅನಿಲ್ ದೇಶ್‌ಮುಖ್ ತನಗೆ ಕರೆ ಮಾಡಿದ್ದು, ಶರದ್ ಪವಾರ್‌ಗೆ ತಾನು ಮನವರಿಕೆ ಮಾಡುತ್ತೇನೆ.

ಇದಕ್ಕೆ 2 ಕೋಟಿ ರೂ. ನೀಡುವಂತೆ ಸೂಚಿಸಿದ್ದರು. ಇಷ್ಟೊಂದು ಹಣ ಪಾವತಿಸಲು ಸಾಧ್ಯವಾಗದು ಎಂದು ಹೇಳಿದಾಗ, ನಿಧಾನವಾಗಿ ನೀಡುವಂತೆ ಹೇಳಿದ್ದರು’ ಎಂದು ಕೈಬರಹದ 4 ಪುಟದ ಪತ್ರದಲ್ಲಿ ಸಚಿನ್ ವಾಝೆ ಬುಧವಾರ ಆರೋಪಿಸಿದ್ದರು. ಈ ಪತ್ರವನ್ನು ವಿಶೇಷ ಎನ್‌ಐಎ ನ್ಯಾಯಾಲಯಕ್ಕೆ ಸಲ್ಲಿಸಲು ವಾಝೆ ಬಯಸಿದ್ದರು. ಆದರೆ ಇದಕ್ಕೆ ಅವಕಾಶ ನೀಡದ ನ್ಯಾಯಾಲಯ, ಅಗತ್ಯದ ಪ್ರಕ್ರಿಯೆ ಪಾಲಿಸುವಂತೆ ಸೂಚಿಸಿತ್ತು. ಈ ಮಧ್ಯೆ, ವಾಝೆಯನ್ನು ವಿಚಾರಣೆ ನಡೆಸಲು ಅನುಮತಿ ಕೋರಿ ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿತ್ತು. ಮನವಿಯನ್ನು ನ್ಯಾಯಾಲಯ ಪುರಸ್ಕರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News