ಮಮತಾ ಬ್ಯಾನರ್ಜಿ ಅರ್ಜಿ ತಿರಸ್ಕರಿಸಿದ ಸುಪ್ರೀಂ: ಹೈಕೋರ್ಟ್‌ಗೆ ಮನವಿ ಸಲ್ಲಿಸಲು ಸೂಚನೆ

Update: 2021-04-09 17:37 GMT

ಹೊಸದಿಲ್ಲಿ, ಎ.9: ತನ್ನ ಮೇಲೆ ನಡೆದ ದಾಳಿಯಿಂದ ಕಾಲಿಗೆ ಗಾಯವಾಗಿರುವ ಪ್ರಕರಣದ ಬಗ್ಗೆ ಸ್ವತಂತ್ರ ತನಿಖಾ ಸಂಸ್ಥೆಯಿಂದ ತನಿಖೆ ನಡೆಸಲು ನಿರ್ದೇಶನ ನೀಡುವಂತೆ ಕೋರಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಗೆ ನಿರಾಕರಿಸಿರುವ ಸುಪ್ರೀಂಕೋರ್ಟ್, ಕೋಲ್ಕತಾ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸುವಂತೆ ಸೂಚಿಸಿದೆ.

ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿರುವ ವಿಧಾನಸಭೆ ಚುನಾವಣೆಗೆ ಮಾರ್ಚ್ 10ರಂದು ನಂದಿಗ್ರಾಮದ ಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಸಿದ್ದ ಸಂದರ್ಭ ತನ್ನ ಮೇಲೆ ನಾಲ್ಕೈದು ಮಂದಿ ದಾಳಿ ನಡೆಸಿದ್ದರಿಂದ ಎಡಕಾಲಿಗೆ ಗಾಯವಾಗಿದೆ ಎಂದು ಮಮತಾ ಬ್ಯಾನರ್ಜಿ ಆರೋಪಿಸಿದ್ದರು. ಈ ಪ್ರಕರಣದ ಬಗ್ಗೆ ಸಿಬಿಐಯಂತಹ ಸ್ವತಂತ್ರ ಸಂಸ್ಥೆಯಿಂದ ತನಿಖೆ ನಡೆಸಲು ಸೂಚಿಸಬೇಕು ಹಾಗೂ ಭವಿಷ್ಯದಲ್ಲಿ ಈ ರೀತಿಯ ಪರಿಸ್ಥಿತಿಯನ್ನು ನಿರ್ವಹಿಸಲು ಮಾರ್ಗಸೂಚಿ ರಚಿಸಬೇಕು ಹಾಗೂ ಮತದಾನ ಸಂದರ್ಭದ ಹಿಂಸಾಚಾರ ಪ್ರಕರಣಗಳಲ್ಲಿ ತಪ್ಪೆಸಗಿದವರನ್ನು ಶಿಕ್ಷಿಸುವ ಅಧಿಕಾರವುಳ್ಳ ತಾತ್ಕಾಲಿಕ ವ್ಯವಸ್ಥೆಯೊಂದನ್ನು ರೂಪಿಸಬೇಕು ಎಂದು ವಿನಂತಿಸಿ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ಅರ್ಜಿಯನ್ನು ವಿಚಾರಣೆಗೆ ಪರಿಗಣಿಸಲು ನಿರಾಕರಿಸಿದ ಮುಖ್ಯ ನ್ಯಾಯಮೂರ್ತಿ ಎಸ್‌ಎ ಬೋಬ್ಡೆ, ನ್ಯಾಯಮೂರ್ತಿಗಳಾದ ಎಎಸ್ ಬೋಪಣ್ಣ ಮತ್ತು ವಿ ರಾಮಸುಬ್ರಮಣಿಯನ್ ಅವರಿದ್ದ ನ್ಯಾಯಪೀಠ, ಹೈಕೋರ್ಟ್‌ನಲ್ಲಿ ಸಲ್ಲಿಸುವಂತೆ ಸೂಚಿಸಿತು ಮತ್ತು ಅರ್ಜಿಯನ್ನು ಹಿಂಪಡೆಯಲು ಫಿರ್ಯಾದಿದಾರರ ಪರ ವಕೀಲರಿಗೆ ಅವಕಾಶ ನೀಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News