ಹಳೆಯ ದರಗಳಲ್ಲಿಯೇ ರಸಗೊಬ್ಬರಗಳ ಮಾರಾಟಕ್ಕೆ ಕೇಂದ್ರದ ನಿರ್ದೇಶ

Update: 2021-04-09 17:42 GMT

ಹೊಸದಿಲ್ಲಿ,ಎ.9: ಡಿಎಪಿಯಂತಹ ಯೂರಿಯಾಯೇತರ ರಸಗೊಬ್ಬರಗಳ ಗರಿಷ್ಠ ಚಿಲ್ಲರೆ ಮಾರಾಟ ದರಗಳನ್ನು ಹೆಚ್ಚಿಸದಂತೆ ರಸಗೊಬ್ಬರ ಕಂಪನಿಗಳಿಗೆ ಶುಕ್ರವಾರ ನಿರ್ದೇಶ ನೀಡಿರುವ ಕೇಂದ್ರವು,ಹಳೆಯ ದರಗಳಲ್ಲಿಯೇ ಮಾರಾಟ ಮಾಡುವಂತೆ ಸೂಚಿಸಿದೆ.

ಡೈ ಅಮೋನಿಯಂ ಫಾಸ್ಫೇಟ್ (ಡಿಎಪಿ),ಮುರಿಯೇಟ್ ಆಫ್ ಪೊಟ್ಯಾಷ್ (ಎಂಒಪಿ) ಮತ್ತು ಎನ್‌ಪಿಕೆಯಂತಹ ಯೂರಿಯಾಕ್ಕೆ ಹೊರತಾದ ರಸಗೊಬ್ಬರಗಳನ್ನು ನಿಯಂತ್ರಣ ಮುಕ್ತಗೊಳಿಸಲಾಗಿದ್ದು,ಅವುಗಳ ಮಾರಾಟ ದರಗಳನ್ನು ತಯಾರಕರೇ ನಿಗದಿಗೊಳಿಸುತ್ತಾರೆ ಮತ್ತು ಕೇಂದ್ರವು ಪ್ರತಿವರ್ಷ ಈ ಕಂಪನಿಗಳಿಗೆ ನಿಗದಿತ ಸಬ್ಸಿಡಿಯನ್ನು ಪಾವತಿಸುತ್ತದೆ.

ಭಾರತ ಸರಕಾರವು ಉನ್ನತಮಟ್ಟದ ಸಭೆಯ ಬಳಿಕ ಈ ರಸಗೊಬ್ಬರಗಳ ದರಗಳನ್ನು ಹೆಚ್ಚಿಸದಂತೆ ಕಂಪನಿಗಳಿಗೆ ನಿರ್ದೇಶ ನೀಡಿದ್ದು,ಅವು ಒಪ್ಪಿಕೊಂಡಿವೆ ಎಂದು ಸಹಾಯಕ ರಾಸಾಯನಿಕಗಳು ಮತ್ತು ರಸಗೊಬ್ಬರಗಳ ಸಚಿವ ಮನ್ಸುಖ್ ಮಾಂಡವೀಯ ಅವರು ಸುದ್ದಿಸಂಸ್ಥೆಗೆ ತಿಳಿಸಿದರು.

ರೈತ ಸಮುದಾಯದ ಹಿತಾಸಕ್ತಿಗೆ ಆದ್ಯತೆಯನ್ನು ನೀಡಲಾಗಿದ್ದು,ರಸಗೊಬ್ಬರಗಳ ದರಗಳಲ್ಲಿ ಯಾವುದೇ ಏರಿಕೆಯಾಗುವುದಿಲ್ಲ ಎಂದು ಅವರು ಪ್ರತ್ಯೇಕವಾಗಿ ಟ್ವೀಟಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News