ರಿಷಭ್ ಪಂತ್‌ಗೆ ಚೊಚ್ಚಲ ನಾಯಕತ್ವ

Update: 2021-04-10 04:42 GMT

ಮುಂಬೈ, ಎ.10: ಐಪಿಎಲ್‌ನ ಎರಡನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ತಂಡ ಶನಿವಾರ ತನ್ನ ಅಭಿಯಾನವನ್ನು ಆರಂಭಿಸಲಿದ್ದು, ಹೊಸ ಡೆಲ್ಲಿ ತಂಡವನ್ನು ಮೊದಲ ಬಾರಿ ವಿಕೆಟ್ ಕೀಪರ್ ರಿಷಭ್ ಪಂತ್ ನಾಯಕರಾಗಿ ಮುನ್ನಡೆಸಲಿದ್ದಾರೆ.

2008ರಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್‌ನ ಉದ್ಘಾಟನಾ ಆವೃತ್ತಿಯಲ್ಲಿ ತಂಡವನ್ನು ಮುನ್ನಡೆಸಿದ ಏಕೈಕ ವಿಕೆಟ್ ಕೀಪರ್ ಮಹೇಂದ್ರ ಸಿಂಗ್ ಧೋನಿ. ಆದರೆ 2021ರಲ್ಲಿ ಇನ್ನಿಬ್ಬರು ವಿಕೆಟ್ ಕೀಪರ್‌ಗಳು ಬೇರೆ ಬೇರೆ ತಂಡಗಳ ನಾಯಕತ್ವ ವಹಿಸಿಕೊಂಡಿದ್ದಾರೆ. ಅವರೆಂದರೆ ರಿಷಭ್ ಪಂತ್ ಮತ್ತು ಸಂಜು ಸ್ಯಾಮ್ಸನ್.

ಕಳೆದ ಆರು ತಿಂಗಳುಗಳಲ್ಲಿ ಭಾರತ ತಂಡದಲ್ಲಿ ಪಂತ್ ಮಿಂಚುತ್ತಿದ್ದಾರೆ. ಭಾರತಕ್ಕೆ ಯಶಸ್ಸು ತಂದು ಕೊಟ್ಟಿದ್ದಾರೆ. ಶ್ರೇಯಸ್ ಅಯ್ಯರ್ ಅವರ ಅನುಪಸ್ಥಿತಿಯಲ್ಲಿ ಪಂತ್ ಡೆಲ್ಲಿ ತಂಡವನ್ನು ಮುನ್ನಡೆಸಲಿದ್ದಾರೆ.

ಚೆನ್ನೈ ಸೂಪರ್ ಕಿಂಗ್ಸ್ ತಂಡ ಕಳೆದ ಬಾರಿ ಏನನ್ನೂ ಸಾಧಿಸಲಿಲ್ಲ. ಕೊನೆಯಲ್ಲಿ ಹ್ಯಾಟ್ರಿಕ್ ಗೆಲುವು ಸಾಧಿಸಿದ್ದರೂ ಇದರಿಂದ ಪ್ರಯೋಜನವಾಗಲಿಲ್ಲ. 6 ಪಂದ್ಯಗಳಲ್ಲಿ ಗೆಲುವು ದಾಖಲಿಸಿ 12 ಪಾಯಿಂಟ್ಸ್ ಗಳೊಂದಿಗೆ 7ನೇ ಸ್ಥಾನ ಗಳಿಸಿತ್ತು. ಇನ್ನೂ 2 ಪಂದ್ಯಗಳಲ್ಲಿ ಜಯಿಸಿದ್ದರೆ ಪ್ಲೇ ಆಫ್‌ನಲ್ಲಿ ಆಡುವ ಅವಕಾಶ ಸಿಗುವ ಸಾಧ್ಯತೆ ಇತ್ತು. ಯುವ ಬ್ಯಾಟ್ಸ್‌ಮನ್ ಋತುರಾಜ್ ಗಾಯಕ್ವಾಡ್ ಮೂರು ಪಂದ್ಯಗಳಲ್ಲೂ ಮ್ಯಾನ್ ಆಫ್ ದಿ ಮ್ಯಾಚ್ ಆಗಿ ಮಿಂಚಿದ್ದರು. ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಮಹೇಂದ್ರ ಸಿಂಗ್ ಧೋನಿ ಅವರಿಗೆ ಮತ್ತೊಮ್ಮೆ ಸವಾಲು ಎದುರಾಗಿದೆ. ಯುಎಇಯಲ್ಲಿ ತಂಡದಿಂದ ದೂರವಿದ್ದ ಸುರೇಶ್ ರೈನಾ ಮರಳಿದ್ದಾರೆ. ರಾಬಿನ್ ಉತ್ತಪ್ಪ ಸೇರ್ಪಡೆ ಚೆನ್ನೈ ತಂಡದ ಬ್ಯಾಟಿಂಗ್ ವಿಭಾಗವನ್ನು ಬಲಿಷ್ಠಗೊಳಿಸಿದೆ.

ಚೆನ್ನೈ ಸೂಪರ್ ಕಿಂಗ್ಸ್ ತಂಡ ಕೆಲವು ಬದಲಾವಣೆಯೊಂದಿಗೆ ಕಣಕ್ಕಿಳಿಯಲು ಸಜ್ಜಾಗಿದೆ. ಮತ್ತೊಂದೆಡೆ ಡೆಲ್ಲಿ ತಂಡಕ್ಕೆ ಆರಂಭಿಕ ಪಂದ್ಯದಲ್ಲಿ ತನ್ನ ಅತ್ಯುತ್ತಮ ಇಲೆವೆನ್‌ನ್ನು ಕಣಕ್ಕಿಳಿಸಲು ಸಾಧ್ಯವಾಗುವುದಿಲ್ಲ. ಆಫ್ರಿಕಾದ ವೇಗದ ಬೌಲರ್‌ಗಳಾದ ಕಾಗಿಸೊ ರಬಾಡಾ ಮತ್ತು ಅನ್ರಿಚ್ ನಾರ್ಟ್ಜೆ ಕಡ್ಡಾಯವಾದ ಸಂಪರ್ಕತಡೆಯನ್ನು ಪೂರೈಸುತ್ತಿರುವುದರಿಂದ ಮೊದಲ ಪಂದ್ಯಕ್ಕೆ ಲಭ್ಯವಿರುವುದಿಲ್ಲ.

ಕೊರೋನ ವೈರಸ್ ಸೋಂಕಿತ ಆಲ್‌ರೌಂಡರ್ ಅಕ್ಷರ್ ಪಟೇಲ್ ತಂಡದ ಸೇವೆಗೆ ಲಭ್ಯರಿಲ್ಲ. ಸ್ಪಿನ್ ವಿಭಾಗವನ್ನು ಅನುಭವಿ ಆರ್. ಅಶ್ವಿನ್ ಅವರೊಂದಿಗೆ ಅಮಿತ್ ಮಿಶ್ರಾ ಮುನ್ನಡೆಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News