ಮಧ್ಯವರ್ತಿ ಗುಪ್ತಾನಿಂದ ಡಸಾಲ್ಟ್ ಗೆ ನೆರವಾಗಲು ರಕ್ಷಣಾ ದಾಖಲೆಗಳ ದುರ್ಬಳಕೆ ಬಗ್ಗೆ ಗೊತ್ತಿದ್ದರೂ ತನಿಖೆ ಆರಂಭಿಸದ ಈಡಿ

Update: 2021-04-10 11:54 GMT

ಹೊಸದಿಲ್ಲಿ,ಎ.9: ವಿವಿಐಪಿ ಹೆಲಿಕಾಪ್ಟರ್ ಪ್ರಕರಣದಲ್ಲಿ ಅಕ್ರಮ ಹಣ ವಹಿವಾಟು ಆರೋಪದಲ್ಲಿ ಜಾರಿ ನಿರ್ದೇಶನಾಲಯ (ಈ.ಡಿ)ದ ತನಿಖೆಗೊಳಗಾಗಿರುವ ಪ್ರಭಾವಿ ರಕ್ಷಣಾ ಉದ್ಯಮಿ ಸುಶೇನ್ ಗುಪ್ತಾ ಭಾರತಕ್ಕೆ ರಫೇಲ್ ಯುದ್ಧವಿಮಾನಗಳ ವಿವಾದಾತ್ಮಕ ಮಾರಾಟದಲ್ಲಿ ಫ್ರಾನ್ಸ್ ನ ಡಸಾಲ್ಟ್ ಏವಿಯೇಷನ್ ನ ಏಜೆಂಟ್ ಆಗಿ ಕೆಲಸ ಮಾಡಿದ್ದ ಮತ್ತು ಅದಕ್ಕಾಗಿ ಕಮಿಷನ್ ರೂಪದಲ್ಲಿ ಒಂದು ಮಿಲಿಯನ್ ಯೂರೋಗಳನ್ನು ಕಂಪನಿಯಿಂದ ಮತ್ತು ಅದರ ಪಾಲುದಾರ ಥೇಲ್ಸ್ ನಿಂದ ಪಡೆದಿದ್ದ ಎನ್ನುವುದನ್ನು ಪ್ಯಾರಿಸ್ ನ ತನಿಖಾ ಜಾಲತಾಣ ಮೀಡಿಯಾಪಾರ್ಟ್ ಈಗಾಗಲೇ ತನ್ನ ವರದಿಯಲ್ಲಿ ಬಹಿರಂಗಗೊಳಿಸಿದೆ. 

ಮೀಡಿಯಾಪಾರ್ಟ್ ತನ್ನ ತನಿಖಾ ವರದಿಯ ಮೂರನೇ ಮತ್ತು ಅಂತಿಮ ಭಾಗವನ್ನು ಈಗ ಪ್ರಕಟಿಸಿದೆ. ಗುಪ್ತಾಗೆ ಸಂಬಂಧಿಸಿದಂತೆ ಈ.ಡಿ.ಯ ಪ್ರಕರಣ ಕಡತದಿಂದ ಪಡೆದುಕೊಳ್ಳಲಾದ ಮಾಹಿತಿಯನ್ನು ಭಾಗಶಃ ಆಧರಿಸಿರುವ ವರದಿಯು ಗುಪ್ತಾ ಭಾರತದ ರಕ್ಷಣಾ ಸಚಿವಾಲಯದಿಂದ ರಹಸ್ಯ ದಾಖಲೆಗಳನ್ನು ಕಾನೂನುಬಾಹಿರವಾಗಿ ಪಡೆದುಕೊಂಡಿದ್ದ ಮತ್ತು ರಫೇಲ್ ಒಪ್ಪಂದದಲ್ಲಿ ತನಗೆ ಅನುಕೂಲಕರವಾದ ಬೆಲೆಯನ್ನು ಕುದುರಿಸಿಕೊಳ್ಳಲು ಡಸಾಲ್ಟ್ ಗೆ ನೆರವಾಗಲು ಈ ದಾಖಲೆಗಳನ್ನು ಬಳಸಿಕೊಂಡಿದ್ದ ಹಾಗೂ ಈ.ಡಿ.ಗೆ ಇದು ಗೊತ್ತಿದ್ದರೂ ಈ ಬಗ್ಗೆ ಅದು ತನಿಖೆಯನ್ನು ಇನ್ನೂ ಆರಂಭಿಸಿಲ್ಲ ಎಂಬ ಇನ್ನೊಂದು ಸ್ಫೋಟಕ ವಿಷಯವನ್ನು ಬಹಿರಂಗಗೊಳಿಸಿದೆ. 

ಇದು ಭಾರತದಲ್ಲಿ ರಫೇಲ್ ವ್ಯವಹಾರದ ಬಗ್ಗೆ ಪೂರ್ಣ ಪ್ರಮಾಣದಲ್ಲಿ ಕ್ರಿಮಿನಲ್ ತನಿಖೆ ನಡೆಯಬೇಕೆಂದು ಪ್ರತಿಪಕ್ಷಗಳು ಪಟ್ಟು ಹಿಡಿಯುವ ಸಾಧ್ಯತೆಯನ್ನು ಇನ್ನಷ್ಟು ಹೆಚ್ಚಿಸಿದೆ. ಗುಪ್ತಾನಿಂದ ರಕ್ಷಣಾ ಸಚಿವಾಲಯದ ದಾಖಲೆಗಳ ದುರ್ಬಳಕೆ ಗೊತ್ತಿದ್ದರೂ ಈ.ಡಿ.ಇನ್ನು ತನಿಖೆಯನ್ನು ಆರಂಭಿಸದಿರುವುದು ಡಸಾಲ್ಟ್ ಕಂಪನಿಯು ಭಾರತದ ಆಡಳಿತ ಪಕ್ಷದ ರಾಜಕೀಯ ಅಜೆಂಡಾಕ್ಕೆ ಅನುಗುಣವಾಗಿರುವಂತೆ 36 ರಫೇಲ್ ಯುದ್ಧವಿಮಾನಗಳ ಮಾರಾಟ ಒಪ್ಪಂದವನ್ನು ಮಾಡಿಕೊಂಡಿದೆ ಎಂಬ ಶಂಕೆಯನ್ನು ಇನ್ನಷ್ಟು ಹೆಚ್ಚಿಸಿದೆ.
 
ಗುಪ್ತಾ ಡಸಾಲ್ಟ್ ಮತ್ತು ಥೇಲ್ಸ್ ಜೊತೆ ಸುಮಾರು ಎರಡು ದಶಕಗಳ ಗಾಢವಾದ ವ್ಯವಹಾರ ಸಂಬಂಧಗಳನ್ನು ಹೊಂದಿದ್ದಾನೆ ಮತ್ತು ಸಾಫ್ಟ್ವೇರ್ ಕನ್ಸಲ್ಟಿಂಗ್ ಗಾಗಿ ಉಬ್ಬಿಸಿದ್ದ ಇನ್ವಾಯ್ಸ್ ಗಳನ್ನು ಬಳಸಿ ವಿದೇಶಗಳಲ್ಲಿಯ ಬ್ಯಾಂಕ್ ಖಾತೆಗಳು ಮತ್ತು ಮುಖವಾಡ ಕಂಪನಿಗಳ ಮೂಲಕ ಹಲವಾರು ಮಿಲಿಯನ್ ಯುರೋಗಳಷ್ಟು ರಹಸ್ಯ ಕಮಿಷನ್ ಪಡೆದುಕೊಂಡಿದ್ದಾನೆ ಎಂದು ಮೀಡಿಯಾಪಾರ್ಟ್ ತನ್ನ ವರದಿಯಲ್ಲಿ ಹೇಳಿದೆ.

ಈ ಹಣಪಾವತಿಗಳು ಮನಮೋಹನಗ ಸಿಂಗ್ ಅವರ ಯುಪಿಎ ಸರಕಾರ ಅಧಿಕಾರದಲ್ಲಿದ್ದ ಅವಧಿ ಸೇರಿದಂತೆ 15 ವರ್ಷಗಳಲ್ಲಿ ನಡೆದಿವೆ ಎಂದು ವರದಿಯು ಹೇಳಿದೆ. ಡಸಾಲ್ಟ್ ರಫೇಲ್ ಯುದ್ಧವಿಮಾನಗಳ ಪಡಿಯಚ್ಚು ಮಾದರಿಗಳ ನಿರ್ಮಾಣಕ್ಕಾಗಿ ಗುಪ್ತಾಗೆ ನಿಕಟವಾಗಿ ಸಂಬಂಧಿಸಿದ ಕಂಪನಿಗೆ ಒಂದು ಮಿಲಿಯನ್ ಡಾ.ಗಳನ್ನು ನೀಡಿದ್ದು ಈ ಹಣಪಾವತಿಗಳಲ್ಲಿ ಸೇರಿದೆ. ಫ್ರಾನ್ಸ್ನ ಭ್ರಷ್ಟಾಚಾರ ನಿಗ್ರಹ ಏಜೆನ್ಸಿಯು ಡಸಾಲ್ಟ್ನ ಲೆಕ್ಕ ಪರಿಶೋಧನೆ ಸಂದರ್ಭ ಇದನ್ನು ಪ್ರಮುಖವಾಗಿ ಬೆಟ್ಟು ಮಾಡಿತ್ತು.

2000ದ ದಶಕದಲ್ಲಿ ತಾನು 126 ಯುದ್ಧವಿಮಾನಗಳನ್ನು ಖರೀದಿಸಲು ಬಯಸಿದ್ದೇನೆ ಎಂದು ಭಾರತವು ಪ್ರಕಟಿಸಿದ್ದ ತಕ್ಷಣ ಡಸಾಲ್ಟ್ ಮತ್ತು ಥೇಲ್ಸ್ ಗುಪ್ತಾನನ್ನು ನಿಯೋಜಿಸಿಕೊಂಡಿದ್ದವು. ಈ.ಡಿ.ಯ ಕಡತದಿಂದ ಲಭ್ಯ ಸಾಕ್ಷದಂತೆ ಇವೆರಡು ಫ್ರೆಂಚ್ ಕಂಪನಿಗಳು ರಫೇಲ್ ಯುದ್ಧವಿಮಾನಗಳ ಮಾರಾಟಕ್ಕಾಗಿ ಭಾರತದೊಡನೆ ಯಶಸ್ವಿ ಒಪ್ಪಂದಕ್ಕಾಗಿ 15 ವರ್ಷಗಳಲ್ಲಿ ಹಲವಾರು ಮಿಲಿಯನ್ ಯೂರೊಗಳನ್ನು ಗುಪ್ತಾಗೆ ಪಾವತಿಸಿದ್ದವು.

ಹಣವನ್ನು ಗುಪ್ತಾನ ಭಾರತದಲ್ಲಿ ನೋಂದಣಿಯಾಗಿರುವ ಕನ್ಸಲ್ಟನ್ಸಿ ಸಂಸ್ಥೆಯ ಖಾತೆಗೆ ಜಮಾ ಮಾಡಲಾಗಿರಲಿಲ್ಲ,ಬದಲಿಗೆ ರಹಸ್ಯ ಕಮಿಷನ್ ರೂಪದಲ್ಲಿ ವಿದೇಶಿ ಕಂಪನಿಗಳಿಗೆ ವರ್ಗಾವಣೆಗೊಳಿಸಲಾಗಿತ್ತು ಎಂದು ವರದಿಯು ಹೇಳಿದೆ.

ಆಗಸ್ಟಾ ವೆಸ್ಟ್ಲ್ಯಾಂಡ್ ಹಗರಣದಲ್ಲಿ ತನಿಖೆಗೊಳಗಾಗಿರುವ ಗುಪ್ತಾ ಆಗ ತಾನು ಬಳಸಿಕೊಂಡಿದ್ದ ವ್ಯವಸ್ಥೆಯ ಮೂಲಕವೇ ಡಸಾಲ್ಟ್ನಿಂದಲೂ ಹಣವನ್ನು ಪಡೆದುಕೊಂಡಿದ್ದ ಎಂದು ವರದಿಯು ಆರೋಪಿಸಿದೆ. ಅದೊಂದು ಸಂಕೀರ್ಣ ವ್ಯವಸ್ಥೆಯಾಗಿದ್ದು ಐಡಿಎಸ್ ಎಂಬ ಹೆಸರಿನ ಐಟಿ ಸೇವೆಗಳ ಕಂಪನಿಯೊಂದು ಅದರಲ್ಲಿ ಭಾಗಿಯಾಗಿತ್ತು. ಐಡಿಎಸ್ ಹೆಚ್ಚಿಸಲಾಗಿದ್ದ ಒಪ್ಪಂದದಲ್ಲಿಯ ಹಣವನ್ನು ಡಸಾಲ್ಟ್ ನಿಂದ ಪಡೆದುಕೊಂಡಿತ್ತು ಮತ್ತು ಚಾಣಾಕ್ಷತನದಿಂದ ಅದನ್ನು ಮಧ್ಯವರ್ತಿಗೆ ಪಾವತಿಸುತ್ತಿತ್ತು ಎಂದು ವರದಿಯು ಬೆಟ್ಟು ಮಾಡಿದೆ.

ಮಾರಿಷಸ್ ನಲ್ಲಿ ನೋಂದಣಿಯಾಗಿರುವ ಇಂಟರ್ಸ್ಟೆಲ್ಲರ್ ಎಂಬ ಮುಖವಾಡ ಕಂಪನಿಗೆ ಕಮಿಷನ್ಗಳನ್ನು ಪಾವತಿಸುವಂತೆ ಡಸಾಲ್ಟ್‌ ನಲ್ಲಿಯ  ಪಿಯರ್ರೆ ಎಂಬ ವ್ಯಕ್ತಿ ತನಗೆ ಸೂಚಿಸಿದ್ದ ಎಂದು ಐಡಿಎಸ್ ಭಾರತೀಯ ತನಿಖಾ ಸಂಸ್ಥೆಗೆ ನೀಡಿದ್ದ ಹೇಳಿಕೆಯಲ್ಲಿ ತಿಳಿಸಿತ್ತು ಎಂದು ಮೀಡಿಯಾಪಾರ್ಟ್ ತನ್ನ ವರದಿಯಲ್ಲಿ ಹೇಳಿದೆ.

ಕೃಪೆ: thewire.in

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News