ಚೀನಾ: ಅಲಿಬಾಬಾ ಕಂಪೆನಿಗೆ 20,775 ಕೋಟಿ ರೂ. ದಂಡ

Update: 2021-04-10 15:44 GMT

 ಶಾಂಗೈ (ಚೀನಾ), ಎ. 10: ಚೀನಾದ ಬೃಹತ್ ಆನ್‌ಲೈನ್ ಮಾರುಕಟ್ಟೆ ಕಂಪೆನಿ ಅಲಿಬಾಬಾಕ್ಕೆ ಅಧಿಕಾರಿಗಳು 18.2 ಬಿಲಿಯ ಯುವಾನ್ (ಸುಮಾರು 20,775 ಕೋಟಿ ರೂಪಾಯಿ) ದಂಡ ಹಾಕಿದ್ದಾರೆ. ಕಂಪೆನಿಯು ಮಾರುಕಟ್ಟೆಯಲ್ಲಿನ ತನ್ನ ಸುಭದ್ರ ಸ್ಥಾನವನ್ನು ದುರುಪಯೋಗಪಡಿಸಿಕೊಂಡು ಪ್ರತಿಸ್ಪರ್ಧಿಗಳನ್ನು ಹತ್ತಿಕ್ಕಿದೆ ಎಂಬ ಆರೋಪದಲ್ಲಿ ಈ ಭಾರೀ ಪ್ರಮಾಣದ ದಂಡವನ್ನು ವಿಧಿಸಲಾಗಿದೆ ಎಂದು ಸರಕಾರಿ ಒಡೆತನದ ಮಾಧ್ಯಮಗಳು ಶನಿವಾರ ವರದಿ ಮಾಡಿವೆ.

ಈ ಆರೋಪಕ್ಕೆ ಸಂಬಂಧಿಸಿ ಚೀನಾದ ಮಾರುಕಟ್ಟೆ ನಿಯಂತ್ರಣ ಇಲಾಖೆಯು ಅಲಿಬಾಬಾ ವಿರುದ್ಧ ಡಿಸೆಂಬರ್ ತಿಂಗಳಿನಿಂದ ತನಿಖೆ ನಡೆಸುತ್ತಿದೆ. ತನಿಖೆ ಮುಕ್ತಾಯಗೊಂಡ ಬಳಿಕ ಅದು ದಂಡದ ಪ್ರಮಾಣವನ್ನು ನಿಗದಿಪಡಿಸಿದೆ ಎಂದು ಕ್ಸಿನುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.

ತನ್ನ ಮಾರುಕಟ್ಟೆ ಜಾಲದ ಮೂಲಕ ತಮ್ಮ ವಸ್ತುಗಳನ್ನು ಮಾರಾಟ ಮಾಡುವ ವ್ಯಾಪಾರಿಗಳು ಆ ವಸ್ತುಗಳನ್ನು ತನ್ನ ಪ್ರತಿಸ್ಪರ್ಧಿ ಕಂಪೆನಿಗಳ ಜಾಲದಲ್ಲಿ ಮಾರಾಟ ಮಾಡಬಾರದು ಎಂಬ ಶರತ್ತುಗಳನ್ನು ಅಲಿಬಾಬಾ ಕಂಪೆನಿ ವಿಧಿಸುತ್ತಿತ್ತು ಎನ್ನಲಾಗಿದೆ. ಇದೇ ಆರೋಪದ ಬಗ್ಗೆ ತನಿಖೆ ನಡೆದು ಈಗ ದಂಡ ವಿಧಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News