ದೀರ್ಘಾವಧಿ ರೈತ ಆಂದೋಲನಕ್ಕೆ ಸಿದ್ಧತೆ: ರಾಕೇಶ್ ಟಿಕಾಯತ್

Update: 2021-04-10 16:53 GMT

ಅಮೃತಸರ, ಎ.10: ಕೃಷಿ ಕಾಯ್ದೆಯನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ರೈತರು ಮತ್ತು ಕೇಂದ್ರ ಸರಕಾರದ ಮಧ್ಯೆ ಜನವರಿ 22ರ ಬಳಿಕ ಯಾವುದೇ ಮಾತುಕತೆ ನಡೆದಿಲ್ಲ. ರೈತರನ್ನು ಸತಾಯಿಸಿ ದಣಿಸುವುದು ಸರಕಾರದ ಉದ್ದೇಶವಾಗಿದೆ. ಆದರೆ ಸರಕಾರ ನಮ್ಮನ್ನು ನಿರ್ಲಕ್ಷಿಸಿದಂತೆ ನಟಿಸಿದರೂ ನಮ್ಮ ಪ್ರತಿಟನೆಯಿಂದ ನಡುಗಿರುವುದಂತೂ ಸ್ಪಷ್ಟ ಎಂದು ರೈತರ ಮುಖಂಡ, ಸಂಯುಕ್ತ ಕಿಸಾನ್ ಮೋರ್ಛ(ಎಸ್‌ಕೆಎಂ)ದ ಅಧ್ಯಕ್ಷ ರಾಕೇಶ್ ಟಿಕಾಯತ್ ಹೇಳಿದ್ದಾರೆ.

ಜನವರಿ 22ರ ಬಳಿಕ ಸರಕಾರದೊಂದಿಗೆ ಮಾತುಕತೆ ನಡೆದಿಲ್ಲ. ಈಗ ಈ ಆಂದೋಲನವನ್ನು ದೇಶದಾದ್ಯಂತ ವಿಸ್ತರಿಸುವಲ್ಲಿ ನಾವು ಮಗ್ನವಾಗಿದ್ದೇವೆ. ಇದು ಕೇವಲ ಒಂದು ಅಥವಾ ಎರಡು ರಾಜ್ಯಗಳಿಗೆ ಸಂಬಂಧಿಸಿದ ಆಂದೋಲನವಾಗಿಲ್ಲ. ಸರಕಾರ ಚುನಾವಣೆಯ ಕೆಲಸದಲ್ಲಿ ಮಗ್ನವಾಗಿರಲಿ, ನಾವು ದೀರ್ಘಾವಧಿಯ ಆಂದೋಲನಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ ಎಂದವರು ಹೇಳಿದ್ದಾರೆ.

 ರೈತರ ಶಾಂತಿಯುತ ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಬೇಕೆಂದು ಸರಕಾರ ಬಯಸುತ್ತಿದೆ. ಆದರೆ ಶಾಂತರೀತಿಯಲ್ಲಿ ಪ್ರತಿಭಟನೆ ಮುಂದುವರಿಸುವಂತೆ ರೈತರಿಗೆ ಮನವಿ ಮಾಡಿಕೊಂಡಿದ್ದೇವೆ. ಮುಂದಿನ ದಿನಗಳಲ್ಲಿ ದಿಲ್ಲಿ ಗಡಿಭಾಗದಲ್ಲಿ ಮಾತ್ರವಲ್ಲ, ಇಡೀ ದೇಶದೆಲ್ಲೆಡೆ ಪ್ರತಿಭಟನೆ ನಡೆಸಲು ಯೋಜನೆ ರೂಪಿಸುತ್ತಿದ್ದೇವೆ ಎಂದು ಎಸ್‌ಕೆಎಂನ ಸಂಯೋಜಕ ಡಾ ದರ್ಶನ್ ಪಾಲ್ ಹೇಳಿದ್ದಾರೆ.

   ಎಸ್‌ಕೆಎಂ ರಾಜಕೀಯ ವೇದಿಕೆಯಲ್ಲ. ನಾವು ಈ ದೇಶದ ರೈತರು ಮತ್ತು ಕೇಂದ್ರದ ಕೃಷಿ ಕಾಯ್ದೆ ರದ್ದಾಗುವವರೆಗೂ ಹೋರಾಟ ಮುಂದುವರಿಯುತ್ತದೆ. ಮುಂಬರುವ ದಿನಗಳಲ್ಲಿ ಆಂದೋಲನ ಯಾವ ರೀತಿ ಮುಂದುವರಿಯಬೇಕು ಎಂಬ ಬಗ್ಗೆ ನಮ್ಮಲ್ಲಿ ಸ್ಪಷ್ಟತೆಯಿದೆ. ಮೇ 15ರ ಒಳಗೆ ಸಂಸತ್ತಿನೆಡೆಗೆ ರ್ಯಾಲಿ ನಡೆಯಲಿದೆ. ದಿನಾಂಕ ಇನ್ನೂ ಅಂತಿಮವಾಗಿಲ್ಲ. ಈಗ ಚುನಾವಣೆ ನಡೆಯುತ್ತಿರುವ ರಾಜ್ಯಗಳ ಫಲಿತಾಂಶ ಮೇ 2ರಂದು ಹೊರಬೀಳಲಿದೆ. ಚುನಾವಣೆಯಲ್ಲಿ ಬಿಜೆಪಿಯ ಸಾಧನೆ ಕಳಪೆಯಾಗಿದ್ದರೆ ನಮ್ಮ ಆಂದೋಲನ ತನ್ನಷ್ಟಕ್ಕೇ ತೀವ್ರಗೊಳ್ಳುತ್ತದೆ. ಅಕಸ್ಮಾತ್ ಬಿಜೆಪಿ ಮೇಲುಗೈ ಸಾಧಿಸಿದರೂ ನಮ್ಮ ಆಂದೋಲನವನ್ನು ತೀವ್ರಗೊಳಿಸುತ್ತೇವೆ. ಹರ್ಯಾಣ, ಪಶ್ಚಿಮ ಮತ್ತು ಪೂರ್ವ ಉತ್ತರಪ್ರದೇಶದಲ್ಲಿ ಈಗಾಗಲೇ ರೈತರು ಬಿಜೆಪಿಗೆ ಬಿಸಿ ಮುಟ್ಟಿಸಿದ್ದಾರೆ ಎಂದು ದರ್ಶನ್ ಪಾಲ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News